ADVERTISEMENT

ಸ್ಪರ್ಧೆಯೆಂಬ ಭ್ರಮೆ ಬಿಡಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಆಧುನಿಕತೆ ತಂದ ಬದಲಾವಣೆಗಳಲ್ಲಿ ಅತ್ಯಂತ ಮುಖ್ಯವಾದುದು `ಸ್ಪರ್ಧೆ~ಯ ಪರಿಕಲ್ಪನೆ. ಪ್ರಕೃತಿಯ ತರ್ಕದಲ್ಲಿ ಎಲ್ಲಿಯೂ ಸ್ಪರ್ಧೆಗೆ ಸ್ಥಳವಿಲ್ಲ. ಇದನ್ನು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು ಹೊರಟ ಮನುಷ್ಯ ಕಂಡುಕೊಂಡ. ಸರಳ ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು. `ಬಲಶಾಲಿಯಷ್ಟೇ ಬದುಕುತ್ತಾನೆ~ ಎಂಬ ತರ್ಕದಲ್ಲಿ ಪ್ರಕೃತಿ ವರ್ತಿಸುತ್ತದೆ ಎಂಬ ಮನುಷ್ಯನ ನಿಲುವು ನಿಜವೇ ಆಗಿದ್ದರೆ ಪ್ರಕೃತಿಯಲ್ಲಿ ನಾವು ಬಲಶಾಲಿ ಎಂದುಕೊಳ್ಳುವ ಪ್ರಾಣಿಗಳು ಮತ್ತು ಸಸ್ಯಗಳಷ್ಟೇ ಇರಬೇಕಾಗಿತ್ತು. ಬರೇ ಹುಲಿಗಳಷ್ಟೇ ಇರುವ ಒಂದು ಕಾಡನ್ನು ಊಹಿಸಿಕೊಳ್ಳಿ. ಅವುಗಳಲ್ಲೊಂದಕ್ಕೂ ಬದುಕಲು ಸಾಧ್ಯವಿಲ್ಲ.

ಆದ್ದರಿಂದ ಪ್ರಕೃತಿಯಲ್ಲಿ ಸ್ಪರ್ಧೆ ಇದೆ ಎಂಬುದು ನಮ್ಮ ಅರಿವಿನ ಕೊರತೆಯಿಂದ ಸೃಷ್ಟಿಯಾಗಿರುವ ಮನೋಭಾವ. ದುರಂತವೆಂದರೆ ಇದೊಂದು ಅಜ್ಞಾನ ಎಂದು ಸುಮ್ಮನಿರುವ ಹಾಗೂ ಇಲ್ಲ. ಅದು ಮನುಷ್ಯನ ಬದುಕನ್ನು ಪ್ರಭಾವಿಸಿರುವ ರೀತಿಯನ್ನು ನೋಡಿದರೆ ಭಯವಾಗುತ್ತದೆ. ಶಾಲೆಗೆ ಹೋಗುವ ಮಗುವಿನಿಂದ ಆರಂಭಿಸಿ ಉದ್ಯೋಗಕ್ಕೆ ಕಾಲಿಡುವ ಯುವಕನ ತನಕ ಎಲ್ಲರೂ ಸ್ಪರ್ಧೆಯ ಬಗ್ಗೆಯೇ ಯೋಚಿಸುತ್ತಿದ್ದಾರೆ. ನಾನು ಗೆಲ್ಲಬೇಕಾದರೆ ಮತ್ಯಾರನ್ನೋ ಸೋಲಿಸಬೇಕೆಂಬ ಮನಸ್ಥಿತಿಯಲ್ಲಿ ಮುಂದುವರಿಯುತ್ತಿದ್ದಾರೆ.

ಸ್ಪರ್ಧೆಯೇ ಇಲ್ಲವಾದರೆ ಬದುಕಿನಲ್ಲಿ ಯಾವ ಅರ್ಥವಿದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕೆ ಉತ್ತರವನ್ನೂ ಪ್ರಕೃತಿಯೇ ಕೊಡುತ್ತಿದೆ. ಒಬ್ಬರ ಕಣ್ಣಿನ ಪಾಪೆಗಳಂತೆ ಮತ್ತೊಬ್ಬರ ಕಣ್ಣಿನ ಪಾಪೆಯಿರುವುದಿಲ್ಲ ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ವಿಶಿಷ್ಟ ಗುರುತಿಗಾಗಿ ಕಣ್ಣಿನ ಪಾಪೆಯ ಸ್ಕ್ಯಾನಿಂಗ್ ಮಾಡುವುದೇ ಈ ಕಾರಣಕ್ಕಾಗಿ. ಹಾಗೆಯೇ ನಮ್ಮ ಬೆರಳಚ್ಚುಗಳು ನಮ್ಮವು ಮಾತ್ರ. ಇವು ಇತರ ಯಾರ ಬೆರಳಚ್ಚನ್ನೂ ಹೋಲುವುದಿಲ್ಲ. ಅಂದರೆ ಪ್ರಕೃತಿ ಪ್ರತಿಯೊಬ್ಬರನ್ನೂ ವಿಶಿಷ್ಟರನ್ನಾಗಿಯೇ ರೂಪಿಸಿದೆ. ಅಂದರೆ ಈ ಪ್ರಪಂಚದಲ್ಲಿ ನಮ್ಮಂತಿರುವುದು ನಾವು ಮಾತ್ರ ತಾನೇ.

ನಮ್ಮಂತಿರುವುದು ನಾವು ಮಾತ್ರ ಎಂಬುದು ಅರ್ಥವಾದರೆ ಸ್ಪರ್ಧೆ ಎಂಬುದು ಎಂಥಾ ಭ್ರಮೆ ಎಂಬುದೂ ಅರ್ಥವಾಗುತ್ತದೆ. ಐನ್‌ಸ್ಟೀನ್ ಶಾಲೆಯಲ್ಲಿರುವಾಗ ಗಣಿತದಲ್ಲಿ ಫೇಲಾಗಿದ್ದ ಎಂಬುದನ್ನು ಚಪ್ಪರಿಸಿಕೊಂಡು ಓದುವ ನಾವು ಮುಂದೆ ಐನ್‌ಸ್ಟೀನ್ ತನ್ನ ಅತಿಕ್ಲಿಷ್ಟ ಪರಿಕಲ್ಪನೆಗಳನ್ನೆಲ್ಲಾ ಗಣಿತ ಸೂತ್ರಗಳ ಮೂಲಕವೇ ಜಗತ್ತಿಗೆ ಮಂಡಿಸಿದ್ದ ಎಂಬುದನ್ನು ಮರೆತುಬಿಡುತ್ತೇವೆ. ಶಾಲೆಯಲ್ಲಿರುವಾಗ ಗಣಿತದಲ್ಲಿ ಫೇಲಾದವನು ಗಣಿತಜ್ಞನಾಗಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಮುಂದಿನದ್ದು ಅರ್ಥವಾಗುತ್ತದೆ. ಶಾಲೆಯಲ್ಲಿ ಆತ ಗಣಿತವನ್ನು ಅರಿತುಕೊಳ್ಳಲು ಪ್ರಯತ್ನಿಸಿರಲಿಲ್ಲ. ಗಣಿತವನ್ನು ಅರಿತುಕೊಳ್ಳುವ ಕ್ಷಣ ಬಂದಾಗ ಆತ ಅದನ್ನು ಅರಿತ ಅಷ್ಟೇ.

ಜಗತ್ತಿನಲ್ಲಿ ಸ್ಪರ್ಧೆ ಇದೆ ಎಂದು ನಂಬಿದ ಕ್ಷಣವೇ ನಾವೂ ಯಾರನ್ನೋ ಸೋಲಿಸಲು ಹೊರಡುತ್ತೇವೆ. ಅರ್ಥಾತ್ ನಾವು ಮತ್ತೊಬ್ಬ ನಡೆಯುತ್ತಿರುವ ಅದೇ ಹಾದಿಯಲ್ಲಿ ನಡೆಯ ತೊಡಗುತ್ತೇವೆ. ಆ ಮತ್ತೊಬ್ಬನ/ಮತ್ತೊಬ್ಬಳ ಪ್ರತಿಯೊಂದು ಕ್ರಿಯೆಗೂ ನಾವು ಪ್ರತಿಕ್ರಿಯಿಸ ತೊಡಗುತ್ತೇವೆ. ಪರಿಣಾಮವಾಗಿ ನಾವು ನಾವಾಗಿ ಮಾಡಬಹುದಾದ ಎಲ್ಲವನ್ನೂ ಮರೆತು ಇನ್ನೊಬ್ಬರು ಮಾಡುವುದಕ್ಕೆ ಪೂರಕವಾಗಿಯೂ ವಿರುದ್ಧವಾಗಿಯೋ ಯಾವುದೋ ಒಂದನ್ನು ಮಾಡುತ್ತಾ ಹೋಗುತ್ತೇವೆ. ನಾವು ನಮ್ಮತನವನ್ನು ಕಂಡುಕೊಳ್ಳಲಾಗದೆ ಸೊರಗುತ್ತೇವೆ.

ಪ್ರಕೃತಿ ನಿಮ್ಮನ್ನು ವಿಶಿಷ್ಟವಾಗಿ ಸೃಷ್ಟಿಸಿರುವುದರ ಹಿಂದೆ ಒಂದು ಉದ್ದೇಶವಿದೆ ಎಂಬುದನ್ನು ನೀವು ಅರಿತರೆ ಸ್ಪರ್ಧೆಯ ಭ್ರಮೆಯಿಂದ ಹೊರಬರುತ್ತೀರಿ. ನಿಮ್ಮನ್ನು ನೀವು ಕಂಡುಕೊಳ್ಳುತ್ತೀರಿ. ನೀವೇನಾಗಬೇಕೆಂಬುದು ನಿಮಗೆ ತಿಳಿಯುತ್ತದೆ. ನಿಮ್ಮ ಬದುಕಿನ ಗುರಿ ಸ್ಪಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.