ನೈಸ್ ರಸ್ತೆಗೆ ವಾರಾಂತ್ಯ ಬೆಳಗಿನ ಜಾವ ಹೋಗಬೇಕು. ಅಲ್ಲಿ ನಾಲ್ಕಾರು ಯುವಕರು ಬೈಕ್‌ನಲ್ಲಿ ಸಾಹಸ ಮಾಡುತ್ತಿರುತ್ತಾರೆ. ಇದನ್ನು ನೋಡಲೆಂದೇ ಕುತೂಹಲದಿಂದ ನೂರಾರು ಹುಡುಗರು ನೆರೆದಿರುತ್ತಾರೆ. ಹೀಗೆ ಬೈಕ್‌ಗಳನ್ನು ಮನಬಂದಂತೆ ಓಡಿಸುತ್ತಾ ಸರ್ಕಸ್ ಮಾಡುತ್ತಿರುವ ಯುವಕರು ವಿಜಯನಗರದ `ಟೀಮ್ ಬ್ಯಾಲೆನ್ಸ್ ಪಾಯಿಂಟ್'ನ ಸದಸ್ಯರು. ಅಲೆಮಾರಿ, ಕ್ರೇಜಿ ಲೋಕ ಮತ್ತು ಇತ್ತೀಚೆಗೆ ಬಿಡುಗಡೆಯಾದ ನಟ ದರ್ಶನ್ ಅಭಿನಯದ ಬುಲ್‌ಬುಲ್ ಸಿನಿಮಾದ ರೋಮಾಂಚನಕಾರಿ ಸ್ಟಂಟ್ ಮಾಡಿದ್ದು ಇದೇ ತಂಡ.
ಸಿನಿಮಾದಲ್ಲಿ ಜೀವವನ್ನೇ ಲೆಕ್ಕಿಸದೆ ಸಾಹಸ ಮಾಡಿ, ಕೆಲವೊಮ್ಮೆ ಅಪಾಯವನ್ನೂ ಎದುರಿಸುವ ಸಾಹಸ ಕಲಾವಿದರು ಚಿತ್ರದ ನಾಯಕನನ್ನು ಹೀರೊ ಮಾಡಿ ತಾವು ಝೀರೊ ಆಗಿಯೇ ಉಳಿದುಬಿಡುತ್ತಾರೆ. ಆದರೆ ಬ್ಯಾಲೆನ್ಸ್ ಪಾಯಿಂಟ್‌ನ ಹುಡುಗರು ಸಿನಿಮಾದ ಜೊತೆಗೆ ಬೈಕ್ ರೇಸ್‌ನಲ್ಲೂ ಭಾಗವಹಿಸುತ್ತಿದ್ದಾರೆ. ಸ್ಟಂಟ್ ಮಾಡುವ ಯುವಕರಿಗೆ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳು ಮತ್ತು ರಸ್ತೆ ನಿಯಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಚಾರಿಟಿಗಾಗಿ ಶೋ ನೀಡುತ್ತಾರೆ. ಹಳೆ ಬೈಕ್‌ಗೆ ಹೊಸ ರೂಪ ನೀಡುತ್ತಾರೆ. ಸ್ಟಂಟ್ ಮಾಡುವವರನ್ನು ತೆಗಳುವ ಮಂದಿಯ ಮನಸ್ಥಿತಿಯನ್ನೇ ಬದಲಾಯಿಸಲು ಹೊರಟಿದ್ದಾರೆ.
ಕಾನೂನು ವ್ಯಾಪ್ತಿಗೆ ಒಳಪಡಬೇಕು
ಟೀಮ್ ಬ್ಯಾಲೆನ್ಸ್ ಪಾಯಿಂಟ್‌ನ ಮ್ಯಾನೇಜರ್ ಝಾಹಿದ್ ತಮ್ಮ ಕಲ್ಪನೆಯ ಬಗ್ಗೆ ಹೇಳುವುದು ಹೀಗೆ... `ನಾವು ಕೇವಲ ಸ್ಟಂಟ್ ಮಾಡುತ್ತಿಲ್ಲ. ನಮ್ಮ ಮುಖ್ಯ ಉದ್ದೇಶವಿರುವುದು ಬೈಕ್ ಸ್ಟಂಟ್ ಬಗ್ಗೆ ಜನರ ಮನಃಸ್ಥಿತಿಯನ್ನು ಬದಲಾಯಿಸುವುದು. ಬೈಕ್ ಸ್ಟಂಟ್ ಕಾನೂನು ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಮಟ್ಟಿಗೆ ಬೆಳೆಸುವುದು ನಮ್ಮ ಉದ್ದೇಶ. ಇದರ ಜೊತೆಗೆ ಬೈಕ್ ಸ್ಟಂಟ್ ಮಾಡುವಾಗ ವಹಿಸಬೇಕಾದ ಮುಂಜಾಗರೂಕತೆ ಬಗ್ಗೆ ಯುವಕರಿಗೆ ಮನವರಿಕೆ ಮಾಡಿ ಕೊಡುತ್ತಿದ್ದೇವೆ. ಸ್ಟಂಟ್ ಎಲ್ಲೆಂದರಲ್ಲಿ ಮಾಡಿದರೆ ಜನರ ಸಿಟ್ಟಿಗೆ ಕಾರಣವಾಗುತ್ತದೆ ಎಂಬ ಅರಿವು ಇರಬೇಕು.
ಸ್ಟಂಟ್ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್, ನೀ ಪ್ಯಾಡ್, ಜಾಕೆಟ್ ತೊಡಬೇಕು ಎಂಬ ಜಾಗೃತಿ ಮೂಡಿಸುತ್ತಿದ್ದೇವೆ. ಅದಕ್ಕಾಗಿ ಸ್ಟಂಟ್ ಪ್ರಿಯರ ಬಳಗವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶ್ರಮಿಸುತ್ತಿದ್ದೇವೆ. ಇದರ ಫಲವಾಗಿ ನಮಗೀಗ ಅಂತರರಾಷ್ಟ್ರೀಯ ಕಂಪೆನಿಗಳು ಪ್ರಾಯೋಜಕತ್ವಕ್ಕೆ ಮುಂದೆ ಬಂದಿವೆ. `ಮೋಟುಲ್' ಎಂಜಿನ್ ಆಯಿಲ್ ಕಂಪೆನಿ ಉಚಿತವಾಗಿ ಬೈಕ್‌ಗಳಿಗೆ ಆಯಿಲ್ ನೀಡುತ್ತಿದೆ. `ಟಿಎಚ್‌ಎಚ್' ಕಂಪೆನಿ ಉತ್ಕೃಷ್ಟ ಮಟ್ಟದ ಹೆಲ್ಮೆಟ್ ನೀಡುತ್ತಿದೆ. ಹಾಗೆಯೇ `ವೋಗ್21' ನಮಗೆ ಜಾಕೆಟ್‌ಗಳನ್ನು ನೀಡುತ್ತಿದೆ. ಇದು ನಮ್ಮ ಮಟ್ಟಿಗೆ ದೊಡ್ಡ ಸಾಧನೆಯೇ ಸರಿ. ಆದರೆ ನಮಗೆ ಸ್ಥಳೀಯ ಪೊಲೀಸ್ ಇಲಾಖೆಯಿಂದ ಅಭ್ಯಾಸಕ್ಕಾಗಿ ಯಾವುದೇ ರೀತಿಯ ರಿಯಾಯಿತಿ ಸಿಕ್ಕಿಲ್ಲ. ಕೇವಲ ಅಭ್ಯಾಸಕ್ಕಾಗಿ 40 ಕಿ.ಮೀ.ದೂರದ ನೈಸ್ ಎಂಡ್ ಪಾಯಿಂಟ್‌ಗೆ ಹೋಗುತ್ತೇವೆ. ಅದಕ್ಕಾಗಿ ವಿಜಯನಗರದಿಂದ 80 ಕಿ.ಮೀ. ವ್ಯರ್ಥವಾಗಿ ಪ್ರಯಾಣಿಸಬೇಕಾಗಿದೆ. ಆದರೂ ನಾವು ಇತ್ತೀಚೆಗೆ ಚಾರಿಟಿಗಾಗಿಯೂ ಕಾರ್ಯಕ್ರಮ ನೀಡಿ 60 ಸಾವಿರ ರೂಪಾಯಿ ಸಂಗ್ರಹಿಸಿ ಅನಾಥಾಲಯವೊಂದಕ್ಕೆ ನೀಡಿದ್ದೇವೆ.
ಯುವಕರಿಗೆ ಟ್ರಾಫಿಕ್ ನಿಯಮದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ನಮ್ಮ ಕೈಲಾದ ಮಟ್ಟಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಅನೇಕ ಯುವಕರು ಸ್ಟಂಟ್ ಕಲಿಯಲು ಮುಂದೆ ಬರುತ್ತಿದ್ದಾರೆ. ಆದರೆ ಅದಕ್ಕೆ ಬೇಕಾದ ಜಾಗದ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಆದರೆ ಮುಂದೊಂದು ದಿನ ಅದಕ್ಕೂ ವ್ಯವಸ್ಥೆ ಮಾಡಿಕೊಂಡು ಸ್ಟಂಟ್‌ಗೆ ಗೌರವ ಬರುವಂತೆ ಮಾಡುತ್ತೇವೆ ಎಂಬ ವಿಶ್ವಾಸವಿದೆ' ಎನ್ನುತ್ತದೆ ಈ ತಂಡ.
ವಿಜಯನಗರದ ಪುಟ್ಟ ಗ್ಯಾರೇಜ್ ಇವರ ಕರ್ಮಭೂಮಿ. ಇವರಲ್ಲಿ ಝಾಯಿದ್ ಐಟಿ ಉದ್ಯೋಗಿ, ರಾಕೇಶ್ ಕಾಲೇಜು ವಿದ್ಯಾರ್ಥಿ, ಅಫ್ತಾಬ್ ಆಟೊ ಕನ್ಸಲ್ಟೆಂಟ್. ರಫಿ ಟಿವಿಎಸ್ ಬೈಕ್ ಫ್ಯಾಕ್ಟರಿ ರೈಡರ್, ಅಪಾಚಿ ಬೈಕ್‌ನ ರೂಪದರ್ಶಿ ಕೂಡಾ ಎಂಬುದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಇಷ್ಟೇ ಅಲ್ಲ ರಫಿ ಹಳೆ ಬೈಕ್‌ಗಳಿಗೆ ಹೊಸ ರೂಪ ನೀಡುವುದರಲ್ಲಿ ನಿಷ್ಣಾತ.
ಗ್ಯಾರೇಜ್ ಹುಡುಗ ರೂಪದರ್ಶಿ
ವಿಜಯನಗರದ ರಫಿ ಓದಿದ್ದು ಕೇವಲ ಹತ್ತನೇ ತರಗತಿ. ಶಾಲೆಯಲ್ಲಿ ಕಲಿತಿದ್ದಕ್ಕಿಂತ ಗ್ಯಾರೇಜಿನಲ್ಲಿ ಕಲಿತದ್ದೇ ಹೆಚ್ಚು. ಜೀವನೋಪಾಯಕ್ಕಾಗಿ ಕಂಡುಕೊಂಡದ್ದು ಬೈಕ್ ರಿಪೇರಿ ಕೆಲಸ. ಇಷ್ಟೇ ಆಗಿದ್ದ ರಫಿಯನ್ನು ಖ್ಯಾತ ಬೈಕ್ ಕಂಪೆನಿ ಟಿವಿಎಸ್ ತನ್ನ ಫ್ಯಾಕ್ಟರಿ ರೈಡರ್ ಆಗಿ ನೇಮಿಸಿಕೊಂಡಿದ್ದು ಮಾತ್ರವಲ್ಲ, `ಅಪಾಚಿ ಆರ್‌ಟಿಆರ್' ಬೈಕ್‌ನ ಜಾಹೀರಾತಿಗೂ ರೂಪದರ್ಶಿಯಾಗಿ ಬಳಸಿಕೊಂಡಿದೆ. ಟಿ.ವಿ.ಯಲ್ಲಿ ಬರುವ `ಅಪಾಚಿ ಆರ್‌ಟಿಆರ್' ಬೈಕ್‌ನ ಜಾಹೀರಾತಿನಲ್ಲಿ ರಫಿಯನ್ನು ನೋಡಬಹುದು. ಸಾಮಾನ್ಯವಾಗಿ ಹೊಸ ವಸ್ತುವೊಂದು ಮಾರುಕಟ್ಟೆ ಪ್ರವೇಶಿಸುವಾಗ ಕ್ರಿಕೆಟರ್ ಅಥವಾ ಸಿನಿಮಾ ನಟರನ್ನು ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಿಕೊಂಡು ಪೋಸ್ಟರ್‌ಗಳಲ್ಲಿ ಅವರನ್ನೇ ಬಳಸಿಕೊಳ್ಳುವುದು ಮಾಮೂಲು. ಆದರೆ ಹೆಚ್ಚು ಓದದ, ಸೆಲೆಬ್ರಿಟಿಯಲ್ಲದ ರಫಿ ಟಿವಿಎಸ್ ಬೈಕ್‌ನ ಫ್ಯಾಕ್ಟರಿ ರೈಡರ್ ಕೂಡಾ ಆಗಿದ್ದಾರೆ.
`ರಫಿ ಗ್ಯಾರೇಜ್' ಎಂದರೆ ಬೈಕ್ ಕ್ರೇಜ್ ಇರುವ ಹುಡುಗರಿಗೆಲ್ಲರಿಗೂ ಗೊತ್ತು. ರಫಿ ಪುಟ್ಟ ಗ್ಯಾರೇಜ್‌ನಲ್ಲಿ ದೊಡ್ಡ ಕನಸುಗಳನ್ನು ಹೆಣೆದವರು. ಹಳೆಯ ಬೈಕ್‌ಗಳಿಗೆ ಹೊಸ ಲುಕ್ ಕೊಡುವುದರಲ್ಲಿ ನಿಷ್ಣಾತರು. ಹೈದರಾಬಾದಿನಲ್ಲಿ ನಡೆದ ಡ್ರ್ಯಾಗ್ ರೇಸ್‌ನಲ್ಲಿ ರಫಿ ಮೊದಲ ಸ್ಥಾನ ಪಡೆದಿದ್ದಾರೆ. `ಕೆಟಿಎಂ ಆರೆಂಜ್ ಡೇ ಸ್ಪರ್ಧೆಯಲ್ಲಿ' ಮೊದಲ ಸ್ಥಾನ, `ಡ್ಯೂಕ್ ಚಾಂಪಿಯನ್‌ಶಿಪ್'ನಲ್ಲಿ ಚಾಂಪಿಯನ್ ಪಟ್ಟ ಗಳಿಸಿದ್ದಾರೆ. `ಮುಂದಿನ ವರ್ಷ ವಿದೇಶದ ಎಕ್ಸ್ ಡಿಎಲ್ ಕಂಪೆನಿ ಭಾರತಕ್ಕೆ ಬರುತ್ತಿದ್ದು, 600ಸಿಸಿ ಬೈಕ್ ರೇಸ್‌ನಲ್ಲಿ ಭಾಗವಹಿಸುವ ಮಹದಾಸೆ ಇದೆ. ಅದಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದ್ದೇನೆ' ಎನ್ನುತ್ತಾ ಭವಿಷ್ಯದ ಕನಸುಗಳನ್ನು ಬಿಚ್ಚಿಡುತ್ತಾರೆ ರಫಿ.
ಟಿವಿಎಸ್ ಬೈಕ್‌ಗಳ ಫ್ಯಾಕ್ಟರಿ ರೈಡರ್ ಆಗಿರುವ ಕಾರಣ ಇವರು ಸ್ಟಂಟ್‌ಗಳಿಗೆ ಬಳಸುವುದು ಟಿವಿಎಸ್ ಅಪಾಚಿ ಮತ್ತು ಪಲ್ಸರ್ ಬೈಕ್‌ಗಳನ್ನು ಮಾತ್ರ. ಇದರ ಜೊತೆಗೆ ತನ್ನ ಗ್ಯಾರೇಜ್‌ನಲ್ಲಿ ಹಳೆ ಬೈಕ್‌ಗಳಿಗೆ ತನ್ನ ಕಲ್ಪನೆಯ ವಿನ್ಯಾಸ ಕೊಡುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ಗ್ಯಾರೇಜ್‌ಗೆ `ಟೀಮ್ ಬ್ಯಾಲೆನ್ಸ್ ಪಾಯಿಂಟ್' ಎಂದು ಹೆಸರಿಟ್ಟು ಗೆಳೆಯರೆಲ್ಲರೂ ಸೇರಿ ಹಳೆ ಬೈಕ್‌ಗಳಿಗೆ ಇನ್ನಷ್ಟು ಮೆರುಗು ನೀಡುವ ಯೋಜನೆ ರೂಪಿಸಿಕೊಂಡಿದ್ದಾರೆ. ಸಂಪರ್ಕಕ್ಕೆ : 9972860071, 9742911919
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.