ADVERTISEMENT

ಮೌನವೇ ಮಾತಾದಾಗ...

ಪ್ರೇಮಪತ್ರ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಪತ್ರ

ಪುರುಷೋತ್ತಮ ಎಸ್.ವಿ.
Published 13 ಫೆಬ್ರುವರಿ 2013, 19:59 IST
Last Updated 13 ಫೆಬ್ರುವರಿ 2013, 19:59 IST
ಮೌನವೇ ಮಾತಾದಾಗ...
ಮೌನವೇ ಮಾತಾದಾಗ...   

ಬಹಳ ದಿನಗಳಿಂದ ನನ್ನಂತರಂಗದಲ್ಲಿ ತುಡಿಯುತ್ತಿದ್ದ ಪಿಸುಮಾತೊಂದನ್ನು ಇಂದು ನಿನ್ನ ಮುಂದಿಡುತ್ತಿದ್ದೇನೆ. ಗೆಳತಿ ಅದೆಷ್ಟೋ ಸಲ ಹೇಳಬೇಕೆಂದುಕೊಂಡು ಎಲ್ಲ ಬಗೆಯ ತಯಾರಿಯನ್ನು ನಡೆಸಿಕೊಂಡು ಬಂದರೂ, ನಾವಿಬ್ಬರು ಎದುರಾಗುತ್ತಿದ್ದಂತೆ ಪ್ರಖರ ಸೂರ್ಯನ ಕಿರಣಕ್ಕೆ ಆವಿಯಾದ ತೇವಾಂಶದಂತೆ ಮನದಲ್ಲಿನ ಮಾತುಗಳು ಅಲ್ಲಿಯೇ ಇಂಗಿಬಿಡುತ್ತಿದ್ದವು. ಹಾಗಂತ ಅದು ನನಗೆ ಭಯ ಎಂದಾಗಲಿ ಸಲ್ಲದ ವಿಷಯವೆಂದಾಗಲಿ ಅನಿಸಿಲ್ಲ. ವಯೋಮಾನಕ್ಕೆ ಸಹಜವಾದ ಭಾವನೆ ಎಂದು ನನ್ನ ಬೆನ್ನನ್ನು ನಾನು ತಟ್ಟಿಕೊಂಡಿದ್ದೆನಾದರೂ ಹೇಳಲು ಮಾತ್ರ....

ಅದೆಷ್ಟೋ ಬಾರಿ ಹೃದಯದಲ್ಲಿ ಅಂಕುರಿಸುವ ಪಿಸುಮಾತುಗಳು ಗಂಟಲನ್ನು ದಾಟಿ ತುಟಿಯವರೆಗೆ ಬಂದರೂ ಹೊರಬೀಳುವಲ್ಲಿ ಸೋತು ಬಿಡುತ್ತವೆ... ಅದೆಷ್ಟೋ ಜನರನ್ನು ನೋಡುತ್ತೇವೆ; ಅದೆಷ್ಟೋ ಜನರೊಂದಿಗೆ ಬೆರೆಯುತ್ತೇವೆ. ಆದರೆ ನಮಗೇ ತಿಳಿಯದಂತೆ ಅದ್ಯಾವುದೋ ಕಾರಣಕ್ಕೆ ತುಂಟ ಮನಸ್ಸು ಇನ್ನೊಂದು ಮನಸ್ಸಿನ ಹಿಂದೆ ಹೆಜ್ಜೆ ಇಡಲಾರಂಭಿಸುತ್ತದೆ. ಅದು ಸರಿ ತಪ್ಪು ಎಂದು ಹೇಳಲು ಬರದಿದ್ದರೂ ಅದು ಅನಿವಾರ್ಯ. ಇಂತಹ ಹುಡುಕಾಟದಲ್ಲಿ ರಾತ್ರಿಯೇ ಹಗಲಾಗುತ್ತದೆ. ಕನಸುಗಳೇ ಆಸರೆ ಎಂಬಂತೆ ನಿಂತು ಒಡನಾಡಿಯ ಹುಡುಕಾಟಕ್ಕೆ ಊರುಗೋಲಾಗುತ್ತವೆ....

`ಏನಾಯ್ತೋ ನಿನಗೆ, ಪ್ರತಿದಿನ ಎದುರು ಕೂತು ಕಿಲಾಡಿಯಂತೆ ಮಾತನಾಡುತ್ತಿದ್ದವನು ಇವತ್ತ್ಯಾಕೆ ಏನೇನೋ ಹೇಳ್ತಿದ್ದೀಯ' ಎನ್ನಬೇಡ. ನಾನು ಹೇಳಬೇಕಾದ ವಿಷಯಕ್ಕೆ ಇದು ಪೀಠಿಕಾರೂಪದ ಪ್ರವೇಶವಷ್ಟೆ. ಒಂದು ದಿನ ನೀನಿರದಿದ್ದರೂ ಏನನ್ನೋ ಕಳೆದುಕೊಂಡ ಅನುಭವ. ಮರುದಿನವೇ ನಿನ್ನ ದರ್ಶನಕ್ಕಾಗಿ ಕಣ್ಣುಗಳು ಹಪಹಪಿಸುತ್ತಿರುತ್ತವೆ. ಅಬ್ಬಾ...! ಇಷ್ಟು ಬರೆಯುವಾಗಲೇ ಬೆವರುತ್ತಿದ್ದೇನೆ. ಸ್ವಲ್ಪ ತಾಳು... ಇನ್ನು ಮುಂದೆ ಪ್ರತಿ ಸಾಲುಗಳೂ ನನ್ನ ಮನದಿಂಗಿತವನ್ನು ಸ್ಪಷ್ಟವಾಗಿ ನಿನ್ನ ಮುಂದಿರಿಸುತ್ತವೆ.

ಸೀಮಾ, ಪ್ರೀತಿ ಹುಟ್ಟಲು ಎರಡು ಅಂಶಗಳು ಕಾರಣವಾಗುತ್ತವೆ, ಇಲ್ಲವೇ ಪ್ರೇಮಾಂಕುರಕ್ಕೆ ಇವು ಪೋಷಣೆಯ ನೀರೆರೆಯುತ್ತವೆ. ಅವೆಂದರೆ ವಯಸ್ಸಿನ ಸಾಧ್ಯತೆಯ ಕಾರಣದ `ಆಕರ್ಷಣೆ', ಇನ್ನೊಂದು ಹೊಂದಿಕೆಯ ಅನ್ಯೋನ್ಯವನ್ನು ಆಶ್ರಯಿಸಿ ಹುಟ್ಟುವ `ಆತ್ಮೀಯತೆ'ಯ ನೆಲೆಯ ಪ್ರೀತಿ. ಆಕರ್ಷಣೆಯ ನೆಲೆಯಲ್ಲಿ ಹುಟ್ಟಿದ ಪ್ರೀತಿ ಬಹುಬೇಗನೆ ಸತ್ವವನ್ನು ಕಳೆದುಕೊಳ್ಳಬಹುದು. ಆದರೆ ಆತ್ಮೀಯ ನೆಲೆಯಿಂದ ಅಂಕುರಿಸಿದ ಪ್ರೀತಿ ಯಶಸ್ಸಿನೋಪಾದಿಯಲ್ಲಿ ಚಿರವಾಗಿ ಉಳಿಯುತ್ತದೆ. ಪ್ರೀತಿಯ ಹುಟ್ಟಿಗೆ ಅನಂತ ಸಾಧ್ಯತೆಗಳಿವೆಯಂತೆ. ಪ್ರೀತಿಯ ಹುಟ್ಟಿಗೆ ಸುಖವೊಂದೇ ಕಾರಣವಲ್ಲ.

ಹೊಸದೊಂದು ಬದುಕಿಗೆ ನಾವಿಬ್ಬರೂ ಮುನ್ನುಡಿಯನ್ನು ಬರೆಯೋಣ. ಇದುವರೆಗಿನ ನನ್ನ ಮಾತಿನ ಫಲಿತಾಂಶ ಎಂದುಕೋ ಈ ಮಾತು, `ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ'. ನನ್ನ ದೇಹದಲ್ಲಿ ಬಿಸಿಯುಸಿರು ಇರುವವರೆಗೂ ನಿನ್ನ ಹೆಸರಿರುತ್ತದೆ ಎಂಬುದನ್ನು ಮತ್ತೆ ನೆನಪಿಸುತ್ತಿದ್ದೇನೆ. ದಯವಿಟ್ಟು ತಪ್ಪಾಗಿ ಭಾವಿಸಬೇಡ ನನ್ನೊಲವೆ.

`ನೀನಿರದ ನಾನು ನೀರಿರದ ಮೀನು'. ಸೀಮಾ.. ಅದೆಷ್ಟೋ ಸಲ ನೀನೆ ಹೇಳುತ್ತಿದ್ದೆ- `ಜಾತಿ, ಧರ್ಮ ಇವು ಹೇಗೆ ನಮ್ಮನ್ನು ಬಂಧಿಸಿ ಬಿಡ್ತಾವೆ ಅಲ್ವೇನೋ?' ಎಂದು. ಹೌದು ಸೀಮಾ, ನಿನ್ನ ಮಾತುಗಳಲ್ಲಿ ವಿಚಾರವಂತಿಕೆ ಇತ್ತು, ಜೊತೆಗೆ ಮಾನವೀಯ ಸ್ಪಂದನವೂ ಇತ್ತು. ಅಂದು ನೀನಾಡಿದ ಈ ಮಾತುಗಳು ನನ್ನಲ್ಲಿ ಬೇರೆಯದೇ ಯೋಚನೆಯನ್ನು ಹುಟ್ಟು ಹಾಕಿಸಿತು.

ಈ ಭೂಮಿಯ ಮೇಲೆ ಇರುವ ಯಾರೂ ಮಾಡಿರದ ಪ್ರೀತಿ ನಮ್ಮದೆಂದಾಗಲಿ, ಐಷಾರಾಮದ ಜೀವನವನ್ನು ನಡೆಸೋಣವೆಂದಾಗಲಿ ನಾ ನಿನಗೆ ಹುಸಿ ಭರವಸೆಯನ್ನು ಕೊಡಲಾರೆ. ಬೇಂದ್ರೆಯವರು ಹೇಳುವಂತೆ `ನಾನು ಬಡವಿ ಆತ ಬಡವ ಒಲುಮೆ ನಮ್ಮ ಬದುಕು' ಎಂಬಂತೆ ಬಾಳ ಬಂಡಿಯ ಎರಡು ಗಾಲಿಗಳಾಗೋಣ. ಸೀಮಾ, ನೀನು ಅಂದು ನಿನ್ನ ಆರೋಗ್ಯದ ಸಂಬಂಧವಾಗಿ ಎರಡು ಸಂಗತಿಗಳನ್ನು ಹೇಳಿದ್ದೆ. ಎರಡೂ ಕೂಡ ಸಿಡಿಲೆರಗುವ ರೀತಿಯವೇ.

ಮೊದಲನೆಯದು ನೀನು ವೈದ್ಯರ ಪರೀಕ್ಷೆಯ ಫಲಿತದ ಆಧಾರದಲ್ಲಿ ಹೇಳಿದ, `ನಿನ್ನ ಹತ್ರ ನಾನು ಒಂದು ವಿಷಯ ಹೇಳ್‌ಬೇಕು... ನನಗೆ ಮಕ್ಕಳಾಗೋದಿಲ್ಲವಂತೆ ಕಣೋ'... ನನ್ನ ವಂಶಚೀಲವನ್ನು ಇನ್ನು ಕೆಲವೇ ವರ್ಷದಲ್ಲಿ ತೆಗೆಯಬೇಕಾಗಬಹುದಂತೆ...' ಎಂದು ಗದ್ಗದಿತ ದನಿಯಲ್ಲಿ ಹೇಳಿ ಸಣ್ಣ ಮಗುವಿನಂತೆ ನನ್ನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದೆ. ನಿನ್ನ ಆ ದುಃಖ ತಾಸಿಗೂ ಮೀರಿ ಕಂಬನಿ ಮಿಡಿಯುವಂತೆ ಮಾಡಿತ್ತು.

ನಿಜ ಸೀಮಾ... ತಾಯ್ತನದ ಪೂರ್ಣತೆಯು ದೊರೆಯುವುದೇ ತನ್ನ ಕರುಳ ಕುಡಿಗೆ ಉಸಿರುಕೊಟ್ಟಾಗ. ಆದರೆ ನಮ್ಮ ಬದುಕು ನಾವಂದುಕೊಂಡಂತೆ ನಡೆಯುವುದಾದರೆ...! ದೃಢಚಿತ್ತದಿಂದ ಹೇಳುತ್ತಿದ್ದೇನೆ, `ನನ್ನೊಲವೇ, ನೀ ನನಗೆ ಮಗು ನಾ ನಿನಗೆ ಮಗು' ಎಂಬ ರೀತಿಯಲ್ಲಿ ಬದುಕನ್ನು ಸಾಗಿಸೋಣ... ಈ ಯೋಚನೆಯು ಬಂದಿದ್ದು ಸಹ ನಿನ್ನ ಕಣ್ಣೀರು
ನನ್ನೆದೆಯನ್ನು ತೋಯಿಸಿದಾಗಲೇ...

ಮಕ್ಕಳಿದ್ದವರಿಗೆ ಅವರ ಮಕ್ಕಳಷ್ಟೇ ಮಕ್ಕಳು. ಆದರೆ ನಾವಿಬ್ಬರು ಇಂತಹ ಸೌಭಾಗ್ಯವನ್ನು ಪಡೆಯದವರಾದರೂ ಎಲ್ಲ ಮಕ್ಕಳನ್ನು ನಮ್ಮ ಮಕ್ಕಳೆಂದೇ ಕಾಣೋಣ. ಬೇರೆಯವರ ಮಕ್ಕಳ ನೋವಿನಲ್ಲಿ ನಮ್ಮ ಮಕ್ಕಳಿಗೆ ತೋರಬಹುದಾದ ಕಾಳಜಿಯನ್ನು ಮೆರೆಯೋಣ. ಇದು ನನ್ನ ದೃಢ ನಿರ್ಧಾರ. ಸೀಮಾ... ಸುಖದಲ್ಲಿ ಕರೆಯದಿದ್ದರೂ ನಮ್ಮವರಲ್ಲದವರು ನಮ್ಮವರಾಗಿಬಿಡುತ್ತಾರೆ; ಆದರೆ ನೋವಲ್ಲಿ ನಮ್ಮವರೂ ಮರೆಯಾಗಿಬಿಡುತ್ತಾರೆ.

ಸಂತಸವನ್ನು ಹಂಚಿಕೊಂಡ ನಮ್ಮವರೂ ಕಣ್ಣಿದ್ದೂ ಕುರುಡರಾಗಿಬಿಡುತ್ತಾರೆ. ಇಲ್ಲವೇ ನಮ್ಮ ದಯನೀಯ ಕೂಗು ಅವರನ್ನು ತಲುಪುವುದೇ ಇಲ್ಲ. ಹೀಗಿರುವಾಗ ನೀನು ನನ್ನನ್ನು ಪ್ರೀತಿಸುವುದರಲ್ಲಾಗಲಿ ನಾನು ನಿನ್ನನ್ನು ಪ್ರೀತಿಸುವುದರಲ್ಲಾಗಲಿ ಯಾವುದೇ ಲೋಪವಿಲ್ಲ ಎಂದು ನನಗನ್ನಿಸುತ್ತದೆ. ಹ್ಞಾ... ಗೆಳತಿ ಇನ್ನೊಂದು ವಿಷಯವನ್ನು ನಾನು ಮರೆತಿಲ್ಲ.

ಅಂದು ನೀನು `ಯಾಕೋ ಸುಸ್ತಾಗ್ತಿದೆ ಕಣೋ, ತುಂಬಾ ತಲೆ ಸುತ್‌ತಾ ಇದೆ' ಎಂದು ಹೇಳಿ ಕರವಸ್ತ್ರದಿಂದ ಬೆವರನ್ನು ಒರಸಿಕೊಂಡೆ, ಜೊತೆಗೆ ಕಣ್ಣೀರನ್ನೂ... ಬ್ಯಾಗ್‌ನಿಂದ ನೀರಿನ ಬಾಟಲಿಯನ್ನು ತೆಗೆದು `ಎಲ್ಲಾದ್ರು ಒಂದ್ ಹತ್ತ್ ನಿಮ್‌ಷ ಕೂರೋಣ್ವಾ...?' ಎಂದೆ. `ಅಯ್ಯೋ, ಸರಿ ಮಾರಾಯ್ತಿ' ಎಂದೆ. ಇಬ್ಬರು ಸ್ವಲ್ಪ ನೆರಳಿದ್ದ ಮಾವಿನ ಮರದ ಅಡಿಯಲ್ಲಿ ಕುಳಿತೆವು. ನೀನು ಬ್ಯಾಗ್‌ನಲ್ಲಿದ್ದ ಗುಳಿಗೆಯನ್ನು ತೆಗೆದು ನುಂಗಲು ಅಣಿಯಾದೆ.

`ಅಯ್ಯೋ ಮಂಗಣ್ಣ ಸುಮ್ ಸುಮ್‌ನೆ ಗುಳಿಗೀನ ನುಂಗ್ ಬೇಡ್ವೆ. ಸರಿ ಹೋಗುತ್ತೆ ನೀರ್ ಕುಡಿ' ಎಂದೆ. ಒಂದು ನಿಮಿಷ ನಮ್ಮಿಬ್ಬರ ನಡುವೆ ಮೌನವೇ ಮಾತಾಯಿತು. ಕಣ್ಣೀರು ನಿನ್ನ ಕೆನ್ನೆಯನ್ನು ಬಳಸಿದ್ದವು. ನನಗೆ ಅರ್ಥವಾಗಲಿಲ್ಲ, `ಏಯ್ ಏನಾಯ್ತೇ?' ಎಂದೆ. `ನನಗೆ ಹಾರ್ಟ್ ಪ್ರಾಬ್ಲಮ್ ಇದೆ ಕಣೋ... ಅದು ಈಗಾಗ್ಲೆ ಎರಡು ಸಲ ನನ್ನನ್ನು ಎಚ್ಚರಿಸಿದೆ.

ಆದಷ್ಟೂ ಹುಷಾರಾಗಿರೋಕೆ ಡಾಕ್ಟ್ರು ಹೇಳಿದ್ದಾರೆ...' ಮುಂದೆ ಏನೆಂದೆಯೋ ನನಗೆ ಒಂದೂ ತಿಳಿಯಲಿಲ್ಲ ಕತ್ತಲೆಯ ಕರಾಳ ಛಾಯೆ ಮಾತ್ರ ನನ್ನ ಮುಂದಿತ್ತು. ನಿನ್ನ ದನಿಗೆ  ಯಾವ ಪ್ರತಿಕ್ರಿಯೆ ಕೊಡಬೇಕೆಂದು ತಿಳಿಯಲಿಲ್ಲ. ಯಾವುದೇ ಮುಚ್ಚುಮರೆಯಿಲ್ಲದೆ ಅಂದು ನೀನು ನಿನ್ನಂತರಂಗವನ್ನು ನನ್ನೆದುರು ತೆರೆದಿಟ್ಟಿದ್ದೆ. ಆ ಕ್ಷಣದಿಂದಲೇ ನಿನ್ನನ್ನು ಪ್ರೀತಿಸಬೇಕು, ನಿನ್ನೊಂದಿಗೇ ಬದುಕಬೇಕು ಎಂದು ದೃಢಸಂಕಲ್ಪ ಮಾಡಿದೆ.

ಮದುವೆ ಎಂದರೆ ಕೇವಲ ಶರೀರವನ್ನು ಹಂಚಿಕೊಳ್ಳುವುದಲ್ಲ, ಬದಲಾಗಿ ಮನಸ್ಸನ್ನು ಹಂಚಿಕೊಳ್ಳುವುದು. ಹಸಿವಾದಾಗ ನಮಗೆ ಅನ್ನದ ಮಹತ್ವ ಅರಿವಾಗುತ್ತದೆ, ಅದೇ ಹೊಟ್ಟೆ ತುಂಬಿರುವಾಗ... ನಮ್ಮ ಪ್ರೀತಿಯನ್ನು ಹಂಚಿಕೊಳ್ಳಬೇಕಾಗಿದ್ದು ಪ್ರೀತಿಯನ್ನೇ ನಿರೀಕ್ಷಿಸುವವರ ಜೊತೆಗೆ... ಅಂದರೆ ನಿನ್ನಲ್ಲಿ ಸುಖವನ್ನು ಹಂಚಿಕೊಳ್ಳುವುದು ಮಾತ್ರ ಪ್ರೀತಿಯ ಪಾಲಾದೀತೆ ಹೇಳು ಗೆಳತಿ..!

ನೋವನ್ನು ಹಂಚಿಕೊಳ್ಳುವುದು, ನೊಂದವರಿಗೆ ದನಿಯಾಗುವುದು ನಿಜವಾದ ಪ್ರೀತಿ ಎಂದುಕೊಂಡಿದ್ದೇನೆ. ಅಷ್ಟೇ ಅಲ್ಲ ಬದುಕು ಸಾರ್ಥಕ್ಯದ ಕಡೆಗೆ ಮುಖಮಾಡುವುದಾದರೂ ಇಂತಹ ನಿರ್ಣಯಗಳ ಜೊತೆಗೆ. ನಾವು ಬೇರೆಯವರಿಗೆ ಮಾರ್ಗದರ್ಶನ ಮಾಡುವುದರಲ್ಲಿ ನಿಸ್ಸೀಮರು, ಆದರೆ ಪಾಲಕರಲ್ಲ. ಒಂದು ಕಣ್ಣಿಗೆ ನೋವಾದರೆ ಎರಡು ಕಣ್ಣಲ್ಲೂ ನೀರು ಬರುತ್ತದೆ. ಅಂತೆಯೇ ನಿನ್ನ ನೋವಿನಲ್ಲಿ ಖುಷಿಯಲ್ಲಿ ನಾನಿರುತ್ತೇನೆ. ಗೆಳತಿಯಾಗಿ, ಮನದೊಡತಿಯಾಗಿ ಬಾ.

ನನ್ನ ಪ್ರಸ್ತಾಪವನ್ನು ಪುರಸ್ಕರಿಸು. ನಮ್ಮೆದುರಿನ ಸಮಾಜದಲ್ಲಿ ನಾಟಕೀಯ ಮನಸ್ಸುಗಳೇ ತುಂಬಿರುವಾಗ ಪಾರದರ್ಶಕತೆಯ ದನಿಯಾಗಿರುವ ನೀನು ನನ್ನ ಬಾಳ ನೌಕೆಗೆ ಸ್ಫೂರ್ತಿಯಾಗು. ನಾನು ನೀನು ನಾವಾಗೋಣ. ನೀನಿರದ ಬದುಕು ಪೂರ್ಣತೆ ಎಡೆಗೆ ಸಾಗುತ್ತದೆ ಎಂದು ನನಗನ್ನಿಸುವುದಿಲ್ಲ.

ನೀನಂದು ನನ್ನೆದುರು ತೋಡಿಕೊಂಡ ಪ್ರತಿಯೊಂದು ಕಂಬನಿಯ ನುಡಿಗಳು ಸಂಬಂಧಗಳನ್ನು ಬೆಸೆಯುವ ಕೊಂಡಿಯೋಪಾದಿಯಲ್ಲಿ ನಿನ್ನ ಹೃದಯವಂತಿಕೆಯನ್ನು ಪ್ರತಿನಿಧಿಸುತ್ತಿದ್ದವು. ನೀನು ಅಳುತ್ತಿದ್ದಾಗ ನನಗೂ ದುಃಖ ಉಮ್ಮಳಿಸಿ ಬರುತ್ತಿತ್ತು, ಕಣ್ಣು ತುಂಬಿಕೊಳ್ಳುತ್ತಿದ್ದವು. ಆದರೆ ನಾನು ಅಳಬಾರದು.

ಯಾಕೆಂದರೆ ನಾನು ಗಂಡು. ನಾನು ಅತ್ತು ಬಿಟ್ಟರೆ ನಿನ್ನ ದುಃಖಕ್ಕೆ ಸಾಂತ್ವನ ನೀಡುವವರು ಯಾರು? ಒಳಗೇ ಕರಗಿ; ಕೊರಗಿ ಮನಸ್ಸು ಗಟ್ಟಿಮಾಡಿಕೊಂಡು ನಿನ್ನನ್ನು ಸಂತೈಸಿದೆ. ಅದಕ್ಕೆ ನಿನ್ನೆಲ್ಲ ನೋವುಗಳಿಗೆ ನಾನೇ `ಪರಿಹಾರ' ಆಗಿಬಿಡುತ್ತೇನೆ. ಒಲ್ಲೆ ಎನ್ನದೆ ಬೆರಳ ನಡುವಿನ ಜಾಗವನ್ನೇ ಶಾಶ್ವತವಾಗಿ ತುಂಬು ಗೆಳತಿ.

ಎಲ್ಲರೂ ನಡೆದ ಹಾದಿಯಲ್ಲಿ ನಾವೂ ನಡೆದರೆ ನಮ್ಮ ಹೆಜ್ಜೆ ಗುರುತುಗಳು ಬಹಳ ಬೇಗ ಮಾಸಿಬಿಡುತ್ತವೆ. ಆದ್ದರಿಂದ ನಾವು ಬದುಕಿಗೆ ಬೇರೆಯದೇ ಹಾದಿಯನ್ನು ಆಯ್ಕೆ ಮಾಡಿಕೊಳ್ಳೋಣ, ಜೊತೆ ಜೊತೆಯಾಗಿ ಸಾಗೋಣ...
ನಿನ್ನೊಲುಮೆಯ.....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.