ADVERTISEMENT

ಮುಗ್ಗಟ್ಟಿನ ಕಾಲಕ್ಕೆ ಅಗ್ಗದ ಕಾರು

ನೇಸರ ಕಾಡನಕುಪ್ಪೆ
Published 24 ಜುಲೈ 2013, 19:59 IST
Last Updated 24 ಜುಲೈ 2013, 19:59 IST
ಮುಗ್ಗಟ್ಟಿನ ಕಾಲಕ್ಕೆ ಅಗ್ಗದ ಕಾರು
ಮುಗ್ಗಟ್ಟಿನ ಕಾಲಕ್ಕೆ ಅಗ್ಗದ ಕಾರು   

ವಿಶ್ವದ ಅತಿ ಕಡಿಮೆ ಬೆಲೆಯ ಕಾರ್ ಎಂಬ ಹೆಗ್ಗಳಿಕೆಯ ಟಾಟಾ ನ್ಯಾನೊ ಕಾರ್‌ಗೆ ದೊಡ್ಡ ಮಾರುಕಟ್ಟೆಯೇ ಇದೆ. ಹಾಗೆಯೇ ವಿಶ್ವದ ಅತಿ ಅಗ್ಗದ ಬೆಲೆಯ ಕಾರ್ ಭಾರತದಲ್ಲಿ ತಯಾರಾಗುತ್ತಿದೆ ಎಂಬ ಹೆಮ್ಮೆ ಭಾರತೀಯರಿಗೂ ಇದೆ. ಆದರೆ ಈ ಖ್ಯಾತಿಯಲ್ಲಿ ಪಾಲುದಾರರಾಗಲು ಅನೇಕ ಜಾಗತಿಕ ವಾಹನ ದೈತ್ಯ ಕಂಪೆನಿಗಳು ಸಿದ್ಧವಾಗುತ್ತಿವೆ. ನ್ಯಾನೊಗೆ ಪೈಪೋಟಿ ನೀಡಲು ಮೂರ‌್ನಾಲ್ಕು ಕಾರ್‌ಗಳು ಭಾರತದ ರಸ್ತೆಗೆ ಇಳಿಯುವ ಸಿದ್ಧತೆಯಲ್ಲಿವೆ.

ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಟಾಟಾ ನ್ಯಾನೊಗೆ ಪ್ರತಿಸ್ಪರ್ಧಿಯಾಗಿ ನಿಸಾನ್ ತನ್ನದೊಂದು ಕಾರ್ ರೂಪಿಸುವ ಕೆಲಸವನ್ನು ಮುಗಿಸೇಬಿಟ್ಟಿದೆ. ಟಾಟಾ ನ್ಯಾನೊ ಕಾರ್‌ನ ಬೆಲೆ 1.50 ಲಕ್ಷ ರೂಪಾಯಿಂದ 2.20 ಲಕ್ಷ ರೂಪಾಯಿಗಳಾಗುತ್ತದೆ. ಆದರೆ ನಿಸಾನ್ ಕೊಂಚ ಹೆಚ್ಚು ಬೆಲೆಗೆ ನ್ಯಾನೋಗಿಂತ ಹೆಚ್ಚು ಶಕ್ತಿಶಾಲಿಯಾದ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಹೊರಟಿದೆ.

ಈ ಕಾರಿನ ಬೆಲೆ ಸುಮಾರು 2.40 ಲಕ್ಷ ರೂಪಾಯಿಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಡಟ್ಸನ್ ಹೆಸರಿನ ಈ ಕಾರ್ ಅತಿ ಕಡಿಮೆ ಬೆಲೆಯ ಕಾರ್ ಮಾತ್ರವೇ ಅಲ್ಲ, ಭಾರತದಲ್ಲಿ ಟಾಪ್ ಎಂಡ್ ಕಾರ್‌ಗಳು ಹೊಂದಿರುವ ಗುಣಮಟ್ಟವನ್ನೂ ಒಳಗೊಂಡಿರುವ ಕಾರ್. ಹಾಗಾಗಿ ಟಾಟಾ ನ್ಯಾನೊ ಏಕಚಕ್ರಾಧಿಪತ್ಯಕ್ಕೆ ಡಟ್ಸನ್ ತೆರೆ ಎಳೆದು ತಾನೂ ಪಾಲು ಪಡೆಯಲಿದೆಯೇ ಎಂಬ ಕುತೂಹಲ ವಾಹನ ಲೋಕದಲ್ಲಿ ಮನೆ ಮಾಡಿದೆ.

ನಿಸಾನ್ ಡಟ್ಸನ್
ನಿಸಾನ್‌ನ ಡಟ್ಸನ್ ಎಂದರೆ ದೊಡ್ಡ ಹೆಸರು. ಜಪಾನ್ ಮೂಲದ ನಿಸಾನ್ ಕಂಪೆನಿಯ ಡಟ್ಸನ್ ಕಾರ್‌ಗಳೆಂದರೆ ನಮ್ಮಲ್ಲಿ ಮಾರುತಿ 800 ಇದ್ದ ಹಾಗೆ. ಅತಿ ಕಡಿಮೆ ಬೆಲೆಗೆ ಕಾರ್ ನೀಡಿ ಪ್ರಸಿದ್ಧಿ ಗಳಿಸುವ, ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಕೆಲಸವನ್ನು ನಿಸಾನ್ ಸಹ ಜಪಾನ್‌ನಲ್ಲಿ ಅನೇಕ ವರ್ಷಗಳ ಹಿಂದೆಯೇ ಮಾಡಿದೆ. ಸುಮಾರು 4 ಅವತರಣಿಕೆಗಳಲ್ಲಿ ಡಟ್ಸನ್ ಜಪಾನ್‌ನ ರಸ್ತೆಗಳಲ್ಲಿ ಸಂಚರಿಸುತ್ತಿದೆ.

ಅದರಲ್ಲಿ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್‌ಗಳೂ ಸೇರಿವೆ. ಮುಂದಿನ ಮೂರು ವರ್ಷಗಳಲ್ಲಿ ನಿಸಾನ್ 3 ಹೊಸ ಮಾದರಿ ಡಟ್ಸನ್‌ಗಳನ್ನು ಹೊರಬಿಡಲಿದೆ. ಇವುಗಳ ಬೆಲೆ 2.40 ಲಕ್ಷ ರೂಪಾಯಿಯಿಂದ ಆರಂಭವಾಗಿ 4 ಲಕ್ಷ ರೂಪಾಯಿಗಳಷ್ಟಿರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಂದರೆ ಇದು ಸವಾಲೊಡ್ಡಲಿರುವುದು ಕೇವಲ ನ್ಯಾನೋಗಷ್ಟೇ ಅಲ್ಲ. ಮಾರುತಿ ಕೂಡಾ ಸ್ಪರ್ಧೆಗೆ ಸಿದ್ಧವಾಗಬೇಕಿದೆ.

ಜಪಾನ್‌ನಲ್ಲಿ 1931ರಷ್ಟು ಹಿಂದೆಯೇ ಡಾಟ್ ಮೋಟಾರ್ ಕಂಪೆನಿ ತಯಾರಿಸುತ್ತಿದ್ದ ವಾಹನವೇ ಈ ಡಟ್ಸನ್. ಆಗಲೇ ಇದು ಅತಿ ಚಿಕ್ಕ ಕಾರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 1934ರಲ್ಲಿ ನಿಸಾನ್ ಕಂಪೆನಿ ಡಾಟ್ ಮೋಟಾರ್ಸ್ ಅನ್ನು ಕೊಂಡುಕೊಂಡ ಮೇಲೆ ಅನೇಕ ಉತ್ತಮ ಆವೃತ್ತಿಗಳು ಹೊರಬಂದವು. ಡಟ್ಸನ್‌ನ ಪ್ರಸಿದ್ಧಿ ಕೂಪ್ ಎಂಬ ಮಾದರಿಯಲ್ಲೇ ಹೆಚ್ಚು.

ADVERTISEMENT

ಅಂದರೆ ತೆರೆದ ಮಾದರಿಯ ಸೆಡಾನ್ ಕಾರ್. ಇವನ್ನು ಕನ್ವರ್ಟಿಬಲ್ ಕಾರ್‌ಗಳೆಂದೂ ಕರೆಯುತ್ತಾರೆ. ಆದರೆ ನಿಸಾನ್ ನಂತರ ಡಟ್ಸನ್ ಅನ್ನು ಹ್ಯಾಚ್‌ಬ್ಯಾಕ್ ಆಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಭಾರತದ ರಸ್ತೆಗೆ ಇಳಿಯುತ್ತಿರುವ ಡಟ್ಸನ್ ಹ್ಯಾಚ್‌ಬ್ಯಾಕ್ ಕಾರ್. ಇದಕ್ಕೆ 800 ಸಿಸಿ ಎಂಜಿನ್ ಇರುತ್ತದೆ. ಶಕ್ತಿಯ ವಿಷಯಕ್ಕೆ ಬಂದರೆ ಇದು ಟಾಟಾ ನ್ಯಾನೊಗಿಂತ ಅನೇಕ ಹೆಜ್ಜೆ ಮುಂದೆ ಇದೆ.

ಟಾಟಾ ನ್ಯಾನೊದಲ್ಲಿ ಎಸಿ, ಮುಂತಾದ ಸೌಲಭ್ಯಗಳಿದ್ದರೂ, ಪವರ್‌ಸ್ಟೀರಿಂಗ್ ಇಲ್ಲ. ಆದರೆ ಡಟ್ಸನ್‌ನಲ್ಲಿ ಪವರ್ ಸ್ಟೀರಿಂಗ್ ಜತೆಗೆ ಪವರ್ ವಿಂಡೋಸ್, ಆಡಿಯೊ ಸಿಸ್ಟಂನಂತಹ ಸೌಲಭ್ಯವೂ ಇರುತ್ತದೆ. ಅಲ್ಲದೆ ಮಾರುತಿಯ ಪ್ರಸಿದ್ಧ ಮಾರುತಿ 800 ಕಾರ್ ಸಹ ಉತ್ಪಾದನೆ ನಿಲ್ಲಿಸಿದ್ದು, ಆಲ್ಟೊ 800 ಹೆಸರಲ್ಲಿ ಹೊರಬರುತ್ತಿರುವ ಕಾರಣ, ಆಲ್ಟೊಗೂ ಕಡಿಮೆ ಬೆಲೆಯಲ್ಲಿ ಕಾರ್ ನೀಡುವ ಇರಾದೆ ನಿಸಾನ್‌ದಾಗಿದೆ.

2.40 ಲಕ್ಷ ರೂಪಾಯಿಗೆ ಕಾರ್ ಅನ್ನು ನೀಡುವುದಾಗಿ ಘೋಷಿಸಲಾಗಿದೆಯಾದರೂ, ಎಲ್ಲ ತೆರಿಗೆಗಳನ್ನು ಒಳಗೊಂಡು ಡಟ್ಸನ್‌ನ ಬೆಲೆ 3.5 ಲಕ್ಷ ರೂಪಾಯಿ ಆಗಬಹುದು. ನಿಸಾನ್‌ನ ಕಾರೊಂದು ಇಷ್ಟು ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವುದೇ ಅನೇಕರಿಗೆ ಸಂತೋಷ ತರುವ ವಿಚಾರ.
ಸಾಮಾನ್ಯವಾಗಿ ಕಾರ್ ಒಂದರ ಆಯಸ್ಸನ್ನು ಅದು ಓಡುವ ದೂರ ಹಾಗೂ ಅದರ ವಯಸ್ಸಿನ ಮೇಲೆ ನಿರ್ಧರಿಸಲಾಗುತ್ತದೆ.

ಉದಾಹರಣೆಗೆ 3 ಲಕ್ಷ ಕಿಲೋಮೀಟರ್ ಅಥವಾ 10 ವರ್ಷ ಎಂಬುದು ಇಂಥದ್ದೊಂದು ಲೆಕ್ಕಾಚಾರ. ಈ ಅವಧಿಯ ನಂತರವೂ ಕಾರ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅದು ಹೆಚ್ಚುವರಿ ಆಯಸ್ಸು. ಬಳಕೆದಾರರು ತಮ್ಮ ವಾಹನವನ್ನು ಎಚ್ಚರಿಕೆಯಿಂದ ನಿರ್ವಹಿಸಿದರೆ ಮೂರು ಲಕ್ಷ ಕಿಲೋಮೀಟರ್‌ಗಳ ಚಾಲನೆಯ ನಂತರವೂ ಕಾರ್ ಉತ್ತಮ ಸ್ಥಿತಿಯಲ್ಲಿರುತ್ತದೆ. ಆದರೆ ಸಾಮಾನ್ಯವಾಗಿ ಈ ಅವಧಿಯ ನಂತರ ಕಾರ್ ಅನ್ನು ರಸ್ತೆಯಿಂದ ಹೊರಗಿಡುವುದೇ ಉತ್ತಮ ಎಂಬುದು ತಜ್ಞರ ನಿಲುವು.

ಈ ಲೆಕ್ಕಾಚಾರ ಟಾಟಾ ನ್ಯಾನೊ ಅಥವಾ ನಿಸಾನ್ ಡಟ್ಸನ್‌ಗೂ ಅನ್ವಯಿಸುತ್ತದೆಯೇ ಎಂಬುದೇ ಇಲ್ಲಿನ ಪ್ರಶ್ನೆ. ಈ ಎರಡೂ ಕಾರ್‌ಗಳ ಗುಣಮಟ್ಟವನ್ನು ಅವಲೋಕಿಸಿದರೆ, 10 ವರ್ಷಗಳವರೆಗೆ ಈ ಕಾರ್‌ಗಳನ್ನು ಓಡಿಸುವುದು ಕಷ್ಟ ಸಾಧ್ಯ. ಏಕೆಂದರೆ ಈ ಕಾರ್‌ಗಳಲ್ಲಿ ಬಳಕೆಯಾಗಿರುವ ಹೊರಗವಚ ಕಡಿಮೆ ಗುಣಮಟ್ಟದ್ದು.

ತುಂಬಾ ತೆಳುವಾದ ತಗಡಿನಿಂದ ತಯಾರಾದ ಕಾರ್‌ಗಳಿವು. ಇವು ಬೇಗ ಹಾಳಾಗುವ ಸಾಧ್ಯತೆ ಹೆಚ್ಚು. ಇದರ ಎಂಜಿನ್, ಎಲೆಕ್ಟ್ರಿಕಲ್ಸ್‌ನಲ್ಲೂ ಇದೇ ಸಮಸ್ಯೆಯಿದೆ. ಹಾಗಾಗಿ ಈ ಕಾರ್‌ಗಳಿಂದ ತುಂಬ ಹೆಚ್ಚಿನದನ್ನು ನಿರೀಕ್ಷಿಸದೇ ಗರಿಷ್ಠ 5 ವರ್ಷದ ಬಳಕೆಗಾಗಿ ಎಂದು ಈ ಕಾರ್‌ಗಳನ್ನು ಕೊಂಡುಕೊಂಡರೆ ಒಳ್ಳೆಯದು.

ಡಟ್ಸನ್ ತಾಂತ್ರಿಕ ವಿವರ
ಇದರ ಎಂಜಿನ್ ಮಾಹಿತಿಯ ಬಗ್ಗೆ ಪೂರ್ಣ ಮಾಹಿತಿ ಇನ್ನೂ ಹೊರಬಿದ್ದಿಲ್ಲ. 1.2 ಲೀಟರ್ ಪೆಟ್ರೋಲ್ ಎಂಜಿನ್, 75 ಬಿಎಚ್‌ಪಿ ಶಕ್ತಿ, 104 ಎನ್‌ಎಂ ಟಾರ್ಕ್ ಅನ್ನು ಇದರ ಎಂಜಿನ್ ಹೊಂದಿರುತ್ತದೆ. ಕಾರ್‌ಗೆ ಗಟ್ಟಿ ಮುಟ್ಟಾದ ದೇಹ ಇರಲಿದೆ. ಕಾರ್‌ನ ಒಟ್ಟಾರೆ ಉದ್ದ 3785 ಎಂಎಂ, ಅಗಲ 1635 ಎಂಎಂ, ಎತ್ತರ 1485 ಎಂಎಂ ಇರಲಿದೆ. 5 ಮಂದಿ ಆರಾಮಾಗಿ ಕೂರಬಲ್ಲ ಕಾರ್ ಇದು.

13 ಇಂಚುಗಳ ಟಯರ್ ಇರಲಿದೆ. 5 ಗಿಯರ್‌ಗಳ ಗಿಯರ್‌ಬಾಕ್ಸ್ ಹೊಂದಲಿದ್ದು, ಬಂಪರ್‌ಗಳು ದೇಹದ ಬಣ್ಣವನ್ನೇ ಹೊಂದಲಿರುವುದು ವಿಶೇಷ. ಇದು ಸ್ಟಾಂಡರ್ಡ್ ಸಹ ಆಗಲಿದೆ. ಕ್ಲೈಮೇಟ್ ಕಂಟ್ರೋಲ್ ಇಲ್ಲದ ಎಸಿ, ಎಲ್ಲ ಕಿಟಕಿಗಳಿಗೆ ಪವರ್ ವಿಂಡೋಸ್, ರಿಮೋಟ್ ಬೂಟ್, ರಿಮೋಟ್ ಫ್ಯುಯೆಲ್ ಫಿಲ್ಲರ್, ಹಿಂಭಾಗದಲ್ಲಿ ವೈಪರ್, ಹಿಂಭಾಗದಲ್ಲಿ ಡೀಫ್ರಾಸ್ಟರ್.

ಈ ರೀತಿಯ ತಾಂತ್ರಿಕ ಆಕರ್ಷಣೆಗಳ ಜತೆಗೆ ಕಾರ್‌ನ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಆಕರ್ಷಕ ಕಾಸ್ಮೆಟಿಕ್ ಆಕರ್ಷಣೆಗಳನ್ನೂ ನೀಡಲಾಗಿದೆ. ನಿಸಾನ್ ಕಾರ್‌ಗಳೆಂದರೆ ಅವು ಸರಳತೆಗೆ ಹೆಸರು ಮಾಡಿದ್ದು. ಹಾಗಾಗಿ ತೀರಾ ತಳುಕು ಬಳುಕಿನ ಸ್ಟಿಕರಿಂಗ್ ಅನ್ನು ಗ್ರಾಹಕ ನಿರೀಕ್ಷಿಸಲೇಬಾರದು.

ರೆನೊ ಡಾಸಿಯಾ
ನಿಸಾನ್‌ನ ಜತೆಗೆ ರೆನೊ ಸಹ ತನ್ನ ಕಡಿಮೆ ಬೆಲೆಯ ಕಾರ್ ಅನ್ನು ಭಾರತದಲ್ಲಿ ಹೊರಬಿಡಲು ಸಿದ್ಧತೆ ನಡೆಸಿದೆ. ಇದರ ಬೆಲೆ ಎರಡರಿಂದ ನಾಲ್ಕು ಲಕ್ಷ ರೂಪಾಯಿಗಳ ಮಧ್ಯೆ ಇರಬೇಕೆಂಬುದು ಕಂಪೆನಿಯ ನಿಲುವು. ಈಗಾಗಲೇ ಮಾರುಕಟ್ಟೆಯಲ್ಲಿರುವ ರೆನೊ ಪಲ್ಸ್ ಸದ್ಯಕ್ಕೆ ಕಡಿಮೆ ಬೆಲೆಗೆ ಸಿಗುತ್ತಿರುವ ಹ್ಯಾಚ್‌ಬ್ಯಾಕ್ ಕಾರ್. ಈಗ ಇದಕ್ಕೂ ಕಡಿಮೆ ಬೆಲೆಯ ಕಾರ್ ಅನ್ನು ನೀಡುವ ಮೂಲಕ ಕಡಿಮೆ ಬೆಲೆ ಕಾರ್ ಮಾರುಕಟ್ಟೆಯಲ್ಲಿ ರೆನೋ ಪ್ರಬಲವಾಗುವ ಯೋಜನೆ ರೂಪಿಸಿದೆ.

ಡಾಸಿಯಾ ಎಂಬ ಹೆಸರಿನ ಈ ಕಾರ್ ಅನ್ನು ಭಾರತದ ರಸ್ತೆಗಿಳಿಸುವ ಪ್ರಯತ್ನ ನಡೆದಿವೆ. ಯುರೋಪ್‌ನ ಮೊರಾಕೊ ಮತ್ತು ರೊಮಾನಿಯಾದಲ್ಲಿ ಈ ಕಾರ್ ಈಗಾಗಲೇ ಪ್ರಸಿದ್ಧಿ ಪಡೆದಿದೆ. ಇದನ್ನೂ ಭಾರತದಲ್ಲಿ ಹೊರಬಿಟ್ಟು ಪ್ರತಿಸ್ಪರ್ಧೆ ನೀಡುವುದು ಉದ್ದೇಶ. ಈ ಕಾರ್ ಸಹ 3 ಲಕ್ಷ ರೂಪಾಯಿಯ ಆಜುಬಾಜಿನಲ್ಲೇ ಗ್ರಾಹಕರ ಕೈಗೆ ಸಿಗಲಿರುವುದು ವಿಶೇಷ.

ಫೋಕ್ಸ್ ವ್ಯಾಗನ್ ಟ್ಯಾಂಟಸ್
ಇದೇ ರೀತಿ ಫೋಕ್ಸ್ ವ್ಯಾಗನ್ ಸಹ ಟ್ಯಾಂಟಸ್ ಹೆಸರಿನಲ್ಲಿ ಕಾರ್ ಬಿಡುಗಡೆ ಮಾಡುತ್ತಿದೆ. ಫೋಕ್ಸ್‌ವ್ಯಾಗನ್ ಅಂತೂ ಶ್ರೀಮಂತರ ಕಾರ್ ಎಂದೇ ಪ್ರಸಿದ್ಧಿ ಪಡೆದಿದೆ. ಇದೂ ಸಹ ಕಡಿಮೆ ಬೆಲೆಯ ಕಾರ್ ಅನ್ನು ಮಾರುಕಟ್ಟೆಗೆ ಬಿಟ್ಟರೆ ಗ್ರಾಹಕ ಸಂತಸಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಟ್ಯಾಂಟಸ್ ಫೋಕ್ಸ್ ವ್ಯಾಗನ್‌ನ ಜಾಗತಿಕ ಗುಣಮಟ್ಟವನ್ನೂ ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಅದಾವ ರೀತಿಯ ಕ್ರಾಂತಿಗಳಾಗುವುದೋ ಎಂದು ಕಾದು ನೋಡಬೇಕಷ್ಟೇ.

ಫಿಯಟ್ ಇನೊಸೆಂಟಿ
ಫಿಯಟ್ ಕಂಪೆನಿಗೆ ಭಾರತದ ಮಾರುಕಟ್ಟೆ ಹೊಸತೇನೂ ಅಲ್ಲ. ತನ್ನ ಪದ್ಮಿನಿ, 118 ಕಾರ್‌ಗಳು ಅಕ್ಷರಶಃ ಅಂದಿನ ಹಿಂದೂಸ್ತಾನ್ ಮೋಟಾರ್ಸ್‌ನ ಅಂಬಾಸಿಡರ್ ಕಾರ್‌ನ ಜತೆಗೆ ರಸ್ತೆಗಳನ್ನು ಆಳಿದ್ದವು. ಫಿಯಟ್ ಜಾಗತಿಕ ಮಾರುಕಟ್ಟೆಯಲ್ಲಿ 60ರ ದಶಕದಲ್ಲಿ ಹೊರಬಿಟ್ಟಿದ್ದ ಇನೊಸೆಂಟಿ ಕಾರ್, ಈಗ ಭಾರತದ ರಸ್ತೆಗಳ ಮೇಲೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡು ಹೊರಬರಲಿದೆ.

ಇನೊಸೆಂಟಿ ಅತಿ ಸಣ್ಣ ಕಾರ್. 60ರ ದಶಕದಲ್ಲಿ ಇದ್ದ ಹಾಗೆ ಈಗ ಇದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕೇವಲ ನಾಲ್ಕು ಡೋರ್‌ಗಳಿದ್ದ ಕಾರ್ ಅದು. ಈಗ 5 ಡೋರ್‌ಗಳ ಹ್ಯಾಚ್‌ಬ್ಯಾಕ್ ಆಗಿ ಪರಿವರ್ತನೆಗೊಂಡು ಇನೊಸೆಂಟಿ ಭಾರತಕ್ಕೆ ಕಾಲಿಡಲಿದೆ. ಆದರೆ ಕಡಿಮೆಗೆ ಬೆಲೆಗೆ ಈ ವಿದೇಶಿ ಕಾರ್‌ಗಳು ಹೆಚ್ಚು ದಿನವಂತೂ ಕಾರ್‌ಗಳನ್ನು ನೀಡುವುದು ಸಾಧ್ಯವಿಲ್ಲ.

ಏಕೆಂದರೆ ಭಾರತದಲ್ಲಿ ವಿದೇಶಿ ಕಾರ್ ಕಂಪೆನಿಗಳ ಮೇಲಿನ ಉದ್ಯಮ ತೆರಿಗೆ ಅತ್ಯಧಿಕ. ಅಷ್ಟು ಬೆಲೆಯನ್ನು ತೆತ್ತು ಕಡಿಮೆ ಬೆಲೆಗೆ ಕಾರ್ ಕೊಡುವುದು ನಿಜಕ್ಕೂ ಸಾಹಸವೇ ಸರಿ. ಇವರೆಲ್ಲರಿಗೂ ಟಾಂಗ್ ನೀಡಲು ಮಾರುತಿ ಸುಜುಕಿ ಇನ್ನೂ ಯಾವುದೇ ಘೋಷಣೆ ಮಾಡದೇ ಇರುವುದು ಕೊಂಚ ನಿರಾಳ ತಂದಿದೆ. ಮಾರುತಿ ಸುಜುಕಿ ಏನಾದರೂ ಟಾಟಾ ನ್ಯಾನೊ ಮಾದರಿಯ ಕಾರ್ ನೀಡುವುದಾಗಿ ಘೋಷಿಸಿಬಿಟ್ಟಲ್ಲಿ ಇವರೆಲ್ಲರ ಲೆಕ್ಕಾಚಾರಗಳೂ ತಲೆಕೆಳಗೆ ಆದರೂ ಆಗಬಹುದು.
-ನೇಸರ ಕಾಡನಕುಪ್ಪೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.