ADVERTISEMENT

ಕಲಿಕೆಯ ಜೊತೆ ಗಳಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST
ಕಲಿಕೆಯ ಜೊತೆ ಗಳಿಕೆ
ಕಲಿಕೆಯ ಜೊತೆ ಗಳಿಕೆ   

ಕಾಲೇಜು ಜೀವನ ಎಂದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ರಸಮಯ ಕ್ಷಣಗಳನ್ನು ಕಳೆಯುವ ಸಮಯ. ಕಾಲೇಜು ಜೀವನ ಎಂದರೆ ಮೋಜಿನ ಪರ್ಯಾಯ ಪದ ಎಂದೂ ಹೇಳಬಹುದು. ಆದರೆ, ಕೆಲವು ವಿದ್ಯಾರ್ಥಿಗಳಿಗೆ ಇದು ಅನ್ವಯಿಸದು. ಇಂಥವರಿಗೆ ಕಾಲೇಜು ಜೀವನ ಎಂದರೆ ಮೋಜಿನ ಜೊತೆಗೆ ಜೀವನವನ್ನು ಗಂಭೀರವಾಗಿ ಕಳೆಯುವ ಸಮಯ ಕೂಡ ಹೌದು. ಮೋಜು ಜೀವನದ ಅವಿಭಾಜ್ಯ ಅಂಗವಾದರೂ ಕೂಡ ಕಲಿಕೆಯ ಜೊತೆಗೆ ಉದ್ಯೋಗದ ಅನುಭವಗಳನ್ನು ಎಷ್ಟು ಕಲಿಯಲು ಸಾಧ್ಯವೋ ಅಷ್ಟನ್ನು ಗಳಿಸುವುದು ಕೂಡ ಉದ್ದೇಶವಾಗಿರುತ್ತದೆ. ಅದಕ್ಕಾಗಿಯೇ ಅವರು ಕಲಿಕೆಯ ಜೊತೆ ಗಳಿಕೆಗೆ ಮಹತ್ವ ನೀಡುತ್ತಾರೆ.  

‘ಕಾಲೇಜಿನಿಂದ ಹೊರಬಂದೊಡನೆಯೇ ನಮ್ಮದೇ ಆದ ಸ್ವಂತ ಉದ್ದಿಮೆಯನ್ನು ಆರಂಭಿಸಲು ನಿರ್ಧರಿಸಿದ್ದು ಅದಕ್ಕಾಗಿಯೇ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಉದ್ಯೋಗ ಮಾಡಲು ನಿರ್ಧರಿಸಿದ್ದೇವೆ. ಅದೇ ಅನುಭವವನ್ನು ಮುಂದಿಟ್ಟುಕೊಂಡು ಉದ್ದಿಮೆ ವಲಯದ ಸದುಪಯೋಗ ಪಡೆಯಲು ಬಯಸುತ್ತೇವೆ’ ಎನ್ನುತ್ತಾರೆ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನ ಮನೀಷ್. ಮನೀಷ್ ತನ್ನ ಇತರ ಐದು ಮಂದಿ ಸ್ನೇಹಿತರೊಂದಿಗೆ ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಾರೆ.

ಮನೀಷ್ ವಾರದ ದಿನಗಳಲ್ಲಿ ರಜೆ ಇದ್ದರೆ ಬೆಳಿಗ್ಗೆ 11ರಿಂದ 4ರವರೆಗೆ ಹಾಗೂ ವಾರಾಂತ್ಯದಲ್ಲಿ ಬೆಳಿಗ್ಗೆ 8ರಿಂದ 12.30ರವರೆಗೆ ಕೆಲಸ ಮಾಡುತ್ತಾರೆ. ಪಾರ್ಟ್‌ಟೈಮ್ ಆಗಿ ಕೆಲಸ ಮಾಡುವುದು ಶ್ರಮದಾಯಕವಾದರೂ ಕೂಡ ವಿದ್ಯಾಭ್ಯಾಸದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಅವರು ಎಚ್ಚರ ವಹಿಸುತ್ತಾರೆ.

ಟೈಮ್‌ಮ್ಯಾನೇಜ್‌ಮೆಂಟ್ ತುಂಬಾ ಮುಖ್ಯವಾದದ್ದು. ಅಸೈನ್‌ಮೆಂಟ್‌ಗಳು ಕೆಲಸ ಇವುಗಳ ನಡುವೆ ಕೆಲವೊಮ್ಮೆ ನಾವು ತುಂಬಾ ಹರಸಾಹಸ ಪಡಬೇಕಾಗುತ್ತದೆ. ಆದರೆ, ಎಲ್ಲವನ್ನೂ ಸರಿದೂಗಿಸಲು ಪ್ರಯತ್ನಿಸುತ್ತೇವೆ. ಇದು ಇಂಟರ್‌ನೆಟ್ ಯುಗವಾದ್ದರಿಂದ ನಮ್ಮ ಅಸೈನ್‌ಮೆಂಟ್‌ಗಳು ಮತ್ತು ಪ್ರಾಜೆಕ್ಟಗಳನ್ನು ಮುಗಿಸುವುದು ಕಷ್ಟದ ವಿಷಯವೇನಲ್ಲ,

 ಮಾತ್ರವಲ್ಲ. ಪರೀಕ್ಷೆಗೆ ಒಂದು ತಿಂಗಳಿರುವಾಗಲೇ ಓದು ಆರಂಭಿಸಿ ಡಿಸ್ಟಿಂಕ್ಷನ್ ಪಡೆಯಲು ಪ್ರಯತ್ನಿಸುತ್ತೇವೆ’ ಎಂದು vಮನೀಶ್ ಸ್ನೇಹಿತ ನವೀನ್ ಹೇಳುತ್ತಾರೆ.  ಫೈನಾನ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ನವೀನ್, ‘ನಮ್ಮ ಅಸೈನ್‌ಮೆಂಟ್‌ಗಳನ್ನು ಮುಗಿಸಿ ಸಾಮಾನ್ಯವಾಗಿ ನಾವು ಬೆಳಿಗ್ಗೆ 2 ಅಥವಾ ಮೂರು ಗಂಟೆಗೆ ನಿದ್ರೆ ಮಾಡುತ್ತೇವೆ. ಕೆಲವೊಮ್ಮೆ ನಾವು ನಮ್ಮ ಸ್ನೇಹಿತರ ಸಹಾಯವನ್ನೂ ಪಡೆಯುತ್ತೇವೆ’ ಎನ್ನುತ್ತಾರೆ.

ಆದರೆ, ದಿನದ 24 ಗಂಟೆ  ಕೆಲಸ ಮಾಡಲೂ ಈ ವಿದ್ಯಾರ್ಥಿಗಳು ತಯಾರು. ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ  ಕಲಿಯುತ್ತಿರುವ ಹಾಗೂ  ಫೈನಾನ್ಶಿಯಲ್ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಹರೀಶ್ ಪ್ರಕಾರ, ‘ಸಂಜೆ 4 ಗಂಟೆಗೆ ನನ್ನ ತರಗತಿಗಳು ಮುಗಿಯುತ್ತವೆ. ಬಳಿಕ ನಾನು ಆಫೀಸಿಗೆ ಹೋಗಿ 7.30 ವರೆಗೆ ಕೆಲಸ ಮಾಡುತ್ತೇನೆ. ವಾರಾಂತ್ಯದಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕೆಲಸ ಮಾಡುತ್ತೇವೆ ಎನ್ನುತ್ತಾರೆ.

ಎಂಬಿಎ ಬಳಿಕವೂ ಇದೇ ಸಂಸ್ಥೆಯಲ್ಲೇ ಕೆಲಸ ಮಾಡಲು ಹರೀಶ್ ನಿರ್ಧರಿಸಿದ್ದಾರೆ.  ಕಾಲೇಜಿನ ಇತರ ಸಹಪಾಠಿಗಳಿಗೆ ದೊರೆಯುತ್ತಿರುವ ಮಜಾವನ್ನು ಇವರು ಮಿಸ್ ಮಾಡುವುದಿಲ್ಲವೇ? ಎಂದು ಕೇಳಿದರೆ, ‘ನಾವು ಕೆಲಸದಲ್ಲಿ ಮಜಾ ಕಂಡುಕೊಳ್ಳುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ಆರ್ಥಿಕವಾಗಿ ಸ್ವತಂತ್ರರಾಗಿರುವುದು ಇನ್ನೂ ಹೆಚ್ಚಿನ ಸಂತಸ ನೀಡುತ್ತದೆ’ ಎನ್ನುವುದು ಅವರ ಉತ್ತರ.

ನಾವು ಜೂನಿಯರ್ ಕಾಲೇಜಿನಲ್ಲಿದ್ದಾಗ ಮಜಾ ಮಾಡಿದ್ದೆವು. ಆದರೆ ನಾವೀಗ ಸ್ನಾತಕೋತ್ತರ ಪದವಿಯಲ್ಲಿರುವ ಕಾರಣ ನಾವು ವೃತ್ತಿಪರರಾಗಿರಲೇಬೇಕು. ಈಗಂತೂ ಇಂಟರ್ನ್‌ಶಿಪ್ ಪಠ್ಯದ ಭಾಗವಾಗಿರುವ ಕಾರಣ ನನ್ನ ಹೆಚ್ಚಿನ ಸಹಪಾಠಿಗಳು ಅದನ್ನೀಗ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುತ್ತಾರೆ ಅವರು. 
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.