ADVERTISEMENT

ಗ್ರಾಹಕನಿಗೆ ಹಬ್ಬ ತಂದ ವರ್ಷ

ಜಯಸಿಂಹ ಆರ್.
Published 27 ಡಿಸೆಂಬರ್ 2017, 19:30 IST
Last Updated 27 ಡಿಸೆಂಬರ್ 2017, 19:30 IST
ಗ್ರಾಹಕನಿಗೆ ಹಬ್ಬ ತಂದ ವರ್ಷ
ಗ್ರಾಹಕನಿಗೆ ಹಬ್ಬ ತಂದ ವರ್ಷ   

ಕಾಂಪ್ಯಾಕ್ಟ್‌ ಎಸ್‌ಯುವಿ ಈಗಲೂ ರಾಜ
 ವರ್ಷ ಒಟ್ಟು ಮೂರು ಹೊಸ ಕಾಂಪ್ಯಾಕ್ಟ್‌ ಎಸ್‌ಯುವಿಗಳು ನಮ್ಮ ಮಾರುಕಟ್ಟೆಯಲ್ಲಿ ಪೈಪೋಟಿಗೆ ಇಳಿದಿವೆ ಮತ್ತು ಮಾರುಕಟ್ಟೆಯೂ ಅವಕ್ಕೆ ಉತ್ತಮವಾಗೇ ಸ್ಪಂದಿಸುತ್ತಿವೆ. ನಮ್ಮ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳೇ ಈಗಲೂ ರಾಜ ಎಂಬುದನ್ನು ಇದು ತೋರಿಸುತ್ತದೆ. ಕೆಲ ತಿಂಗಳ ಹಿಂದಷ್ಟೇ ಫಿಯೆಟ್ ಒಡೆತನದ ಜೀಪ್, ಭಾರತದಲ್ಲಿ ಕಂಪಾಸ್‌ ಸಿ–ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಬಿಡುಗಡೆಗೂ ಮುನ್ನವೇ 8,000 ಕಂಪಾಸ್‌ಗಳು ಬುಕ್ಕಿಂಗ್ ಆಗಿದ್ದವು.

ತಂತ್ರಜ್ಞಾನದ ಉತ್ತುಂಗದಂತೆ ಇರುವ ಕಂಪಾಸ್ ತನ್ನ ವರ್ಗದ ಅತ್ಯಂತ ದುಬಾರಿ ವಾಹನವೂ ಹೌದು. ಪಕ್ಕಾ ಕಚ್ಚಾ ರಸ್ತೆಗೆ ಹೇಳಿ ಮಾಡಿಸಿದಂತಿರುವ ಕಂಪಾಸ್‌ಗೆ ಈ ವರ್ಗದಲ್ಲಿ ಸರಿಸಾಟಿಯಾದ ಮತ್ತೊಂದು ಸಿಎಸ್‌ಯುವಿ ಇಲ್ಲ. ಜೀಪ್‌ನ ರ್‍ಯಾಂಗ್ಲರ್‌ ಮತ್ತು ಗ್ರಾಂಡ್ ಚೆರೋಕೆ ಎಸ್‌ಯುವಿಗಳ ಕಚ್ಚಾ ರಸ್ತೆ ಮತ್ತು ರಸ್ತೆಗಳೇ ಇಲ್ಲದೆಡೆ ಸವಾರಿಗೆ ಹೇಳಿ ಮಾಡಿಸಿದ ಎಸ್‌ಯುವಿಗಳು. ಅದೇ ರಕ್ತ (ತಂತ್ರಜ್ಞಾನ) ಹಂಚಿಕೊಂಡಿದ್ದರಿಂದಲೇ ಭಾರತೀಯರು ಕಂಪಾಸ್‌ಗೆ ಮನಸೋತಿದ್ದು. ಭಾರತದಲ್ಲಿ ತಯಾರಾಗಿರುವ ಕಂಪಾಸ್‌ ಗ್ಲೋಬಲ್ ಎನ್‌ಸಿಎಪಿ ಕ್ರಾಶ್‌ ಟೆಸ್ಟ್‌ನಲ್ಲಿ (ಅಪಘಾತ ಪರೀಕ್ಷೆ) 5 ತಾರೆಗಳ ಸೂಚ್ಯಂಕ ಪಡೆದಿದೆ.

ಕಂಪಾಸ್‌ನ ಹಿಂದೆಯೇ ನಮ್ಮ ರಸ್ತೆಗೆ ಇಳಿದಿದ್ದು ಟಾಟಾ ಮೋಟಾರ್ಸ್‌ನ ನೆಕ್ಸಾನ್. ಕಂಪಾಸ್‌ನಷ್ಟು ದೊಡ್ಡದಲ್ಲದಿದ್ದರೂ, ಪ್ರವೇಶಮಟ್ಟದ ಸಿ–ಎಸ್‌ಯುವಿ ವರ್ಗದಲ್ಲಿ ಪೈಪೋಟಿ ಹೆಚ್ಚಿಸಿದ ವಾಹನ. ಭಾರತೀಯರಿಗೆ ಹೊಸದೆನಿಸುವಂತಹ ವಿನ್ಯಾಸ ಆಕರ್ಷಿಸಿದ್ದು ಸುಳ್ಳಲ್ಲ. ಹೊಸದಾಗಿ ಅಭಿವೃದ್ಧಿಪಡಿಸಲಾದ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ಗಳು ಈ ವರ್ಗದಲ್ಲೇ ಅತ್ಯಂತ ಶಕ್ತಿಶಾಲಿ ಎನಿಸಿವೆ.

ADVERTISEMENT

ಪ್ರವೇಶಮಟ್ಟದ ಅವತರಣಿಕೆಯಲ್ಲೂ 6 ಗಿಯರ್‌ಗಳ ಟ್ರಾನ್ಸ್‌ಮಿಷನ್, ಏರ್‌ಬ್ಯಾಗ್‌, ಎಬಿಎಸ್‌–ಇಬಿಡಿ ಮತ್ತು ಸ್ಪರ್ಧಾತ್ಮಕ ಬೆಲೆ ನೆಕ್ಸಾನ್ ಅನ್ನು ಪ್ರಬಲ ಸ್ಪರ್ಧಿಯನ್ನಾಗಿಸಿದೆ. ಪೂರ್ಣಪ್ರಮಾಣದ ಹ್ಯಾಚ್‌ಬ್ಯಾಕ್‌ನ ಬೆಲೆಯಲ್ಲಿ ಲಭ್ಯವಿರುವುದರಿಂದ ಬಿಡುಗಡೆಯಾದ 40 ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ನೆಕ್ಸಾನ್‌ ಪಡೆದಿದೆ. ನೆಕ್ಸಾನ್‌ಗೆ ಈಗ ಪ್ರಬಲ ಪೈಪೋಟಿ 1.5 ಲೀಟರ್ ಡ್ರ್ಯಾಗನ್ ಎಂಜಿನ್ ಇರುವ ಫೋರ್ಡ್‌ ಎಕೋಸ್ಪೋರ್ಟ್ಸ್.

ಎಕೋಸ್ಪೋರ್ಟ್ಸ್‌ನಲ್ಲಿ ಟರ್ಬೊ ಪೆಟ್ರೋಲ್ (ಬೂಸ್ಟರ್‌ಜೆಟ್) ಎಂಜಿನ್ ಅವತರಣಿಕೆ ಲಭ್ಯವಿದೆ. ಆದರೆ ಡ್ರ್ಯಾಗನ್ ಎಂಜಿನ್‌ನಲ್ಲಿ ಟರ್ಬೊ ಚಾರ್ಜರ್ ಇಲ್ಲ. ಬದಲಿಗೆ ಅತೀವ ಒತ್ತಡದ (ಹೈ ಕಂಪ್ರೆಷನ್) ಎಂಜಿನ್ ಇದೆ. ಈ ಎಂಜಿನ್‌ ಡೀಸೆಲ್‌ ಎಂಜಿನ್‌ನಷ್ಟು ಶಕ್ತಿ ಉತ್ಪಾದಿಸುತ್ತದೆ. ಜತೆಗೆ ಮೂರು ಸಿಲಿಂಡರ್‌ಗಳ ಎಂಜಿನ್‌ನಲ್ಲೇ ಅತ್ಯಂತ ಕಡಿಮೆ ಶಬ್ದದ ಎಂಜಿನ್ ಇದು. ಪೂರ್ಣ ಅಲ್ಯೂಮಿನಿಯಂ, ಹೈಡ್ರೊಬೇರಿಂಗ್ ಇರುವ ಬ್ಯಾಲೆನ್ಸರ್‌, ಆಯಿಲ್‌ನಲ್ಲಿ ಅದ್ದಿದ ಟೈಮಿಂಗ್ ಬೆಲ್ಟ್‌ ಈ ಎಂಜಿನ್‌ ಹೆಗ್ಗಳಿಕೆಗಳು.

ರೆನೊ ಡಸ್ಟರ್‌ನ ಮತ್ತೊಂದು ರೂಪದಂತಿರುವ ಕ್ಯಾಪ್ಚರ್ ಸಿ–ಎಸ್‌ಯುವಿಗಳ ಸಾಲಿಗೆ ಹೊಸ ಸೇರ್ಪಡೆ. ದೇಹದ ಮತ್ತು ಒಳಾಂಗಣ ವಿನ್ಯಾಸದ ಹೊರತಾಗಿ ಡಸ್ಟರ್‌ಗಿಂತ ಕ್ಯಾಪ್ಚರ್ ಭಿನ್ನವೇನಲ್ಲ. ಅದೇ ಎಂಜಿನ್, ಅದೇ ಪ್ಲಾಟ್‌ಫಾರಂ, ಅದೇ ಟ್ರಾನ್ಸ್‌ಮಿಷನ್. ಇದು ಕ್ಯಾಪ್ಚರ್‌ನ ಹೆಗ್ಗಳಿಕೆಯೂ ಹೌದು, ಕೊರತೆಯೂ ಹೌದು. ಈಗಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕ್ಯಾಪ್ಚರ್‌ ಬಿಕರಿಯಲ್ಲಿ ಕಿಚ್ಚು ಹತ್ತಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ದೊಡ್ಡ ಎಸ್‌ಯುವಿಗಳಲ್ಲಿ ಈ ವರ್ಷ ಅಂತಹ ಗಣನೀಯ ಬದಲಾವಣೆ ಏನಾಗಿಲ್ಲ. ಟೊಯೊಟಾದವರ ಹೊಸ ಫಾರ್ಚೂನರ್, ಇಸುಜು ಎಂಯುಎಕ್ಸ್‌ ಈ ವರ್ಷದ ಹೊಸ ಎಸ್‌ಯುವಿಗಳು. ಎರಡೂ ಮಾರುಕಟ್ಟೆಯಲ್ಲಿ ತಮ್ಮದೇ ಜಾಗ ಕಂಡುಕೊಂಡಿವೆ. ಮಿತ್ಸುಬಿಷಿ ಪಜಾರೊ ಸ್ಪೋರ್ಟ್ಸ್‌ನ ಹೊಸ ಅವತರಣಿಕೆ ಭಾರತದ ಹೊಸ್ತಿಲಲ್ಲೇ ಇದೆ. ಆದರೆ ಫೋರ್ಡ್‌ ತನ್ನ ಎಂಡೀವರ್‌ನ ಕೆಲ ಅವತರಣಿಕೆಗಳನ್ನು ವಾಪಸ್ ಪಡೆದದ್ದು ಗ್ರಾಹಕನಿಗೆ ಆದ ನಷ್ಟವೇ ಸರಿ.

ಇನ್ನು ಟಾಟಾ ಮೋಟಾರ್ಸ್‌ನವರ ಟಿಗಾರ್‌ ಕಾಂಪ್ಯಾಕ್ಟ್ ಸೆಡಾನ್, ಟಿಯಾಗೊ ಎಎಂಟಿ, ಹುಂಡೈನವರ ಟಕ್ಸಾನ್ 4x4, ವರ್ನಾ, ಮಾರುತಿ ಸುಜುಕಿಯ ಬಲೆನೊ ಆರ್‌ಎಸ್‌, ಹೊಂಡಾದವರ ಡಬ್ಲ್ಯುಆರ್‌ವಿ ಈ ವರ್ಷ ಸಂಚಲನ ಮೂಡಿಸಿದ ಕಾರುಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತವೆ.

ದ್ವಿಚಕ್ರ ವಾಹನಗಳಲ್ಲಿ ಈ ಬಾರಿ ಗಣನೀಯ ಬದಲಾವಣೆಯೇನೂ ಆಗಿಲ್ಲ. ಹೆಚ್ಚು ಸದ್ದು ಮಾಡಿದ ಬೈಕ್‌ ಬಜಾಜ್ ಡಾಮಿನಾರ್ 400 ಮಾತ್ರ. ಉಳಿದಂತೆ ಕೆಟಿಎಂ ಡ್ಯೂಕ್‌ನ 2017ನೇ ವರ್ಷದ ಅವತರಣಿಕೆಗಳು ಮಾರುಕಟ್ಟೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಟಿವಿಎಸ್ ಅಪಾಚೆ 200 ನಿರೀಕ್ಷಿತ ಪ್ರಮಾಣದಲ್ಲಿ ಯುವಕರನ್ನು ಸೆಳೆದಿಲ್ಲ. ಯಮಾಹಾದವರ ಎಫ್‌ಝೀ25 ಮತ್ತು ಆರ್‌3 ಮಾರುಕಟ್ಟೆ ವಿಸ್ತರಿಸುತ್ತಿವೆ. ಉಳಿದಂತೆ ಸ್ಕೂಟರ್‌ಗಳಲ್ಲಿ ಹೋಂಡಾ ಕ್ಲಿಕ್‌ನ ಹೊರತಾಗಿ ಮಾರುಕಟ್ಟೆಗೆ ಬಂದವೆಲ್ಲವೂ ಹಳೆ ಮಾದರಿಗಳ ಸುಧಾರಿತ ಅವತರಣಿಕೆಗಳಷ್ಟೆ.

ತಯಾರಕರ ಲಾಬಿಗೆ ಜಗ್ಗದ ಸರ್ಕಾರ
2017ರ ಏಪ್ರಿಲ್ 1ರಿಂದ ದೇಶದ ಎಲ್ಲೆಡೆ ನೋಂದಣಿ ಆಗುವ ವಾಹನಗಳ ಎಂಜಿನ್‌ಗಳು ಬಿ.ಎಸ್.4 ಪರಿಮಾಣಕ್ಕೆ ಅನುಗುಣವಾಗಿರಬೇಕು ಎಂದು ಸಾರಿಗೆ ಇಲಾಖೆ 2016ರಲ್ಲೇ ಆದೇಶಿಸಿತ್ತು. ಈ ಗಡುವು 2012ರಲ್ಲೇ ನಿರ್ಧಾರವಾಗಿತ್ತು. ಇದನ್ನು ತೀರಾ ಲಘುವಾಗಿ ಪರಿಗಣಿಸಿದ್ದ ಕೆಲವು ಕಂಪನಿಗಳು ತಮ್ಮಲ್ಲಿ ಮಾರಾಟವಾಗದೆ ಉಳಿದಿರುವ ಬಿ.ಎಸ್‌.3 ಪರಿಮಾಣದ ವಾಹನಗಳನ್ನು ಮಾರಾಟ ಮಾಡಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡವು. ಸುಪ್ರೀಂ ಕೋರ್ಟ್ ಈ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿತು. ಸರ್ಕಾರ ಸಹ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿತು.

ಗಡುವು ಮುಗಿಯಲು ಒಂದೇ ದಿನ ಬಾಕಿ ಇದ್ದ ಕಾರಣ ಕಂಪನಿಗಳು ಭಾರಿ ಪ್ರಮಾಣದ ರಿಯಾಯಿತಿ ಘೋಷಿಸಿದವು. ಇದರಲ್ಲಿ ದ್ವಿಚಕ್ರ ವಾಹನಗಳದ್ದೇ ಸಿಂಹಪಾಲು. ಮಾರಾಟವಾಗದೆ ಉಳಿದಿದ್ದ ವಾಹನಗಳು ಅರ್ಧ ದಿನದಲ್ಲೇ ಬಿಕರಿಯಾದವು. ಕಡಿಮೆ ಬೆಲೆಗೆ ವಾಹನ ಸಿಕ್ಕಿದ್ದು ಗ್ರಾಹಕರಿಗೆ ಆದ ಲಾಭವೇ ಸರಿ. ಗಡುವನ್ನು ವಿಸ್ತರಿಸದೆ ಬಿ.ಎಸ್‌.4 ಪರಿಮಾಣ ಜಾರಿಗೆ ತಂದದ್ದು ದೀರ್ಘಕಾಲದಲ್ಲಿ ಎಲ್ಲರಿಗೂ ಲಾಭ ತರಲಿದೆ.

ಸುಪ್ರೀಂ ಕೋರ್ಟ್ ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ನಿಲುವು ತಳೆಯಲು ದೆಹಲಿಯನ್ನು ವಾಯುಮಾಲಿನ್ಯ ಕಂಗೆಡಿಸಿದ್ದೇ ಪ್ರಮುಖ ಕಾರಣ. ಗಾಳಿಯ ಗುಣಮಟ್ಟ ವಿಷಕಾರಿಯಾಗಿ ಬದಲಾಗಿದ್ದರಿಂದ ದೆಹಲಿ ಕೆಲವು ದಿನಗಳ ಕಾಲ ಬಹುತೇಕ ಸ್ಥಗಿತಗೊಂಡಿತ್ತು. ಪ್ರಯಾಣಿಕರ ಕಾರುಗಳೆಲ್ಲವೂ ಬಿ.ಎಸ್‌.4 ಪರಿಮಾಣವನ್ನು ಅನುಸರಿಸಿ ಐದಾರು ವರ್ಷವೇ ಕಳೆದಿದ್ದರೂ, ಸರಕು ಸಾಗಣೆ ವಾಹನ ಮತ್ತು ದ್ವಿಚಕ್ರ ವಾಹನಗಳಿಗೆ ಇದು ಅನ್ವಯವಾಗಿರಲಿಲ್ಲ. ಬಿ.ಎಸ್‌.3 ಪರಿಮಾಣದ ವಾಹನಗಳ ಉಗುಳುವ ಹೊಗೆ ಹೆಚ್ಚು ಮಾಲಿನ್ಯಕಾರಕ. ಹೀಗಾಗಿ ದೀರ್ಘಕಾಲದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಸರ್ಕಾರದ ಈ ನಿರ್ಧಾರ ನಿಜಕ್ಕೂ ಲಾಭ ತರಲಿದೆ.

ಸುರಕ್ಷತೆಗೆ ಆದ್ಯತೆ
ಭಾರತದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳಲ್ಲೂ ಚಾಲಕನ ಏರ್‌ಬ್ಯಾಗ್ ಇರುವುದು ಈಗ ಕಡ್ಡಾಯ. ಹೀಗಾಗಿ 2017ರ ಅಕ್ಟೋಬರ್ ಅಂತ್ಯದಿಂದ ಎಲ್ಲಾ ಕಾರು ತಯಾರಕರೂ, ತಮ್ಮ ಎಲ್ಲಾ ಕಾರುಗಳ ಎಲ್ಲಾ ಅವತರಣಿಕೆಗಳಲ್ಲಿ ಏರ್‌ಬ್ಯಾಗ್‌ಗಳನ್ನು ಅಳವಡಿಸಿದ್ದಾರೆ. ಖರೀದಿ ವೆಚ್ಚ ತುಸು ಹೆಚ್ಚಾದರೂ ಏರ್‌ಬ್ಯಾಗ್‌ಗಳಿಂದ ಗ್ರಾಹಕರಿಗೆ ಲಾಭವೇ ಹೆಚ್ಚು.

ಅಪಘಾತಗಳಲ್ಲಿ ಇವು ಚಾಲಕನ ಮತ್ತು ಪ್ರಯಾಣಿಕನ (ಇಬ್ಬರೂ ಸೀಟ್‌ಬೆಲ್ಟ್ ಧರಿಸಿರಲೇಬೇಕು. ಇಲ್ಲದಿದ್ದರೆ ಏರ್‌ಬ್ಯಾಗ್ ತೆರೆದುಕೊಳ್ಳುವುದಿಲ್ಲ) ಜೀವ ಉಳಿಸಲು ನೆರವಾಗುತ್ತವೆ. 2014ರಲ್ಲಿ ಜಾಗತಿಕವಾಗಿ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಭಾರತವೇ ಮೊದಲ ಸ್ಥಾನದಲ್ಲಿತ್ತು (ಈಗಲೂ ಅದೇ ಪರಿಸ್ಥಿತಿ ಇದೆ). ಹೀಗಾಗಿಯೇ ಎಲ್ಲಾ ಕಾರುಗಳಲ್ಲಿ ಏರ್‌ಬ್ಯಾಗ್, ಆ್ಯಂಟಿ–ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಮತ್ತು ಸೀಟ್‌ಬೆಲ್ಟ್‌ ಹಾಗೂ ವೇಗಮಿತಿ ವಾರ್ನಿಂಗ್‌ಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸರ್ಕಾರ 2016ರಲ್ಲೇ ಘೋಷಿಸಿತ್ತು. ಆದರೆ ಇದರಲ್ಲಿ ಏರ್‌ಬ್ಯಾಗ್, ಸೀಟ್‌ಬೆಲ್ಟ್ ಹಾಗೂ ವೇಗಮಿತಿ ವಾರ್ನಿಂಗ್‌ಗಳ ಕಡ್ಡಾಯ ಅಳವಡಿಕೆ ಜಾರಿಯಾಗಿದೆ. ದೀರ್ಘಕಾಲದಲ್ಲಿ ಇವು ಅಪಘಾತಗಳ ಸಂಖ್ಯೆಯನ್ನು ಇಳಿಸುವಲ್ಲಿ ಖಂಡಿತಾ ನೆರವಾಗುತ್ತವೆ. ಆದರೆ ಎಬಿಎಸ್ ವಿಚಾರದಲ್ಲಿ ಸರ್ಕಾರ ರಾಜಿಯಾಗಿದ್ದು ಎಳ್ಳಷ್ಟೂ ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.