ADVERTISEMENT

ಹಳೆ ಕಾರು ಹೊಸ ನೋಟ

ಸುಮಲತಾ ಎನ್, ಪದ್ಮನಾಭ ಭಟ್ಟ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST
ಹಳೆ ಕಾರು ಹೊಸ ನೋಟ
ಹಳೆ ಕಾರು ಹೊಸ ನೋಟ   

ಅಲ್ಲಿ ನೋಡು ಹಳೆ ಮರ್ಸಿಡಿಸ್... ವಾವ್! ಆಸ್ಟಿನ್ ಎಷ್ಟು ಚೆನ್ನಾಗಿದೆ ಅಲ್ವಾ? ಅರೆ, ಮಾರಿಸ್ ನೋಡು... ಹೀಗೆ ಕ್ಲಬ್ ಆವರಣಕ್ಕೆ ಕಾಲಿಟ್ಟ ಕಾರುಗಳ ಗುಣಗಾನ ಸಾಗುತ್ತಲೇ ಇತ್ತು ಅಲ್ಲಿ.

ಸಣ್ಣಗೆ ಶಬ್ಧ ಮಾಡುತ್ತಾ ಕೆಂಪು ಬಣ್ಣದ ಪುಟ್ಟ ಟ್ರಯಂಫ್, ಜಾಗ್ವಾರ್, ಆಸ್ಟಿನ್, ಪ್ಲೈಮೌತ್ ಹೀಗೆ ಒಂದಲ್ಲಾ, ಎರಡಲ್ಲ, ಬರೋಬ್ಬರಿ 18 ಹಳೇ ಕಾರುಗಳು ಅಲ್ಲಿಗೆ ಬಂದು ನಿಂತವು. ಕಾರುಗಳ ಹಿಂದೆ ಹಳೆಯ ವೆಸ್ಪಾವೊಂದು ಕೊನೆಗೆ ಕಾಣಿಸಿಕೊಂಡಿತು. ಯಾವುದನ್ನು ನೋಡುವುದು, ಯಾವುದನ್ನು ಬಿಡುವುದು ಎಂಬ ಗೊಂದಲದೊಂದಿಗೇ ಜನರು ಅವುಗಳ ರೂಪ, ವಿನ್ಯಾಸಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು.

ಈ ಅಪರೂಪದ ಐಶಾರಾಮಿ ಕಾರುಗಳನ್ನು ಬೆರಗು ಕಣ್ಣಿನಿಂದ ನೋಡುತ್ತಾ ನಿಂತ ಚಿಣ್ಣರಿಗೆ ಕಾರುಗಳ ಮಾಲಿಕರೇ ಮಾಹಿತಿ ನೀಡುತ್ತಿದ್ದರು. 1928ರ ಅವಧಿಯ ಕಾರುಗಳಿಂದಿಡಿದು 1989ರವರೆಗೂ ಪ್ರಚಲಿತದಲ್ಲಿದ್ದ ಕಾರುಗಳು ಅಲ್ಲಿದ್ದವು. 1968ರ ಟ್ರಯಂಫ್, 1932ರ ಪ್ಲೈಮೌತ್, 1965ರ ಸ್ಟ್ಯಾಂಡರ್ಡ್ ಮಾರ್ಕ್ 2, ಮರ್ಸಿಡಿಸ್ ಬೆನ್ಸ್ 210, 1989ರ ಜಾಗ್ವಾರ್ ಸಾವರೀನ್, 1965ರ ವೆಸ್ಪಾ, 1939ರ ಆಸ್ಟಿನ್, 1967ರಿಂದಿಡಿದು 1973ರವರೆಗಿನ ವೋಕ್ಸ್ ವ್ಯಾಗನ್ ಬೀಟಲ್ ಮಾದರಿಯ ಕಾರುಗಳು, 1946ರ ಎಂಜಿ, 1936ರ ಮಾರಿಸ್, 1928ರ ಆಸ್ಟಿನ್, ಹೀಗೆ ಒಂದೊಂದು ಕಾಲ ಘಟ್ಟದಲ್ಲೂ ಕಾರುಗಳ ವಿನ್ಯಾಸದಲ್ಲಿ ಏನೆಲ್ಲಾ ಬದಲಾವಣೆ ಸಂಭವಿಸಿತ್ತು ಎಂಬುದನ್ನು ಕಾರುಗಳು ನಿರೂಪಿಸಿದ್ದವು.

ಹಳೆಯ ಕಾಲದ ಅದ್ದೂರಿತನವನ್ನು ನೆನಪಿಸುವಂತೆ ಮಾಡಿದ್ದ ಈ ಕಾರುಗಳು ತಮ್ಮ ಚೆಲುವನ್ನು ಜನರಿಗೆ ಪ್ರದರ್ಶಿಸಿದ್ದ ಪರಿಯಿದು. ನಮ್ಮ ಹಳೆಯ ಬೆಂಗಳೂರಿನಂತೆ ಹಿಂದಿನ ಕಾಲದ ಕಾರುಗಳ ಕುರುಹುಗಳೂ ಮಾಸಿಹೋಗುತ್ತಿದೆ ಎಂಬ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ವೈಟ್‌ಫೀಲ್ಡ್ ಕ್ಲಬ್ ವಿಡಿಬಿ ರಿಯಲ್ ಎಸ್ಟೇಟ್ ಕಂಪೆನಿಯೊಂದಿಗೆ ಕೈ ಜೋಡಿಸಿ ಈ ವಿಶೇಷ ರೀತಿಯ ರ‍್ಯಾಲಿಯನ್ನು ಹಮ್ಮಿಕೊಳ್ಳುತ್ತಾ ಸಾಗಿದೆಯಂತೆ. ಈ ಬಾರಿ ಪುರಾತನ ಕಾರುಗಳ ಪಟ್ಟಿಗೆ ಇನ್ನೊಂದೆರೆಡು ಕಾರುಗಳು ಸೇರಿಕೊಂಡಿರುವುದು ವಿಶೇಷವಂತೆ.

ವೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ನಿಂದ ರ‍್ಯಾಲಿ ಆರಂಭಗೊಂಡು ಮ್ಯಾರಿಯಟ್ ಹೋಟೆಲ್ ಮಾರ್ಗವಾಗಿ ವೈಟ್‌ಫೀಲ್ಡ್ ಕ್ಲಬ್‌ಗೆ ರ‍್ಯಾಲಿ ಕೊನೆಗೊಂಡಿತ್ತು. ಅಲ್ಲೆಲ್ಲಾ ತಮ್ಮ ಪ್ರೀತಿಯ ಕಾರುಗಳೊಂದಿಗೆ ಸುತ್ತಾಡಿ ಬಂದ ಮಾಲೀಕರು ಹೆಮ್ಮೆಯಿಂದ ಕಾರುಗಳನ್ನು ನೇವರಿಸುತ್ತಿದ್ದರು.

ಆಂಗ್ಲೋ ಇಂಡಿಯನ್‌ಗಳು ಹೆಚ್ಚಾಗಿ ಬಳಸುತ್ತಿದ್ದ ಈ ಕಾರುಗಳು ಕಾಲಕ್ಕೆ ಸಿಲುಕಿ ಒಂದೊಂದಾಗಿ ಜನರ ನೆನಪಿನಿಂದ ದೂರ ಸರಿಯುತ್ತಾ ಹೋದವು. ಆಗಿನ ಕಾಲಕ್ಕೆ ಅತಿ ಶ್ರೀಮಂತಿಕೆಯ ಪ್ರತೀಕವಾದ, ಈಗ ತುಂಬಾ ಅಪರೂಪವೆನಿಸುವ ಈ ಕಾರಿನ ಮಾದರಿಗಳು ಹಿಂದಿನ ಕಾಲದ ನೆನಪನ್ನು ಮರುಕಳಿಸುವಂತೆ ಮಾಡಿದ್ದವು.

ಹಳೆಯದರ ಸವಿ ನೆನಪು...
 

ಹೊಸದು ಬಂದಾಕ್ಷಣ ಹಳೆಯದನ್ನು ಮರೆಯುವುದು ಸಹಜ. ಇದೇ ರೀತಿ ವೈಟ್‌ಫೀಲ್ಡ್ ಕೂಡ ಹಿಂದಿನ ಕಾಲದಲ್ಲಿ ತನ್ನದೇ ವೈಶಿಷ್ಟ್ಯ ಹೊಂದಿತ್ತು. ಇಲ್ಲಿನ ವಾಸಿಗಳೇ ಕಟ್ಟಿಕೊಂಡಿದ್ದ ವೈಟ್‌ಫೀಲ್ಡ್ ಕ್ಲಬ್ ಶತಮಾನ ಕಂಡಿದೆ. ಇದೇ ಕಾರಣಕ್ಕೆ ವೈಟ್‌ಫೀಲ್ಡ್ ಕ್ಲಬ್‌ನ ಇತಿಹಾಸ ಸಾರಲು ಹಳೆಯ ಕಾಲದ ಕಾರುಗಳ ರ‍್ಯಾಿಯನ್ನು ಆರಂಭಿಸಲಾಯಿತು. ಒಟ್ಟಿನಲ್ಲಿ ಹಳೆಯದನ್ನು ಮಾಸಲು ಬಿಡದೆ ಜನರಿಗೆ ತೋರುವುದೇ ಇದರ ಹಿಂದಿನ ಉದ್ದೇಶ.

ತುಂಬಾ ಅಪರೂಪವಾಗಿರುವ ಈ ಕಾರುಗಳನ್ನು ಮರೆಯಾಗಲು ಬಿಟ್ಟರೆ ಮುಂದಿನ ಪೀಳಿಗೆಗೆ ಈ ರೀತಿಯ ಅಚ್ಚರಿಗಳು ಇಲ್ಲವಾಗಬಹುದು. ಆದ್ದರಿಂದ ಪ್ರತಿ ವರ್ಷ ವಿಂಟೇಜ್ ಕಾರುಗಳನ್ನು ಜನರಿಗೆ ರ‍್ಯಾಲಿ ಮೂಲಕ ಪ್ರದರ್ಶಿಸುತ್ತೇವೆ. ಜನರೂ ಸಂತಸಗೊಂಡು ನಮ್ಮ ಈ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಾರೆ. ಈ ದಿನ ಕ್ಲಬ್‌ನ ಹಳೆಯ ಸದಸ್ಯರೆಲ್ಲಾ ಒಟ್ಟುಗೂಡಿ ಸಂತೋಷದಿಂದ ಕಾಲ ಕಳೆಯುತ್ತೇವೆ. ಹಳೆಯ ನೆನಪುಗಳನ್ನೂ ಹಂಚಿಕೊಳ್ಳುತ್ತೇವೆ.
 -ಕೋಶಿ ವರ್ಗೀಸ್  ವಿಡಿಬಿ ವ್ಯವಸ್ಥಾಪಕ ನಿರ್ದೇಶಕ.

ವಿಂಟೇಜ್ ಕಾರುಗಳ ಒಡೆಯ...

ಆಂಗ್ಲೋ ಇಂಡಿಯನ್‌ಗಳು ಬಳಸುತ್ತಿದ್ದರು ಎನ್ನಲಾದ ಈ ಕಾರುಗಳನ್ನು ನೋಡುವುದೇ ಚೆಂದ. ಆದರೆ ಇವುಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಜಾಗ್ವಾರ್, ಡ್ಯಾಮ್ಲೊ, ಮರ್ಸಿಡಿಸ್, ಆಸ್ಟಿನ್ ಸೇರಿದಂತೆ ಆರು ವಿಂಟೇಜ್ ಕಾರುಗಳು ನನ್ನ ಬಳಿಯಿವೆ. ನಗರದಲ್ಲಿ ಈ ರೀತಿಯ ವಿಶೇಷ ಕಾರುಗಳನ್ನು ಹೊಂದಿರುವವರನ್ನು ಹುಡುಕಿ, ಅವರಿಗೆ ಪತ್ರ ಬರೆದು ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತೇವೆ.  ಇದರಿಂದ ಜನರಿಗೂ ಈ ಕಾರುಗಳನ್ನು ನೋಡುವ ಅವಕಾಶ ಸಿಗುತ್ತದೆ. ತುಂಬಾ ವರ್ಷದಿಂದ ರ‍್ಯಾಲಿಯಲ್ಲಿ ನಾನು ಪಾಲ್ಗೊಳ್ಳುತ್ತಾ ಬಂದಿದ್ದೇನೆ. ನಮ್ಮ ಕಾರನ್ನು ನೋಡಿ ಇನ್ನೊಬ್ಬರು ಹೊಗಳಿದರೆ ಸಹಜವಾಗಿಯೇ ಖುಷಿಯಾಗುತ್ತದಲ್ಲವೇ? ಇನ್ನೂ ಅಚ್ಚರಿ ಎಂದರೆ, ಯುವಜನರೂ ಹಳೆಯ ಕಾರುಗಳ ಬಗ್ಗೆ ಆಸಕ್ತಿ ಇಟ್ಟುಕೊಂಡಿರುವುದು.
-ಸುಲೈಮಾನ್ ಜಾಮಾ ವೈಟ್‌ಫೀಲ್ಡ್ ಕ್ಲಬ್ ಸದಸ್ಯ.

ಕಾರೆಂದರೆ ಕ್ರೇಝ್

ನನಗೆ ಕಾರೆಂದರೆ ಮೊದಲಿನಿಂದಲೂ ತುಂಬಾ ಇಷ್ಟ. ನನ್ನ ಬಳಿ ಎಂಎಕ್ಸ್ 2 ಕಾರಿದೆ. ಲೆಕ್ಕವಿಲ್ಲದಷ್ಟು ರ‍್ಯಾಲಿಗಳಲ್ಲಿ ಭಾಗವಹಿಸಿದ್ದೇನೆ. ಈ ರ‍್ಯಾಲಿಯಲ್ಲಿ ಭಾಗವಹಿಸಿರುವ ಏಕೈಕ ಮಹಿಳೆ ನಾನು ಎನ್ನುವುದು ಇನ್ನೂ ಸಂತಸ. ನನ್ನ ಪತಿಗೂ ಕೂಡ ಕಾರೆಂದರೆ ಕ್ರೇಝ್. ಹಾಗಾಗಿ ಕುಟುಂಬ ಸಮೇತ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತೇವೆ. ಈ ರ‍್ಯಾಲಿಗಳಲ್ಲಿ ಇನ್ನೂ ಹಲವು ವಿಂಟೇಜ್ ಕಾರುಗಳನ್ನು ನೋಡಿದೆ. ಕಾರುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಕುರಿತೂ ಒಬ್ಬೊರಿಗೊಬ್ಬರು ಟಿಪ್ಸ್ ಹಂಚಿಕೊಳ್ಳುತ್ತೇವೆ.
-ಸ್ಯಾಂಡ್ರಾ, ಕಾರು ಮಾಲೀಕರು.

ಮೊದಲ ಅನುಭವ...

ಇದೇ ಮೊದಲ ಬಾರಿ ನನ್ನ ಟ್ರಯಂಫ್ ಕಾರಿನೊಂದಿಗೆ ರ‍್ಯಾಲಿಗೆ ಬಂದಿದ್ದು. ಇಲ್ಲಿ ಎಲ್ಲ ರೀತಿಯ ಕಾರುಗಳನ್ನೂ ನೋಡಿ ಖುಷಿಯಾಯಿತು. ರ‍್ಯಾಲಿಯಲ್ಲಿ ಜನರು ನನ್ನ ಕಾರನ್ನು ಆಶ್ಚರ್ಯದಿಂದ ನೋಡುತ್ತಿದ್ದದು ಹೆಮ್ಮೆಯೆನಿಸಿತು. ಈ ಸ್ಪೋರ್ಟ್ಸ್ ಕಾರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತೇನೆ. 1968ರ ಮಾದರಿಯ ಈ ಕಾರನ್ನು 7 ವರ್ಷದಿಂದ ಕಾಪಾಡಿಕೊಂಡು ಬಂದಿದ್ದೇನೆ. ಕಾರೆಂದರೆ ಕೇವಲ ವಸ್ತುವಲ್ಲ, ಅದು ನಮ್ಮ ಅಭಿರುಚಿಯನ್ನೂ ಬಿಂಬಿಸುತ್ತದೆ.
-ಫಿಲಿಪ್ಸ್, ಕಾರು ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT