ADVERTISEMENT

ಭಳಾರೆ ಬೆಂಜ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST
ಭಳಾರೆ ಬೆಂಜ್
ಭಳಾರೆ ಬೆಂಜ್   

`ಚಾಲಕರೇ ದೇಶದ ಬೆನ್ನೆಲುಬು. ಆದರೆ ಭಾರತದಲ್ಲಿ ಚಾಲಕವರ್ಗವನ್ನು ಅತ್ಯಂತ ಕೆಳಮಟ್ಟದಲ್ಲಿ ನೋಡಲಾಗುತ್ತಿದೆ. ಇದನ್ನು ಬದಲಾಯಿಸಲೆಂದೇ ನಾವು ಭಾರತಕ್ಕೆ ಬಂದಿದ್ದೇವೆ. ಬಂದಿರುವುದು ಕೇವಲ ಐದು ಅಥವಾ ಐವತ್ತು ವರ್ಷಕ್ಕಲ್ಲ.

ಇಲ್ಲಿಯೇ ನೆಲೆ ನಿಂತು ಭಾರತದ ಭಾಗವಾಗಿ ಮೋಟಾರು ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುವುದೇ ನಮ್ಮ ಧ್ಯೇಯ~ ಹೀಗೆಂದು ಡಾಮಿಲೆರ್ ಇಂಡಿಯಾ ಕಮರ್ಷಿಯಲ್ ವೆಹಿಲಕ್ಸ್ (ಡಿಐಸಿವಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಾರ್ಕ್ ಲಿಸ್ಟೊಸೆಲ್ಲಾ ಅವರು ಅತ್ಯಂತ ವೀರಾವೇಶದಿಂದ ಮಾತನಾಡಿದ್ದರು.

ಗೊಟ್ಲಿಬ್ ಡಾಮಿಲೆರ್ ಹಾಗೂ ಕಾರ್ಲ್ ಬೆಂಜ್ ಎಂಬ ಇಬ್ಬರು ಗೆಳೆಯರು 1896ರಲ್ಲಿ ಎಂಜಿನ್ ಮೇಲೊಂದು ಕ್ಯಾಬ್ ಕೂರಿಸಿ ಅದಕ್ಕೊಂದು ಟ್ರಕ್ ಅಳವಡಿಸಿ ಜಗತ್ತಿನ ಮೊದಲ ಮೋಟಾರು ಚಾಲಿತ ಟ್ರಕ್ ನಿರ್ಮಿಸಿದರು. ಅಂದು ನಡೆದ ಆ ಆವಿಷ್ಕಾರವೇ ಇಂದು ಜಗತ್ತಿನಲ್ಲೇ ಐಷಾರಾಮಿ ವಾಹನ ಎಂದೇ ಪ್ರಖ್ಯಾತಿ ಪಡೆದಿರುವ ಮರ್ಸಿಡೀಸ್ ಬೆಂಜ್ ಆಗಿದೆ. ಟ್ರಕ್, ಬಸ್, ಕಾರು ಹೀಗೆ ಮೋಟಾರು ಚಾಲಿತ ವಾಹನಗಳ ತಯಾರಿಕೆಯಲ್ಲಿ ಈ ಜೋಡಿ ನಿರ್ಮಿಸಿದ ಕಂಪೆನಿಯು ಸದಾ ಮುಂಚೂಣಿಯಲ್ಲಿದೆ.
 
ಹೀಗಾಗಿಯೇ `ಟ್ರಕ್‌ನ ಅನ್ವೇಷಕರಿಂದ ಈಗ ಭಾರತಕ್ಕಾಗಿ ಮತ್ತೊಮ್ಮೆ ಅನ್ವೇಷಣೆ~ ಎಂಬ ಘೋಷವಾಕ್ಯದೊಂದಿಗೆ `ಭಾರತ್ ಬೆಂಜ್~ ಆಗಿ ಈ ಕಂಪೆನಿ ಭಾರತಕ್ಕೆ ಕಾಲಿಟ್ಟಿದೆ.
ಚೆನ್ನೈ ಬಳಿಯ ಊರ್‌ಗಡಂನ 160 ಹೆಕ್ಟೇರ್ ಪ್ರದೇಶದಲ್ಲಿ 4,400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಡಿಐಸಿವಿ ಬೃಹತ್ ವಾಹನ ತಯಾರಿಕಾ ಘಟಕದಲ್ಲಿ 9ರಿಂದ 49 ಟನ್ ಸಾಮರ್ಥ್ಯದ ಒಟ್ಟು 20 ಟ್ರಕ್‌ಗಳು ತಯಾರಾಗುತ್ತವೆ.
 
ಶೇ. 85ರಷ್ಟು ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಭಾರತ್ ಬೆಂಜ್ ಟ್ರಕ್‌ಗಳು ನಿರ್ಮಾಣವಾಗುತ್ತಿವೆ. ಭಾರತದ ವಿವಿಧ ಮಾದರಿಯ ರಸ್ತೆ (ಕಚ್ಚಾ, ಗುಂಡಿ, ಹಳ್ಳ-ದಿಣ್ಣೆ, ಗಣಿ ಪ್ರದೇಶ, ಜೌಗುಪ್ರದೇಶ)ಗಳನ್ನೇ ಹೋಲುವಂಥ ಟ್ರಾಕ್ ನಿರ್ಮಿಸಲಾಗಿದೆ. ದಿನದ 24 ಗಂಟೆಯೂ ಇಲ್ಲಿ ವಾಹನಗಳನ್ನು ಪರೀಕ್ಷಿಸುವುದಕ್ಕಾಗಿ ಓಡಿಸಲಾಗುತ್ತದೆ.

ಇಂದಿನ ಅಗತ್ಯಗಳಿಗೆ ತಕ್ಕಂತೆ ಕಡಿಮೆ ತೂಕ ಸಾಮರ್ಥ್ಯದ ಎಲ್‌ಡಿಟಿ ಟ್ರಕ್‌ಗಳನ್ನು ಬೆಂಜ್ ಇತ್ತೀಚೆಗಷ್ಟೇ ತನ್ನದಾಗಿಸಿಕೊಂಡ ಮಿಟ್ಸುಬಿಷಿ ಫುಸೊ ಕ್ಯಾಂಟರ್‌ನಿಂದ ಪ್ರೇರಿತವಾಗಿದೆ. ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿರುವ ಈ ಟ್ರಕ್‌ಗಳು 140 ಹಾಗೂ 175 ಅಶ್ವಶಕ್ತಿಯಲ್ಲಿ ಲಭ್ಯ. 9 ಹಾಗೂ 12 ಟನ್ ಸಾಮರ್ಥ್ಯದ ರಿಜಿಡ್ ಹಾಗೂ ನಿರ್ಮಾಣ ಕಾಮಗಾರಿ ಟ್ರಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನು ಎಚ್‌ಡಿಟಿ ಭಾರಿ ಟ್ರಕ್‌ಗಳು ಮರ್ಸಿಡೀಸ್-ಬೆಂಜ್ ಆಕ್ಸಾರ್ ಎಂಬ ಟ್ರಕ್‌ನಿಂದ ಪ್ರೇರೇಪಣೆಗೊಂಡಿದೆ.

ಆರು ಸಿಲೆಂಡರ್ ಎಂಜಿನ್ ಸಾಮರ್ಥ್ಯದ ಈ ಟ್ರಕ್‌ಗಳಲ್ಲಿ 231 ಹಾಗೂ 279 ಅಶ್ವಶಕ್ತಿಯಲ್ಲಿ ಲಭ್ಯ. 25, 31, 49 ಟನ್ ಸಾಮರ್ಥ್ಯದಲ್ಲಿ ಲಭ್ಯವಿರುವ ಈ ಟ್ರಕ್‌ಗಳನ್ನು ರಿಜಿಡ್ ಅಥವಾ ನಿರ್ಮಾಣ ಕಾಮಗಾರಿಗೆ ಬಳಸಬಹುದಾಗಿದೆ. ಎರಡೂ ಟ್ರಕ್‌ಗಳಲ್ಲಿ ಕಾಮನ್ ರೈಲ್ ಡೈರೆಕ್ಟ್ ಇಂಜೆಕ್ಷನ್ ವ್ಯವಸ್ಥೆ ಅಳವಡಿಸಿರುವುದರಿಂದ ಇಂಧನ ಮಿತವ್ಯಯ ಸಾಧ್ಯ

ಚಾಲಕರ ಹಿತ ಕಾಪಾಡುವ ಬೆಂಜ್
ವಾರಗಟ್ಟಲೆ ಟ್ರಕ್‌ನಲ್ಲೇ ಕಳೆಯುವ ಚಾಲಕನ ದಣಿವಾರಿಸಲು ಹವಾನಿಯಂತ್ರಿತ ಕ್ಯಾಬಿನ್‌ಗಳು, ಚಾಲಕನ ಅನುಕೂಲಕ್ಕೆ ತಕ್ಕಂತೆ ಹಿಂದೆ-ಮುಂದೆ ಹಾಗೂ ಮೇಲೆ-ಕೆಳಗೆ ಮಾಡಬಲ್ಲ ಸ್ಟೇರಿಂಗ್ ಹಾಗೂ ಆಸನ.

ಲಾರಿಯ ದಾಖಲಾತಿ, ಟೋಲ್‌ಗೇಟ್‌ನ ಚೀಟಿಗಳು, ಪರವಾನಗಿ ಇತ್ಯಾದಿಗಳನ್ನು ಸುರಕ್ಷಿತವಾಗಿಡಲು ಟ್ರೇಗಳು, ಚಾಲಕನ ಬಟ್ಟೆಗಳನ್ನು ನೇತು ಹಾಕಲು ಹ್ಯಾಂಗರ್ ಇತ್ಯಾದಿ ಪ್ರತಿಯೊಂದು ಚಿಕ್ಕ ಪುಟ್ಟ ಅಗತ್ಯಗಳನ್ನೂ ಚಾಲಕ ಅಭಿಪ್ರಾಯ ಸಂಗ್ರಹಿಸಿ ಗುರುತಿಸಿ ಟ್ರಕ್‌ಗಳಲ್ಲಿ ಅಳವಡಿಸಲಾಗಿದೆ.

ಮಾಲೀಕನ ಜೇಬನ್ನು ಕಾಪಾಡಲು ಟ್ರಕ್‌ಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಳವಡಿಸಲಾಗಿದೆ. ಇದು ಎಂಜಿನ್‌ಗೆ ಪೂರೈಕೆಯಾಗುವ ಡೀಸಲ್‌ನ ಪ್ರಮಾಣವನ್ನು ನಿರ್ಧರಿಸುತ್ತದೆ. ಇದರಿಂದ ಇಂಧನ ಅಪವ್ಯಯವಾಗದು. ಜತಗೆ ಟ್ರಕ್‌ನಲ್ಲಿ ಅಳವಡಿಸಿರುವ ಮತ್ತೊಂದು ಎಲೆಕ್ಟ್ರಾನಿಕ್ ಉಪಕರಣದ ಮೂಲಕ ಮಾಲೀಕ ತನ್ನ ಟ್ರಕ್‌ಗೆ ಫೋನಾಯಿಸಿ ಚಾಲಕನೊಂದಿಗೆ ಮಾತನಾಡಬಹುದು.

ಟ್ರಕ್ ಸದ್ಯ ಇರುವ ಸ್ಥಳದ ಮಾಹಿತಿಯನ್ನೂ ಪಡೆಯಬಹುದು. ಎಲೆಕ್ಟ್ರಾನಿಕ್ ಓಡೋಮೀಟರ್‌ನಲ್ಲಿ ಟ್ರಕ್ ಹೊರಗಿನ ಹಾಗೂ ಒಳಗಿನ ತಾಪಮಾನ, ಗೇರ್‌ನ ಮಾಹಿತಿ, ಇಂಧನದ ಮಾಹಿತಿ ಹಾಗೂ ಇಂಧನ ಕ್ಷಮತೆಯ ಲೆಕ್ಕಾಚಾರ ಇತ್ಯಾದಿ ಮಾಹಿತಿ ಲಭ್ಯ.
ತನ್ನ ಟ್ರಕ್‌ಗಳಿಗಾಗಿಯೇ `ಭಾರತ್ ಬೆಂಜ್ ಇನ್ಶೂರೆನ್ಸ್~ ಎಂಬ ಹೊಸ ವಿಮಾ ಕಂಪೆನಿಯನ್ನು ಹುಟ್ಟುಹಾಕಿರುವ ಸಂಸ್ಥೆ, ಈ ಮೂಲಕ ಹಣವಿಲ್ಲದೆ ವಾಹನದ ದುರಸ್ತಿ, ಶೂನ್ಯ ಸವಕಳಿ ಹಾಗೂ ಸಂಪೂರ್ಣ ನಿರ್ವಹಣೆಯ ಒಪ್ಪಂದ ಮಾಡಿಕೊಡುತ್ತಿದೆ.

ಜತೆಗೆ ವಾಹನ ಖರೀದಿಗೆ ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಸುಂದರಂ ಹಣಕಾಸು ಸಂಸ್ಥೆ ಮೂಲಕ ಹಣಕಾಸಿನ ನೆರವನ್ನೂ ನೀಡುತ್ತಿದೆ. ಕರ್ನಾಟಕದ ಬೆಂಗಳೂರು, ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ.

ಜರ್ಮನ್ ತಂತ್ರಜ್ಞಾನದ ಭಾರತ್‌ಬೆಂಜ್ ಟ್ರಕ್‌ಗಳು ಎರಡು ಅಂಕಿಯ ಇಂಧನ ಕ್ಷಮತೆ ಹಾಗೂ ಒಂದಂಕಿಯ ಬೆಲೆಗೆ ಲಭ್ಯ ಎಂದು ಡಿವಿಐಸಿ ಹೇಳಿದೆಯೇ ಹೊರತು ನಿಜವಾದ ಬೆಲೆಯನ್ನು ಪ್ರಕಟಿಸಿಲ್ಲ. ಈಗಿನ ಅಂದಾಜುಗಳಂತೆ ಟ್ರಕ್‌ನ ಬೆಲೆ ಸುಮಾರು 10 ಲಕ್ಷ ರೂಪಾಯಿಗಳಿಂದ ಆರಂಭವಾಗಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.