ADVERTISEMENT

ರಣರಂಗದಲ್ಲಿ ನುಗ್ಗಲು ‘ಬುಲೆಟ್‌’ ಸಿದ್ಧ

ಸಂದೀಪ್ ಕೆ.ಎಂ.
Published 30 ಮೇ 2018, 19:30 IST
Last Updated 30 ಮೇ 2018, 19:30 IST
ರಣರಂಗದಲ್ಲಿ ನುಗ್ಗಲು ‘ಬುಲೆಟ್‌’ ಸಿದ್ಧ
ರಣರಂಗದಲ್ಲಿ ನುಗ್ಗಲು ‘ಬುಲೆಟ್‌’ ಸಿದ್ಧ   

‘ರಾಯಲ್‌ ಎನ್‌ಫೀಲ್ಡ್‌’ ಅಥವಾ ‘ಬುಲೆಟ್‌’ ಬೈಕ್‌ಗಳೆಂದರೆ ಬೈಕ್‌ ಪ್ರಿಯರು ಹುಚ್ಚೆದ್ದು ಕುಣಿಯುತ್ತಾರೆ. ಈ ಬೈಕ್‌ಗಳು ಹೊರಹೊಮ್ಮಿಸುವ ಗುಡ್‌... ಗುಡ್‌... ಗುಡ್‌.. ಶಬ್ದವು ದಾರಿಹೋಕರು ಒಮ್ಮೆಲೇ ಬೈಕ್‌ನತ್ತ ತಿರುಗಿ ನೋಡುವಂತೆ ಮಾಡುತ್ತದೆ.

ಪಕ್ಕಾ, ಕಚ್ಚಾರಸ್ತೆ, ಗುಡ್ಡಗಾಡು, ಯುದ್ಧಭೂಮಿ ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಈ ಬೈಕ್‌ ಓಡಿಸಿ ವಿಶ್ವ ದಾಖಲೆ ಸೃಷ್ಟಿಸುತ್ತಿದ್ದಾರೆ ಅನೇಕರು. ರಾಯಲ್‌ ಎನ್‌ಫೀಲ್ಡ್‌ ಕಂಪನಿಯೂ ಹೊಸ ತಲೆಮಾರಿನ ಯುವಜನರು ಆಕರ್ಷಿತರಾಗುವ ರೀತಿಯಲ್ಲಿ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ತನ್ನ ಸಾಂಪ್ರದಾಯಿಕ ವಿನ್ಯಾಸವನ್ನು ಉಳಿಸಿಕೊಂಡಿದೆ. ದೈತ್ಯ ಆಕೃತಿಯ ಬೈಕ್‌ಗಳನ್ನು ರಸ್ತೆಗೆ ಇಳಿಸುವ ಮೂಲಕ ಒಂದು ಶತಮಾನಕ್ಕೂ ಹೆಚ್ಚಿನ ಕಾಲ ಮಾರುಕಟ್ಟೆಯಲ್ಲಿ ವಿಶೇಷ ಛಾಪು ಮೂಡಿಸಿರುವುದು ಸುಳ್ಳಲ್ಲ.

ಒಂದು ಬೈಕ್‌ ಕಂಪನಿ ಶತಮಾನಕ್ಕಿಂತ ಹೆಚ್ಚು ಕಾಲ ಗ್ರಾಹಕರನ್ನು ಆಕರ್ಷಿಸುತ್ತಾ ಸೆರೆ ಹಿಡಿದಿಟ್ಟುಕೊಂಡಿರುವುದು ಅದರ ಉತ್ಪನ್ನಗಳ ಗುಣಮಟ್ಟ ಮತ್ತು ಕಾರ್ಮಿಕರ ಶ್ರಮವನ್ನು ಸಾಬೀತುಪಡಿಸುತ್ತದೆ.

ADVERTISEMENT

ಹಿಂದೆಲ್ಲ ಬುಲೆಟ್‌ ಬೈಕ್‌ ಎಷ್ಟರ ಮಟ್ಟಿಗೆ ಖ್ಯಾತಿ ಹೊಂದಿತ್ತೆಂದರೆ ಒಮ್ಮೆ ಅದರ ಮೇಲೆ ದಾರಿಯಲ್ಲಿ ಹೋದರೆ ಸಾಕು ಊರಿನ ಜನರೆಲ್ಲಾ ಅವರನ್ನು ‘ಬುಲೆಟ್‌’ ಎಂಬ ಹೆಸರಿನೊಂದಿಗೆ ಕರೆಯುತ್ತಿದ್ದರು. ‘ಬುಲೆಟ್‌–ಸೋಮ’ ‘ಬುಲೆಟ್‌–ರವಿ’ ಎನ್ನುತ್ತಾರಲ್ಲ ಹಾಗೆ. ಹೀಗೆ ಬೈಕ್‌ ಹೊಂದುವುದು ಒಂದು ಪ್ರತಿಷ್ಠೆಯ ವಿಷಯವಾಗಿತ್ತು.

ಮಾರುಕಟ್ಟೆಯಲ್ಲಿ ಬಿಕರಿಯಾಗಲು ಸಿದ್ಧವಿರುವ ಸೂಪರ್‌ ಬೈಕ್‌ಗಳ ನಡುವೆಯೂ ತೀವ್ರ ಪೈಪೋಟಿ ಕೊಟ್ಟು ಯುವಕರ ಅಚ್ಚುಮೆಚ್ಚಿನ ಬೈಕ್‌ ಆಗಿ ರಾಯಲ್‌ ಎನ್‌ಫೀಲ್ಡ್‌ ಸ್ಥಾನ ಭದ್ರಪಡಿಸಿಕೊಂಡಿದೆ. ಅದಕ್ಕೆ ಕಾರಣ ಆ ಬೈಕ್‌ನಲ್ಲಿರುವ ಸಾಹಸಿ ಗುಣ ಎಂದರೆ ತಪ್ಪಾಗುವುದಿಲ್ಲ.

ಈ ಬೈಕ್‌ ಸವಾರಿ ಮಾಡಿದರೆ ಅದು ಧೀರತನದ ಪ್ರತೀಕ ಎಂಬುದು ಬೈಕ್‌ ರೈಡರ್ಸ್‌ ಭಾವನೆ. ರಸ್ತೆಗಳಲ್ಲಿ ಅಲ್ಲದೇ ಹಿಮಾಲಯದಂತಹ ಕಡಿದಾದ ಪರ್ವತ ಶ್ರೇಣಿ, ಯುದ್ಧಭೂಮಿಯಲ್ಲೂ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಮುನ್ನುಗ್ಗಲು ಶಕ್ತವಾಗಿದೆ.

ಇತರ ಬೈಕ್‌ಗಳ ರೀತಿ ರಸ್ತೆ ಮೇಲೆ ಸಾಗಲು ಮಾತ್ರ ಇದು ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ. 2ನೇ ವಿಶ್ವ ಯುದ್ಧದಂತಹ ರಣರಂಗದಲ್ಲೂ ಸಾಮರ್ಥ್ಯ ಪ್ರದರ್ಶನ ಮಾಡಿರುವ ಸಂಗತಿಗಳು ಇತಿಹಾಸದಲ್ಲಿ ದಾಖಲಾಗಿವೆ. ಇದರ ನೆನಪಿನಾರ್ಥವಾಗಿ ಮೇ 30ರಂದು ‘ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 ಪೆಗಾಸಸ್‌’ ಎಂಬ ಸೇನಾ ಆವೃತ್ತಿಯ ತದ್ರೂಪಿ ಬೈಕ್‌ ಅನ್ನು ಬಿಡುಗಡೆ ಮಾಡಲು ಕಂಪನಿ ಸಿದ್ಧತೆ ಮಾಡಿಕೊಂಡಿದೆ.

ಹಿಂಬದಿ ಸೀಟ್ ಬದಲು ಬ್ಯಾಗ್ 
ಪೆಗಾಸಸ್‌ ಆವೃತ್ತಿಯ ಬೈಕ್‌ಗಳು ಇತರ ದ್ವಿಚಕ್ರ ವಾಹನಗಳಂತೆ ಹಿಂಬದಿ ಸವಾರರ ಸೀಟ್ ಹೊಂದಿರುವುದಿಲ್ಲ. ಇದು ಸಂಪೂರ್ಣ ಸೇನಾ ಆವೃತ್ತಿಯ ತದ್ರೂಪಿಯಾಗಿದ್ದು, ಸೈನಿಕರು ಯುದ್ಧದ ಸಮಯದಲ್ಲಿ ಅಥವಾ ಗಡಿ ರಕ್ಷಣಾ ಕಾರ್ಯದಲ್ಲಿ ಅವರೊಂದಿಗೆ ಕೊಂಡೊಯ್ಯುವ ಒಂದು ಜೋಡಿ ಬ್ಯಾಗ್‍ಗಳನ್ನು ಅಳವಡಿಸಲಾಗಿದೆ. ಈ ಬ್ಯಾಗ್‍ಗಳನ್ನು ಬೈಕ್‍ನಿಂದ ಕಳಚಲು ಮತ್ತು ಮರು ಜೋಡಣೆ ಮಾಡಲು ಬರುವಂತೆ ರೂಪಿಸಲಾಗಿದೆ. ಈ ಬ್ಯಾಗ್‍ಗಳ ಮೇಲೆ ‘1944’ ಎಂಬ ಸಂಖ್ಯೆಗಳಿದ್ದು, ಅದು ಎರಡನೇ ಮಹಾಯುದ್ಧವನ್ನು ನೆನಪಿಸುತ್ತದೆ. ಬ್ಯಾಗ್‍ ಮೇಲ್ಭಾಗದಲ್ಲಿ ಬ್ರಿಟನ್ ಪ್ಯಾರಾಚೂಟ್ ರೆಜಿಮೆಂಟ್‍ನ ಲಾಂಛನ ಇರಲಿದೆ. ಬೈಕ್‍ನ ಬಣ್ಣ ಮತ್ತು ಈ ಬ್ಯಾಗ್‍ಗಳ ಬಣ್ಣವು ಸೇನಾ ಆವೃತ್ತಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ.

ತಾಂತ್ರಿಕ ಸಾಮರ್ಥ್ಯ
ಎಂಜಿನ್‌: 499 ಸಿಸಿಯ 4 ಸ್ಟೋಕ್‌ನ ಸಿಂಗಲ್‌ ಸಿಲಿಂಡರ್‌ ಏರ್‌ಕೂಲ್‌ ಎಂಜಿನ್‌ ಇದ್ದು, 27.2 ಬಿಎಚ್‌ಪಿಯಲ್ಲಿ 520 ಆರ್‌ಪಿಎಂ ಶಕ್ತಿ ಹೊರಹಾಕುವ ಸಾಮರ್ಥ್ಯ ಹಾಗೂ 41.3 ಎನ್‌ಎಂನಲ್ಲಿ 4,000 ಆರ್‌ಪಿಎಂ ಶಕ್ತಿ ಉತ್ಪಾದನೆ ಮಾಡುವಷ್ಟು ಶಕ್ತವಾಗಿದೆ. ಎಲೆಕ್ಟ್ರಾನಿಕ್‌ ಇಂಧನ ಇಂಜೆಕ್ಷನ್‌ನೊಂದಿಗೆ 5 ಸ್ಪೀಡ್‌ ಗೇರ್‌ ಹೊಂದಿದೆ.

ಸಸ್ಪೆನ್ಷನ್‌ ಟೈಪ್‌: ಬೈಕ್‌ ಮುಂಭಾಗದಲ್ಲಿ ಟೆಲಿಸ್ಕೋಪಿಕ್‌ ಸಹಿತ 35ಎಂ.ಎಂ. ಪೋಕ್ಸ್‌ , 130 ಎಂ.ಎಂ ಟ್ರಾವೆಲರ್‌ ಹಾಗೂ ಹಿಂಬದಿಯ ಚಕ್ರದಲ್ಲಿ ಟ್ವಿನ್‌ ಗ್ಯಾಸ್‌ ಚಾರ್ಜಡ್ ಶಾಕ್‌ ಅಬ್ಸರ್ವರ್‌ ಸಹಿತ 80 ಎಂ.ಎಂ ಟ್ರಾವೆಲರ್‌ ಇದೆ.

ಇತರೆ: ಮುಂದಿನ ಚಕ್ರದಲ್ಲಿ ಡಬಲ್‌ ಪಿಸ್ಟನ್‌ ಕ್ಯಾಲಿಪರ್‌ನ 280 ಎಂ.ಎಂ ಡಿಸ್ಕ್‌ ಬ್ರೇಕ್‌ ಹಾಗೂ ಹಿಂದಿನ ಚಕ್ರದಲ್ಲಿ ಸಿಂಗಲ್‌ ಪಿಸ್ಟನ್‌ ಕ್ಯಾಲಿಪರ್‌ನ 240 ಎಂ.ಎಂ ಡಿಸ್ಕ್‌ ಬ್ರೇಕ್‌ ಇದೆ. ಈ ಬೈಕ್‌ 2140 ಎಂ.ಎಂ. ಉದ್ದ, 1090 ಎಂ.ಎಂ ಎತ್ತರ ಹಾಗೂ 790 ಎಂ.ಎಂ ಅಗಲವಿದ್ದು, 135 ಎಂ.ಎಂ ಗ್ರೌಂಡ್‌ ಕ್ಲಿಯೆರೆನ್ಸ್‌ ಹೊಂದಿದೆ. 13.5 ಲೀಟರ್‌ ಇಂಧನವನ್ನು ಟ್ಯಾಂಕ್‌ನಲ್ಲಿ ತುಂಬಿಸಬಹುದಾಗಿದೆ.

ಲೆದರ್ ಸ್ಟ್ರಿಪ್ ಗೆ ಖದರ್ ಲುಕ್
ಎಂಜಿನ್‍ನ ಪಕ್ಕದಲ್ಲಿರುವ ಏರ್ ಫಿಲ್ಟರ್‌ ಯೂನಿಟ್‍ಗೆ ಬಕಲ್ ಹೊಂದಿರುವ ಲೆದರ್ ಸ್ಟ್ರಿಪ್ ಅಳವಡಿಸಲಾಗಿದೆ. ಏರ್‌ಫಿಲ್ಟರ್‌ ಎನ್‍ಫೀಲ್ಡ್‌ ಬೈಕ್‍ಗಳ ಬಲವನ್ನು ದ್ವಿಗುಣಗೊಳಿಸುವ ಪ್ರಮುಖವಾದ ಭಾಗವಾಗಿದೆ. ಏರ್‌ಫಿಲ್ಟರ್‌ ಬಿಗಿಯಾಗಿದ್ದರೆ ಯಾವುದೇ ರಸ್ತೆಯಿರಲಿ ಬೈಕ್ ಗಡಸುತನದಿಂದ ನುಗ್ಗಬಲ್ಲದು. ಇದರ ಗುರುತಾಗಿ ಲೆದರ್ ಸ್ಟ್ರಿಪ್‍ನಿಂದ ಅದನ್ನು ಬಿಗಿ ಮಾಡಲಾಗಿದೆ ಎಂದು ಅದರ ಹಿಂದಿನ ಗುಟ್ಟನ್ನು ಬಿಟ್ಟಿಕೊಟ್ಟಿದೆ ಬೈಕ್ ವಿನ್ಯಾಸಕರ ತಂಡ.

ಮಿಲಿಟರಿ ಸಂಖ್ಯೆಯೇ ಬೈಕ್‍ಗೆ ಭೂಷಣ
ಸಾಮಾನ್ಯವಾಗಿ ಇತರ ಬೈಕ್‌ಗಳು ಕೇವಲ ನೋಂದಣಿ ಸಂಖ್ಯೆಗಳನ್ನು ಮಾತ್ರ ಹೊಂದಿರುತ್ತವೆ. ಆದರೆ ಈ ಪೆಗಾಸಸ್‌ ಬೈಕ್‌ಗಳ ಟ್ಯಾಂಕ್‌ ಮೇಲೆ ಸೇನೆಯಲ್ಲಿ ಬಳಸುವ ಸಂಖ್ಯೆಗಳನ್ನು ಬಿಳಿ ಬಣ್ಣದಲ್ಲಿ ಅಚ್ಚು ಹಾಕಲಾಗಿದೆ. ಈ ನಂಬರ್‌ ನೋಡಿದೊಡನೆ ಸವಾರಿಗೆ ತಾನೇ ಸೈನಿಕ ಎಂಬ ಹೆಮ್ಮೆಯ ಭಾವನೆ ಮೂಡುತ್ತದೆ ಎಂಬುದು ವಿನ್ಯಾಸಕರ ಅಭಿಪ್ರಾಯ.

ಹ್ಯಾಂಡಲ್ ಬಾರ್‌ಗಿದೆ ಮಿಲಿಟರಿ ಟಚ್
ಈ ಬೈಕ್‍ಗಳನ್ನು ಮೊದಲ ಮಹಾಯುದ್ಧದ ಸಮಯದಲ್ಲಿ ಗನ್ ತಯಾರಿಸುವ ಫ್ಯಾಕ್ಟರಿಯಲ್ಲಿ ಸಿದ್ಧಪಡಿಸಲಾಗುತ್ತಿತ್ತು. ಆದ್ದರಿಂದ ಅವುಗಳಿಗೆ ‘ಮೇಡ್ ಲೈಕ್ ಎ ಗನ್’ ಎಂಬ ಟ್ಯಾಗ್‌ ಲೈನ್ ಸೇರಿಸಲಾಗಿತ್ತು. ಪೆಗಾಸಸ್‌ ಆವೃತ್ತಿಯ ಬೈಕ್‌ಗೆ ವಿಶಿಷ್ಟ ಹ್ಯಾಂಡಲ್‌ ಸಿದ್ಧಪಡಿಸಲಾಗಿದ್ದು, ಬ್ರೌನ್‌ ಗ್ರಿಪರ್‌ಗಳನ್ನು ಅಳವಡಿಸಲಾಗಿದೆ. ಕಿಕ್‌ ಸ್ಟಾರ್ಟ್ ಲಿವರ್‌, ಪೆಡಲ್‌ ಮತ್ತು ವೃತ್ತಾಕೃತಿಯ ಹೆಡ್‌ ಲೈಟ್‌ ಭಾಗಗಳು ಅಂದ ಹೆಚ್ಚಿಸಿವೆ.

ಬಣ್ಣಕ್ಕಿದೆ ಮಹಾಯುದ್ಧದ ನಂಟು
‘ಫ್ಲೈಯಿಂಗ್‌ ಫ್ಲಿ’ ಎಂದೇ ಹೆಸರುವಾಗಿಯಾಗಿದ್ದ ಪೆಗಾಸಸ್ ಬೈಕ್‍ಗಳು ಸರ್ವೀಸ್‌ ಬ್ರೌನ್‌ ಮತ್ತು ಅಲಿವ್‌ ಡ್ರಾಬ್‌ ಗ್ರೀನ್‌ ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಆದರೆ ಭಾರತದಲ್ಲಿ ಅಲಿವ್‌ ಡ್ರಾಬ್‌ ಗ್ರೀನ್‌ ಬಣ್ಣ ಸೇನೆಗೆ ಮಾತ್ರ ಸೀಮಿತ ಮಾಡಿರುವುದರಿಂದ ಸರ್ವೀಸ್‌ ಬ್ರೌನ್‌ ಬಣ್ಣದ ಎನ್‌ಫೀಲ್ಡ್‌ ಬೈಕ್‌ಗಳನ್ನಷ್ಟೆ ಮಾರಾಟ ಮಾಡಲಾಗುತ್ತದೆ. ವಿಶ್ವದಾದ್ಯಂತ ಕೇವಲ 1,000 ಪೆಗಾಸಸ್‌ ಬೈಕ್‌ಗಳನ್ನು ಮಾತ್ರ ತಯಾರಿಸಲಾಗುತ್ತಿದ್ದು, ಭಾರತದಲ್ಲಿ 250 ಮತ್ತು ಬ್ರಿಟನ್‌ನಲ್ಲಿ 190 ಬೈಕ್‌ಗಳನ್ನು ಮಾತ್ರ ಬಿಕರಿ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.