ವೈ ಶುಡ್ ಬಾಯ್ಸ ಹ್ಯಾವ್ ಆಲ್ ದ ಫನ್? ಎಂಬ ಜಾಹಿರಾತಿನ ಟ್ಯಾಗ್‌ಲೈನ್‌ನ್ನು ನೀವು ಓದಿರಬಹುದು ಅಥವಾ ಟಿವಿಯಲ್ಲಿ ನೋಡಿರಬಹುದು. ಹೀರೋ ಹೋಂಡಾ ಹಿಂದೆ ಬಿಡುಗಡೆ ಮಾಡಿದ್ದ ಪ್ಲೆಷರ್ ಸ್ಕೂಟರ್‌ನ ಜಾಹಿರಾತದು. ಸಾಮಾನ್ಯವಾಗಿ ಹುಡುಗರೇ ಓಡಿಸುವ ಬೈಕ್‌ಗಳಲ್ಲಿ ಎಲ್ಲ ಆಧುನಿಕ ತಂತ್ರಜ್ಞಾನಗಳೂ ಅಡಕವಾಗಿರುತ್ತವೆ. ಡಿಸ್ಕ್ ಬ್ರೇಕ್, ಗ್ಯಾಸ್ ಫಿಲ್ಡ್ ಸಸ್ಪೆನ್ಷನ್, ಕ್ಲಿಯರ್ ಲೆನ್ಸ್ ಹೆಡ್‌ಲೈಟ್- ಹೀಗೆ. ಆದರೆ ಹುಡುಗಿಯರು ಓಡಿಸುವ ಸ್ಕೂಟರ್‌ಗೆ? ಇವಾವುದೂ ಇಲ್ಲ! ಎಂತಹ ಅನ್ಯಾಯ?! ಸ್ಕೂಟರಿಂಗ್‌ನ ಎಲ್ಲ ರೀತಿಯ ಐಷಾರಾಮಗಳೂ ಮಹಿಳೆಗೂ ಸಿಗಬೇಕಲ್ಲವೇ?
ಈ ಜಾಗೃತಿ ವಾಹನ ಕ್ಷೇತ್ರದಲ್ಲಿ ಮೂಡಿದ್ದು ಮಾತ್ರ ತೀರ ನಿಧಾನವಾಗಿ. ವಾಹನ ಕ್ಷೇತ್ರದ ಶ್ರೇಷ್ಠ ಸುಧಾರಣೆಗಳೆಲ್ಲ ಆವಿಷ್ಕಾರಗೊಂಡು ನೂರಾರು ವರ್ಷಗಳ ನಂತರವೇ ಸ್ಕೂಟರ್‌ಗಳಿಗೂ ಈ ಎಲ್ಲ ಸೌಕರ್ಯ ನೀಡಬೇಕೆಂಬುದು ಹೊಳೆದಿದ್ದು. ಸಾಮಾನ್ಯವಾಗಿ ಶ್ರೀಮಂತ ವರ್ಗದ ಜನತೆ ಬಳಸುವ ಕಾರುಗಳಲ್ಲಿ ಎಲ್ಲ ರೀತಿಯ ತಂತ್ರಜ್ಞಾನ ಅಳವಡಿಕೆಯಾಗಿತ್ತು. ಆದರೆ ಕಾರು ಬಳಸಲು ಲಿಂಗ ತಾರತಮ್ಯ ಇಲ್ಲವಲ್ಲ. ಮಹಿಳೆ, ಪುರುಷ ಯಾರು ಬೇಕಾದರೂ ಚಾಲನೆ ಮಾಡಬಹುದಾದ ಸ್ವಾತಂತ್ರ್ಯವಿದೆ. ಆದರೆ ಬಹುಸಂಖ್ಯಾತ ಮಹಿಳೆಯರು ಮಧ್ಯಮ ವರ್ಗದವರೇ ಆದ್ದರಿಂದ ಕಾರು ಕೊಳ್ಳುವ ಶಕ್ತಿಯೂ ಇರುವುದಿಲ್ಲ.
ಸುಖ ಪಡೆಯುವ ಅವಕಾಶವೂ ಇರುವುದಿಲ್ಲ. ಹಾಗಾಗಿ ಕಳಪೆ ತಂತ್ರಜ್ಞಾನಗಳಿರುವ ಸ್ಕೂಟರ್‌ಗಳನ್ನೇ ಇಷ್ಟು ವರ್ಷಗಳ ಕಾಲ ಸವಾರಿ ಮಾಡುತ್ತ, ಮಾನಿನಿ ಸೌಕರ್ಯ ವಂಚಿತಳಾಗಿದ್ದಾಳೆ. ಆದರೆ 21 ನೇ ಶತಮಾನದ ಆರಂಭದಲ್ಲಿ ಸ್ಕೂಟರ್‌ಗಳಲ್ಲೂ ಹೊಸ ತಂತ್ರಜ್ಞಾನ ಅಳವಡಿಸುವ ಕ್ರಾಂತಿ ಯುಗ ಇದೀಗ ಭಾರತದಲ್ಲಿ ಪ್ರಾರಂಭಗೊಂಡಿದೆ. ಯೂರೋಪ್ ಹಾಗೂ ಅಮೆರಿಕಗಳಲ್ಲಿ ಈಗಾಗಲೇ ಸಾಕಷ್ಟು ಸಾಮಾನ್ಯವಾಗಿರುವ ತಂತ್ರಜ್ಞಾನ ಸೌಲಭ್ಯಗಳು ಭಾರತಕ್ಕೂ ಕಾಲಿಡಲಾರಂಭಿಸಿವೆ. ಸೌಲಭ್ಯ ವಂಚಿತ ಸ್ಕೂಟರ್‌ಗಳನ್ನೇ ಬಂಡವಾಳವಾಗಿಸಿಕೊಂಡ ಹೀರೋ ತನ್ನ ಪ್ಲೆಷರ್ ಸ್ಕೂಟರ್ ಮೂಲಕ ಈ ರೀತಿ ಜಾಹಿರಾತು ಕೊಟ್ಟಿದ್ದು ಇದೇ ಉದ್ದೇಶಕ್ಕಾಗಿ. ಹಾಗಾದರೆ ಮಾನಿನಿಗೆ ಸ್ಕೂಟರ್‌ನಲ್ಲಿ ಈಗ ಏನೇನೆಲ್ಲ ಮೋಜಿದೆ.
ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್
ಹಿಂದಿನ ಕಾಲದ ಸ್ಕೂಟರ್‌ಗಳೆಂದರೆ ವೆಸ್ಪಾ, ಆ ನಂತರ ಬಜಾಜ್‌ನ ಚೇತಕ್ ಮತ್ತು ಸೂಪರ್. ವಿಶ್ವದ ಎಲ್ಲ ಕಡೆ ಈ ಸ್ಕೂಟರ್‌ಗಳನ್ನು ಮಹಿಳೆಯರೇ ಬಳಸುತ್ತಿದ್ದರೂ, ಭಾರತದಲ್ಲಿ ಮಾತ್ರ ದುರಂತ ಎಂದರೆ ಈ ಸ್ಕೂಟರ್‌ಗಳು ಮಹಿಳೆಗೆ ಸಿಗಲೇ ಇಲ್ಲ.
ವಿಚಿತ್ರವೆಂಬಂತೆ ಸ್ಕೂಟರ್ ಅನೇಕ ವರ್ಷಗಳವರೆಗೂ ಪುರುಷರ ಸ್ವತ್ತೇ ಆಗಿತ್ತು. ಆದರೆ 80 ರ ದಶಕದ ಅಂತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೈನೆಟಿಕ್ ಜಪಾನ್‌ನ ಹೋಂಡಾ ಜತೆ ಸಹಭಾಗಿತ್ವದಲ್ಲಿ ಕೈನೆಟಿಕ್ ಹೋಂಡಾ ಸ್ಕೂಟರ್ ಬಿಡುಗಡೆ ಮಾಡಿದ್ದು, ಮಹಿಳೆಯರ ಪಾಲಿಗೆ ಇಂದಿಗೂ ನೆನೆಸಿಕೊಳ್ಳಬೇಕಾದ ಸಂದರ್ಭ. ಗಿಯರ್ ಇಲ್ಲದ, ಆಧುನಿಕ ನೋಟದ ಈ ಸ್ಕೂಟರ್ ಕ್ಷಣ ಮಾತ್ರದಲ್ಲಿ ಸೂಪರ್ ಹಿಟ್ ಆಯಿತು. ಮಹಿಳೆಗೆ ಸ್ಕೂಟರ್ ಮೇಲೂ ಹಕ್ಕು ಬಂದಿತು. ಮಹಿಳೆಗೆ ಅನುಕೂಲಕಾರಿಯಾದ ಸೆಲ್ಫ್ ಸ್ಟಾರ್ಟ್ ವ್ಯವಸ್ಥೆ ಇದ್ದದ್ದೂ ವಿಶೇಷ.
ಆದರೆ, ಕೈನೆಟಿಕ್ ಹೋಂಡಾದಲ್ಲಿ ಚಕ್ರಗಳಿಗೆ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಇಲ್ಲದೇ ಇದ್ದದ್ದು ಕೊರತೆ. ಈಗ ಬಹುತೇಕ ಸ್ಕೂಟರ್‌ಗಳಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಇದೆ. ಇದನ್ನು ಮೊಟ್ಟ ಮೊದಲು ಪರಿಚಯಿಸಿದ್ದು ಹೋಂಡಾ ತನ್ನ ಏವಿಯೇಟರ್ ಮೂಲಕ. ನಂತರ ಬಜಾಜ್‌ನ ವೇವ್, ಹೀರೋ ಹೋಂಡಾದ ಪ್ಲೆಷರ್, ಸುಜುಕಿ ಆಕ್ಸಿಸ್‌ಗಳಲ್ಲಿ ಅಳವಡಿತಗೊಂಡಿತು. ಈಗ ಎಲ್ಲ ಆಧುನಿಕ ಸ್ಕೂಟರ್‌ಗಳಲ್ಲಿ ಇಲ್ಲದೇ ಹೋದರೂ ಬಹುತೇಕ ಸ್ಕೂಟರ್‌ಗಳಲ್ಲಿ ಈ ಸೌಲಭ್ಯವಿದೆ.
ಸೆಲ್ಫ್ ಸ್ಟಾರ್ಟ್ ಕಾಮನ್
ಸ್ಕೂಟರ್‌ಗಳಲ್ಲಿಸೆಲ್ಫ್ ಸ್ಟಾರ್ಟ್ ಇದೆ ಎಂದು ಹೇಳಲೇ ಬೇಕಿಲ್ಲ. ಅಷ್ಟು ಸಾಮಾನ್ಯವಾಗಿದೆ. ಆದರೆ ಇಂದಿಗೂ ಬಹುತೇಕ ಬೈಕ್‌ಗಳಲ್ಲಿ ಸೆಲ್ಫ್ ಸ್ಟಾರ್ಟ್ ವ್ಯವಸ್ಥೆ ಇರುವುದಿಲ್ಲ ಎಂಬುದನ್ನು ಗಮನಸಿಬಹುದು. ಈ ವಿಚಾರದಲ್ಲಿ ಮಾನಿನಿ ಲಕ್ಕಿ. ಇಂದಿನ ಎಲ್ಲ ಸ್ಕೂಟರ್‌ಗಳಲ್ಲಿ ಸೆಲ್ಫ್ ಸ್ಟಾರ್ಟ್ ವ್ಯವಸ್ಥೆ ಇದೆ.
ಡಿಸ್ಕ್ ಬ್ರೇಕ್
ಸ್ಕೂಟರ್‌ಗೆ ಸುರಕ್ಷೆ ಜತೆಗೆ ಒಳ್ಳೆಯ ಸೌಂದರ್ಯವನ್ನು ನೀಡುವ ಸಾಧನವೂ ಇದು. ಮಾನಿನಿಯ ಸೌಂದರ್ಯವನ್ನು ಇಮ್ಮಡಿ ಮಾಡುವ ಸೈ ಫೈ ಕಾಸ್ಮೆಟಿಕ್ ಸಾಧನ!
ಭಾರತದಲ್ಲಿಂದು ಹೋಂಡಾ ಏವಿಯೇಟರ್, ಸುಜುಕಿ ಆಕ್ಸಸ್, ಹೀರೋ ಪ್ಲೆಷರ್, ಮಹಿಂದ್ರಾ ಡ್ಯೂರೋ ಸ್ಕೂಟರ್‌ಗಳಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವಿದೆ. ಆದರೆ ಇದು ಸ್ಟ್ಯಾಂಡರ್ಡ್ ಅಲ್ಲ. ಆಯ್ಕೆಯ ಅವಕಾಶವಿರುತ್ತದೆ. ಕೆಲವು ಬೈಕ್‌ಗಳಲ್ಲಿ ಡಿಸ್ಕ್ ಬ್ರೇಕ್ ಸ್ಟ್ಯಾಂಡರ್ಡ್ ಆಗಿರುವಂತೆ ಸ್ಕೂಟರ್‌ಗಳಲ್ಲೂ ಆಗಬೇಕಿದೆ.
ಸ್ಟೆಪ್ನಿ ಟಯರ್
ಈ ವಿಶೇಷ ವ್ಯವಸ್ಥೆ ಮಾತ್ರ ಬಹುತೇಕ ಯಾವ ಸ್ಕೂಟರ್‌ನಲ್ಲೂ ಇಲ್ಲದೇ ಇರುವುದೇ ಕೊರತೆ! ಹೌದು, ಹೋಂಡಾದ ಆಕ್ಟಿವಾ ಸ್ಕೂಟರ್ ಬಿಟ್ಟರೆ ಬೇರಾವ ಸ್ಕೂಟರ್‌ನಲ್ಲೂ ಇಲ್ಲ. ಹಿಂಬದಿಯಲ್ಲಿ ಜೋಡಿಸಿರುವ ಟಯರ್‌ನ್ನು, ಚಕ್ರ ಪಂಕ್ಚರ್ ಆದ ಸಂದರ್ಭದಲ್ಲಿ ಬಳಸಿಕೊಳ್ಳಬಹುದು. ಅಲ್ಲದೆ, ಸ್ಕೂಟರ್‌ಗೆ ವಿಶೇಷವಾದ ಅಂದ, ನಿಲುವನ್ನು ನೀಡಬಲ್ಲ ಶಕ್ತಿಯೂ ಇದೆ.
ಮೊಬೈಲ್ ಚಾರ್ಜರ್
ಹುಡುಗಿಯರು ಈಗ ಸ್ಮಾರ್ಟ್ ಆಗಿದ್ದಾರೆ. ಮೊಬೈಲ್ ಫೋನ್ ಬಳಕೆ ಹೆಚ್ಚಾಗಿದೆ. ಹಾಗಾಗಿ ಮನೆಯಲ್ಲಿ ಇಲ್ಲದಿದ್ದಾಗ ಮೊಬೈಲ್‌ನ ಚಾರ್ಜ್ ಮುಗಿದರೆ? ಹುಡುಗಿ ಹೆದರುವುದೇ ಇಲ್ಲ. ಅವಳ ಸ್ಕೂಟರ್‌ನಲ್ಲಿ ಈಗ ಮೊಬೈಲ್ ಚಾರ್ಜರ್ ಇದೆ. ಸ್ಕೂಟರ್‌ನ ಇಗ್ನಿಷನ್ ಆನ್ ಮಾಡಿ ಮೊಬೈಲ್ ಚಾರ್ಜ್ ಮಾಡೇ ಬಿಡುತ್ತಾಳೆ. ಆದರೆ ಈ ಸಾಧನ ಸ್ಕೂಟರ್‌ಗಳಲ್ಲಿ ಸಾಮಾನ್ಯವಲ್ಲ. ಮಹಿಂದ್ರ ಡ್ಯೂರೋ, ಟಿವಿಎಸ್ ವೇಗೋ, ಹೀರೋ ಪ್ಲೆಷರ್‌ನಲ್ಲಿ ಮೊಬೈಲ್ ಚಾರ್ಜರ್ ಇದೆ. ಟಿವಿಎಸ್ ಸ್ಕೂಟಿಯಲ್ಲೂ ಇತ್ತೀಚೆಗೆ ಅಳವಡಿಸಿಕೊಳ್ಳಲಾಗಿದೆ.
ಒಂದು ವೇಳೆ ಈ ಸೌಲಭ್ಯ ಇಲ್ಲದೇ ಇದ್ದರೂ ಚಿಂತೆ ಬೇಡ. ಯಾವುದೇ ಸ್ಕೂಟರ್‌ಗೆ ಅಳವಡಿಸಿಕೊಳ್ಳಬಲ್ಲ ಮೊಬೈಲ್ ಫೋನ್ ಚಾರ್ಜರ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ.
ಅಂಡರ್ ಸೀಟ್ ಸ್ಟೋರೇಜ್
ಮಹಿಳೆಗೆ ಅತ್ಯಂತ ಕೆಲಸಕ್ಕೆ ಬರುವ ಸೌಲಭ್ಯ. ಸೀಟ್‌ನ ಕೆಳಭಾಗ ದಂಡವಾಗದಂತೆ ಬೇಕಾದ ಸಾಮಗ್ರಿಗಳನ್ನು ಇಟ್ಟುಕೊಳ್ಳಬಲ್ಲ ಜಾಗವನ್ನು ಸೀಟ್ ಕೆಳಗೆ ಒದಗಿಸಲಾಗಿರುತ್ತದೆ. ಗರಿಷ್ಟ 30 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಸೌಲಭ್ಯ ಈಗ ಸ್ಕೂಟರ್‌ನಲ್ಲಿ ಇದೆ. ಇದರ ಜತೆ ಸ್ಕೂಟರ್‌ನ ಮುಂಭಾಗದಲ್ಲಿ ಜೋಡಿಕೊಳ್ಳಬಹುದಾದ ಬಾಕ್ಸ್ ಸಹ ಲಭ್ಯವಿದೆ. ಸಣ್ಣ ಪುಟ್ಟ ವಸ್ತುಗಳು, ದಾಖಲೆಗಳು, ಮೊಬೈಲ್ ಫೋನ್ ಮುಂತಾದವುಗಳನ್ನು ಇಡಬಲ್ಲ ಸೌಕರ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.