ADVERTISEMENT

ಖಾಸಗಿತನ ಉಳಿಸಿಕೊಳ್ಳಲು 5 ಸೂತ್ರಗಳು

ಜ್ಯೋತಿ ಎಸ್.ಚಿತ್ರದುರ್ಗ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಖಾಸಗಿತನ ಉಳಿಸಿಕೊಳ್ಳಲು 5 ಸೂತ್ರಗಳು
ಖಾಸಗಿತನ ಉಳಿಸಿಕೊಳ್ಳಲು 5 ಸೂತ್ರಗಳು   

ನಮ್ಮ ದೈನಂದಿನ ಚಟುವಟಿಕೆಗಳೆಲ್ಲವೂ ಅಂತರ್ಜಾಲ (ಇಂಟರ್‌ನೆಟ್‌) ಅವಲಂಬಿಸಿವೆ. ನಮ್ಮ ಮಾತುಕತೆಗಳು ಸೋಷಿಯಲ್‌ ಮೆಸೇಜಿಂಗ್‌ ಆ್ಯಪ್‌ಗಳಲ್ಲಿ, ಪತ್ರ ವ್ಯವಹಾರಗಳು ನಡೆಯುವುದು ಈ ಮೇಲ್‌ನಲ್ಲಿ. ಫೇಸ್‌ಬುಕ್‌ ಮುಂತಾದ ತಾಣಗಳಲ್ಲಿ ನಮ್ಮ ಹಲವು ಆಪ್ತ ಹಾಗೂ ನಿತ್ಯದ ಚಟುವಟಿಕೆಗಳನ್ನು, ನಮ್ಮ ಆಸಕ್ತಿ, ಹವ್ಯಾಸ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತೇವೆ. ಈ ಮೂಲಕ ನಮಗೆ ತಿಳಿಯದೇ ಹಲವು ಮಹತ್ವದ ವಿಚಾರಗಳನ್ನು ಸಾರ್ವಜನಿಕಗೊಳಿಸುತ್ತಿರುತ್ತೇವೆ.

ಡಿಜಿಟಲ್‌ ಜಗತ್ತು, ಮಾರುಕಟ್ಟೆಗಳೆರಡೂ ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ‘ಪ್ರತಿಯೊಂದು ಮಾಹಿತಿಯೂ ಅಮೂಲ್ಯ’ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮಾಹಿತಿ ಸೋರಿಕೆಗಳು ಅಥವಾ ಅನೈತಿಕವಾದ ಮಾಹಿತಿಯ ಮಾರಾಟ ನಡೆಯುತ್ತಿರುತ್ತದೆ. ‘ಆ್ಯಶ್ಲೆ ಮ್ಯಾಡಿಸನ್‌’ ಆಗಿರಬಹುದು ಅಥವಾ ತೀರಾ ಇತ್ತೀಚಿನ ‘ಕೇಂಬ್ರಿಡ್ಜ್‌ ಅನಾಲಿಟಿಕಾ ಹಗರಣ’ವಿರಬಹುದು. ಈ ಪ್ರಕರಣಗಳು ಎತ್ತಿಹಿಡಿಯುವುದು ಒಂದೇ ಅಂಶವನ್ನು; ನಿಮ್ಮ ಮಾಹಿತಿ ಅತ್ಯಮೌಲ್ಯ, ಹಾಗಾಗಿಯೇ ಎಲ್ಲರಿಗೂ ಅದರ ಮೇಲೆ ಕಣ್ಣು!

ನಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿಸಿಕೊಳ್ಳುವುದು ಹೇಗೆ? ನಾವು ಇಂಟರ್‌ನೆಟ್‌ ಅಥವಾ ಇಂಟರ್‌ನೆಟ್‌ ಆಧರಿತ ಸೇವೆಗಳನ್ನು ಬಿಟ್ಟು ಬದುಕುವುದಕ್ಕಂತೂ ಸಾಧ್ಯವಿಲ್ಲ. ಸುರಕ್ಷಿತವಾದ ಮಾರ್ಗಗಳನ್ನು ಅನುಸರಿಸಲು ಸಾಧ್ಯವಿದೆಯೇ? ಸುಲಭವಾದ ಯಾವುದಾದರೂ ಮಾರ್ಗಗಳಿವೆಯೇ? ಈ ಪ್ರಶ್ನೆಗಳೇ ಈಗ ಎಲ್ಲೆಡೆ ಕೇಳಿ ಬರುತ್ತಿವೆ. ತುಂಬಾ ಸರಳವಾದ, ಯಾರೂ ಅನುಸರಿಸಬಹುದಾದ ಐದು ಮಾರ್ಗಗಳು ಇಲ್ಲಿವೆ. ಇವು ನಿಮ್ಮ ಫೋನ್‌, ಕಂಪ್ಯೂಟರ್‌, ಇಂರ್ಟನೆಟ್‌ನಲ್ಲಿರುವ ಮಾಹಿತಿಯನ್ನು ಮೂರನೆಯ ವ್ಯಕ್ತಿ ಕೈ ಹಾಕದಂತೆ ತಡೆಯುತ್ತವೆ.

ADVERTISEMENT

1 ನಿಮ್ಮ ಬ್ರೌಸರ್‌ ಒಂದು ದಿಡ್ಡಿ ಬಾಗಿಲು : ಮೊಬೈಲ್‌ ಆಗಿರಲಿ, ಕಂಪ್ಯೂಟರ್‌ ಆಗಿರಲಿ, ಬ್ರೌಸರ್‌ಗಳ ಮೂಲಕ ನಾವು ಅನೇಕ ಮಾಹಿತಿಯನ್ನು ಹುಡುಕುತ್ತೇವೆ ಅಥವಾ ಹಲವು ವೆಬ್‌ಸೈಟ್‌ಗಳಲ್ಲಿರುವ ನಮ್ಮ ಖಾತೆಗಳನ್ನು ಬಳಸುತ್ತಿರುತ್ತೇವೆ. ಹೀಗೆ ಮಾಡುವಾಗ ನಮ್ಮ ಬಳಕೆಯ ಮಾಹಿತಿಗಳೆಲ್ಲವೂ ಕುಕೀಸ್‌ ರೂಪದಲ್ಲಿ ಬ್ರೌಸರ್‌ನಲ್ಲಿ ಸಂಗ್ರಹವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿಟ್ಟುಕೊಂಡಿರುತ್ತೇವೆ. ಈ ರೀತಿಯಾಗಿ ನಾವು ಮಾಹಿತಿ ಕದಿಯುವವರಿಗೆ ಮನೆ ಬಾಗಿಲು ತೆರೆದಿಟ್ಟಂತೆ ಅವಕಾಶ ಸೃಷ್ಟಿಸುತ್ತೇವೆ. ನಮ್ಮ ಖಾತೆಗಳನ್ನು ಸಂಕೀರ್ಣ ಪಾಸ್‌ವರ್ಡ್‌ಗಳ ಮೂಲಕ ಎಷ್ಟು ಭದ್ರ ಪಡಿಸಿಕೊಳ್ಳುತ್ತೇವೋ ಹಾಗೆಯೇ, ನಮ್ಮ ಬ್ರೌಸರ್‌ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಆಗಾಗ ಹಿಸ್ಟರಿ ಸ್ವಚ್ಛ ಮಾಡುವುದು, ಕುಕೀಸ್‌, ಕ್ಯಾಷೆ ಸ್ವಚ್ಛ ಮಾಡಿಡುವುದು ಒಳ್ಳೆಯದು. ಬ್ರೌಸರ್‌ಗಳ ಮೂಲಕ ನಮ್ಮ ಆನ್‌ಲೈನ್‌ ಚಟುವಟಿಕೆಗಳ ನಿಗಾ ಇಡುವವರಿಗೆ ಮಾಹಿತಿ ಅಷ್ಟು ಸುಲಭಕ್ಕೆ ಸಿಕ್ಕುವುದಿಲ್ಲ.

2 ಮೊಬೈಲ್‌ಗಳಲ್ಲಿರುವ ಮೈಕ್‌ ಎಂಬ ಕಳ್ಳಗಿವಿಗಳು: ನೀವು ಯಾವುದೇ ಆ್ಯಪ್‌ ಇನ್‌ಸ್ಟಾಲ್‌ ಮಾಡಿದಾಗ, ನಿಮ್ಮ ಫೋಟೋ, ಕಾಂಟ್ಯಾಕ್ಟ್‌ ಲಿಸ್ಟ್‌ ಮುಂತಾದವುಗಳಿಗೆ ಸಂಬಂಧಿಸಿದಂತೆ ನೋಡುವ, ಬಳಸುವ ಅನುಮತಿಯನ್ನು ಪಡೆಯುತ್ತದೆ. ಆ ಮೂಲಕ ನಿಮ್ಮ ಮೊಬೈಲ್‌ ಫೋನಿನಲ್ಲಿರಿರುವ ಮಹತ್ವದ ಮಾಹಿತಿ ಆ ನಿರ್ದಿಷ್ಟ ಆ್ಯಪ್‌ಗೆ ತಿಳಿದುಬಿಡುತ್ತದೆ. ಹಾಗೆಯೇ ಕೆಲವು ಆ್ಯಪ್‌ಗಳು ನಮ್ಮ ದನಿಯನ್ನು ಕೇಳಿಸಿಕೊಳ್ಳುತ್ತಾ ಇರುತ್ತವೆ. ಉದಾಹರಣೆಗೆ ನೀವು ಯಾವುದಾದರೂ ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡಿದ ಬಳಿಕ ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಮ್‌ ಬಳಸಿ. ಅಲ್ಲಿ ನೀವು ಚರ್ಚಿಸಿದ ವಿಷಯಕ್ಕೆ ಸಂಬಂಧಿಸಿದ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಯಾಕೆಂದರೆ ಮೊಬೈಲ್‌ನಲ್ಲಿರುವ ಮೈಕ್‌ನಿಂದ ಸಂಗ್ರಹಿಸಲಾಗುವ ಧ್ವನಿಯನ್ನು ಫೇಸ್‌ಬುಕ್‌ ಬಳಸುವ ಅನುಮತಿ ಹೊಂದಿರುತ್ತದೆ. ಹಾಗಾಗಿ ನಿಮ್ಮ ಮೊಬೈಲ್‌ನಲ್ಲಿರುವ ಆ್ಯಪ್‌ಗಳಿಗೆ ನಿರ್ದಿಷ್ಟ ಮಾಹಿತಿ ದೊರೆಯದಂತೆ ನಿಯಂತ್ರಿಸಿ.

3 ಮೊಬೈಲ್‌ಗೆ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ: ವಿವಿಧ ಆಫರ್‌ಗಳ ಸೋಗಿನಲ್ಲಿ, ವಿಶೇಷ ರಿಯಾಯಿತಿಗಳ ಹೆಸರಿನಲ್ಲಿ ಇತ್ತೀಚೆಗೆ ಸೋಷಿಯಲ್‌ ಮೆಸೆಂಜರ್‌ಗಳಿಗೆ, ಈ ಮೇಲ್‌ಗಳಿಗೆ ಲಿಂಕ್‌ಗಳು ಬರುತ್ತವೆ. ಇವು ವಾಸ್ತವದಲ್ಲಿ ಜನಪ್ರಿಯವಾಗಿರುವ ಬ್ರಾಂಡ್‌ಗಳ ಸೋಗಿನಲ್ಲಿರುತ್ತವೆ. ಉದಾಹರಣೆಗೆ Flipkart ನ ಹೋಲುವಂತೆಯೇ Flipcart ಎಂದೋ, Amazon ಎನಿಸಿಬಿಡುವಂತೆ Amazan ಎಂದೋ ಬರುತ್ತವೆ. ಈ ಲಿಂಕ್‌ಗಳು ವಾಸ್ತವದಲ್ಲಿ ಮಾಲ್‌ವೇರ್‌ಗಳನ್ನು ಹೊತ್ತಿರುತ್ತವೆ. ಕಡಿಮೆ ಬೆಲೆ ಫೋನ್‌, ಆಕರ್ಷಕ ರಿಯಾಯಿತಿ ಇತ್ಯಾದಿಗಳ ಮೂಲಕ ಆಕರ್ಷಿಸಿ ಕ್ಲಿಕ್‌ ಮಾಡುವಂತೆ ಪ್ರೇರೇಪಿಸುತ್ತವೆ. ಕ್ಲಿಕ್‌ ಮಾಡಿದ ಬಳಿಕ ಈ ಲಿಂಕ್‌ನಲ್ಲಿರುವ ಮಾಲ್‌ವೇರ್ ನಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್‌ ಹೊಕ್ಕು ನಿರ್ದಿಷ್ಟ ಮಾಹಿತಿಯನ್ನು ಕದ್ದು, ಆ ಲಿಂಕ್‌ನ ಸೃಷ್ಟಿಕರ್ತನಿಗೆ ತಲುಪಿಸುತ್ತವೆ. ಹಾಗಾಗಿ ಅಂಥ ಲಿಂಕ್‌ ಕ್ಲಿಕ್‌ ಮಾಡುವ ಮುನ್ನ ಯೋಚಿಸಿ.

4 ಸಾರ್ವಜನಿಕ ವೈಫೈಗಳ ಬಗ್ಗೆ ಎಚ್ಚರವಿರಲಿ: ಭಾರತೀಯರ ಮನಸ್ಥಿತಿ ವಿಚಿತ್ರವಾದದ್ದು; ಉಚಿತವಾಗಿ ಯಾವುದೇ ಸಿಗಲಿ, ಅದರ ಬಗ್ಗೆ ವಿಪರೀತ ಕುತೂಹಲ ಮತ್ತು ವ್ಯಾಮೋಹವಿರುತ್ತದೆ. ಆದರೆ, ಯಾವುದೇ ವ್ಯಾಪಾರಿ ಸಂಸ್ಥೆ ಉಚಿತವಾಗಿ ಏನನ್ನೋ ಕೊಡುತ್ತಿದ್ದರೆ, ಗ್ರಾಹಕ ಅಥವಾ ತೆಗೆದುಕೊಳ್ಳುತ್ತಿರುವ ವ್ಯಕ್ತಿಯಿಂದ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ್ದೇನನ್ನೊ ಪಡೆದುಕೊಳ್ಳುತ್ತಿರುತ್ತದೆ ಎಂಬುದನ್ನು ಯೋಚಿಸುವುದಿಲ್ಲ. ಉಚಿತ ವೈಫೈಗಳು ಹಾಗೆಯೇ ಹದಿನೈದು ನಿಮಿಷ ಅಥವಾ ಅರ್ಧ ಗಂಟೆಗೆ ಉಚಿತ ಇಂರ್ಟನೆಟ್‌ ನೀಡುವ ಸಂಸ್ಥೆಗಳು ಬಳಕೆದಾರರ ಮಾಹಿತಿಯನ್ನು ಕದಿಯುತ್ತವೆ. ಕೇವಲ ಬಳಕೆದಾರನದ್ದಷ್ಟೇ, ಅಲ್ಲ ಆತನ ಕಾಂಟ್ಯಾಕ್ಟ್‌ನಲ್ಲಿರುವ, ಫೇಸ್‌ಬುಕ್‌ ಸ್ನೇಹಿತರ ಮಾಹಿತಿಯನ್ನೂ ಕದಿಯುತ್ತಾರೆ. ಹಾಗಾಗಿ ಉಚಿತ ವೈಫೈಗಳ ಬಗ್ಗೆ ಎಚ್ಚರವಿರಲಿ.

5 ಟ್ರೂ ಫ್ಯಾಕ್ಟರ್‌ ಅಥೆಂಟಿಫಿಕೇಷನ್‌ ಬಗ್ಗೆ ತಿಳಿದಿರಿ: ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದಕ್ಕೆ ಸೇವೆ ನೀಡುವ ತಾಣಗಳು ತಿಳಿಸುತ್ತವೆ. ಆದರೆ ಅವುಗಳ ಬಗ್ಗೆ ನಾವೇ ಉಪೇಕ್ಷೆ ಮಾಡುತ್ತೇವೆ. ಅಂಥ ಒಂದು ಸೇವೆ ಟ್ರೂ ಫ್ಯಾಕ್ಟರ್‌ ಅಥೆಂಟಿಫಿಕೇಷನ್‌. ಇದು ಸಾಮಾನ್ಯವಾಗಿ ಲಭ್ಯವಿರುವ ಸುರಕ್ಷತೆಯ ಕ್ರಮಕ್ಕಿಂತ ಒಂದು ಪದರ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ಇದನ್ನು ಅನುಸರಿಸಿದರೆ, ಸೈಬರ್‌ ಅಪರಾಧಿಗಳು ನಮ್ಮಿಂದ ಮಾಹಿತಿ ಕದಿಯುವುದು ಕಷ್ಟ. ಪಾಸ್‌ವರ್ಡ್‌ ಸೃಷ್ಟಿಸುವಾಗ ಈ ಕ್ರಮವನ್ನು ಅನುಸರಿಸಿದರೆ, ನಮ್ಮ ಮಾಹಿತಿಗೆ ಯಾರೂ ಕೈ ಹಾಕಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.