ADVERTISEMENT

ಬರಲಿದೆ ವಿಶ್ವದ ಅತಿ ಅಗ್ಗದ ಬೈಕ್ !

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಪೆಟ್ರೋಲ್‌ಗೆ ಈಗಿನಷ್ಟು ಹೆಚ್ಚು ಬೆಲೆ ಇಲ್ಲದ ಕಾಲದಲ್ಲಿ ಹೆಚ್ಚಿನ ಸಾಮರ್ಥ್ಯದ, ದೈತ್ಯ ಆಕಾರದ, ಸ್ಪೋರ್ಟಿ ಬೈಕ್‌ಗಳು ತಯಾರಾಗುವುದೇ ಹೆಚ್ಚಿತ್ತು. ಈಗಲೂ ಅದೇ ಟ್ರೆಂಡ್ ಮುಂದುವರೆದಿದೆ. ಈಗಲೂ ಹೆಚ್ಚಿನ ಸಾಮರ್ಥ್ಯದ ಸ್ಪೋರ್ಟಿ ಮೋಟಾರ್‌ಸೈಕಲ್‌ಗಳನ್ನೇ ಹೊಂದುವ ಆಸೆ ಬಹುಪಾಲು ಯುವಕರದ್ದು. ಆದರೆ ಈಗ ಪೆಟ್ರೋಲ್ ಬೆಲೆ ಗಗನ ಮುಟ್ಟುತ್ತಿದ್ದಂತೆ ಕಡಿಮೆ ಮೈಲೇಜ್ ನೀಡುವ, ದುಬಾರಿ ಬೆಲೆಯ ಬೈಕ್‌ಗಳನ್ನು ಕೊಳ್ಳುವುದು ದುಸ್ತರವೇ ಸರಿ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಬೈಕ್ ತಯಾರಿಕಾ ಸಂಸ್ಥೆಗಳು ಕಡಿಮೆ ಬೆಲೆಯ ಬೈಕ್‌ಗಳನ್ನು ತಯಾರಿಸುವತ್ತ ಮುಂದಾಗುತ್ತಿವೆ. ಟಾಟಾ ಸಂಸ್ಥೆ 1 ಲಕ್ಷ ರೂಪಾಯಿ ಬೆಲೆಯ ನ್ಯಾನೋ ಬಿಡುಗಡೆ ಮಾಡಿ ವಿಶ್ವದ ಅತಿ ಅಗ್ಗದ ಕಾರ್ ಎಂಬ  ಹೆಗ್ಗಳಿಕೆ ಪಡೆದಿದ್ದರೆ, ಯಮಹ ವಿಶ್ವದ ಅತಿ ಅಗ್ಗದ ಬೈಕ್ ಬಿಡುಗಡೆ ಮಾಡಿ ಹುಬ್ಬೇರಿಸಲು ಸಜ್ಜಾಗಿದೆ!

ಹೌದು! ಈಗ ಹೆಚ್ಚಿನ ಬೇಡಿಕೆ ಇರುವುದು ಅಗ್ಗದ ಬೈಕ್‌ಗಳಿಗಂತೆ. ಭಾರತ ಹಾಗೂ ಆಫ್ರಿಕಾದ ಬಹುಪಾಲು ರಾಷ್ಟ್ರಗಳಲ್ಲಿ ಅಗ್ಗದ ಮೋಟಾರ್ ಸೈಕಲ್‌ಗಳನ್ನು ಕೊಳ್ಳುವತ್ತ ಚಿತ್ತ ಹರಿದಿದೆ. ಇದಕ್ಕೆ ಕಾರಣ ಸುಸ್ಪಷ್ಟ. ಅಗ್ಗದ ಬೈಕ್‌ಗಳ ಬೆಲೆ ಕಡಿಮೆ ಎನ್ನುವುದು ಒಂದಾದರೆ, ಅವು ಹೆಚ್ಚು ಮೈಲೇಜ್ ನೀಡುತ್ತವೆ ಎನ್ನುವುದು ಅತಿ ಮುಖ್ಯವಾದುದು. ಈ ವಿಭಾಗದ ಬೈಕ್‌ಗಳು ಸಾಮಾನ್ಯವಾಗಿ 100 ಸಿಸಿ ಎಂಜಿನ್ ಹೊಂದಿದ್ದು, ಗರಿಷ್ಠ 80 ಕಿಲೋ ಮೀಟರ್ ಮೈಲೇಜ್ ನೀಡುತ್ತವೆ.  ಸುಮಾರು 34 ಸಾವಿರ ರೂಪಾಯಿಗಳಿಗೆ ಲಭ್ಯವಿದೆ.

ಸದ್ಯಕ್ಕೆ ವಿಶ್ವದ ಅತಿ ಕಡಿಮೆ ಬೆಲೆಯ ಬೈಕ್ ತಯಾರು ಮಾಡುತ್ತಿರುವುದು ಹೀರೋ ಮೋಟೋಕಾರ್ಪ್ ಸಂಸ್ಥೆಯ ಹೀರೋ ಸಿಡಿ ಡಾನ್. ಇದರ ಬೆಲೆ 34,500 ರೂಪಾಯಿಗಳು. ಆದರೆ ಯಮಹ ಕೇವಲ 28,100 ರೂಪಾಯಿಗಳಿಗೆ (ಎಕ್ಸ್ ಶೋರೂಂ) ಬೈಕ್ ಹೊರಬಿಡುವ ಚಿಂತನೆಯಲ್ಲಿದೆ.

ಆದರೆ ಇಲ್ಲೊಂದು ದೊಡ್ಡ ಬದಲಾವಣೆಯಿದೆ. ಕಡಿಮೆ ಬೆಲೆಯ ಬೈಕ್‌ಗಳ ಎಂಜಿನ್ 100 ಸಿಸಿಯದ್ದು (ವಾಸ್ತವದಲ್ಲಿ ತಾಂತ್ರಿಕ ಸಾಮರ್ಥ್ಯ 98 ಸಿಸಿ ಇರುತ್ತದೆ). ಆದರೆ ಯಮಹ 125 ಸಿಸಿಯ ಆಕರ್ಷಕ ಬೈಕ್ ನೀಡುತ್ತದೆ ಎಂಬ ಸುದ್ದಿಯಿದೆ. ಈ ಮೋಟಾರ್ ಸೈಕಲ್‌ಗೆ ಇನ್ನೂ ಹೆಸರಿಟ್ಟಿಲ್ಲ.

ಆದರೆ ಈ ಯೋಜನೆಗೆ ಯಮಹ `ಸಬ್ 500 ಡಾಲರ್ ಮೋಟಾರ್‌ಸೈಕಲ್~ ಎಂದು ಹೆಸರಿಟ್ಟಿದೆ. ತನ್ನ ಜಪಾನಿಸ್ ತಂತ್ರಜ್ಞಾನದ ಅದ್ಭುತ ಕಾರ್ಬೊರೇಟರ್ ಸಿಸ್ಟಂ, ಕಡಿಮೆ ತೂಕದ ಬಲಶಾಲಿ ದೇಹ, ಫ್ರೇಂ ಹಾಗೂ ಸ್ಪೋರ್ಟಿ ನೋಟಗಳನ್ನು ಬೈಕ್‌ಗೆ ನೀಡುತ್ತಿದೆ.

ವಿಶ್ವದ ಅತ್ಯಂತ ಕಡಿಮೆ ಬೆಲೆಯ ಬೈಕ್ ಎಂಬ ಹೆಗ್ಗಳಿಗೆ ಇದ್ದರೂ, ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದು ಯಮಹಾದ ವಿಶ್ವಾಸಾರ್ಹ ಗುಣ. ಹಾಗಾಗಿ ಭಾರತೀಯ ಮಾರುಕಟ್ಟೆ ಕೇಂದ್ರಿತ ಈ ಬೈಕ್, ತಂತ್ರಜ್ಞಾನದಲ್ಲೂ ಶ್ರೇಷ್ಠ ಮಟ್ಟದ್ದೇ ಆಗಿರುತ್ತದೆ ಎಂಬ ನಂಬಿಕೆ ಇದೆ.

ಯಮಹ ಈ ಬೈಕ್ ಅನ್ನು ಭಾರತ ಹಾಗೂ ಆಫ್ರಿಕಾ ರಾಷ್ಟ್ರಗಳಲ್ಲಿ ಮಾರುವ ಉದ್ದೇಶ ಹೊಂದಿದೆ. ಕಳೆದ 4 ವರ್ಷಗಳಿಂದ ಭಾರತದಲ್ಲಿ ತನ್ನ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡಿರುವ ಯಮಹಾದ ಅತಿ ದೊಡ್ಡ ಹೆಜ್ಜೆ ಇದು.
 
ಲಕ್ಷ ರೂಪಾಯಿ ಮೀರಿದ ಕೆಲವೇ ಸ್ಪೋರ್ಟ್ಸ್ ಬೈಕ್ ಮಾರಾಟಕ್ಕಿಂತ 30 ಸಾವಿರ ರೂಪಾಯಿ ಒಳಗಿನ ದೊಡ್ಡ ಸಂಖ್ಯೆಯ ಬೈಕ್‌ಗಳನ್ನು ಮಾರಾಟ ಮಾಡುವುದು ಲಾಭದಾಯಕವೂ ಆಗಲಿದೆ. 1990 ರಲ್ಲಿ ಯಮಹ `ಆರ್‌ಎಕ್ಸ್ 100~, ನಂತರ `ಆರ್‌ಎಕ್ಸ್ 135~ ಬೈಕ್‌ಗಳನ್ನು ಮಾರುವ ಮೂಲಕ ಭಾರತದಲ್ಲಿ ತನ್ನದೇ ಆದ ಸ್ಥಾನ ಪಡೆದಿತ್ತು.

ಆದರೆ ನಂತರದ ದಿನಗಳಲ್ಲಿ ಹೇಳ ಹೆಸರಿಲ್ಲದೇ, ನಷ್ಟದಲ್ಲಿ ಸಂಸ್ಥೆ ಇತ್ತು. ಈ ಸಂದರ್ಭದಲ್ಲಿ ತನ್ನ `ಎಫ್‌ಜೀ~ ಹಾಗೂ `ಆರ್15~ ಮೂಲಕ ಸಾಕಷ್ಟು ಹೆಸರು, ಲಾಭ ಗಳಿಸಿದೆ.

ಸದ್ಯಕ್ಕೆ ಯಮಹಾದ ಅತಿ ಕಡಿವೆು ಬೆಲೆಯ ಬೈಕ್ `ಕ್ರಕ್ಸ್~. ಇದರ ಬೆಲೆ 37,400 ರೂ. ಭಾರತದಲ್ಲಿ ಅತಿ ಕಡಿಮೆ ಬೆಲೆಯ ಬೈಕ್‌ಗಳೆಂದರೆ ಹೀರೋ ಸಿಡಿ ಡಾನ್ (34,500), ಬಜಾಜ್ ಪ್ಲಾಟಿನಾ (37,000), ಹೋಂಡಾ ಸಿಬಿ ಟ್ವಿಸ್ಟರ್ (49,430) ಹಾಗೂ ಟಿವಿಎಸ್ ಸ್ಟಾರ್ ಸ್ಪೋರ್ಟ್ಸ್ (41,000).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.