ADVERTISEMENT

ಗ್ಯಾಜೆಟ್ ಲೋಕ: ಇಂಟೆಲ್ ಹೃದಯದ ಫೋನ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST
ಗ್ಯಾಜೆಟ್ ಲೋಕ: ಇಂಟೆಲ್ ಹೃದಯದ ಫೋನ್
ಗ್ಯಾಜೆಟ್ ಲೋಕ: ಇಂಟೆಲ್ ಹೃದಯದ ಫೋನ್   

ಇಂಟೆಲ್ ಕಂಪೆನಿ ಗಣಕಗಳಿಗೆ ಪ್ರೋಸೆಸರ್ ತಯಾರಿಸುವುದರಲ್ಲಿ ಸುಪ್ರಸಿದ್ಧ. ಜಗತ್ತಿನ ಬಹುತೇಕ ಗಣಕಗಳಲ್ಲಿರುವ ಸಿಪಿಯು ಇಂಟೆಲ್ ಕಂಪೆನಿಯದ್ದು. ಮೊಬೈಲ್ ಕ್ಷೇತ್ರದಲ್ಲಿ ಅವರ ಹೆಜ್ಜೆ ಅಷ್ಟು ಅಚ್ಚುಮೂಡಿದಂತಿಲ್ಲ. ಇದಕ್ಕೆ ಅಪವಾದವೆಂಬಂತೆ ಅವರು ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳಿಗಾಗಿ ತನ್ನ ಆಟಂ ಪ್ರೋಸೆಸರ್ ಅನ್ನು ಸ್ವಲ್ಪ ಬದಲಾಯಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
 
ಈ ಪ್ರೋಸೆಸರ್ ಮೂಲತಃ ನೆಟ್‌ಬುಕ್ ಎಂಬ ಕಿರು ಲ್ಯಾಪ್‌ಟಾಪ್‌ಗಳಿಗಾಗಿ ತಯಾರಾದುದು. ಇಂತಹ ಇಂಟೆಲ್ ಆಟಂ ಪ್ರೋಸೆಸರ್ ಬಳಸಿ ತಯಾರಾದ ಪ್ರಥಮ ಸ್ಮಾರ್ಟ್‌ಫೋನ್ ಝೋಲೋ  ಎಕ್ಸ್ 900 (ಗಿಟ್ಝಟ ಗಿ900). ಈ ಫೋನ್ ನಮ್ಮ ಈ ವಾರದ ಅತಿಥಿ.

ಮೊದಲಿಗೆ ಇದರ ಗುಣವೈಶಿಷ್ಟ್ಯಗಳ ಕಡೆಗೆ ಗಮನ ಹರಿಸೋಣ. ಈಗಾಗಲೆ ತಿಳಿಸಿದಂತೆ ಇದು ಇಂಟೆಲ್ ಆಟಂ ಪ್ರೋಸೆಸರ್ ಒಳಗೊಂಡಿದೆ. ಪ್ರೋಸೆಸರ್ ವೇಗ 1.6 ಎಏ್ಢ ಆಂಡ್ರೋಯಿಡ್ ಆವೃತ್ತಿ 2.3 ಇದೆ. ಆವೃತ್ತಿ 4 ಕ್ಕೆ (ಐಸ್‌ಕ್ರೀಂ ಸ್ಯಾಂಡ್‌ವಿಚ್)  ನವೀಕರಿಸಿಕೊಳ್ಳಬಹುದು ಎಂದು ಜಾಲತಾಣಗಳು ಹೇಳಿಕೊಳ್ಳುತ್ತಿವೆ.
 
ನಾನು ಅದನ್ನು ಪ್ರಯತ್ನಿಸಿಲ್ಲ. 1 ಗಿಗಾಬೈಟ್ ಪ್ರಾಥಮಿಕ ಸ್ಮರಣ ಸಾಮರ್ಥ್ಯ ಮತ್ತು 16 ಗಿಗಾಬೈಟ್ ಹೆಚ್ಚುವರಿ ಮೆಮೊರಿ. ಆದರೆ ಮೈಕ್ರೋಎಸ್‌ಡಿ ಕಾರ್ಡ್ ಹಾಕಿ ಇನ್ನಷ್ಟು ಮೆಮೊರಿ ಸೇರಿಸಿಕೊಳ್ಳುವ ಸವಲತ್ತು ಇಲ್ಲ. ಗಾತ್ರ 123 ್ಡ63 ್ಡ11 ಮಿಮೀ. 124 ಗ್ರಾಂ ತೂಕ. 4 ಇಂಚು ಗಾತ್ರದ ಗೊರಿಲ್ಲ ಗಾಜಿನ ಪರದೆ. ಪರದೆಯ ರೆಸೊಲೂಶನ್ 1024 ್ಡ 600 ಪಿಕ್ಸೆಲ್. ಇದು ಮೈಕ್ರೋಸಿಮ್ ಬಳಸುತ್ತದೆ. ಯುಎಸ್‌ಬಿ ಮತ್ತು ಎಚ್‌ಡಿಎಂಐ ಕಿಂಡಿಗಳಿವೆ. 8 ಮೆಗಾಪಿಕ್ಸೆಲ್ ಮುಂದುಗಡೆಯ ಹಾಗೂ 1.3 ಮೆಗಾಪಿಕ್ಸೆಲ್ (ವಿಜಿಎ) ರೆಸೊಲೂಶನ್‌ನ ಎದುರುಗಡೆಯ ಕ್ಯಾಮರಾಗಳಿವೆ. ಕ್ಯಾಮರಾಕ್ಕೆ ಎಲ್‌ಇಡಿ ಫ್ಲ್ಯಾಶ್ ಇದೆ. ಹೈಡೆಫಿನಿಶನ್ ವೀಡಿಯೋ ರೆಕಾರ್ಡ್ ಮಾಡಬಹುದು. 3ಜಿ ಅಂತರಜಾಲ ಸಂಪರ್ಕ, ವೈಫೈ ಮತ್ತು ಬ್ಲೂಟೂತ್ ಸಂಪರ್ಕ, ಎನ್‌ಎಫ್‌ಸಿ, ಜಿಪಿಎಸ್, ಎಕ್ಸೆಲೆರೋಮೀಟರ್ ಮತ್ತು ಮ್ಯೋಗ್ನೆಟೋಮೀಟರ್, ಇತ್ಯಾದಿ ಆಧುನಿಕ ಸ್ಮಾರ್ಟ್‌ಫೋನಿನಲ್ಲಿ ಇರಬೇಕಾದ ಎಲ್ಲ ಸವಲತ್ತುಗಳಿವೆ.

ಮೊದಲನೆಯದಾಗಿ ಇದರ ಆಕಾರ. ಇದು ಬಾಕ್ಸ್ ಟೈಪ್ ಫೋನ್. ಕೆಲವರಿಗೆ ಇದರ ಆಕಾರ ತುಂಬ ಹಿಡಿಸಬಹುದು. ನನಗಂತೂ ಈ ಆಕಾರ ಹಿಡಿಸಿತು. ಐಫೋನ್‌ನಲ್ಲಿದ್ದಂತೆ ಇದರಲ್ಲೂ ಸುತ್ತಲೂ ಒಂದು ಕ್ರೋಮಿಯಂ ಪಟ್ಟಿ ಇದೆ. ಪರದೆ ತುಂಬಾ ಚೆನ್ನಾಗಿದೆ. ಸ್ಕ್ರೀನ್ ಪ್ರೊಟೆಕ್ಟರ್ ಹಾಕಿದರೆ ಮಾತ್ರ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ.

ನೋಕಿಯಾ ಲುಮಿಯ ಫೋನಿಗೆ ಹೋಲಿಸಿದರೆ ಇದರ ಸ್ಪರ್ಶಸಂವೇದನೆ ಸ್ವಲ್ಪ ಕೆಳಮಟ್ಟದಲ್ಲಿದೆ. ಹಾಗೆಂದು ಹೇಳಿ ಚೆನ್ನಾಗಿಯೇ ಇಲ್ಲ ಎನ್ನುವಂತಿಲ್ಲ. 1.6 ಗಿಗಾಹರ್ಟ್ಸ್ ಪ್ರೋಸೆಸರ್ ಇರುವುದರಿಂದ ಕೆಲಸ ಚೆನ್ನಾಗಿ ಮಾಡುತ್ತದೆ. ವೇಗ ತೃಪ್ತಿದಾಯಕವಾಗಿದೆ. ಒಮ್ಮೆಯೂ ತಟಸ್ಥವಾಗಿಲ್ಲ.

ಕ್ಯಾಮರಾದ ಸ್ಥಿರಛಾಯಾಗ್ರಹಣದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಆದರೆ ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ ದೊರೆಯುವ ನೂರಾರು ಕ್ಯಾಮರ ತಂತ್ರಾಂಶಗಳಲ್ಲಿ (ಆಪ್) ಸೂಕ್ತವಾದುದನ್ನು ಬಳಸಿ ಇದನ್ನು ಸರಿಪಡಿಸಿಕೊಳ್ಳಬಹುದು. ಕಡಿಮೆ ಬೆಳಕಿನಲ್ಲಿ ಫ್ಲ್ಯಾಶ್ ಬಳಸಿ ಫೋಟೋ ತೆಗೆದರೆ ಚೆನ್ನಾಗಿ ಮೂಡಿಬರುತ್ತದೆ.

ಅಂದರೆ ಎಲ್‌ಇಡಿ ಫ್ಲ್ಯಾಶ್ ಚೆನ್ನಾಗಿಯೇ ಇದೆ ಎಂದಾಯಿತು. ವೀಡಿಯೋ ಮಾತ್ರ ಚೆನ್ನಾಗಿದೆ. ಹೈಡೆಫಿನಿಶನ್ ವೀಡಿಯೋ ಚೆನ್ನಾಗಿ ಮೂಡಿಬರುತ್ತದೆ.

ಆಡಿಯೋ (ಧ್ವನಿ, ಸಂಗೀತ) ಗುಣಮಟ್ಟ ಚೆನ್ನಾಗಿದೆ. ಉತ್ತಮ ಇಯರ್‌ಫೋನ್ ಅಥವಾ ಹೆಡ್‌ಸೆಟ್ ಹಾಕಿಕೊಂಡು ಉತ್ತಮ ಗುಣಮಟ್ಟದ ಸಂಗೀತ ಆಲಿಸಬಹುದು. ಪರದೆಯೂ ಚೆನ್ನಾಗಿಯೇ ಇರುವುದರಿಂದ ಸಿನಿಮಾ ಅಥವಾ ವೀಡಿಯೋ ನೋಡಬಹುದು. ಎಫ್‌ಎಂ ರೇಡಿಯೋ ಇಲ್ಲ ಎನ್ನುವುದು ಒಂದು ದೊಡ್ಡ ಕೊರತೆ. ಕೇವಲ ಎಂಪಿ3 ಪ್ಲೇಯರ್ ಆಗಿ ಸಂಗೀತ ಆಲಿಸಬೇಕಷ್ಟೆ. ಇದರಲ್ಲಿರುವ ಸ್ಪೀಕರ್‌ನ ಗುಣಮಟ್ಟ ಅಷ್ಟೇನೂ ಅದ್ಭುತವಾಗಿಲ್ಲ. ಅಂದರೆ ಲೌಡ್‌ಸ್ಪೀಕರ್ ಆಗಿ ಬಳಸಿದಾಗ ಕೇಳಿಬರುವ ಸಂಗೀತ ಅಥವಾ ಧ್ವನಿಯ ಗುಣಮಟ್ಟ ಸುಮಾರಾಗಿದೆ. ಆದರೆ ಮಾತನಾಡುವಾಗಿನ ಧ್ವನಿ ಚೆನ್ನಾಗಿದೆ.

ಮಾಮೂಲಿ ಸಿಮ್ ಕಾರ್ಡ್ ಇದರೊಳಗೆ ಹೋಗುವುದಿಲ್ಲ. ಇದು ಮೈಕ್ರೋಸಿಮ್ ಬಳಸುತ್ತದೆ. ದೊಡ್ಡ ಸಿಮ್ ಅನ್ನು ಕತ್ತರಿಸಿ ಚಿಕ್ಕ ಸಿಮ್ ಮಾಡಿ ಬಳಸಬಹುದು ಅಥವಾ ಮೈಕ್ರೋಸಿಮ್ ಕೇಳಿ ಪಡೆದುಕೊಂಡು ಬಳಸಬಹುದು. ಇದಕ್ಕೆ ಸಿಮ್ ಕಾರ್ಡ್ ಹಾಕಲು ಸ್ವಲ್ಪ ಸರ್ಕಸ್ ಮಾಡಬೇಕು. ಹಾಗೆ ಸರ್ಕಸ್ ಮಾಡಲು ಸಹಾಯ ಮಾಡಲೆಂದೇ ಒಂದು ಲೋಹದ ಕಡ್ಡಿಯೊಂದನ್ನು ಅವರೇ ನೀಡಿದ್ದಾರೆ.

ಫೋನಿನ ಕರೆಗಳ ಗುಣಮಟ್ಟ ಚೆನ್ನಾಗಿಯೇ ಇದೆ. ಮಾತನಾಡುವಾಗ ಕರೆ ಡ್ರಾಪ್ ಆಗಲಿಲ್ಲ. 3ಜಿ ಅಂತರಜಾಲ ಸಂಪರ್ಕ ಚೆನ್ನಾಗಿದೆ. ವೇಗವೂ ಚೆನ್ನಾಗಿದೆ. ವೈಫೈ ಚೆನ್ನಾಗಿದೆ. ಲ್ಯಾಪ್‌ಟಾಪ್ ಜೊತೆ ಸಂಪರ್ಕ ಮಾಡಿ ನೋಡಿದೆ. ವೇಗವೂ ಸಾಕಷ್ಟಿದೆ.
ಬ್ಯಾಟರಿ ಸುಮಾರಾಗಿದೆ. ಅಷ್ಟೇನೂ ಅಧಿಕ ಸಂಖ್ಯೆಯಲ್ಲಿ ಕರೆಗಳನ್ನು ಮಾಡಿಲ್ಲವಾದಲ್ಲಿ, ಅಂತರಜಾಲ ಬಳಕೆ ಮಾಡುತ್ತಿದ್ದಲ್ಲಿ ಬೆಳಿಗ್ಗೆಯಿಂದ ರಾತ್ರಿ  ತನಕ ಬ್ಯಾಟರಿ ಬರುತ್ತದೆ. ಜಾಸ್ತಿ ಬಳಸಿದರೆ ಸಾಯಂಕಾಲದ ಹೊತ್ತಿಗೆ ಚಾರ್ಜ್ ಮಾಡಬೇಕಾಗಿ ಬರುತ್ತದೆ.

ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್‌ಫೋನ್‌ಗಳ ಕಥೆ ಇದೇ ಅಗಿದೆ. ಹಾಗಿರುವಾಗ ಇದೊಂದು ಹೊರತಲ್ಲ. ಈ ಫೋನ್‌ಬಳಸುತ್ತಿರುವಾಗ ತುಂಬ ಹೊತ್ತು ಉಪಯೋಗಿಸಿದರೆ ಫೋನ್ ತುಂಬ ಬಿಸಿಯಾಗುತ್ತದೆ ಎಂಬುದಾಗಿ ಬಳಸಿದವರ ವಿಮರ್ಶೆಗಳು ಅಂತರಜಾಲದಲ್ಲಿ ದೊರಕುತ್ತವೆ. ನಾನು ಅಷ್ಟು ಹೊತ್ತು ಬಳಸಿ ನೋಡಿಲ್ಲ. 

 ಬೆಲೆ ಸುಮಾರು 22 ಸಾವಿರ ರೂ. ಇದರಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳ ಬೆಂಬಲ (ಯುನಿಕೋಡ್) ಇಲ್ಲ. ಇದೊಂದು ಕೊರತೆಯನ್ನು ಹೊರತುಪಡಿಸಿದರೆ ಕೊಟ್ಟ ಹಣಕ್ಕೆ ಮೋಸವಿಲ್ಲ ಎನ್ನಬಹುದು.

ಗ್ಯಾಜೆಟ್ ಸಲಹೆ
ಪ್ರಭಾಕರ ಶಾಸ್ತ್ರಿಯವರ ಪ್ರಶ್ನೆಗಳು:
* ಈ ಸಲದ ಗ್ಯಾಜೆಟ್‌ಲೋಕ ಸಂಚಿಕೆಯಲ್ಲಿ ಎಕ್ಸ್ ಮಿನಿ ಸ್ಪೀಕರ್ ಬಗ್ಗೆ ಓದಿದೆ. ಎಂಪಿ3 ಪ್ಲೇಯರ್ ಜೊತೆ ಯಾವ ಸ್ಪೀಕರ್ ಬಳಸಬೇಕು? ಎಕ್ಸ್ ಮಿನಿ ಬಳಸಬಹುದೇ? ಹೇಗೆ ಜೋಡಿಸುವುದು?
ಉ: ನೀವು ಎಕ್ಸ್ ಮಿನಿ ಬಳಸಬಹುದು. ನಾನು ಐಪೋಡ್ ಜೊತೆ ಬಳಸುತ್ತಿದ್ದೇನೆ. ಎಂಪಿ3 ಪ್ಲೇಯರ್‌ನ 3.5 ಮಿಮೀ ಇಯರ್‌ಫೋನ್ ಕಿಂಡಿಗೆ ಜೋಡಿಸುವ ಕೇಬಲ್ ಎಕ್ಸ್ ಮಿನಿ ಸ್ಪೀಕರ್ ಜೊತೆ ದೊರೆಯುತ್ತದೆ.

* ಬೆಂಗಳೂರಿನಲ್ಲಿ 3ಜಿ ಸಿಸ್ಟಮ್ ಉಪಯುಕ್ತವೇ? ಬಿಎಸ್‌ಎನ್‌ಎಲ್, ಏರ್‌ಟೆಲ್, ಇತ್ಯಾದಿಗಳಲ್ಲಿ ಯಾವುದು ಚೆನ್ನಾಗಿದೆ?
ಉ: 3ಜಿ ಖಂಡಿತ ಚೆನ್ನಾಗಿದೆ ಮತ್ತು ಉಪಯಕ್ತ ಕೂಡ. ಸದ್ಯಕ್ಕೆ ಲಭ್ಯವಿರುವ ಅಂತರಜಾಲ ಸಂಪರ್ಕ ಸೇವೆಗಳಲ್ಲಿ 3ಜಿ ಚೆನ್ನಾಗಿದೆ ಎನ್ನಬಹುದು. ನಾನು ಬಳಸುತ್ತಿರುವುದು ಬಿಎಸ್‌ಎನ್‌ಎಲ್. ಸಿಗ್ನಲ್ ಇರುವ ಜಾಗಗಳಲ್ಲಿ ತುಂಬ ಚೆನ್ನಾಗಿದೆ. ಡೌನ್‌ಲೋಡ್ ವೇಗ ಸುಮಾರು 6 ಚಿ ತನಕವೂ ಹೋದದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.