ADVERTISEMENT

ಸ್ವಯಂಚಾಲಿತ ಕಾರಿಗೆ ದಾರಿ ಬಿಡಿ...

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 19:30 IST
Last Updated 20 ಡಿಸೆಂಬರ್ 2017, 19:30 IST
ಸ್ವಯಂಚಾಲಿತ ಕಾರಿಗೆ ದಾರಿ ಬಿಡಿ...
ಸ್ವಯಂಚಾಲಿತ ಕಾರಿಗೆ ದಾರಿ ಬಿಡಿ...   

ಭಾರತೀಯ ರಸ್ತೆಗಳಲ್ಲಿ ಸ್ವಯಂಚಾಲಿತ ಕಾರುಗಳು ಓಡಾಡಲು ಇನ್ನೆಷ್ಟು ಸಮಯ ಬೇಕು? ಆಟೊಮೊಬೈಲ್‌ ಕ್ಷೇತ್ರದಲ್ಲಿ ಸದ್ಯ ಬಲವಾಗಿ ಕಾಡುತ್ತಿರುವ ಪ್ರಶ್ನೆ ಇದು. ಸ್ವಯಂಚಾಲಿತ ಕಾರು ರೂಪಿಸಲು ದೇಶದ ಬಹುತೇಕ ಆಟೊಮೊಬೈಲ್‌ ಕಂಪನಿಗಳು ತುಂಬಾ ಶ್ರಮ ಹಾಕುತ್ತಿವೆ. ಭಾರಿ ಪ್ರಮಾಣದ ಹೂಡಿಕೆಯನ್ನೂ ಮಾಡುತ್ತಿವೆ.

ಅದು 2016ರ ಜುಲೈ ತಿಂಗಳು. ಇನ್ಫೊಸಿಸ್‌ನ ಆಗಿನ ಸಿಇಒ ವಿಶಾಲ್‌ ಸಿಕ್ಕಾ, ಕಂಪನಿಯ ತ್ರೈಮಾಸಿಕ ಪ್ರಗತಿ ಕುರಿತು ಪತ್ರಿಕಾ ಗೋಷ್ಠಿ ನಡೆಸಲು ಚಾಲಕರಹಿತ ವಾಹನದಲ್ಲಿ ಬಂದಿದ್ದರು. ಒಂದೇ ತಿಂಗಳ ಅಂತರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಸಹ ಅಂತಹದ್ದೇ ವಾಹನದಲ್ಲಿ ಪ್ರಯಾಣ ಮಾಡಿದ್ದರು. ಸ್ಟೀರಿಂಗ್‌ ಹಿಂದೆ ಚಾಲಕನಿದ್ದರೂ (ತಂತ್ರಜ್ಞಾನ ಕೈಕೊಟ್ಟು ಏನಾದರೂ ತೊಂದರೆಯಾದರೆ ನಿಭಾಯಿಸಲು) ವಾಹನ ಮಾತ್ರ ಸ್ವಯಂಚಲನೆಯಲ್ಲಿತ್ತು. ಟಾಟಾ ಕಂಪನಿಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಒಂದು ವಾರದ ಮುಂಚೆ ಸೈರಸ್‌ ಮಿಸ್ತ್ರಿ ಸ್ವಯಂಚಾಲಿತ ಬಸ್‌ನ ಡೆಮೊ ಕೊಡಿಸಿದ ಘಟನೆ ಸಹ ವಾಹನಪ್ರಿಯರಲ್ಲಿ ಇನ್ನೂ ಹಚ್ಚ ಹಸಿರಾಗಿದೆ.

ಸ್ವಯಂಚಾಲಿತ ವಾಹನಗಳ ಬಳಕೆಯ ವಿಷಯವಾಗಿ ಕೆಲವು ವರ್ಷಗಳ ಹಿಂದೆಯೇ ಇಂತಹ ಪ್ರಯತ್ನಗಳು ಆರಂಭವಾಗಿವೆ ನಿಜ. ಆದರೆ, ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಭಾರತದ ರಸ್ತೆಗಳಲ್ಲಿ ಅಂತಹ ತಂತ್ರಜ್ಞಾನದ ವಾಹನಗಳು ಓಡುವುದು ಸುಲಭವಲ್ಲ ಎನ್ನುತ್ತಾರೆ ದೇಶದ ಪ್ರಮುಖ ಆಟೊಮೊಬೈಲ್‌ ಕಂಪನಿಗಳ ತಾಂತ್ರಿಕ ವಿಭಾಗದ ಮುಖ್ಯಸ್ಥರು.

ADVERTISEMENT

‘ಸಂಪೂರ್ಣ ಸ್ವಯಂಚಾಲಿತ ವಾಹನಗಳು ರಸ್ತೆಗಿಳಿಯಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು. ಅದು ಹಂತ–ಹಂತವಾಗಿ ಆಗಬೇಕಿರುವ ಕೆಲಸ. ಸ್ವಯಂಚಾಲಿತ ಬ್ರೇಕ್‌ಗಳ ಸೌಲಭ್ಯ ಕಲ್ಪಿಸುವುದು, ಪಾರ್ಕಿಂಗ್‌ಗೆ ನೆರವಾಗಬಲ್ಲ ತಂತ್ರಜ್ಞಾನ ಅಳವಡಿಸುವುದು, ಚಾಲನೆಗೆ ಅಗತ್ಯವಾದ ನಿರ್ದೇಶನಗಳನ್ನು ನೀಡುವುದು, ಅಪಾಯದ ಕುರಿತು ಮುನ್ನೆಚ್ಚರಿಕೆ ಕೊಡುವುದು –ಇಂತಹ ಸೌಲಭ್ಯಗಳನ್ನು ವಾಹನಗಳಲ್ಲಿ ಒದಗಿಸುತ್ತಾ ಹೋದಂತೆ ಭಾರತೀಯ ರಸ್ತೆಗಳಲ್ಲಿ ಸ್ವಯಂಚಾಲಿತ ವಾಹನಗಳು ಓಡಾಡುವುದು ಕೆಲವೇ ವರ್ಷಗಳಲ್ಲಿ ನನಸಾಗಲಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಈಗಾಗಲೇ ಚಾಲಕಸ್ನೇಹಿ ತಂತ್ರಜ್ಞಾನವನ್ನು ನಮ್ಮ ವಾಹನಗಳಲ್ಲಿ ಅಳವಡಿಸಿದ್ದೇವೆ. ತಂತ್ರಜ್ಞಾನದ ಕ್ಷಿಪ್ರ ಪ್ರಗತಿಗೆ ತಕ್ಕಂತೆ ನಮ್ಮ ಯೋಜನೆಗಳು ಸಹ ಬದಲಾಗುತ್ತಿದ್ದು, ಸಂಪೂರ್ಣ ಸ್ವಯಂಚಾಲಿತ ವಾಹನಗಳ ತಯಾರಿಕೆಯತ್ತ ಗಮನ ಕೇಂದ್ರೀಕರಿಸಿದ್ದೇವೆ’ ಎಂದು ಟಾಟಾ ಮೋಟಾರ್ಸ್‌ ಲಿಮಿಟೆಡ್‌ನ ಮಾರುಕಟ್ಟೆ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

ಮಹೀಂದ್ರಾ ಅಂಡ್‌ ಮಹೀಂದ್ರಾ ಲಿಮಿಟೆಡ್‌ ಕಂಪನಿ ಸಹ ಸ್ವಯಂಚಾಲಿತ ವಾಹನಗಳ ತಯಾರಿಕಾ ಯೋಜನೆ ರೂಪಿಸುವಲ್ಲಿ ಹಿಂದೆ ಬಿದ್ದಿಲ್ಲ. ಎಸ್‌ಯುವಿಯಿಂದ ಟ್ರ್ಯಾಕ್ಟರ್‌ವರೆಗೆ ತಾನು ತಯಾರಿಸುವ ಎಲ್ಲ ವಾಹನಗಳಲ್ಲಿ ಹೊಸಯುಗದ ಈ ತಂತ್ರಜ್ಞಾನ ಅಳವಡಿಸಲು ಉದ್ದೇಶಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಯೋಗಾರ್ಥವಾಗಿ ಚಾಲಕರಹಿತ ಟ್ರ್ಯಾಕ್ಟರ್‌ ಓಡಿಸಿ ಸಂಭ್ರಮಿಸಿದೆ.

ಐದು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುರುವಾದ ಆ ಪ್ರವೃತ್ತಿ ಇದೀಗ ಭಾರತದಲ್ಲೂ ಆರಂಭವಾಗಿದೆ. ಭಾರತೀಯ ರಸ್ತೆಗಳಿಗೆ ಸರಿಹೊಂದುವಂತಹ ತಂತ್ರಜ್ಞಾನ ಶೋಧಿಸುವ ಕಾರ್ಯಕ್ಕೆ ಸ್ಟಾರ್ಟ್‌ ಅಪ್‌ಗಳು ಹಾಗೂ ಎಂಜಿನಿಯರಿಂಗ್‌ ಕಂಪನಿಗಳು ಚಾಲನೆ ನೀಡಿವೆ.

ಭಾರತೀಯ ಆಟೊಮೊಬೈಲ್‌ ಕ್ಷೇತ್ರದಲ್ಲಿ ಸ್ವಯಂಚಾಲಿತ ತಂತ್ರಜ್ಞಾನದ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದೆ ಹೈಟೆಕ್‌ ರೋಬಾಟಿಕ್‌ ಕಂಪನಿ. ಅರ್ಧ ಡಜನ್‌ನಷ್ಟು ಕಾರು ತಯಾರಿಕಾ ಕಂಪನಿಗಳ ಜತೆ ಇದು ಕೆಲಸ ಮಾಡುತ್ತಿದೆ.

ಹಲವು ಕಂಪನಿಗಳು ಸ್ವಯಂಚಾಲಿತ ತಂತ್ರಜ್ಞಾನದ ಬಳಕೆಗೆ ಈಗಾಗಲೇ ಮುಂದಡಿಯಿಟ್ಟಿವೆ. ಆದರೆ, ಈ ತಂತ್ರಜ್ಞಾನದ ಬಳಕೆ ಇನ್ನೂ ಅಂಬೆಗಾಲಿಡಲು ಅದು ದುಬಾರಿ ಆಗಿರುವುದೇ ಕಾರಣ’ ಎಂದು ಹೈಟೆಕ್‌ ರೋಬಾಟಿಕ್‌ ಕಂಪನಿಯ ಆರ್‌.ವಿಜಯ್‌ ಹೇಳುತ್ತಾರೆ.

ತಂತ್ರಜ್ಞಾನಕ್ಕೆ ಮಾಡಬೇಕಾದ ಖರ್ಚು ತುಂಬಾ ಹೆಚ್ಚಿರುವ ಕಾರಣ ಸದ್ಯದ ಸನ್ನಿವೇಶದಲ್ಲಿ ಸಾಮಾನ್ಯ ಕಾರಿಗಿಂತ ಸಂಪೂರ್ಣ ಸ್ವಯಂಚಾಲಿತ ಕಾರು ಹತ್ತು ಪಟ್ಟು ದುಬಾರಿ. ತಂತ್ರಜ್ಞಾನದ ಸೆನ್ಸರ್‌ಗಳ ದರ ಮೊದಲಿಗಿಂತ ಈಗ ಕಡಿಮೆಯಾಗಿದೆ. 2022ರ ವೇಳೆಗೆ ಅವುಗಳ ದರ ಇನ್ನೂ ಕುಸಿಯಲಿದೆ ಎನ್ನುತ್ತಾರೆ ಅವರು.

ಜಗತ್ತಿನ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಸದ್ಯ ರೂಪಿಸಿರುವ ಸ್ವಯಂಚಾಲಿತ ಕಾರುಗಳು ಕ್ಯಾಲಿಫೋರ್ನಿಯಾದ ಸುಸಜ್ಜಿತ ರಸ್ತೆಗಳಲ್ಲಿ ಓಡಬಲ್ಲವು. ಭಾರತ ಹಾಗೂ ಚೀನಾದಲ್ಲಿ ಬಲು ದಟ್ಟಣೆಯಿಂದ ಕೂಡಿದ, ಸ್ಪಷ್ಟ ಮಾರ್ಗಸೂಚಿಗಳಿಲ್ಲದ ರಸ್ತೆಗಳಲ್ಲಿ ಅವುಗಳು ಓಡಬಲ್ಲವೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಿರುವ ಸ್ಟಾರ್ಟ್‌ ಅಪ್‌ಗಳು ಭಾರತೀಯ ರಸ್ತೆಗಳಿಗೆ ಸರಿಹೊಂದುವಂತಹ ಸ್ವಯಂಚಾಲಿತ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪ್ರತಿ ಗಂಟೆಗೆ 17 ಜನ ಸಾವನ್ನಪ್ಪುತ್ತಾರೆ. ವಾಹನಗಳ ಸ್ವಯಂಚಾಲಿತ ತಂತ್ರಜ್ಞಾನದಿಂದ ಇಂತಹ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಾದರೆ ರಸ್ತೆ ಸುರಕ್ಷತೆಗೆ ಬಹುದೊಡ್ಡ ಕೊಡುಗೆ ಸಿಕ್ಕಂತೆ. ಕಾರುಗಳಿಗೆ ಅಳವಡಿಸುವ ಸೆನ್ಸರ್‌ಗಳು ಮುಂದಿರುವ ಆಕೃತಿಯೇನು, ಬೈಕೋ, ಕಾರೋ, ಎಮ್ಮೆಯೋ ಅಥವಾ ಮಾನವನೋ ಎಂಬುದನ್ನು ಸ್ಪಷ್ಟವಾಗಿ ಗುರುತಿಸುವಂತೆ ಕ್ಯಾಮೆರಾಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಿಜಯ್‌ ಹೇಳುತ್ತಾರೆ. 2025ರ ವೇಳೆಗೆ ಸ್ವಯಂಚಾಲಿತ ಕಾರುಗಳು ರಸ್ತೆಗಿಳಿಯಲಿವೆ ಎಂದು ಬಹುತೇಕ ಕಾರು ತಯಾರಿಕಾ ಕಂಪನಿಗಳ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.