ADVERTISEMENT

ವ್ಯಾಟ್ ಎಂದರೆ ಏನು?

ಯು.ಬಿ ಪವನಜ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಕ್ಯಾಮೆರಾ ಕೊಳ್ಳುವಾಗ ಮೆಗಾಪಿಕ್ಸೆಲ್ ನಿಜವಾಗಿಯೂ ಅಷ್ಟು ಪ್ರಾಮುಖ್ಯ ಅಲ್ಲ ಎಂಬುದನ್ನು ಇದೇ ಅಂಕಣದಲ್ಲಿ ವಿವರಿಸಲಾಗಿತ್ತು. ಅದೇ ರೀತಿ ಆಡಿಯೊ ಸಿಸ್ಟಮ್ ಕೊಳ್ಳುವಾಗ ವ್ಯಾಟ್ ಎಂಬುದು ಅಷ್ಟು ಪ್ರಾಮುಖ್ಯ ಅಲ್ಲ ಎಂಬುದನ್ನು ನಾವು ಅರಿಯಬೇಕು. ಆಡಿಯೊ ಸಿಸ್ಟಮ್ ಮಾರಾಟ ಮಾಡುವ ಎಲ್ಲ ಅಂಗಡಿಗಳಲ್ಲೂ ಮೊದಲಿಗೆ ಅಂಗಡಿಯಾತ ಮಾಡುವ ಗುಣಗಾನ ವ್ಯಾಟ್‌ನದ್ದಾಗಿರುತ್ತದೆ. ಇದು 1000 ವ್ಯಾಟ್, ಇದು 2000 ವ್ಯಾಟ್, ಇತ್ಯಾದಿ ಹೇಳುತ್ತ ಹೋಗುತ್ತಾನೆ. ಈ ವ್ಯಾಟ್ ಎಂದರೆ ಏನು?

ವ್ಯಾಟ್ ಎನ್ನುವುದು ಸಾಮರ್ಥ್ಯವನ್ನು ಅಳೆಯುವ ಮಾಪನ. ಅಶ್ವಸಾಮರ್ಥ್ಯವನ್ನು (ಹಾರ್ಸ್ ಪವರ್ ಅಥವಾ ಎಚ್‌ಪಿ)  ಹೆಚ್ಚಿನವರು ಕೇಳಿರಬಹುದು. ಒಂದು ಅಶ್ವಸಾಮರ್ಥ್ಯವು ಸುಮಾರು 746 ವ್ಯಾಟ್‌ಗಳಿಗೆ ಸಮ. ಹಾಗಿದ್ದರೆ 1500 ವ್ಯಾಟ್‌ನ ಸ್ಟಿರಿಯೋದ ಸಾಮರ್ಥ್ಯವು ಎರಡು ಕುದುರೆಗಳ ಸಾಮರ್ಥ್ಯಕ್ಕೆ ಸಮವೇ? ಅದನ್ನು ಈ ರೀತಿ ತರ್ಕಿಸೋಣ. 1500 ವ್ಯಾಟ್‌ನ ಆಡಿಯೊ ಸಿಸ್ಟಮ್ ಅನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸಿದರೆ ಅದರಿಂದ ಹೊರಡುವ ಧ್ವನಿಯು ಯಾವುದಾದರೊಂದು ವಸ್ತುವನ್ನು ಎರಡು ಕುದುರೆಗಳು ಸೇರಿ ಎಳೆದಷ್ಟು ಬಲದಿಂದ ದೂಡಬಲ್ಲುದೇ? ಖಂಡಿತಾ ಇಲ್ಲ. ಹಾಗಿದ್ದರೆ 1500 ವ್ಯಾಟ್ ಎಂಬುದರ ಅರ್ಥ ಏನು?

ಆಡಿಯೊ ಸಿಸ್ಟಮ್‌ಗಳ ಸಾಮರ್ಥ್ಯವನ್ನು ತಿಳಿಸಲು ಅದನ್ನು ತಯಾರಿಸಿದ ಕಂಪೆನಿಯವರು ಮತ್ತು ಮಾರುವ ಅಂಗಡಿಯವರು ಹೇಳುವ ಈ ವ್ಯಾಟ್ ಅದರ ಸರಾಸರಿ ಸಾಮರ್ಥ್ಯ ಅಲ್ಲ. ಅದು ಪೀಕ್ ಮ್ಯೂಸಿಕ್ ಪವರ್ ಔಟ್‌ಪುಟ್ (ಪಿ.ಎಂ.ಪಿ.ಓ.). ಅಂದರೆ ಅದು ಹೊರನೀಡಬಲ್ಲ ಧ್ವನಿಯ ಗರಿಷ್ಠ ಸಾಮರ್ಥ್ಯ. ಇದನ್ನು ಬೇರೆ ಬೇರೆ ಕಂಪೆನಿಗಳವರು ಬೇರೆ ಬೇರೆ ವಿಧಾನದಲ್ಲಿ ಅಳೆಯುತ್ತಾರೆ. ಇದಕ್ಕೆ ಇಂತಹುದೇ ಎಂಬ ಶಿಷ್ಟ ವಿಧಾನ ಇಲ್ಲ.

ಒಂದು ಕಾರು 200 ಕಿಲೋಮೀಟರ್ ದೂರವನ್ನು 4 ಗಂಟೆಗಳಲ್ಲಿ ಕ್ರಮಿಸಿದರೆ ಅದರ ಸರಾಸರಿ ವೇಗ 50 ಕಿ.ಮೀ. ಆಗಿರುತ್ತದೆ. ಅದು ಹೋಗುವಾಗ ಕೆಲವೊಮ್ಮೆ 120 ಕಿ.ಮೀ. ವೇಗದಲ್ಲೂ ಹೋಗಿರಬಹುದು. ಇಲ್ಲಿ 120 ಮತ್ತು 50ರ ಮಧ್ಯೆ ಯಾವುದೇ ಸೂತ್ರ ಇಲ್ಲ.

ಆಡಿಯೊ ಸಿಸ್ಟಮ್‌ಗಳ ಸಾಮರ್ಥ್ಯವನ್ನು ಅಳೆಯುವಾಗ ಇನ್ನೊಂದು ಮಾಪನ ಇದೆ. ಅದು ಸರಾಸರಿ ಸಾಮರ್ಥ್ಯ. ಇದನ್ನು ರೂಟ್ ಮೀನ್ ಸ್ಕ್ವೇರ್ (ಆರ್.ಎಂ.ಎಸ್.) ಪವರ್ ಎಂದು ಕರೆಯುತ್ತಾರೆ. ಸರಾಸರಿ ಮತ್ತು ಗರಿಷ್ಠ ಸಾಮರ್ಥ್ಯಗಳ ನಡುವೆ ಎಲ್ಲರೂ ಒಮ್ಮತಕ್ಕೆ ಬಂದಿರುವಂತಹ ಒಂದು ವೈಜ್ಞಾನಿಕವಾದ ಸೂತ್ರ ಇಲ್ಲ. ಕೆಲವು ಕಂಪೆನಿಗಳು ತಮ್ಮ ಉತ್ಪನ್ನದ ಮಾಹಿತಿ ಪತ್ರದಲ್ಲಿ ನಮೂದಿಸಿರುವ ಸರಾಸರಿ ಮತ್ತು ಗರಿಷ್ಠ ಸಾಮರ್ಥ್ಯಗಳನ್ನು ಗಮನಿಸಿದಾಗ ಗರಿಷ್ಠ ಸಾಮರ್ಥ್ಯವು ಸರಾಸರಿ ಸಾಮರ್ಥ್ಯಕ್ಕಿಂತ ಸುಮಾರು ಹಲವು ಪಟ್ಟು ಹೆಚ್ಚಿರುವುದನ್ನು ಕಾಣಬಹುದು.

ಕಂಪೆನಿಯನ್ನು ಹೊಂದಿಕೊಂಡು ಇದು 4 ರಿಂದ 8ರ ತನಕ ಇರುತ್ತದೆ. ಇದಕ್ಕೆ ಕಾರಣ ಅವರು ಆಡಿಯೊ ಸಿಸ್ಟಮ್‌ನ ಎಲ್ಲ ಚಾನೆಲ್‌ಗಳ ಗರಿಷ್ಠ ಸಾಮರ್ಥ್ಯವನ್ನು ಒಟ್ಟು ಮಾಡಿರುವುದು. ಸರಾಸರಿ ಸಾಮರ್ಥ್ಯ ಯಾವಾಗಲೂ ಪ್ರತಿ ಚಾನೆಲ್ ಅನ್ನು ಪ್ರತಿಬಿಂಬಿಸುತ್ತದೆ. ಈಗೀಗ 5.1, 7.1, 7.2 ಇತ್ಯಾದಿ ಸಿಸ್ಟಮ್‌ಗಳು ಬರುತ್ತಿವೆ. 5.1 ಎಂದರೆ ಎರಡು ಮುಂದೆ, ಎರಡು ಹಿಂದೆ ಮತ್ತು ಒಂದು ಮಧ್ಯೆ -ಹೀಗೆ ಒಟ್ಟು ಐದು ಸ್ಪೀಕರ್‌ಗಳಿರುತ್ತವೆ. ಮುಂದಿನ ಸ್ಪೀಕರ್‌ಗಳ ಸಾಮರ್ಥ್ಯ ಸಾಮಾನ್ಯವಾಗಿ ಹಿಂದಿನ ಸ್ಪೀಕರ್‌ಗಳ ಸಾಮರ್ಥ್ಯಕ್ಕಿಂತ ಹೆಚ್ಚಿರುತ್ತದೆ. ಗರಿಷ್ಠ ಸಾಮರ್ಥ್ಯವನ್ನು ಉಲ್ಲೆೀಖಿಸುವಾಗ ಈ ಎಲ್ಲ ಐದು ಸ್ಪೀಕರ್‌ಗಳ ಗರಿಷ್ಠ ಸಾಮರ್ಥ್ಯವನ್ನು ಒಟ್ಟು ಸೇರಿಸಲಾಗುತ್ತದೆ. 

ಸಂಗೀತ ಮತ್ತು ವ್ಯತ್ಯಯ (ಟಿ.ಎಚ್.ಡಿ.)
ಸಾಮಾನ್ಯ ಆಡಿಯೊ ಸಿಸ್ಟಮ್ ಅನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸಿ ಕೇಳಿ. ಸಂಗೀತದ ಜೊತೆ ಕಿರಿಕಿರಿ ಧ್ವನಿಗಳೂ ಕೇಳಿ ಬರುತ್ತಿರುತ್ತವೆ. ಇದಕ್ಕೆ ಕಾರಣ ಆಂಪ್ಲಿಫೈಯರ್‌ನ ಟೋಟಲ್ ಹಾರ್ಮೋನಿಕ್ ಡಿಸ್ಟೋರ್ಶನ್ (ಟಿ.ಎಚ್.ಡಿ.). ಆಡಿಯೊ ಸಿಸ್ಟಮ್‌ನ ಸಂಗೀತದ ಜೊತೆಗೆ ಸ್ವಲ್ಪ ಇತರ ಅನವಶ್ಯಕ ಶಬ್ದಗಳೂ ಹೊರಡುತ್ತವೆ.
ಇದು ಸಂಗೀತದ ಅಥವಾ ನಮಗೆ ಬೇಕಾದ ಧ್ವನಿಯ ವ್ಯತ್ಯಯ. ಈ ವ್ಯತ್ಯಯದ ಸರಾಸರಿಯನ್ನು ಟಿಎಚ್‌ಡಿ ಸೂಚಿಸುತ್ತದೆ.

1000 ವ್ಯಾಟ್‌ನ ಮಾಮೂಲಿ ಸ್ಟೀರಿಯೋನ ಟಿಎಚ್‌ಡಿ 10% ಇದ್ದಲ್ಲಿ, ಆ ಸ್ಟಿರಿಯೋವನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸುವಾಗ 100 ವ್ಯಾಟ್‌ಗಳಷ್ಟು ವ್ಯತ್ಯಯವೇ ಇರುತ್ತದೆ. ಇದೇ ಕಿವಿಗೆ ಕಿರಿಕಿರಿಯುಂಟುಮಾಡುವ ಧ್ವನಿ. ಹೈಫೈ ಎಂದು ಕರೆಸಿಕೊಳ್ಳುವ ಆಂಪ್ಲಿಫೈಯರ್‌ಗಳ ಟಿಎಚ್‌ಡಿ 0.5%ಗಿಂತ ಕಡಿಮೆ ಇರುತ್ತದೆ. ನನ್ನಲ್ಲಿ ಇರುವ ಆಂಕಿಯೋ (Onkyo) ಆಂಪ್ಲಿಫೈಯರ್‌ನ ಟಿಎಚ್‌ಡಿ 0.08%. ಸಾಮಾನ್ಯವಾಗಿ ಎಲ್ಲರೂ ಬಳಸುವ ಬೂಮ್‌ಬಾಕ್ಸ್‌ಗಳ ಟಿಎಚ್‌ಡಿ ಶೇಕಡಾ 10 ರಿಂದ 20 ಇರುತ್ತದೆ.

ಆದುದರಿಂದಲೇ ಇವುಗಳನ್ನು ಹೈಫೈ ಎಂದು ಪರಿಗಣಿಸುತ್ತಿಲ್ಲ. ಹೈಫೈ ಎನ್ನುವುದು ಹೈ ಫಿಡಿಲಿಟಿಯ (High Fidility, ಉನ್ನತ ಗುಣಪಟ್ಟ) ಸಂಕ್ಷಿಪ್ತ ರೂಪ.

ಸಿಗ್ನಲ್ ಟು ನೋಯ್ಸ ರೇಶಿಯೋ
ಆಡಿಯೊ ಆಂಪ್ಲಿಫೈಯರ್‌ಗಳ ಗುಣಮಟ್ಟವನ್ನು ಅಳೆಯಲು ಇನ್ನೂ ಒಂದು ಮಾಪನವಿದೆ. ಅದು ಸಂಗೀತ ಮತ್ತು ಶಬ್ದಗಳ ನಿಷ್ಪತ್ತಿ (Signal to noise ratio). ಒಂದು ಆಂಪ್ಲಿಫೈಯರ್‌ಗೆ ಯಾವುದೇ ಸಂಗೀತದ ಸಿಗ್ನಲ್ ನೀಡಿಲ್ಲ ಎಂದಿಟ್ಟುಕೊಳ್ಳಿ. ಆಗ ಅದರಿಂದ ಹೊರಬರುವ ಧ್ವನಿಯ ಮಟ್ಟವು ಶಬ್ದವನ್ನು (noise) ಸೂಚಿಸುತ್ತದೆ. ಈ ಶಬ್ದ ಕಡಿಮೆಯಿದ್ದಷ್ಟು ಒಳ್ಳೆಯದು. ಸರಾಸರಿ ಸಾಮರ್ಥ್ಯವನ್ನು ಶಬ್ದದ ಮೊತ್ತದಿಂದ ಭಾಗಿಸಿದರೆ ಸಂಗೀತ ಮತ್ತು ಶಬ್ದಗಳ ನಿಷ್ಪತ್ತಿ ದೊರೆಯುತ್ತದೆ. ಈ ನಿಷ್ಪತ್ತಿ ಹೆಚ್ಚಿದ್ದಷ್ಟು ಒಳ್ಳೆಯದು. ಈ ನಿಷ್ಪತ್ತಿಯನ್ನು ಡೆಸಿಬೆಲ್ ಮೂಲಕ ಅಳೆಯುತ್ತಾರೆ. ಉತ್ತಮ ಆಂಪ್ಲಿಫೈಯರ್‌ಗಳಲ್ಲಿ ಈ ನಿಷ್ಪತ್ತಿ 70 ಡೆಸಿಬೆಲ್ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ.

ಎಲ್ಲ ಕ್ಷೇತ್ರಗಳಲ್ಲೂ ಗುಣಮಟ್ಟವು ಸಂಖ್ಯಾಬಾಹುಳ್ಯಕ್ಕಿಂತ ಮುಖ್ಯವಾಗುತ್ತದೆ. ಆಡಿಯೊ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋದಾಗ ದೊಡ್ಡ ಮೊತ್ತದ ವ್ಯಾಟ್ ಕೇಳಿ ಮರುಳಾಗದಿರಿ. ಟಿಎಚ್‌ಡಿ ಮತ್ತು ಡೆಸಿಬೆಲ್ ಎಷ್ಟು ಎಂದು ಕೇಳಲು ಮರೆಯದಿರಿ. ಜೊತೆಗೆ ಅದರ ಫ್ರೀಕ್ವೆನ್ಸಿ ರೆಸ್ಪೋನ್ಸ್‌ನ ವ್ಯಾಪ್ತಿಯನ್ನು ಗಮನಿಸಿ.

ADVERTISEMENT

ಹೆಂಡತಿ ಒಪ್ಪಿಗೆಯ ಅಂಶ
ಒಂದು ಇಲೆಕ್ಟ್ರಾನಿಕ್ ಸಿಸ್ಟಮ್ (ಮುಖ್ಯವಾಗಿ ಆಡಿಯೊ ಸಿಸ್ಟಮ್) ಕೊಂಡು ತಂದಾಗ (ಸಾಮಾನ್ಯವಾಗಿ ಗಂಡಸರೇ ಇದನ್ನು ತರುವುದು) ಅದನ್ನು ಹೆಂಡತಿ ಎಷ್ಟರ ಮಟ್ಟಿಗೆ ಇಷ್ಟಪಡಬಹುದು (Wife acceptance factor) ಎಂಬುದನ್ನು ಇದು ಸೂಚಿಸುತ್ತದೆ. ಇದು ಹೆಚ್ಚಿದ್ದಷ್ಟು ಒಳ್ಳೆಯದು! 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.