ADVERTISEMENT

ಸಿಲಿಕಾನ್‌ ಸಿಟೀಲಿ ಬ್ಯುಸಿ ಲೇಡೀಸ್

ಅಭಿಲಾಷ ಬಿ.ಸಿ.
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಚಿತ್ರ: ರಂಜು ಪಿ
ಚಿತ್ರ: ರಂಜು ಪಿ   

ಮೊನ್ನಿನ ಆ ಸಮಾರಂಭದಲ್ಲಿ ತುಂಬಾ ಆಹ್ಲಾದಕರ ವಾತಾವರಣ ಮನೆಮಾಡಿತ್ತು. ಅಲಂಕಾರಗೊಂಡ ವೇದಿಕೆ ಕಣ್ಣಿಗೆ ಕುಕ್ಕುತ್ತಿತ್ತು. ಹೂವಿನ ಸುವಾಸನೆ ಜತೆಗೆ ಭಕ್ಷ್ಯಗಳ ಘಮ ಮೂಗಿನ ಹೊರಳಿಗಳಲ್ಲಿ ಏರಲು ಪೈಪೋಟಿ ನಡೆಸಿತ್ತು. ಈ ನಡುವೆ ಸುಂದರ ಯುವತಿಯರ ಅಪ್ಯಾಯಮಾನವಾದ ಹರಟೆ ಬೇರೆ. ‘ಜಾಬ್ ಚೆಂಜ್ ಮಾಡ್ಡೆ ಕಣೆ’ ಎನ್ನುವ ಮಾತು ಮೇಲಿಂದ ಮೇಲೆ ಕೇಳಿ ಬರುತ್ತಿತ್ತು. ನೆನಪುಗಳನ್ನು ಕೆದಕಿ ಅವರು ನಗುತ್ತಿದ್ದ ಪರಿಗೆ ಹಾಲ್‌ನಲ್ಲಿ ನೆರೆದವರೆಲ್ಲ ಮಾರು ಹೋಗಿದ್ದರು. ಬೆಂಗಳೂರಿನಲ್ಲಿ ನಡೆದ ಸ್ನೇಹಿತೆಯ ಮದುವೆಗೆ ತೆರಳಿದ್ದ ನನಗೆ ಅಲ್ಲಿಗೆ ಬಂದಿದ್ದ ಉದ್ಯೋಗಸ್ಥ ಯುವತಿಯರ ಉತ್ಸಾಹಭರಿತ ಮಾತುಗಳು ಹೆಚ್ಚು ಆಪ್ತವಾದವು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳೇ ಹೆಚ್ಚಾಗಿದ್ದ ಆ ಗುಂಪಿನಲ್ಲಿ ಎಲ್ಲರೂ ತಮ್ಮ, ತಮ್ಮ ಉದ್ಯೋಗದ ಕುರಿತು ಹೆಮ್ಮಯಿಂದ ನುಡಿಯುತ್ತಿದ್ದ ಪರಿ ಅವರತ್ತ ಅನಾಯಾಸವಾಗಿ ಆಕರ್ಷಿಸುತ್ತಿತ್ತು.

ಉದ್ಯೋಗದಲ್ಲಿನ ಸಂಭ್ರಮದ ದನಿ ಕಿವಿಯನ್ನು ಹೀಗೆ ತಟ್ಟಿದ್ದು ‌ ಮೊದಲೇನಾಗಿರಲಿಲ್ಲ. ಅಂದದ ವಸ್ತ್ರ ಅದಕ್ಕೊಪ್ಪುವ ಡ್ರೆಸ್‌ ಆ್ಯಕ್ಸ್‌ಸರೀಸ್‌, ಕೈಯನ್ನು ಅಲಂಕರಿಸುವ ಹ್ಯಾಂಡ್‌ ಬ್ಯಾಗ್‌, ನಾಜೂಕು ನಡಿಗೆಗೆ ಜೊತೆಯಾಗುವ ಹೈ ಹೀಲ್ಸ್‌, ಎಷ್ಟೇ ಹಿಂದಕ್ಕೆ ಸರಿಸಿದರೂ ಮತ್ತೆ ಮತ್ತೆ ಹಣೆಗೆ ಮುತ್ತಿಡುತ್ತಾ ಕಾಡಿಸುವ ಮುಂಗುರುಳು, ನೆಟ್ಟ ದೃಷ್ಟಿಯನ್ನು ಬೇರೆಡೆಗೆ ಕೀಳಲು ಬಿಡದ ಕೈಯಲ್ಲಿನ ದುಬಾರಿ ಬೆಲೆಯ ಮೊಬೈಲ್‌, ಕಿವಿಗೆ ಜೋತುಬಿದ್ದ ಇಯರ್‌ ಫೋನ್‌... ಹೀಗೆ ಮಹಾನಗರಿಯ ವೇಗದ ಬದುಕಿಗೆ ಜೊತೆಯಾಗಿರುವ ‘ನಮ್ಮ ಮೆಟ್ರೊ’ದಲ್ಲಿ ಕಾಣಸಿಗುವ ಉದ್ಯೋಗಸ್ಥ ಯುವತಿಯರ ವೈಖರಿ ನಿತ್ಯ ನನ್ನನ್ನು ಅವರತ್ತ ಸೆಳೆಯುತ್ತಿತ್ತು.

ನಿಮಗೆ ಗೊತ್ತೆ? ಬೆಂಗಳೂರಿನಲ್ಲಿ ಉದ್ಯೋಗ ಗಿಟ್ಟಿಸಿದವರೆಲ್ಲಿ ಶೇ 25ರಷ್ಟು ಮಂದಿ ಮಹಿಳೆಯರು. ದೇಶದಲ್ಲಿಯೇ ಅತಿಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ನಗರವಾಗಿ ಈ ಊರು ಬೆಳೆಯುತ್ತಿದೆ. ಸಂಚಾರ ದಟ್ಟಣೆಯ ಅವಧಿಯಲ್ಲಿ ಕಚೇರಿ ಸೇರಲು ಯುವತಿಯರು ತೋರುವ ಧಾವಂತ ನೋಡುವಾಗಲೆಲ್ಲ, ‘ಎಷ್ಟೊಂದು ಯುವತಿಯರು. ಎಲ್ಲರೂ ನನ್ನಂತೆ ಉದ್ಯೋಗಸ್ಥರು’ ಎಂಬ ಹೆಮ್ಮೆಯ ಭಾವ ಮೂಡುತ್ತದೆ.

ADVERTISEMENT

ಬೆಂಗಳೂರು ಮಾಹಿತಿ ತಂತ್ರಜ್ಞಾನದ ತಾಣವಾಗಿ ಬೆಳೆದಂತೆಲ್ಲಾ ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಕ್ಲೀಷೆ ಎನಿಸುವ ನುಡಿಗಟ್ಟು ಹಿನ್ನೆಲೆಗೆ ಸರಿದಿದೆ. ಉದ್ಯೋಗ ಕ್ಷೇತ್ರದ ಶ್ರೇಷ್ಠತೆಯ ವ್ಯಸನ ಹಾಗೂ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ತಂತ್ರಜ್ಞಾನ ನೆರವಾಗಿದೆ. ಪುರುಷರಿಗೆ ಸರಿಸಮಾನವಾಗಿ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿರುವ ಯುವತಿಯರು ಇಂದು ತಮ್ಮ ಉದ್ಯೋಗವನ್ನು ಸಂಭ್ರಮಿಸುತ್ತಿದ್ದಾರೆ ಎನ್ನುವುದು ಮನದಟ್ಟಾಗಿದ್ದು ಅವರನ್ನು ಮಾತಿಗೆಳೆದ ನಂತರವಷ್ಟೆ.

ಯುವತಿ ಈಗ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ಮಾಹಿತಿ ತಂತ್ರಜ್ಞಾನ ವಲಯ, ಹೋಟೆಲ್‌ ಉದ್ಯಮ, ವೈದ್ಯಕೀಯ ರಂಗ... ಅಷ್ಟೇ ಏಕೆ, ಮಾಲ್‌ಗಳಲ್ಲೂ ಈಗ ಅವರದೇ ಕಮಾಲ್‌. ಅದರಲ್ಲೂ ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಹೆಚ್ಚಿನ ಸ್ತ್ರೀ ಶಕ್ತಿ ತೊಡಗಿಸಿಕೊಂಡಿದೆ. ಸದ್ಯದ ಮಟ್ಟಿಗೆ ಪ್ರಪಂಚದಲ್ಲಿಯೇ ಅತಿಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಮಾಹಿತಿ ತಂತ್ರಜ್ಞಾನ ಕಂಪನಿ ಎಂಬ ಹೆಗ್ಗಳಿಕೆ ಇರುವುದು ಗೂಗಲ್‌ಗೆ. ಅದೇ ನಗರದ ಪ್ರತಿಷ್ಠಿತ, ಇನ್ಫೊಸಿಸ್‌, ವಿಪ್ರೊ ಸಂಸ್ಥೆಗಳಲ್ಲಿನ ಮಹಿಳಾ ಉದ್ಯೋಗಿಗಳ ಸಂಖ್ಯೆ ಮೂರನೆಯ ಒಂದು ಭಾಗ.

ಬೆಂಗಳೂರಿನಲ್ಲಿ 1.5 ಲಕ್ಷ ಮಹಿಳಾ ಎಂಜಿನಿಯರ್‌ಗಳಿದ್ದಾರೆ. ಇನ್ಫೊಸಿಸ್‌ನಲ್ಲಿ ಶೇ 33.4 ರಷ್ಟು ಮಹಿಳಾ ಉದ್ಯೋಗಿಗಳಿದ್ದರೆ, ಟಿಸಿಎಸ್‌ನಲ್ಲಿ ಈ ಪ್ರಮಾಣ ಶೇ 30ರಷ್ಟಿದೆ. ಇನ್ನು ವಿಪ್ರೊದಲ್ಲಿಯೂ ಶೇ 29ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ.

ಯುವ ಉದ್ಯೋಗಿಗಳಿಗೆ ಮುಂಬೈಗೆ ಹೋಲಿಸಿದರೆ ಬೆಂಗಳೂರಿನ ಬದುಕು ತುಟ್ಟಿ. ಆದರೆ, ಇಲ್ಲಿನ ಬಹುಸಂಸ್ಕೃತಿ, ಬಹುಭಾಷೆಗಳ ವೈಶಿಷ್ಟ್ಯ ಉತ್ತರ ಭಾರತೀಯ ಮಹಿಳಾ ಉದ್ಯೋಗಿಗಳು ಈ ಊರಿನತ್ತ ಆಕರ್ಷಣೆಗೆ ಒಳಗಾಗಲು ಕಾರಣವಂತೆ. ಬೆಂಗಳೂರಿನಲ್ಲಿ ವೈಮಾನಿಕ ಹಾಗೂ ರಕ್ಷಣಾ ಸಂಬಂಧಿತ ಎಂಜಿನಿಯರಿಂಗ್‌ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಇಲ್ಲಿ  ಅರ್ಧದಷ್ಟು ಮಹಿಳೆಯರಾಗಿದ್ದಾರೆ.

ಉದ್ಯೋಗಸ್ಥ ಮಹಿಳೆಯರ ಜೀವನ ಶೈಲಿ, ಕುಟುಂಬಕ್ಕೆ ನೀಡುವ ಸಮಯವನ್ನು ತಿಳಿಯುವ ಸಲುವಾಗಿ ಕೆಲ ಸಾಫ್ಟ್‌ವೇರ್‌ ಉದ್ಯೋಗಿಗಳನ್ನು ಮಾತಿಗೆಳೆದೆ. ‘ಬಹುತೇಕ ಕಂಪನಿಗಳಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದವರಲ್ಲಿ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಅನುಪಾತ ಸಮವಾಗಿಯೇ ಇರುತ್ತದೆ. ಮಧ್ಯವಯಸ್ಸಿನ ಮಹಿಳೆಯರ ಆದ್ಯತೆಗಳು ಬದಲಾದಂತೆ ಉದ್ಯೋಗದಿಂದ ದೂರ ಉಳಿದು ಗೃಹಿಣಿಯಾಗಿರಲು ಬಯಸುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿಯೇ ನನ್ನ ಕಂಪನಿ ‘ವರ್ಕ್‌ ಫ್ರಮ್‌ ಹೋಂ’ (ಮನೆಯಿಂದಲೇ ಕೆಲಸ ನಿರ್ವಹಿಸುವುದು) ವ್ಯವಸ್ಥೆ ಕಲ್ಪಿಸಿದೆ. ಮಾತ್ರವಲ್ಲದೆ ಮೂರು ವರ್ಷ ಬಿಡುವು ತೆಗೆದುಕೊಂಡು ಮತ್ತೆ ಕೆಲಸಕ್ಕೆ ಮರಳಲು ಅವಕಾಶ ನೀಡಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇನ್ಫೊಸಿಸ್‌ ಉದ್ಯೋಗಿ ಸಂಜನಾ ನಾಯರ್‌.

‘ವಾರದ ಐದು ದಿನಗಳಲ್ಲಿ ನಾಲ್ಕು ಶಿಫ್ಟ್‌ಗಳಲ್ಲಿಯೂ ಕೆಲಸ ಮಾಡುವ  ನಾನು ವಾರಾಂತ್ಯಗಳನ್ನು ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಸಂಭ್ರಮಿಸುತ್ತೇನೆ. ತಾರಾ ಹೋಟೆಲ್‌ಗಳಲ್ಲಿ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಸವಿಯುತ್ತೇನೆ. ಜೊತೆ ಜೊತೆಗೇ ಬೀದಿ ದೀಪಗಳ ಕೆಳಗೆ ನಿಂತು ಫುಡ್‌ ಕೋರ್ಟ್‌ ಖಾದ್ಯಗಳ ರುಚಿ ನೋಡುತ್ತೇನೆ. ಜಾಲಿ ರೈಡ್‌ ಮಾಡುತ್ತಾ ನಗರದ ಹೊರವಲಯಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಾ, ನಗರದ ಗಲ್ಲಿ ಗಲ್ಲಿಗಳನ್ನು ಸುತ್ತುತ್ತೇನೆ’ ಎನ್ನುವಾಗ ಆ ಐಟಿ ಉದ್ಯೋಗಿಯ ಕಣ್ಣುಗಳಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು.

ವಿಪ್ರೊ ಕಂಪನಿಯಲ್ಲಿ ಆರಂಕಿಯ ಸಂಬಳ ಪಡೆಯುವ 36 ವರ್ಷ ವಯಸ್ಸಿನ ರೀತು ಕಂಪನಿಯ ಎಲ್ಲ ಶಿಫ್ಟ್‌ಗಳನ್ನು ನಿರ್ವಹಿಸುತ್ತಾರೆ. ಕೆಲವು ಶಿಫ್ಟ್‌ಗಳಿರುವಾಗ ಮನೆಯ ಮುಂದೆ ಮುಂಜಾನೆ 4 ಗಂಟೆಗೆ ಹಾಜರಾಗುವ ಕ್ಯಾಬ್‌ಗೂ ಉತ್ಸಾಹದಿಂದಲೇ ಸಜ್ಜಾಗುತ್ತಾರೆ. ಎಷ್ಟೇ ಒತ್ತಡವಿದ್ದರೂ ವಸ್ತ್ರಕ್ಕೆ ಹೊಂದಿಕೆಯಾಗುವ ಕಿವಿಯೋಲೆ, ಬಳೆ, ಹಣೆಯ ಬಿಂದಿಗಳನ್ನು ತಾಳ್ಮೆಯಿಂದಲೇ ಧರಿಸುತ್ತಾರೆ. ಮುಂಜಾನೆ ಕ್ಯಾಬ್‌ ಏರಿ ಹೊರಟರೆ ಮನೆಗೆ ಮರಳುವುದು ಮಧ್ಯಾಹ್ನದ ನಂತರವಷ್ಟೆ. ರಾತ್ರಿ ಮಾತ್ರ ಮನೆಯಲ್ಲಿ ಊಟಮಾಡುವ ಅವರು ಹೊರಗಿನ ಊಟ, ತಿಂಡಿಗೆ ಒಗ್ಗಿಹೋಗಿದ್ದಾರೆ. ಮೂರು ವರ್ಷದ ತಮ್ಮ ಮಗನನ್ನು ಡೇ ಕೇರ್‌ ಕೇಂದ್ರಕ್ಕೆ ಬಿಡುವ ಬದಲು ಮನೆಯಲ್ಲಿಯೇ ಕೆಲಸದಾಕೆಯನ್ನು ನೇಮಿಸಿಕೊಂಡಿದ್ದಾರೆ.

27 ವರ್ಷದ ರಚನಾ ಗೌಡ ಇನ್ಫೊಸಿಸ್‌ ಉದ್ಯೋಗಿ. ಮಾರುಕಟ್ಟೆಗೆ ಬರುವ ಎಲ್ಲ ಹೊಸ ಮೊಬೈಲ್‌ಗಳ ಮೊದಲ ಗ್ರಾಹಕಿ ನಾನಾಗಬೇಕು ಎನ್ನುವುದು ಅವರ ಆಸೆ. ಇವರ ತಿಂಗಳ ವೇತನ ₹80 ಸಾವಿರ. ಬಹುಪಾಲು ವೇತನವನ್ನು ಮೊಬೈಲ್‌ ಹಾಗೂ ಡ್ರೆಸ್‌ ಆ್ಯಕ್ಸ್‌ಸರೀಸ್‌ಗಳ ಖರೀದಿಗೆ ಮೀಸಲಿಡುವ ಇವರು ಸಾಮಾಜಿಕ ಮಾಧ್ಯಮಗಳ ಕಡುಮೋಹಿ. ಫೇಸ್‌ಬುಕ್‌ ಸ್ಟೇಟಸ್‌ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ ಉತ್ತಮ ಫೋಟೊಗಳನ್ನು ಹಾಕುವುದಕ್ಕಾಗಿಯೇ ವಾರಾಂತ್ಯಗಳಲ್ಲಿ ಚಾರಣ, ಪ್ರವಾಸಕ್ಕೆ ಹೋಗುತ್ತಾರೆ. ಕ್ರಿಕೆಟ್‌ ಪ್ರೇಮಿ ರಚನಾ ಯಾವುದೇ ಶಿಫ್ಟ್‌ನಲ್ಲಿ ಕೆಲಸಮಾಡುತ್ತಿದ್ದರೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯಗಳನ್ನು ಮಿಸ್‌ ಮಾಡುವುದಿಲ್ಲ.

ಪುರುಷರಿಗೆ ಸರಿಸಮನಾವಾಗಿ ಎಲ್ಲ ಶಿಫ್ಟ್‌ಗಳಲ್ಲಿ ಕೆಲಸಮಾಡುವ ಮಹಿಳಾ ಉದ್ಯೋಗಿಗಳಿಗೆ ಕಂಪನಿಯೇ ಪ್ರತ್ಯೇಕ ಕ್ಯಾಬ್‌ ಕಲ್ಪಿಸುತ್ತದೆ. ಕೆಲವರಿಗೆ ಸಹೋದ್ಯೋಗಿಗಳೊಂದಿಗಿನ ಸಹಪ್ರಯಾಣವನ್ನು ಸಂಭ್ರಮಿಸಲು ಇದು ಸಹಕಾರಿಯಾದರೆ, ಮತ್ತೆ ಕೆಲವರಿಗೆ ಇದೇ ‘ವ್ಯಾನಿಟಿ ವ್ಯಾನ್’ ಕೂಡ ಹೌದು. ಬ್ಯಾಗ್‌ನಲ್ಲಿನ ಮೇಕಪ್‌ ಕಿಟ್‌ ತೆಗೆದು ಸಂಚಾರ ದಟ್ಟಣೆಯ ಸುದೀರ್ಘ ಸಮಯವನ್ನು ಪ್ರಸಾಧನಕ್ಕೆ ಮೀಸಲಿರಿಸುತ್ತಾರೆ.

ನಗರದಲ್ಲಿ ತಾರಾ ಹೋಟೆಲ್‌ಗಳಿಗೇನೂ ಕೊರತೆಯಿಲ್ಲ. ಈ ಹೋಟೆಲ್‌ಗಳಲ್ಲಿ ಅಂಧದ ಸಮವಸ್ತ್ರ ತೊಟ್ಟು, ಮಂದಸ್ಮಿತರಾಗಿ ಗ್ರಾಹಕರನ್ನು ಸ್ವಾಗತಿಸುವ ಸ್ವಾಗತಕಾರಣಿಯರಿಂದ, ಹೋಟೆಲ್‌ ಒಳಗಡೆ ಪ್ರೀತಿಯಿಂದ ಊಟ ಬಡಿಸುವ ಸರ್ವರ್‌ಗಳವರೆಗೂ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯೂ ಲಿಂಗಾಧಾರಿತ ವೇತನ ತಾರತಮ್ಯವಿಲ್ಲ. ಅನುಭವವೇ ಇಲ್ಲಿ ಎಲ್ಲ. ಬಹುಭಾಷಾ ಪ್ರಾವೀಣ್ಯ ಇಲ್ಲಿನ ಉದ್ಯೋಗಿಗಳಿಗೆ ಬೇಕಾದ ಮುಖ್ಯ ಕೌಶಲ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌) ಸಂಶೋಧನೆ ನಿರತ ವಿದ್ಯಾರ್ಥಿನಿಯರ ಪ್ರಮಾಣ ಶೇ 22. ಉಪನ್ಯಾಸದೊಂದಿಗೆ ಸಂಶೋಧನೆ ಮಾಡುತ್ತಿರುವ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ 8.

ಬೆಂಗಳೂರಿನ ಉದ್ಯೋಗಸ್ಥ ಮಹಿಳೆಯರ ಜೀವನ ಶೈಲಿಯೂ ಆಕರ್ಷಕ. ಬಹುತೇಕ ಮನೆ ಊಟದಿಂದ ದೂರ ಉಳಿದಿರುವ ಇವರಿಗೆ ಮಲ್ಲೇಶ್ವರದ ಮಸಾಲೆ ದೋಸೆ, ವಿಶ್ವೇಶ್ವರಪುರದ ಬಗೆ ಬಗೆಯ ಚಾಟ್ಸ್‌ ಸೆಂಟರ್‌ಗಳೇ ಉದರ ತುಂಬಿಸುವ ತಾಣಗಳು. ಮೂರು ತಿಂಗಳಿಗೆ ಬದಲಾಗುವ ಮೊಬೈಲ್‌, ವಾರಂತ್ಯಗಳ ಮೋಜಿನ ಪಾರ್ಟಿಗಳು ಮತ್ತೆ ವಾರದ ದಿನಗಳಲ್ಲಿ ಕೆಲಸದ ತಲ್ಲೀನತೆ. ಉದ್ಯೋಗ ಇವರಿಗೆ ಕೇವಲ ಆದಾಯ ಮೂಲ ಮಾತ್ರವಲ್ಲ. ಹೆಮ್ಮೆಯೂ ಹೌದು.


*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.