ADVERTISEMENT

ಕಲಾಪ್ರಪಂಚದಲ್ಲಿ ಛಾಪು ಮೂಡಿಸಿದ ಕಲಾವಿದರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST
ಕಲಾಪ್ರಪಂಚದಲ್ಲಿ  ಛಾಪು ಮೂಡಿಸಿದ ಕಲಾವಿದರು
ಕಲಾಪ್ರಪಂಚದಲ್ಲಿ ಛಾಪು ಮೂಡಿಸಿದ ಕಲಾವಿದರು   

 ಭಾರ್ತಿ ಖೇರ್
ಲಂಡನ್‌ನಲ್ಲಿ ಹುಟ್ಟಿದ ಭಾರ್ತಿ ಖೇರ್, ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದವರು. ಸುಮಾರು 20 ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ ಇವರಿಗೆ ಬಣ್ಣಗಳೊಂದಿಗೆ ಆಡುವುದೆಂದರೆ ಅಚ್ಚುಮೆಚ್ಚು. ಭಾರತದ ಸಂಸ್ಕೃತಿಯನ್ನು ಬಣ್ಣ, ಬಿಂದುಗಳ ಮೂಲಕ ತೋರಿಸಿಕೊಡುವ ವಿಶಿಷ್ಟತೆ ಇವರ ಕಲೆಗಿದೆ. ಕೇವಲ ಬಣ್ಣಗಳಷ್ಟೇ ಅಲ್ಲ, ಶಿಲ್ಪಕಲೆಯಲ್ಲೂ ಇವರದು ಎತ್ತಿದ ಕೈ. `ದಿ ರಿಂಕಿ ಡಿಂಕ್ ಪ್ಯಾಂಥರ್~ (ಫೈಬರ್ ಗ್ಲಾಸ್ ಶಿಲ್ಪ), `ದಿ ಸ್ಕಿನ್ ಸ್ಪೀಕ್ಸ್ ಎ ಲ್ಯಾಂಗ್ವೇಜ್ ನಾಟ್ ಇಟ್ಸ್ ಓನ್~ ಎಂಬ ವಿಷಯವನ್ನಿಟ್ಟುಕೊಂಡು ಆನೆಯ ಅತಿ ದೊಡ್ಡ ಶಿಲ್ಪವನ್ನೂ ರೂಪಿಸಿದ್ದಾರೆ.
 
`ದಿ ನೆಮಸಿಸ್ ಆಫ್ ನೇಶನ್~ ಎಂಬ ಬಿಂದಿಗಳ (ಹಣೆಬೊಟ್ಟು) ಕಲಾಕೃತಿ ಇವರ ಪ್ರಸಿದ್ಧ ಕಲಾಕೃತಿಗಳಲ್ಲಿ ಒಂದು. ಸಾಂಪ್ರದಾಯಿಕ ಮತ್ತು ಡಿಜಿಟಲ್ ಫೋಟೊಗ್ರಫಿಯಲ್ಲೂ ಇವರಿಗೆ ಅಪರಿಮಿತ ಆಸಕ್ತಿ. `ದಿ ಹಾಟ್ ವಿಂಡ್ಸ್ ದಟ್ ಬ್ಲೋ ಫ್ರಂ ದ ವೆಸ್ಟ್~, `ಲೀವ್ ಯುವರ್ ಸ್ಮೆಲ್~ ಮುಂತಾದ ಪ್ರದರ್ಶನವನ್ನೂ ನೀಡಿದ್ದಾರೆ.
 ಆರ್ಕೆನ್ ಆರ್ಟ್ ಪ್ರಶಸ್ತಿ, ` ್ಗಊಔ  ವುಮೆನ್ ಅಚೀವರ್ ಆಫ್ ದಿ ಇಯರ್~ , ದಿ ಸಂಸ್ಕೃತಿ ಪ್ರಶಸ್ತಿಗಳೂ ಸಂದಿವೆ.  

ಪ್ರಮೋದ್ ಅಪೆಟ್ ಮಹದೇವ್
ಮಹಾರಾಷ್ಟ್ರದ ಗಿರವಾಲಿ ಜಿಲ್ಲೆಯಲ್ಲಿ ಹುಟ್ಟಿದ ಪ್ರಮೋದ್ ಕೈಲಾಸ್ ಕಲಾ ನಿಕೇತನದಿಂದ ಕಲೆ ಡಿಪ್ಲೊಮೊ, ಮುಂಬೈನಲ್ಲಿ ಡಿಪ್ಲೊಮೊ ಇನ್ ಆರ್ಟ್ ಎಜುಕೇಶನ್, ಡಿಪ್ಲೊಮೊ ಇನ್ ಆರ್ಟ್ (ಡ್ರಾಯಿಂಗ್ ಅಂಡ್ ಪೇಂಟಿಂಗ್) ಪದವಿ ಪಡೆದುಕೊಂಡವರು. ಮನುಷ್ಯನ ಮುಖಭಾವವನ್ನೇ ತಮ್ಮ ಕಲೆಯ ವಸ್ತುವಾಗಿ ಆರಿಸಿಕೊಂಡು ಅನೇಕ ಚಿತ್ರಗಳನ್ನು ರಚಿಸಿದ್ದಾರೆ.

ಮುಖದ ಮೂಲಕವೇ ತನ್ನೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸುವುದು ಮನುಷ್ಯ ಸಹಜವಾದ್ದರಿಂದ ಅವಕ್ಕೆ ತಮ್ಮ ಕಲೆಯ ನೆಲೆ ಒದಗಿಸಿದ್ದಾರೆ. ಐತಿಹಾಸಿಕ, ಪುರಾಣ ಶೈಲಿ ಇವರ ಕಲೆಗಳಲ್ಲಿ ಎದ್ದು ತೋರುತ್ತದೆ. ಮಕ್ಕಳ ಮೂಲಕ ಮನುಷ್ಯ ಸಂಬಂಧಗಳ ಮೌಲ್ಯವನ್ನೂ ಕಲೆಯಲ್ಲಿ ಮೂಡಿಸಿದ್ದಾರೆ. ವೆಟ್ ಹೇರ್, ದಿ ಡ್ರೀಮ್, ಗುಡ್ ಫ್ರೆಂಡ್, ಬ್ರೈಡ್, ಪ್ರೇಯರ್, ವೇದ ಶಾಲಾ ಹೀಗೆ ಹಲವು ಮುಖಗಳನ್ನು ಕ್ಯಾನ್ವಾಸ್ ಮೇಲೆ ಚಿತ್ರಿಸಿದ್ದಾರೆ.

ಮುಂಬೈ, ಚೆನ್ನೈ, ಪುಣೆ, ದೆಹಲಿ, ಬೆಂಗಳೂರು ಮುಂತಾದೆಡೆ ಇವರ ಕಲೆಗಳು ಪ್ರದರ್ಶನ ಕಂಡಿವೆ. ಅಷ್ಟೇ ಅಲ್ಲ, ನ್ಯೂಯಾರ್ಕ್, ಲಂಡನ್, ದುಬೈ, ಇಂಡೋನೇಷ್ಯಾ, ಮುಂತಾದೆಡೆ ಇವರ ಸಂಗ್ರಹಗಳೂ ಇವೆ. ನಾಸಿಕ್ ಕಲಾ ನಿಕೇತನ್ ಪ್ರಶಸ್ತಿ, ಪುಣೆಯ ಕನ್ಸರ್ನ್ ಇಂಡಿಯಾ ಫೌಂಡೇಶನ್, ವಿವಿ ಓಕ್, ಕೆ.ಕೆ. ಹೆಬ್ಬಾರ್ ಪ್ರಶಸ್ತಿ, ಯಶವಂತರಾವ್ ಚವಾಣ್ ಯುವಪುರಸ್ಕಾರಗಳು ಲಭಿಸಿದೆ.

ಅನಿಶ್ ಕಪೂರ್
ಅನಿಶ್ ಕಪೂರ್ ಭಾರತ ಮೂಲದ ಬ್ರಿಟನ್ ಶಿಲ್ಪಿ. ಮುಂಬೈನಲ್ಲಿ ಜನಿಸಿದ ಅನಿಶ್ `ಹಾರ್ನ್‌ಸೆ ಕಾಲೇಜ್ ಆಫ್ ಆರ್ಟ್ಸ್~ ಮತ್ತು `ಚೆಲ್ಸೀ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಡಿಸೈನ್~ನಲ್ಲಿ ಅಧ್ಯಯನ ಮಾಡಿದ್ದಾರೆ.

ಪ್ರಪಂಚದ ಹಲವೆಡೆ ಶಿಲ್ಪಗಳನ್ನು ನಿರ್ಮಿಸಿ ಪ್ರಸಿದ್ಧಿ ಪಡೆದಿರುವ ಇವರ ಶಿಲ್ಪಗಳಿಗೆ ಭಾರಿ ಬೇಡಿಕೆ. ಪೂರ್ಣ ಕಲಾಕೃತಿಯೂ ಅಲ್ಲದ, ಪೂರ್ಣ ಶಿಲ್ಪವೂ ಅಲ್ಲದ ಇವರ ಕಲಾಕೃತಿಗಳು ಪ್ರಪಂಚದಾದ್ಯಂತ ಹೆಸರು ವಾಸಿಯಾಗಿದೆ.

ಕ್ಲೌಡ್ ಗೇಟ್, ರಾಕ್ ಫೆಲ್ಲರ್ ಸೆಂಟರ್‌ನಲ್ಲಿನ ಸ್ಕೈ ಮಿರರ್, ಒಲಂಪಿಕ್ ಪಾರ್ಕ್‌ನಲ್ಲಿನ `ಆರ್ಬಿಟ್~, ತರತಂತರ, ಮಾರ್ಸ್‌ಯಾಸ್, ಪ್ಯಾರಬೋಲಿಕ್ ವಾಟರ್ಸ್‌, ಸ್ವಯಂಭ್, ಆರ್ಕ್ ನೋವಾ, ಟೆಮೆನೋಸ್, ಡಿಸ್‌ಮೆಂಬರ್‌ಮೆಂಟ್ ಸೈಟ್, ಲಿಯೊನಾರ್ಡ್ ಸ್ಟ್ರೀಟ್, ಬಿಲ್ಡಿಂಗ್ ಫಾರ್ ಎ ವಾಯ್ಡ ಮುಂತಾದವು ಇವರ ಪ್ರಸಿದ್ಧ ಶಿಲ್ಪಕಲೆಗಳು.

ಕೆಂಪು ಮೇಣ ಬಳಸಿ ಶಿಲ್ಪವನ್ನು ತಯಾರಿಸಿ ಅದಕ್ಕೆ `ಬ್ಲಡ್ ರಿಲೇಶನ್ಸ್~ ಎಂದು ಲೇಖಕ ಸಲ್ಮಾನ್ ರಶ್ದಿ ಅವರ ಲೇಖನದ ತುಣುಕನ್ನೂ ಬೆಸೆದಿದ್ದಾರೆ.ಪ್ರತಿಷ್ಠಿತ ಪ್ರಿಮಿಯೊ ಡ್ಯೂಮಿಲಾ ಅವಾರ್ಡ್, ಟರ್ನರ್ ಪ್ರೈಜ್, ಪದ್ಮಭೂಷಣವೂ ಲಭಿಸಿದೆ.
ರಾಕಿಬ್ ಷಾ
ಮೂಲತಃ ಕಾಶ್ಮೀರದವರಾಗಿರುವ, ಲಂಡನ್‌ನಲ್ಲಿ ನೆಲೆಸಿರುವ ರಾಕಿಬ್ ಷಾ ಬಣ್ಣಗಳೊಂದಿಗೆ ತಮ್ಮ ಜೀವನ ಹಂಚಿಕೊಂಡವರು. ಇವರ ಕಲಾಕೃತಿಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾದ ಖ್ಯಾತಿ ಹೊಂದಿವೆ.

ಹೈಯರಾನಿಮಸ್ ಬಾಷ್‌ನಿಂದ ಪ್ರೇರಿತಗೊಂಡು ಗಾಢ ಬಣ್ಣಗಳಿಂದ ತಮ್ಮದೇ ಶೈಲಿಯ ಚಿತ್ರವನ್ನು ಜಗತ್ತಿಗೆ ಪರಿಚಯಿಸಿದ ಅವರ ಕಲೆ ಬೆಳಕಿಗೆ ಬಂದಿದ್ದು 2007ರಲ್ಲಿ. ರಾಕಿಬ್ ರಚಿಸಿದ `ಗಾರ್ಡನ್ ಆಫ್ ಅರ್ತ್‌ಲಿ ಡಿಲೈಟ್ಸ್~ 54.9 ಲಕ್ಷ ಡಾಲರ್ ಬೆಲೆಗೆ ಮಾರಾಟವಾಯಿತು. ಪ್ರಕೃತಿಯನ್ನು, ತನ್ನ ಸುತ್ತಲ ಪರಿಸರವನ್ನು, ಮನುಷ್ಯರನ್ನು, ಸಂಬಂಧವನ್ನು ಬಣ್ಣಗಳಲ್ಲಿ ತೇಲಿಸುವ ಖ್ಯಾತಿ ರಾಕಿಬ್ ಅವರದ್ದು.
 
ಸಂಗೀತ ಕೇಳುತ್ತಾ ಚಿತ್ತಾರ ಬಿಡಿಸುತ್ತಿದ್ದ ರಾಕಿಬ್ ಬಣ್ಣಗಳಿಂದ ಮಾಯಾ ಲೋಕವನ್ನೇ ಸೃಷ್ಟಿಸುವ ಶಕ್ತಿ ಹೊಂದಿರುವವರು. `ಆಬ್ಸೆನ್ಸ್ ಆಫ್ ಗಾಡ್~, `ಆರ್ಟ್ ನೌ~, `ಮೆಮೆಂಟೊ ಮೋರಿ~ ಹೀಗೆ ಹಲವು ಕಲಾಕೃತಿಗಳ ಕೊಡುಗೆ ನೀಡಿದ್ದಾರೆ. ಕೇವಲ ಬಣ್ಣಗಳಷ್ಟೇ ಅಲ್ಲ, ಚಿತ್ರಗಳಿಗೆ ಆಕ್ರಿಲಿಕ್ ಪೇಂಟ್, ಇಂಡಸ್ಟ್ರಿಯಲ್ ಪೇಂಟ್, ಗ್ಲಿಟರ್, ಹರಳುಗಳು ಇವುಗಳನ್ನು ಬಳಸಿ ಚಿತ್ರಕಲೆಯನ್ನು ಇನ್ನಷ್ಟು ಸಮೃದ್ಧಗೊಳಿಸಿ ಕಲಾಪ್ರಪಂಚದಲ್ಲಿ ಹೆಸರಾದವರು.

ಪುಷ್ಪಮಾಲಾ ಎನ್
ಬೆಂಗಳೂರು ಮೂಲದ ಪುಷ್ಪಮಾಲಾ ಎನ್ ಪ್ರಸಿದ್ಧ ಕಲಾವಿದೆಯಾಗಿ ಎಲ್ಲರಿಗೂ ಚಿರಪರಿಚಿತ. ಶಿಲ್ಪ ಕಲೆಯಲ್ಲಿ ಪರಿಣಿತಿ ಹೊಂದಿದ್ದ ಈಕೆಯ ಹೊಸತನದ ತುಡಿತ ಆರಂಭವಾಗಿದ್ದು `ಫೋಟೊ ಇನ್ಸ್‌ಟಾಲೇಶನ್~ ಮತ್ತು `ಫೋಟೊ ಪರ್ಫಾರ್ಮೆನ್ಸ್~ ಎಂಬ ಹೊಸ ಛಾಯಾಚಿತ್ರ ಪರಿಕಲ್ಪನೆಯಿಂದ.  ದೃಶ್ಯದಿಂದಲೂ ಕಲೆ ಅರಳಲು ಸಾಧ್ಯ ಎಂಬುದನ್ನು ನಿರೂಪಿಸಲು ಅನೇಕ ಪ್ರಯೋಗಗಳನ್ನು ಮಾಡಿದ ಇವರಿಗೆ ಪ್ರತಿಷ್ಠಿತ ತ್ರಿನಾಲೆ ಪ್ರಶಸ್ತಿ ಲಭಿಸಿದೆ.  

ಭಾರತದಲ್ಲಿ ಛಾಯಾ ಚಿತ್ರ ಕ್ಷೇತ್ರಕ್ಕೆ ಹೊಸ ತಿರುವು ನೀಡಿದ ಖ್ಯಾತಿ ಪುಷ್ಪ ಮಾಲಾ ಅವರದ್ದು. ಖುದ್ದು ತಾವೇ ಫೋಟೊಗಳಿಗೆ ನಿಂತು ಹೆಣ್ಣಿನ ಹಲವು ಆಯಾಮಗಳನ್ನು,  ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ. ಗ್ರಾಮಗಳಲ್ಲಿನ, ನಗರದಲ್ಲಿನ ಹೆಣ್ಣಿನ ದೃಶ್ಯಗಳಿಗೆ ತಾವೇ ವಸ್ತುವಾಗಿದ್ದಾರೆ. 

ಇಂಡಿಯನ್ ಲೇಡಿ, ನೇಟಿವ್ ವುಮೆನ್ ಆಫ್ ದಿ ಸೌತ್ ಇಂಡಿಯಾ, ದಿ ಆಂಗ್ವಿಶ್ಡ್ ಹಾರ್ಟ್, ಗೋಲ್ಡನ್ ಡ್ರೀಮ್ಸ, ಎಡ್ಜೆಸ್ ಆಫ್ ಡಿಸೈರ್, ಫೈರ್ ಅಂಡ್ ಲೈಫ್ ಮುಂತಾದ ಚಿತ್ರ ಪ್ರದರ್ಶನವನ್ನು ನೀಡಿದ್ದಾರೆ. ಕ್ಲೇರ್ ಆರ್ನಿ ಅವರೊಡಗೂಡಿ ದೃಶ್ಯ ಕಲೆಗೆ ಹೊಸ ಅರ್ಥವನ್ನು ತಂದವರು. ಇವರ ಈ ಅದ್ಭುತ ಚಿತ್ರಗಳು  ಬೆಂಗಳೂರು, ಆಸ್ಟ್ರಿಯಾ, ದೆಹಲಿ, ಪ್ಯಾರಿಸ್, ನ್ಯೂಯಾರ್ಕ್ ಇನ್ನೂ ಹಲವೆಡೆ ಪ್ರದರ್ಶನಗೊಂಡಿವೆ. 
 
ಇವರ ಈ ಕಲೆಗೆ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಿನ್ನದ ಪದಕ,  1984ರಲ್ಲಿ ನ್ಯಾಷನಲ್ ಅವಾರ್ಡ್ ಕೂಡ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT