ADVERTISEMENT

ಮಕ್ಕಳ ಪುಸ್ತಕಗಳ ಪರಿಚಯ...

ಪೃಥ್ವಿರಾಜ್ ಎಂ ಎಚ್
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಐಲ್ಯಾಂಡ್ ಆಫ್ ಬ್ಲೂ ಡಾಲ್ಫಿನ್ಸ್
ಅಮೆರಿಕದಲ್ಲಿ ಅತಿ ಹೆಚ್ಚು ಮಾರಾಟವಾಗಿರುವ `ಐಲ್ಯಾಂಡ್ ಆಫ್ ಬ್ಲೂ ಡಾಲ್ಫಿನ್ಸ್' ಜನಪ್ರಿಯ ಮಕ್ಕಳ ಕಾದಂಬರಿ ಎಂದೇ ಪ್ರಸಿದ್ಧ.
ಇಲ್ಲಿಯವರೆಗೂ ಇದರ 66 ಲಕ್ಚ ಪ್ರತಿಗಳು ಮಾರಾಟವಾಗಿವೆ. ಈ ಕೃತಿಯನ್ನು ಸ್ಕಾಟ್ ಓ ಡೆಲ್ ಬರೆದಿದ್ದಾರೆ.

12 ವರ್ಷದ ಬಾಲಕಿ ಕರಾನ ಈ ಕಾದಂಬರಿಯ ನಾಯಕಿ. ಅಮೆರಿಕದ ಕರಾವಳಿ ತೀರದಲ್ಲಿ ಗಲಾಸ್ ಎಂಬ ಹಳ್ಳಿಯಲ್ಲಿ  ಕರಾನ ಕುಟುಂಬ ನೆಲೆಸಿರುತ್ತದೆ. ಕರಾನ ತಂದೆ ಓರ್ವ ಮೀನುಗಾರ. ಕಾರಣಾಂತರಗಳಿಂದ ನಡೆದ ಗಲಭೆಯಲ್ಲಿ ಕರಾನ ತಂದೆ ಮತ್ತು ತಾಯಿ ಸಾವನ್ನಪ್ಪುತ್ತಾರೆ. ಘಟನೆಯಲ್ಲಿ ಕರಾನ ಹಾಗೂ ಆಕೆಯ ಸಹೋದರ ರ‌್ಯಾಮೊ ತಪ್ಪಿಸಿಕೊಂಡು ಹಡಗಿನಲ್ಲಿ ಪ್ರಯಾಣಿಸುತ್ತಾರೆ. ಕೆಲ ದಿನಗಳ ನಂತರ ರ‌್ಯಾಮೊ ಕೂಡ ಸತ್ತು ಹೋಗುತ್ತಾನೆ.

ತದನಂತರ ಸಮುದ್ರದ ನಡುಗಡ್ಡೆಯಲ್ಲಿ ವಾಸಿಸುವ ಕರಾನ ವಿವಿಧ ಪ್ರಾಣಿಗಳ ಜೊತೆ ಹೋರಾಟ ನಡೆಸಿ ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳುತ್ತಾಳೆ.  ಪ್ರಾಣಿಗಳ ಮೂಳೆಗಳಿಂದ ಮನೆಯನ್ನು ಕಟ್ಟುತ್ತಾಳೆ. ಅಲ್ಲಿನ ಕೆಲ ಸಾದು ಪ್ರಾಣಿಗಳೊಂದಿಗೆ ಗೆಳತನ ಬೆಳೆಸಿಕೊಂಡು ಆ ನಡುಗಡ್ಡೆಯಲ್ಲಿ ಸ್ವಚ್ಛಂದವಾಗಿ ಬದುಕುತ್ತಿರುತ್ತಾಳೆ. ಈ ನಡುವೆ ಅಲ್ಲಿಗೆ ಬರುವ ಸಂತಾ ಬಾರ್ಬರ ಎಂಬ ನಾವಿಕ ಕರಾನಳನ್ನು ಕ್ಯಾಲಿಪೋರ್ನಿಯಗೆ ಕರೆತರುತ್ತಾನೆ. ಹೀಗೆ ಐಲ್ಯಾಂಡ್ ಆಫ್ ಬ್ಲೂ ಡಾಲ್ಫಿನ್ಸ್ ಕಾದಂಬರಿ ಮುಕ್ತಾಯವಾಗುತ್ತದೆ.

ಗ್ರೀನ್ ಎಗ್ಸ್ ಅಂಡ್ ಹ್ಯಾಮ್

ಡಾ. ಸ್ಯೂಸ್ ಬರೆದಿರುವ  ಜನಪ್ರಿಯ ಮಕ್ಕಳ ಪುಸ್ತಕ  `ಗ್ರೀನ್ ಎಗ್ಸ್ ಅಂಡ್ ಹ್ಯಾಮ್'. 1960ರಿಂದಲೂ 80 ಲಕ್ಷಕ್ಕೂ ಅತಿ ಹೆಚ್ಚು ಪುಸ್ತಕಗಳು ಮಾರಾಟವಾಗಿದ್ದು ಇದರ ವಿಶೇಷ.  ಕೇವಲ 50 ಸರಳ ಪದಗಳನ್ನು ಪುಸ್ತಕದಲ್ಲಿ ಬಳಸಿದ್ದು, ಸ್ಯಾಮ್ ಎಂಬ ಬಾಲಕ ತನ್ನ ಮುಂಗೋಪಿ ಸ್ನೇಹಿತನನ್ನು  ಗ್ರೀನ್ ಎಗ್ಸ್ ಅಂಡ್ ಹ್ಯಾಮ್ (ತಿನಿಸು) ತಿನ್ನಲು ಒಪ್ಪಿಸುವುದೇ ಈ ಕತೆಯಾಗಿದೆ.

`ಸ್ಯಾಮ್ ತನ್ನ ಸ್ನೇಹಿತನನ್ನು ಗ್ರೀನ್ ಎಗ್ ಮತ್ತು ಹ್ಯಾಮ್‌ನ ರುಚಿ ನೋಡಲು ಒತ್ತಾಯಿಸುತ್ತಾನೆ. ಈ ಸ್ನೇಹಿತನಿಗೆ ತಿಂಡಿಗಳು ಹಿಡಿಸುವುದಿಲ್ಲ. ಆದರೆ ಸ್ಯಾಮ್ ಪದೇ ಪದೇ ಈ ವಿಷಯದ ಕುರಿತು ಒತ್ತಾಯ ಮಾಡುತ್ತಲೇ ಇರುತ್ತಾನೆ. ಈ ತಿಂಡಿಯನ್ನು  ಬೋಟ್‌ನಲ್ಲಿ, ಮಳೆಯಲ್ಲಿ, ರೈಲಿನಲ್ಲಿ, ಕತ್ತಲಲ್ಲಿ, ಮರದ ಕೆಳಗೆ, ಕಾರಿನಲ್ಲಿ, ಬಾಕ್ಸ್‌ನಲ್ಲಿ, ಮನೆಯಲ್ಲಿ ಎಲ್ಲಿ ತಿಂದರೂ ಚೆಂದ ಎಂದು ಮತ್ತೆ ಮತ್ತೆ ಒಪ್ಪಿಸಲು ಪ್ರಯತ್ನಿಸುತ್ತಾನೆ.

ಕೊನೆಗೂ ಒತ್ತಾಯಕ್ಕೆ ಮಣಿದ ಸ್ಯಾಮ್ ಸ್ನೇಹಿತ ಗ್ರೀನ್ ಎಗ್ ಮತ್ತು ಹ್ಯಾಮ್ ರುಚಿ ನೋಡುತ್ತಾನೆ. ಅದು ಕೊನೆಗೂ ಆತನಿಗೆ ತುಂಬಾ ಇಷ್ಟವಾಗುತ್ತದೆ.  ಮಕ್ಕಳು ಇಷ್ಟಪಡದ ತಿಂಡಿಯನ್ನು ತಿನ್ನಿಸುವ ಮೊದಲ ವಿದೇಶಿಯರು ಈ ಕತೆಯನ್ನು ಹೇಳಿ ಅಥವಾ ಓದಿಸಿ ಮಕ್ಕಳಿಗೆ ತಿಂಡಿ ತಿನ್ನಿಸುತ್ತಾರಂತೆ..!

ADVERTISEMENT

ಲವ್ ಯೂ ಫಾರೆವರ್

ತಾಯಿ ಮತ್ತು ಮಗನ ನಡುವಿನ ಸುಮಧುರ ಬಾಂಧವ್ಯವನ್ನು ಚಿತ್ರಿಸುವ ಪುಸ್ತಕ `ಲವ್ ಯೂ ಫಾರೆವರ್'. ರಾಬರ್ಟ್ ಮುನ್ಷ್ ಬರೆದಿರುವ ಈ ಪುಸ್ತಕ ಇದುವರೆಗೂ 80 ಲಕ್ಷ ಪ್ರತಿಗಳು ಮಾರಾಟವಾಗಿವೆ.  ವಿಶ್ವದ ಜನಪ್ರಿಯ ಪುಸ್ತಕಗಳಲ್ಲಿ ಇದೂ ಒಂದು.

ತಾಯಿ ಮಗನ ಜನ್ಮಾಂತರದ ಕಥೆ `ಲವ್ ಯೂ ಫಾರೆವರ್'ನಲ್ಲಿ ಗಂಭೀರವಾಗಿ ಚಿತ್ರಣಗೊಂಡಿದೆ. ಸರಳ ಭಾಷೆ ಮತ್ತು ನಿರೂಪಣೆಯಿಂದ ಕೂಡಿರುವ  ಈ ಪುಸ್ತಕ ಮಕ್ಕಳನ್ನು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.

ಮಗ ಚಿಕ್ಕವನಾಗಿರುವ ತಾಯಿ ಪ್ರತಿ ರಾತ್ರಿ ಲಾಲಿ ಹಾಡಿ ಅವನನ್ನು ಮಲಗಿಸುತ್ತಿದ್ದಳು. ಆದರೆ ಮಗ ದೊಡ್ಡವನಾದ ಮೇಲೆ ತಾಯಿಗೆ ಲಾಲಿ ಹಾಡಿ ಮಲಗಿಸಲು ಸಾಧ್ಯವಾಗುವುದಿಲ್ಲ. ಮಗ ದೊಡ್ಡವನಾಗಿದ್ದರೂ ಲಾಲಿ ಹಾಡಿ ಮಗನನ್ನು ಮಲಗಿಸಬೇಕು ಎಂಬ ಹಂಬಲ ತಾಯಿಯದು.

ಇದಕ್ಕೆ ಮಗ ಮತ್ತು ಸೊಸೆಯ ವಿರೋಧ ವ್ಯಕ್ತವಾಗುತ್ತದೆ. ಈ ಕೊರಗಿನಲ್ಲೇ ತಾಯಿ ಖಾಯಿಲೆ ಬಿದ್ದು ಸತ್ತು ಹೋಗುತ್ತಾಳೆ. ಮರುಜನ್ಮ ಪಡೆಯುವ ಆ ತಾಯಿ ಹಾವಿನ ರೂಪದಲ್ಲಿ ಬಂದು ಮಗ ನಿದ್ರಿಸುವಾಗ ಲಾಲಿ ಹಾಡನ್ನು ಹೇಳುತ್ತಾಳೆ.  ಈ ಪುಸ್ತಕ  ತಾಯಿಯ ಮಮತೆಯನ್ನು ಗಟ್ಟಿಯಾಗಿ ಧ್ವನಿಸುತ್ತದೆ. ಹೀಗೆ ಕಥೆ ಜನ್ಮಾಂತರದ ಕಥೆಯಾಗಿ ಮುಂದುವರೆಯುತ್ತದೆ.

ದಿ ಕ್ಯಾಟ್ ಇನ್ ದಿ ಹ್ಯಾಟ್

`ದಿ ಕ್ಯಾಟ್ ಇನ್ ದಿ  ಹ್ಯಾಟ್' ವಿಶ್ವದ ಜನಪ್ರಿಯ ಮಕ್ಕಳ ಪುಸ್ತಕ. ಇದನ್ನು ಡಾ. ಸ್ಯೂಸ್  ಬರೆದಿದ್ದಾರೆ. ಸುಮಾರು 1.10 ಕೋಟಿ ಪುಸ್ತಕಗಳು ಈವರೆಗೆ ಮಾರಾಟವಾಗಿವೆ. ವಿಶ್ವದ 12 ಭಾಷೆಗಳಿಗೆ ಈ ಪುಸ್ತಕ ಭಾಷಾಂತರಗೊಂಡಿದೆ.

ಇದನ್ನು ಓದುತ್ತ ಕುಳಿತ ಮಕ್ಕಳು ಪುಸ್ತಕದ ಒಂದು ಭಾಗವಾಗಿ ಬಿಡುವುದರಲ್ಲಿ ಅಚ್ಚರಿ ಇಲ್ಲ. ಸರಳವಾದ ನಿರೂಪಣೆ ಓದುಗರನ್ನು ಹಿಡಿದಿಡುತ್ತದೆ. ಒಂದು ಮನೆ, ಮನೆಯಲ್ಲಿ ಇಬ್ಬರು ಮಕ್ಕಳು, ಒಂದು ಬೆಕ್ಕು ಮತ್ತು ಮೀನು ಹಾಗೂ ಆಟಿಕೆಗಳ ಮಧ್ಯೆ ಕಥೆ ನಡೆಯುತ್ತದೆ. ಇಲ್ಲಿನ ಆಟಿಕೆಗಳು ಜೀವಂತಿಕೆಯಿಂದ ಮಕ್ಕಳೊಂದಿಗೆ ಆಟವಾಡುವುದು ವಿಶೇಷ.

ಮಕ್ಕಳಿಗಂತೂ ಈ ಪುಸ್ತಕ ಸಖತ್ ಮಜಾ ಕೊಡುತ್ತದೆ. ಬೆಕ್ಕಿನ ಚೆಲ್ಲಾಟಕ್ಕೆ ಮನಸೋಲದ ಮಕ್ಕಳೇ ಇಲ್ಲ ಬಿಡಿ. ಕಥೆಯ ಹಂದರ ಸೊಗಸಾಗಿದೆ. ಬೆಕ್ಕಿನ ತಮಾಷೆಗೆ ಆಟಿಕೆಗಳಿಗೂ  ಜೀವ ಬರುತ್ತದೆ. ತಾಯಿ ಮನೆಯಲ್ಲಿ ಇಲ್ಲದಿರುವ ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ಬೆಕ್ಕಿನ  ಮೇಲೆ ಬೀಳುತ್ತದೆ. ಮಕ್ಕಳಿಗೆ ಹಾಲು ಕುಡಿಸಿ, ಬ್ರೆಡ್ ತಿನ್ನಿಸುವ ಸನ್ನಿವೇಶವಂತೂ ತಮಾಷೆಯಾಗಿದೆ.
ಬೆಕ್ಕು ಗಾಳಿಪಟ ಹಾರಿಸುವ ಸಂದರ್ಭವನ್ನು ಸ್ಯೂಸ್ ಅಕ್ಷರದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

ದಿ ಪೊಕಿ ಲಿಟಲ್ ಪಪ್ಪಿ

ಇಂಗ್ಲಿಷ್ ಸಾಹಿತ್ಯದಲ್ಲಿ ಮತ್ತೊಂದು ಜನಪ್ರಿಯ ಮಕ್ಕಳ ಪುಸ್ತಕ `ದಿ ಪೊಕಿ ಲಿಟಲ್ ಪಪ್ಪಿ'. ಇದನ್ನು ಜನ್ನಟ್ಟೆ ಸೆಬ್ರಿಂಗ್ ಲೋರಿ ಬರೆದಿದ್ದಾರೆ. ಕಥೆಯ ಸಂದರ್ಭಕ್ಕೆ ತಕ್ಕಂತೆ ಚಿತ್ರಗಳನ್ನು ಜಿ.ಟೆಂಗ್ರಿನ್ ಬಿಡಿಸಿದ್ದಾರೆ. ಬೂಕರ್ ಪ್ರಶಸ್ತಿ ಪಡೆದಿರುವುದು ಈ ಕೃತಿಯ ಅಗ್ಗಳಿಕೆ.

ದಿ ಪೊಕಿ ಲಿಟಲ್ ಪಪ್ಪಿಯ 12 ಸರಣಿ ಪುಸ್ತಕಗಳು ಹೊರಬಂದಿವೆ. ಈ ವರೆಗೂ 1.48 ಕೋಟಿ ಪುಸ್ತಕಗಳು ಮಾರಾಟವಾಗಿವೆ. ವಿಶ್ವದ 16 ಭಾಷೆಗಳಿಗೆ ದಿ ಪೊಕಿ ಲಿಟಲ್ ಪಪ್ಪಿ ತರ್ಜುಮೆಗೊಂಡಿದೆ.

ಸಾಮಾನ್ಯವಾಗಿ ಮಕ್ಕಳು ಇಷ್ಟಪಡುವ ಸಾಕು ಪ್ರಾಣಿಗಳನ್ನು ಕೇಂದ್ರವಾಗಿರಿಸಿಕೊಂಡು ಲೋರಿ ಈ ಕೃತಿಯನ್ನು ರಚಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ತೆರಳುವ ಮಕ್ಕಳು ಎಂತಹ ಕಷ್ಟಕೋಟಲೆಗಳ ಸುಳಿಗೆ ಸಿಲುಕುತ್ತಾರೆ ಎಂಬುದೇ ಈ ಕೃತಿಯ ಮುಖ್ಯ ಕಥಾ ಹಂದರ.

ಪೊಕಿ ಎಂಬ ನಾಯಿ ಮರಿ ಮನೆ ಬಿಟ್ಟು ತೆರಳಿದ ಬಳಿಕ ಅಪಾಯಕ್ಕೆ ಸಿಲುಕುತ್ತದೆ. ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗುತ್ತದೆ. ಆದರೂ ಬದುಕುಳಿದು ಮತ್ತೆ ಮನೆ ಸೇರುತ್ತದೆ. ಮತ್ತೆಂದೂ ಮನೆ ಬಿಟ್ಟು ಓಡಿ ಹೋಗುವುದಿಲ್ಲ ಎಂದು ನಾಯಿ ಮರಿ ತಾಯಿಗೆ ಭಾಷೆ ಕೊಡುತ್ತದೆ. 

ಈ ಕಾಮಿಕ್ ಕೃತಿ ಮಕ್ಕಳಿಗೆ ಇಷ್ಟವಾಗುತ್ತದೆ. ತಮ್ಮ ಮನೆಯ ನಾಯಿ ಮರಿ ಅಥವಾ ಹಾದಿ ಬೀದಿಯ ನಾಯಿ ಮರಿಗಳು ಪುಸ್ತಕ ಓದುವ ಮಕ್ಕಳಿಗೆ ನೆನಪಾಗದೇ ಇರಲು ಹೇಗೆ ತಾನೇ ಸಾಧ್ಯ ಎಂದು ಲೋರಿ ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.