ಕೊರಿಯೊಗ್ರಫಿ
`ಕೋರಿಯೊಗ್ರಫಿ~ ಹಾಗೂ `ಕೊರಿಯೊಗ್ರಫಿ~ ನಡುವೆ ಸಾಕಷ್ಟು ಅರ್ಥ ವ್ಯತ್ಯಾಸ. ಒಂದು ನೃತ್ಯಕ್ಕೆ ಸಂಬಂಧಿಸಿದ್ದು; ಇನ್ನೊಂದು ತಲೆ ಚಿಟ್ಟೆನ್ನಿಸುವ ಮಾತುಗಾರಿಕೆಯನ್ನು ವ್ಯಂಗ್ಯ ಮಾಡುವಂಥದ್ದು. ಕೋರಿಯೊಗ್ರಫಿ ಎಂದರೆ ನೃತ್ಯ ಸಂಯೋಜನೆ.
ಆದರೆ ಅದೇ ಪದವನ್ನು ಸ್ವಲ್ಪ ಟ್ವಿಸ್ಟ್ ಮಾಡಿರುವ ಪದಚತುರರು ಬಹಳಷ್ಟು ಮಾತಾಡುವವರನ್ನು ಕೀಟಲೆ ಮಾಡಲು `ಕೊರಿಯೊಗ್ರಫಿ~ ಬಳಸಿಕೊಂಡಿದ್ದಾರೆ. ಸಕತ್ ಕೊರಿತಾನೆ, ಮಿದುಳಿಗೆ ಕೈಹಾಕ್ತಾನೆ, ಬೋರು ಹೊಡೆಸುವ ಭಾಷಣ ಎನ್ನುವಂಥ ಸಂದರ್ಭದಲ್ಲಿ ಕೊರಿಯೊಗ್ರಫಿ ಎಂದು ಬಳಸುತ್ತಾರೆ.
ಬಿಸ್ಕೆಟ್ಹಾಕು
ಬಿಸ್ಕೇಟ್ ಹಾಕು ಅನ್ನುವುದು ಕಾಲೇಜು ಹೈಕಳ ಬಾಯಲ್ಲಿ ಬಿಸ್ಕೆಟ್ಹಾಕು ಆಗಿದೆ. ಬಿಸ್ಕೇಟ್ ಹಾಕುವುದು ಎಂದರೆ ಸಹಜವಾಗಿ ನಾಯಿಗೆ ಬಿಸ್ಕೆಟ್ ಎಸೆದು ತಿನ್ನಿಸುವುದು. ಸಣ್ಣ ಪುಟ್ಟ ಆಮಿಷಗಳನ್ನೊಡ್ಡಿ ಒಲಿಸಿಕೊಳ್ಳುವುದನ್ನು ಈ `ಬಿಸ್ಕೆಟ್ಹಾಕು~ ಎಂಬುದರ ಮೂಲಕ ಹೇಳಲಾಗುತ್ತದೆ.
ಲಂಚ ಕೊಡುವುದಕ್ಕೂ ಇದನ್ನೇ ಬಳಸುವುದುಂಟು. `ಬಿಸ್ಕೆಟ್ಹಾಕಿದ್ರೆ ದಾರಿಗೆ ಬರ‌್ತಾನೆ~ ಎಂಬಲ್ಲಿರುವುದು ಕೊಡಬೇಕಾದ ಲಂಚ ಕೊಟ್ಟರೆ ಹೇಳಿದಂತೆ ಕೇಳುತ್ತಾನೆ ಎಂಬ ಧ್ವನಿ ಅಡಗಿದೆ. ಗೆಳೆಯರು ಯಾವುದಾದರೂ ಕೆಲಸ ಬಯಸಿದಾಗ ದುಡ್ಡು ಕೊಡುತ್ತೇನೆ ಇಲ್ಲವೇ ಪಾರ್ಟಿ ಕೊಡಿಸುತ್ತೇನೆ ಎಂಬ ಆಮಿಷವೊಡ್ಡಿದರೆ `ಏನಮ್ಮಾ ಬಿಸ್ಕೆಟ್ಹಾಕ್ತಿದ್ದೀಯಾ?~ ಎಂದು ಕಿಚಾಯಿಸುವುದುಂಟು. ಈ ಪ್ರಯೋಗದ ತಮಾಷೆಯೆಂದರೆ ನಾಯಿಗೆ ಬಿಸ್ಕೆಟ್ ಎಸೆಯುವುದಕ್ಕೆ ಈ ಪದವನ್ನು ಈಗ ಬಳಸಲಾಗುತ್ತಿಲ್ಲ ಎಂಬುದು.
ಮಟಾಷ್‌ಲೆಗ್
ಜನರ ಬಾಯಿಯಲ್ಲಿ ಸುಳಿದಾಡಿ ಈ ಪದವು ಸಿನಿಮಾಕ್ಕೆ ಹೋಯಿತೋ ಅಥವಾ ಸಿನಿಮಾದಿಂದ ಜನರ ಬಾಯಿಗೆ ಬಂದಿತೋ ಹೇಳೋದು ಕಷ್ಟ. ಆದರೆ ನಾಲಿಗೆಯಲ್ಲಿ ಹರಿದಾಡಿಕೊಂಡಿದೆ. `ಮಟಾಷ್~ ಎಂದರೆ ಎಲ್ಲವೂ ದುರಂತದಲ್ಲಿ ಮುಗಿದು ಹೋಗುವುದು.
ಈ `ಮಟಾಷ್~ ಜೊತೆಗೆ `ಲೆಗ್~ ಸೇರಿಕೊಂಡು ವಿಶಿಷ್ಟವಾದ ಅರ್ಥವೊಂದು ಹೊಮ್ಮಿದೆ. ಕಾಲ್ಗುಣ ಕೆಟ್ಟದಾಗಿರುವ ವ್ಯಕ್ತಿಗೆ `ಮಟಾಷ್‌ಲೆಗ್~ ಎಂದು ವ್ಯಂಗ್ಯ ಮಾಡಲಾಗುತ್ತದೆ. ಕಾಲಿಟ್ಟರೆ ಸಾಕು ಒಳ್ಳೆಯದೂ ಕೆಟ್ಟದ್ದಾಗುತ್ತದೆ ಎನ್ನುವುದು ಶುದ್ಧಾರ್ಥ! `ಮಟಾಷ್‌ಲೆಗ್ ಇಟ್ಟಾ ನೋಡು ಎಲ್ಲಾ ಬರ್ಬಾದ್ ಆಗಿ ಹೋಯಿತು~ ಎಂದು ಕಟುವಾಗಿ ಹೇಳುವುದೂ ಇದೆ. ಒಟ್ಟಿನಲ್ಲಿ ಕೆಟ್ಟ ಕಾಲ್ಗುಣಕ್ಕೆ `ಮಟಾಷ್‌ಲೆಗ್~ ಪ್ರಯೋಗ ಆಗುತ್ತಿದೆ.
ಐರನ್ ಲೆಗ್
ಇದು ಗಾಂಧಿ ನಗರದಲ್ಲಿ ಹುಟ್ಟಿಕೊಂಡ ಪದ ಎನಿಸುತ್ತದೆ. ಕಬ್ಬಿಣದ ಕಾಲು ಎಂಬ ಅರ್ಥದ ಈ ಪದದ ವ್ಯತ್ಪತ್ತಿಯ ಕುರಿತು ಸಿಗುವ ವಿವರಗಳು ಕಡಿಮೆ. ಒಬ್ಬನ ಕಾಲ್ಗುಣ ಚೆನ್ನಾಗಿಲ್ಲ ಎಂದು ಹೇಳುವುದಕ್ಕೆ ಇದನ್ನು ಬಳಸಲಾಗುತ್ತದೆ.
ನಿರ್ದಿಷ್ಟ ವ್ಯಕ್ತಿಯೊಬ್ಬ ಯೋಜನೆಯೊಳಗೆ ಬಂದರೆ ಆ ಯೋಜನೆ ವಿಫಲವಾಗುತ್ತದೆ ಎಂದು ಹೇಳುವುದಕ್ಕೆ ಇದು ಬಳಕೆಯಾಗುತ್ತದೆ. `ಅವನ್ದು ಐರನ್ ಲೆಗ್~ ಎಂದರೆ ಅವನು ಬಂದರೆ ಯೋಜನೆ ವಿಫಲ ಎಂದರ್ಥ. ಕೆಲವು ನಿದೇರ್ಶಕರು, ತಂತ್ರಜ್ಞರು ಮತ್ತು ಕಲಾವಿದರಿಗೆ ಈ ಪದ ಪ್ರಯೋಗವಾಗುತ್ತದೆ. ಆದರೆ ಆತನಿಂದ ಒಂದು ಯಶಸ್ಸು ಬಂದು ಬಿಟ್ಟರೆ ಐರನ್ ಲೆಗ್ ಅಂಕಿತ ಇಲ್ಲವಾಗುತ್ತದೆ. ಹಾಗಾಗಿ ಇದೊಂದು ಬಗೆಯಲ್ಲಿ ಚಲನಶೀಲ ಅಡ್ಡ ಹೆಸರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.