ADVERTISEMENT

ದಸರಾ ಯುವ ಸಂಭ್ರಮ...

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST
ದಸರಾ ಯುವ  ಸಂಭ್ರಮ...
ದಸರಾ ಯುವ ಸಂಭ್ರಮ...   

ವೇದಿಕೆ ಒಂದು, ಕಾಲೇಜುಗಳು 105, ಪ್ರತಿಭೆಗಳು ನೂರಾರು, ವೀಕ್ಷಕರು ಸಾವಿರಾರು-ಇವಿಷ್ಟು ಸೇರಿದರೆ  `ದಸರಾ ಯುವ ಸಂಭ್ರಮ~ವಾಗುತ್ತದೆ.

ಹೌದು. ಈ ಬಾರಿ ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲು ಯುವ ಸಂಭ್ರಮವನ್ನು ಸೆ.21 ರಿಂದ 25 ರ ವರೆಗೆ ಮೈಸೂರಿನ  ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ 105 ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಯುವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಕುಣಿದು, ಕುಪ್ಪಳಿಸಿ ಸಂಭ್ರಮವನ್ನು ಹಂಚಿದರು.

ಯುವ ಸಂಭ್ರಮದಲ್ಲಿ ಜಾನಪದ, ಪುರಾಣ, ಮಾಡ್ರನ್, ಸಮಕಾಲೀನ ನೃತ್ಯ ಅಲ್ಲದೇ ಪ್ರಸ್ತುತ ವಿದ್ಯಮಾನಕ್ಕೆ ಕನ್ನಡಿ ಹಿಡಿಯುವ ರೂಪಕಗಳು  ವೇದಿಕೆಯಲ್ಲಿ ಅನಾವರಣಗೊಂಡವು.

ದೇಸಿ ಪ್ರೇಮ!
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು ಜಿಲ್ಲೆಯ ಬಹುತೇಕ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಮ್ಮ  ನೆಲದ ಸೊಗಡನ್ನು ಹೊಂದಿರುವ ದೇಸಿಯ ಕಲೆ ಜಾನಪದಕ್ಕೆ ಶರಣಾಗಿದ್ದರು. ಯುವ ಸಮೂಹ ಮಾಡ್ರನ್ ನೃತ್ಯ ಮತ್ತು ಫಾಸ್ಟ್‌ಬೀಟ್‌ಗಳ ಹಾಡಿಗೆ ಮಾತ್ರ ಮಾರುಹೋಗುತ್ತಾರೆ ಎನ್ನುವ ನಂಬಿಕೆಯನ್ನು ಸುಳ್ಳು ಮಾಡಿದರು.

ಪ್ರತಿದಿನ 15 ರಿಂದ 20 ತಂಡಗಳು ಪ್ರದರ್ಶನ ನೀಡುತ್ತಿದ್ದವು. ಇವುಗಳಲ್ಲಿ 5 ರಿಂದ 8 ಜಾನಪದ ನೃತ್ಯಗಳು ಇರುತ್ತಿದ್ದವು. ಕಂಸಾಳೆ, ಪೂಜಾ ಕುಣಿತ, ಕರಗ, ಡೊಳ್ಳು ಕುಣಿತ, ಕೋಲಾಟ, ಬುಡಕಟ್ಟು ನೃತ್ಯಗಳು ಪ್ರದರ್ಶನಗೊಂಡವು. ಪ್ರೇಕ್ಷಕರೂ ಸಹ ದೇಸಿ ಕಲೆಗೆ ಉತ್ತಮ ಸ್ಪಂದನೆ ನೀಡುವ ಮೂಲಕ `ಜೈ~ ಎಂದರು.

ಯುವ ಪ್ರತಿಭೆಗಳು ಹಾಡುಗಳ ಆಯ್ಕೆ, ಅವುಗಳಿಗೆ ನೃತ್ಯ ಸಂಯೋಜನೆ, ಆಕರ್ಷಕ ಉಡುಗೆ-ತೊಡುಗೆ, ಮೇಕಪ್‌ನಲ್ಲಿ ಸೃಜನಶೀಲತೆ ಮೆರೆದಿದ್ದರು. ಯುವ ಜನಾಂಗದ ನಾಡಿಮಿಡಿತವನ್ನು ಚೆನ್ನಾಗಿ ಅರಿತು, ಅವರಿಗೆ ಬೇಕಾಗಿರುವುದನ್ನೇ ಉಣಬಡಿಸಿ `ಸೈ~ ಎನಿಸಿಕೊಂಡರು.
 
ಅಷ್ಟೇನು ಸವಲತ್ತುಗಳು ಇಲ್ಲದ ಪಟ್ಟಣ ಪ್ರದೇಶದ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಪ್ರೇಕ್ಷಕರು ಮೆಚ್ಚುವಂತೆ ಪ್ರದರ್ಶನ ನೀಡಿದ್ದು ಗಮನಾರ್ಹ. ಕಾಲೇಜು ವಿದ್ಯಾರ್ಥಿಗಳು ಕೇವಲ ಅಬ್ಬರ, ಆಡಂಬರ, ಮಾಡರ್ನ್, ಫಾಸ್ಟ್‌ಬೀಟ್ ಹಾಡುಗಳಿಗಷ್ಟೇ ಸೀಮಿತವಾಗಿರಲಿಲ್ಲ.
 
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಂದ ಸ್ಫೂರ್ತಿಗೊಂಡು ಭ್ರಷ್ಟಾಚಾರ ವಿರುದ್ಧ, ರಾಷ್ಟ್ರೀಯ ಭಾವೈಕ್ಯ, ಕೋಮು ಸಾಮರಸ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತಾದ ನೃತ್ಯ ರೂಪಕಗಳನ್ನು ಮನಮುಟ್ಟುವಂತೆ ಪ್ರಸ್ತುತಪಡಿಸಿದರು.

ಟಿ.ವಿ. ಚಾನಲ್‌ಗಳು ನೃತ್ಯಕ್ಕೆ ಸಂಬಂಧಿಸಿದ ರಿಯಾಲಿಟಿ ಶೋಗಳನ್ನು ನಡೆಸುತ್ತಿವೆ. ಇವುಗಳ ಪ್ರಭಾವಕ್ಕೆ ಒಳಗಾದ ಕಾಲೇಜು ವಿದ್ಯಾರ್ಥಿಗಳು ಪೈಪೋಟಿಗೆ ಬಿದ್ದವರಂತೆ ಅತ್ಯುತ್ತಮ ಪ್ರದರ್ಶನ ನೀಡಿ, ತಮ್ಮ ಸುಪ್ತಪ್ರತಿಭೆಯನ್ನು ಅಭಿವ್ಯಕ್ತಗೊಳಿಸಿದರು. ಈ ದೃಷ್ಟಿಯಲ್ಲಿ `ಯುವ ಸಂಭ್ರಮ~  ರಂಜನೆ ಜೊತೆಗೆ ನೂರಾರು ಪ್ರತಿಭೆಗಳನ್ನು ಬೆಳಕಿಗೆ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT