ADVERTISEMENT

ಉಳಿದವರು ಕಂಡ ಸಿಂಪಲ್ ರಕ್ಷಿತ್

ಸುಮಲತಾ ಎನ್, ಪದ್ಮನಾಭ ಭಟ್ಟ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST
ಉಳಿದವರು ಕಂಡ ಸಿಂಪಲ್ ರಕ್ಷಿತ್
ಉಳಿದವರು ಕಂಡ ಸಿಂಪಲ್ ರಕ್ಷಿತ್   

‘ಎಂಥಾ... ಶೂಟ್‌ ಮಾಡ್ಬೇಕಾ?’ ಹೀಗಂತ ರಕ್ಷಿತ್‌ ಶೆಟ್ಟಿ ಕೇಳುತ್ತಾ ತಿಂಗಳುಗಳೇ ಉರುಳಿವೆ. ‘ಉಳಿದವರು ಕಂಡಂತೆ’ಯನ್ನು ನಾವು ಕಾಣೋದು ಯಾವಾಗ ಎಂದು ಪ್ರೇಕ್ಷಕ ಕಾತರದಿಂದ ಕಾಯುತ್ತಿದ್ದರೆ,  ಇದೋ ಬಂದೇ ಬಿಟ್ವಿ ಎನ್ನುತ್ತಿದ್ದಾರೆ ರಕ್ಷಿತ್‌. ‘ಸಿಂಪಲ್ಲಾಗ್ ಒಂದ್‌ ಲವ್‌ ಸ್ಟೋರಿ’ಯ ಕಿರೀಟ ಮುಕುಟದಲ್ಲಿ ಇರುವುದರಿಂದ ಅವರ ಜವಾಬ್ದಾರಿಯೂ ಹೆಚ್ಚಿದೆ. ನಟನೆ‌ ಜೊತೆ ಮೊದಲ ಬಾರಿ ಆ್ಯಕ್ಷನ್‌ ಕಟ್‌ ಹೇಳಿರುವ ರಕ್ಷಿತ್‌, ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಇದು ಅವರೇ ಕಂಡಂತೆ ಅವರ ಬದುಕಿನ ಕಿರುನೋಟ...

* ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಉಳಿದವರು ಯಾರು? ಉಳಿಯದವರು ಯಾರು?
ಇದು ಮನರಂಜನಾತ್ಮಕ ಹಾಗೂ ಗಂಭೀರ ಸಿನಿಮಾ ಅಂತ ಅನ್ನಬಹುದು. ಇದರಲ್ಲಿ ಎರಡು ಅರ್ಥ ಇದೆ. ಉಳಿದವರು ಅಂದರೆ ಕಥೆಯಿಂದ ಹೊರಗೆ ಉಳಿದವರು. ಕಥೆಯಲ್ಲಿ ತೊಡಗಿಕೊಳ್ಳದವರು ಎನ್ನಬಹುದು. ಇನ್ನು ಉಳಿಯದವರು ಎಂದರೆ ಬದುಕಿ ಉಳಿದವರು ಅಥವಾ ಸದ್ಯಕ್ಕೆ ಬದುಕಿಲ್ಲದವರು. ಉಳಿಯದವರು ಕತೆ ಹೇಳಲು ಸಾಧ್ಯವೇ?

* ಉಳಿದವರು ಕಂಡಂತೆ ಸಿನಿಮಾ ರಿಲೀಸ್ ಆಗೋದು ಯಾವಾಗ? ಬಿಡುಗಡೆಯನ್ನು ಮುಂದಕ್ಕೆ ಹಾಕ್ತಾನೇ ಇದ್ದೀರಲ್ಲಾ, ಬರೀ ಟ್ರೇಲರ್ ತೋರಿಸಿ ಮುಗಿಸಿಬಿಡುವ ಹಾಗೆ ಕಾಣ್ತಿದ್ದೀರಾ?
ಇದೇ ಮಾರ್ಚ್‌ 28ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಇದಕ್ಕೆಲ್ಲ ಕಾರಣ ನಿರೀಕ್ಷೆಗಳು. ನಿರೀಕ್ಷೆ ಹೆಚ್ಚಾದಂತೆ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುತ್ತೆ. ಆ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಹೋಗುವಾಗ ತಡ ಆಗೋದು ಸಹಜ. ಅಂದುಕೊಂಡಿದ್ದಕ್ಕಿಂತ ಎರಡು ಪಟ್ಟು ಸಮಯ ತೆಗೆದುಕೊಂಡಿದೆ ಸಿನಿಮಾ. ಪ್ರತಿ ಹಂತದಲ್ಲೂ ಇನ್ನೂ ಚೆನ್ನಾಗಿ ಮಾಡಬಹುದು ಎನ್ನುವ ಆಲೋಚನೆಗಳೇ ಸಮಯ ಹೆಚ್ಚು ತೆಗೆದುಕೊಳ್ಳಲು ಕಾರಣ.

* ಸಿನಿಮಾದಲ್ಲಿ ‘ಶೂಟ್ ಮಾಡ್ಬೇಕಾ’ ಅಂತ ಡೈಲಾಗ್ ಹೇಳ್ತೀರಲ್ಲಾ? ಎಷ್ಟು ಜನನ್ನ ಶೂಟ್ ಮಾಡಿದ್ದೀರಾ?
ಜೀವನದಲ್ಲಿ ಇನ್ನೂ ಯಾರನ್ನೂ ಶೂಟ್ ಮಾಡಿಲ್ಲ, ಮಾಡೋದೂ ಇಲ್ಲ. ಆದರೆ ಮಾತಿನ ಮೂಲಕ ಶೂಟ್ ಮಾಡ್ತೀನಿ. ಆವಾಗವಾಗ ಯಾರನ್ನಾದರೂ ಶೂಟ್ ಮಾಡ್ತಾನೇ ಇರ್ತೀನಿ. ದಿನಕ್ಕೆ ಒಬ್ಬರನ್ನಾದರೂ ಶೂಟ್ ಮಾಡೋದು ನನಗೆ ಮಾಮೂಲು!

ADVERTISEMENT

* ಸಿನಿಮಾ ರಿಲೀಸ್ ಮಾಡದೆ ಹೋದ್ರೆ ಅಭಿಮಾನಿಗಳು ನಿಮ್ಮ ಡೈಲಾಗನ್ನು ನಿಮಗೇ ತಿರುಗಿಸಿ ಹೇಳ್ತಾರೆ...
ಖಂಡಿತ. ಆದರೆ ಅವರಿಗಾಗಿಯೇ ಇಷ್ಟು ಸಮಯ ತೆಗೆದುಕೊಂಡಿದ್ದು. ಟ್ರೇಲರ್‌ಗಾಗಿಯೇ 2 ತಿಂಗಳು ಸಮಯ ಹಿಡಿದಿತ್ತು. ಇನ್ನು ಅಭಿಮಾನಿಗಳಿಗೆ ಶೂಟ್ ಮಾಡೋ ಅವಕಾಶ ಕೊಡೋದಿಲ್ಲ.

* ಮತ್ತೊಂದು ಸಿಂಪಲ್ಲಾಗ್ ಒಂದ್ ಲವ್‌ ಸ್ಟೋರಿ ಮಾಡ್ತಿದ್ದೀರಂತೆ. ಅದರ ಬಗ್ಗೆ ಹೇಳಿ?
ಸದ್ಯಕ್ಕೆ ಅದು ಇನ್ ಪ್ರೋಗ್ರೆಸ್. ನನ್ನ ಎರಡು ಪ್ರಾಜೆಕ್ಟ್‌ಗಳು ಮುಗಿದ ಮೇಲೆ ಈ ಸಿನಿಮಾ ಮಾಡುವ ಯೋಚನೆಯಿದೆ. ‘ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’ಯ ತಂಡದೊಂದಿಗೆ ಸಿನಿಮಾ ಇದೆ. ಆದರೆ ಕೊನೆಯಲ್ಲಿ ಏನು ಬೇಕಾದರೂ ಆಗಬಹುದು. ಚಿತ್ರಕತೆ, ಡೈಲಾಗ್‌, ಪಾತ್ರಗಳ ಬಗ್ಗೆ ಇನ್ನೂ ಏನನ್ನೂ ಯೋಚಿಸಿಲ್ಲ. ಸದ್ಯಕ್ಕೆ ಈ ಸಿನಿಮಾದಲ್ಲಿ ಬಿಜಿ.

* ನಿಮ್ಮ ಲೈಫಲ್ಲಿ ಸಿಂಪಲ್ಲಾಗ್ ಲವ್ ಸ್ಟೋರಿ ಯಾವ್ದಾದ್ರೂ ಇದೆಯಾ?
ಸದ್ಯಕ್ಕೆ ಆಗಿರೋದೆಲ್ಲಾ ಸಿಂಪಲ್ಲಾಗಿ ಆಗಿ ಮುಗಿದಿದೆ ಅಷ್ಟೆ. ಯಾವುದೂ ಸೀರಿಯಸ್ ಲವ್ ಆಗಿಲ್ಲ. ಮುಂದೆ ಆಗಬಹುದೋ ಏನೋ ಗೊತ್ತಿಲ್ಲ.

* ನಿಮಗೆ ನಿಜವಾಗ್ಲೂ ಮರೆಗುಳಿತನ ಕಾಯಿಲೆ ಇರೋ ಹುಡುಗಿ ಸಿಕ್ಕಿದ್ರೆ ಏನು ಮಾಡ್ತೀರಾ?
ತುಂಬಾ ಕಷ್ಟ ಆಗುತ್ತೆ. ಪ್ರತಿ ದಿನ ಒಂದೇ ಹುಡುಗಿ ಹತ್ತಿರ ಮೊದಲಿನಿಂದ ಪ್ರೀತಿ ಮಾಡೋದು, ಪಟಾಯಿಸೋದು ಕಷ್ಟ. ದಿನೇ ದಿನೇ ಅದೇ ಡೈಲಾಗ್, ಅದೇ ಕನಸು ವಿವರಿಸೋದು ಕಷ್ಟಾನೇ. ಮುಂದಕ್ಕೆ ಹೋಗೋದಕ್ಕೆ ಅವಕಾಶವೇ ಇರೊಲ್ಲ. ಆದ್ರೆ ನನಗೇ ಮರೆವು ಇದ್ರೆ ಈ ತೊಂದರೆನೇ ಇರೋಲ್ಲ. ದಿನಾ ಬೇರೆ ಹುಡುಗಿ ಅನ್ನೋ ಥರ ಅದೇ ಹುಡುಗಿನ ಪ್ರೀತಿಸೋದು...

* ನಿಮಗೆ ನಿರ್ದೇಶಕ ರಕ್ಷಿತ್ ಶೆಟ್ಟಿ ಇಷ್ಟನಾ? ನಟ ರಕ್ಷಿತ್ ಶೆಟ್ಟಿ ಇಷ್ಟನಾ?
ನನಗೆ ನಟ ರಕ್ಷಿತ್ ಶೆಟ್ಟಿನೇ ಇಷ್ಟ. ನಿರ್ದೇಶಕರು ಹೇಳಿದ್ದನ್ನು ಮಾಡಿಕೊಂಡು ಹೋಗೋದು ನಿರ್ದೇಶನಕ್ಕೆ ಹೋಲಿಸಿದರೆ ಸುಲಭ. ನಿರ್ದೇಶನದ ಪಟ್ಟದಲ್ಲಿ ಜವಾಬ್ದಾರಿ ಹೆಚ್ಚು. ಪ್ರತಿ ವಿಷಯದಲ್ಲೂ ಸಾಕಷ್ಟು ಯೋಚಿಸಬೇಕು. ಇಲ್ಲ ಅಂದ್ರೆ ಎಡವೋದು ಗ್ಯಾರಂಟಿ. ಆದ್ರೆ ನಟನಾದ್ರೆ ಹೀಗಿರಲ್ಲ. ಎರಡು ಆಯ್ಕೆಗಳಲ್ಲೂ ಬದ್ಧತೆ ಇರಬೇಕು ನಿಜ. ಆದರೆ ನಿರ್ದೇಶನದಲ್ಲಿ ಸ್ವಲ್ಪ ಹೆಚ್ಚಿರಬೇಕು.

* ತುಗ್ಲಕ್ ಸಿನಿಮಾದಲ್ಲಿನ ಪಾತ್ರದಂತೆ ನಿಮ್ಮ ಲೈಫಲ್ಲೂ ಯಾವಾಗ್ಲಾದ್ರೂ ಅನ್ನಿಸಿದ್ಯಾ?
ಹೌದು, ಖಂಡಿತ ಇದೆ. ಹಲವು ಬಾರಿ ಸಂದೇಹ, ಗೊಂದಲಗಳು ಇರುತ್ತೆ. ಆದರೆ ನಾನು ಯಾವಾಗಲೂ ಡಿಸೈಡ್ ಆಗಿರ್ತೀನಿ. ಬೇರೆಯವರಿಗೆ ನಾನು ಗೊಂದಲದಲ್ಲಿರುವ ಹಾಗೆ ಕಾಣಿಸ್ತೀನಿ. ಉದಾಹರಣೆ ಅಂದರೆ, ನಾನು ಎಂಜಿನಿಯರಿಂಗ್ ಮಾಡಿದ್ದೆ. ಸಾಫ್ಟ್‌ವೇರ್‌ ಕೆಲಸ ಗಿಟ್ಟಿಸಿಕೊಂಡಿದ್ದೆ. ಇದ್ದಕ್ಕಿದ್ದಂತೆ ಸಿನಿಮಾಗೆ ಬಂದೆ. ಆಗ ಸ್ನೇಹಿತರಿಗೆಲ್ಲ ನಾನು ಗೊಂದಲದ ವ್ಯಕ್ತಿಯಾಗೇ ಕಾಣಿಸಿದ್ದೆ.

* ಸಾಫ್ಟ್‌ವೇರ್ ಕೆಲಸದಲ್ಲಿ ಆರಾಮಾಗಿ ಇರಬಹುದಿತ್ತು. ಈ ಸಿನಿಮಾ ಖಯಾಲಿ ಹೇಗೆ ಶುರುವಾಯ್ತು?
ನಾನು ಚಿಕ್ಕ ಹುಡುಗನಿದ್ದಾಗಿಂದಲೂ ಸಿನಿಮಾ ಬಗ್ಗೆ ತುಂಬಾ ಆಸೆ ಇತ್ತು. ಸಿನಿಮಾವನ್ನು ಕನಸಿನಂತೆ ಧ್ಯಾನಿಸುತ್ತಿದ್ದೆ. ನಟನಾಗುವ ಪ್ರಯತ್ನ ನನ್ನೊಳಗೇ ನಡೆಯುತ್ತಿತ್ತು. ಆದರೆ ಅದಕ್ಕೆ ಒಳ್ಳೆ ಸಮಯ ಬಂದಿರಲಿಲ್ಲ ಅಷ್ಟೆ. ಬೆಂಗಳೂರಿಗೆ ಬಂದ ಮೇಲೆ ಸಾಧ್ಯತೆಗಳು ತೆರೆದುಕೊಂಡಿದ್ದು. ಅದಕ್ಕೆಂದೇ ಸಾಫ್ಟ್‌ವೇರ್ ಬಿಟ್ಟು ಸಿನಿಮಾ ಲೋಕಕ್ಕೆ ಬಂದಿದ್ದು.

* ಮದ್ವೆ ಸಿಂಪಲ್ಲಾಗ್ ಆಗ್ತೀರಾ ಅಥವಾ ಉಳಿದವರಿಗೆ ಕಾಣಿಸುವಂತೆ ಆಗ್ತೀರಾ?
ಇದರಲ್ಲಿ ಇನ್ನೂ ಗೊಂದಲ ಇದೆ. ಸಿಂಪಲ್ಲಾಗ್ ಮದುವೆ ಆಗಿ ದುಡ್ಡು ಉಳಿಸಿ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಬಹುದು ಅಂತ ಒಂದು ಕಡೆ ಅನ್ನಿಸಿದರೆ, ಜೀವನದಲ್ಲಿ ಮದ್ವೆ ಆಗೋದು ಒಂದು ಸಾರಿ, ಯಾಕೆ ಚೆನ್ನಾಗಿ ಆಗಬಾರದು ಅಂತ ಇನ್ನೊಂದು ಕಡೆ ಅನ್ನಿಸುತ್ತೆ. ಇನ್ನೂ ಕಾಲ ಇದೆ, ನೋಡಬೇಕು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.