ADVERTISEMENT

ಸವಿ ನೆನಪುಗಳು ಸಾವಿರ...

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

 `ಸವಿ ಸವಿ ನೆನಪು ಸಾವಿರ ನೆನಪು..
 ಎದೆಯಾಳದಲಿ  ಬಚ್ಚಿಕೊಂಡಿರುವಾ
 ಅಚ್ಚಳಿಯದ ನೂರೊಂದು ನೆನಪು~...

ಈಗ ಈ ಹಾಡು ತುಟಿಯ ಮೇಲೆ ನರ್ತನ ಮಾಡುತ್ತಿದೆ. ಎಲ್ಲಿ ಕುಳಿತರೂ,  ಏನೇ ಕೆಲಸ ಮಾಡಿದರೂ, ಈ ಹಾಡನ್ನೆ ಹಾಡುತ್ತಾ ನಮ್ಮ ಕೆಲಸ ಮಾಡಬೇಕಾಗಿದೆ. ಯಾಕೆ ಗೊತ್ತಾ?  ಈಗ ನಮ್ಮ ವಿದ್ಯಾರ್ಥಿ ಜೀವನ ಮುಗಿದು  ಸದ್ಯ ಪ್ರಾಯೋಗಿಕ ತರಬೇತಿ ಪಡೆದುಕೊಳ್ಳುತ್ತ ನೌಕರಿಯ ಹುಡುಕುವ ಚಿಂತೆಯಲ್ಲಿದ್ದರೂ, ಆ ವಿದ್ಯಾರ್ಥಿ ಜೀವನದ ನೆನಪುಗಳು ಮಾತ್ರ ಅಂತರಂಗದ ಮೂಲೆಯಲ್ಲಿ ಎಡಬಿಡದೆ ಕಾಡುತ್ತಿವೆ.

ಅದು ಬೇರೇ ನಮ್ಮದು ಮಹಿಳಾ ವಿಶ್ವವಿದ್ಯಾಲಯ. ನಾನು ಈ ವಿಶ್ವವಿದ್ಯಾಲಯಕ್ಕೆ ಬಂದ ಮೊದಲಲ್ಲಿ ಏನಪ್ಪಾ ಇಲ್ಲಿ  ತಮಾಷೆ  ಮಾಡಲು ಹುಡುಗರೇ ಇರುವುದಿಲ್ಲಾ, ಹೇಗೆ ಎರಡು ವರ್ಷ ಕಳೆಯಬೇಕು? ಎಂದು ಅಂದುಕೊಂಡಿದ್ದೆ. ಆದರೆ ಮುಂದೆ ನಾವು ಮಾಡಿದ ಮಜಾ, ತುಂಟಾಟ, ಜಗಳ ಎಲ್ಲವನ್ನು ನೆನಸಿಕೊಂಡರೆ ಇಂದು ರೋಮಾಂಚನವಾಗುತ್ತದೆ.

ಹುಡುಗಿಯರಷ್ಟೇ ಇದ್ದರೂ ನಾವು ಮಾಡಿದಷ್ಟು  ಮಜಾ ಬಹುಶಃ ಹುಡುಗರೂ ಮಾಡಿರಲಿಕ್ಕಿಲ್ಲವೇನೋ!  ನಮ್ಮ ಮಾತುಗಳಿಗೆ ಮಿತಿಯೇ ಇರಲಿಲ್ಲ.  ಕ್ಲಾಸ್ ರೂಂನ ಮಜಾ ಒಂದೆಡೆಯಾದರೆ, ಹಾಸ್ಟೆಲ್ ಜೀವನದ ಮಜಾವನ್ನು ವರ್ಣಿಸಲು ಸಾಧ್ಯವಿಲ್ಲ.

ನಮ್ಮ ವಿಶ್ವವಿದ್ಯಾಲಯ ಮತ್ತು ಧಾರವಾಡ ಕರ್ನಾಟಕ  ವಿಶ್ವವಿದ್ಯಾಲಯದ ಮಿಡಿಯಾ  ಫೆಸ್ಟ್‌ನಲ್ಲಿ  ನಾವು ಮಾಡಿದ `ಬ್ರಹ್ಮ ರಾಕ್ಷಸ~ ನಾಟಕದ ಕ್ಷಣ ಮತ್ತು ಎಲ್ಲರೂ ಚೆನ್ನಾಗಿತ್ತು ಎಂದಾಗ ನಮ್ಮಲ್ಲಿ ಮನೆ ಮಾಡಿದ್ದ ಸಂತೋಷದ ವಾತಾವರಣವನ್ನು ಎಂದಿಗೂ ಮರೆಯುವಂತಿಲ್ಲ. ಆ ನಾಟಕಕ್ಕೆ ತಯಾರಿ ಮಾಡಲು ನಮ್ಮ ಗುರು ಗಳು ಮತ್ತು ನಾವು ಪಟ್ಟ ಕಷ್ಟ ಮರೆಯಲಾಗದ ಮಧುರ ನೆನಪು.

ತರಗತಿಯ ನೆನಪುಗಳಂತೂ ಬಲು ಮಧುರ. ಬೆಳಗ್ಗೆ ಕ್ಲಾಸಿಗೆ ಬಂದ ತಕ್ಷಣವೇ ಒಂದಲ್ಲಾ ಒಂದು ರೀತಿಯಿಂದ ಗುರುಗಳಿಂದ ಬೈಯಿಸಿಕೊಳ್ಳುವುದು ಮಾಮೂಲು ಆಗಿಬಿಟ್ಟಿತ್ತು. ನಾವು ಪತ್ರಿಕೋದ್ಯಮದ ವಿದ್ಯಾರ್ಥಿಗಳಾಗಿದ್ದರಿಂದ ನಮ್ಮ ಜೀವ ನಾಡಿ ಎಂದರೆ ಪತ್ರಿಕೆ ಓದುವುದು, ಆದರೆ ಅದು ಸ್ವಲ್ಪ ಅಪರೂಪವಾದರೂ ಓದುತ್ತಿದ್ದೆವು. 

ಯಾವತ್ತೋ ಒಂದು ದಿನ ನಿದ್ರಾದೇವತೆಯ ಕಾರಣದಿಂದ ಲೇಟಾಗಿ ಎದ್ದು, ಅಂದು ಪತ್ರಿಕೆ ಓದದೇ ಬಂದಿದ್ದರೆ ಆವತ್ತು ನಮಗೆ ಪೂಜೆ ಗ್ಯಾರಂಟಿ. ಏನೊ ಗೊತ್ತಿಲ್ಲ,  ಆವತ್ತು ನಮ್ಮ ಸರ್‌ಗೆ ಹೇಗೆ  ಗೊತ್ತಾಗುತ್ತಿತ್ತೋ ಏನೋ..  ಆ ದಿನವೇ ನಮ್ಮ ಗುರುಗಳು ಇವತ್ತು ಯಾರ‌್ಯಾರು ಪತ್ರಿಕೆ ಓದಿ ಬಂದಿದ್ದೀರಾ? ಇವತ್ತಿನ ವಿಶೇಷತೆಗಳು ಏನು ಎಂದು ಕೇಳಿದಾಗ ನಮ್ಮ ಎದೆ `ಢವ ಢವ~ ಎಂದು ಬಡೆದುಕೊಳ್ಳುತ್ತಿತ್ತು.
 
ತಕ್ಷಣ ನಮ್ಮ ಗುರುಗಳಿಗೆ ನಮ್ಮ ಅಂತರಂಗದ  ಅರಿವಾಗಿ ನಿಮಗೆ  ಎಷ್ಟು ಹೇಳಿದರೂ ಅಷ್ಟೇ ನೀವು ಈ ಜನ್ಮದಲ್ಲಿ ಬದಲಾಗುವುದಿಲ್ಲ ಎಂದು ಬಯ್ಯುತ್ತಿದ್ದರು. ನಾವು ಹೆಚ್ಚು ಬೈಗುಳ ತಿನ್ನುತ್ತಿದ್ದುದು ಭಾಷಾಂತರ ಕ್ಲಾಸ್‌ನಲ್ಲಿ.  ನಾವು ಮನೆಯಲ್ಲಿ ಒಂದು ಸುದ್ದಿಯನ್ನು ಭಾಷಾಂತರ ಮಾಡಿಕೊಂಡು ಹೋಗುತ್ತಿರಲಿಲ್ಲ, ಕ್ಲಾಸಿನಲ್ಲಿ ಗುರುಗಳು ಎಷ್ಟು ಮಾಡಿಸುತ್ತಾರೋ ಅಷ್ಟನ್ನು ಮಾಡುತ್ತಿದ್ದೆವು.

`ಅಮ್ಮಾ ಪತ್ರಿಕೆಗಳಿಗೆ ಲೇಖನ ಬರೆಯಿರಿ~ ನಿಮ್ಮ ಖರ್ಚನ್ನು ನೀವೇ ನಿಭಾಯಿಸಿಕೊಳ್ಳಬಹುದು ಎಂದು ಸಾವಿರ ಬಾರಿ ಗುರುಗಳು ಹೇಳಿದರೂ, ಲೇಖನ ಬರೆಯದಿದ್ದಾಗ ನಮಗಿಂತ ಹೆಚ್ಚು ಅವರೇ ಬೇಸರಪಟ್ಟುಕೊಳ್ಳುತ್ತಾ, ನಿಮ್ಮಲ್ಲಿರುವ ಪ್ರತಿಭೆಯನ್ನು ನೀವೇ    ಸಾಯಿಸುತ್ತಿದ್ದೀರಾ ಎನ್ನುತ್ತಿದ್ದ ಅವರ ಮಾತುಗಳು ಇಂದು  ಮುಳ್ಳಿನ ರೂಪದಲ್ಲಿ  ನಯವಾಗಿ ಚುಚ್ಚುತ್ತಿದೆ.

ವಿಶ್ವವಿದ್ಯಾಲಯದಲ್ಲಿ ಯಾವುದೇ ಕಾರ್ಯಕ್ರಮವಾದರೂ ಅದರ  ವರದಿಯನ್ನು ಬರೆಯಬೇಕು. ಕಾರ್ಯಕ್ರಮ  ಮುಗಿದ ಮೇಲೆ `ಸರ್ ಬರ‌್ತಾರಲೇ  ಬೇಗ ರಿಪೋರ್ಟ್ ಬರಿಬೇಕು ಇಲ್ಲಾದ್ರೆ ಸರ್ ಬೈಯ್ಯತಾರೆ~  ಎನ್ನುತ್ತಾ ಯಾವಾಗ ಈ ಕಾಟ ತಪ್ಪುತ್ತಪ್ಪಾ ಎಂದು ಗೊಣಗುತ್ತಾ (ನನ್ನ ಬಿಟ್ಟು) ವರದಿ ಮಾಡಿದರ ಲಾಭ ಏನು ಎಂಬುದು ಪ್ರತಿಕ್ಷಣವೂ  ಇಂದು ನಾವು ಪಡೆಯುತ್ತಿರುವ ಪ್ರಾಯೋಗಿಕ ತರಬೇತಿಯಲ್ಲಿ ತಿಳಿಯುತ್ತಿದೆ.
  ಈ ಎಲ್ಲ  ಸವಿ ಘಳಿಗೆಗಳನ್ನು ಈಗ ನೆನಸಿಕೊಂಡರೆ ಇನ್ನೂ ವಿದ್ಯಾರ್ಥಿಯಾಗಿಯೇ ಇರಬೇಕಾಗಿತ್ತು ಎನಿಸುತ್ತದೆ. ಅದರ ಜೊತೆಗೆ ನಾವು ಗುರುಗಳ ಮಾತು ಕೇಳದೇ ಮಾಡಿದ ತಪ್ಪಿನ ಅರಿವು ಎದೆಯಾಳಲ್ಲಿ ಬಾಣದಂತೆ ಚುಚ್ಚುತ್ತಿದೆ.  

   
                                                                                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.