ADVERTISEMENT

ನೋಡಲೇಬೇಕಾದ ಪ್ರೇಮ ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ಟೈಟಾನಿಕ್‌ (ಇಂಗ್ಲಿಷ್‌)‌ ಚಿತ್ರದ ದೃಶ್ಯ
ಟೈಟಾನಿಕ್‌ (ಇಂಗ್ಲಿಷ್‌)‌ ಚಿತ್ರದ ದೃಶ್ಯ   

ಹೊಸಕಾಲದ ಪ್ರೇಮ ಕಥೆ
ಒಂದಾನೊಂದು ಕಾಲದಲ್ಲಿ ಊಂ..ಹು.. ನಮ್ಮೀ ಕಾಲದಲ್ಲೇ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಸಂಖ್ಯೆಯನ್ನು ಮೊಬೈಲ್‌ನಲ್ಲಿ ‘ಡಿಸಿಪಿ’ (ಉಪ ಪೊಲೀಸ್‌ ಆಯುಕ್ತ) ಎಂದು ‘ಸೇವ್‌’ ಮಾಡಿಕೊಂಡ.

ಪೊಲೀಸ್‌ ಇಲಾಖೆಯ ಜತೆಗೆ ವೃತ್ತಿಯ ನಂಟು ಇದ್ದುದರಿಂದ ಈ ‘ಡಿಸಿಪಿ’ ಕುರಿತು ಮನೆಯಲ್ಲಿ ಯಾರಿಗೂ ಅನುಮಾನ ಬರುವುದಿಲ್ಲ ಎಂದುಕೊಂಡ. ಆದರೆ, ಪದೇ ಪದೇ ಮಹಿಳಾ ‘ಡಿಸಿಪಿ’ಯಿಂದ ಕರೆಗಳು ಬರಲು ಶುರುವಾದಾಗ ಮನೆಮಂದಿಗೆ ಅನುಮಾನ ಬಂತು. ಪ್ರೇಮಿಯ ಮೊಬೈಲ್‌ನಲ್ಲಿದ್ದ ‘ಡಿಸಿಪಿ’ ಸಂಖ್ಯೆಯನ್ನು ಪಡೆದು ಟ್ರೂ ಕಾಲರ್‌ಗೆ ಹಾಕಿ ನೋಡಿದರು. ಸ್ಕ್ರೀನ್‌ ಮೇಲೆ ಥಟ್ಟಂತ ಹುಡುಗಿಯೊಬ್ಬಳ ಹೆಸರು ಮೂಡಿತು. ಪ್ರೇಮದ ಗುಟ್ಟು ರಟ್ಟಾಯಿತು.

ನೀತಿ: ಪ್ರೇಮಿಯ ಹೆಸರನ್ನು ಕೋಡ್‌ನಲ್ಲಿ ಸೇವ್‌ ಮಾಡಿಕೊಂಡು ಎಷ್ಟೇ ಗುಟ್ಟಾಗಿಟ್ಟರೂ ಟ್ರೂ ಕಾಲರ್‌ ರಟ್ಟು ಮಾಡುತ್ತೆ!

ADVERTISEMENT

*
ತಿಂಮನ ಸಲಹೆ!
ತಿಂಮನಿಗೆ ಅದೊಂದು ದಿನ ಒಮ್ಮೆಂದೊಮ್ಮೆಲೇ ದೇಶದ ಜನಸಂಖ್ಯೆಯ ಬಗ್ಗೆ ಯೋಚನೆ ಹತ್ತಿತು ಮತ್ತು ಅದರ ನಿಯಂತ್ರಣಕ್ಕೆ ಒಂದು ಮಾರ್ಗವನ್ನೂ ಕಂಡುಕೊಂಡ. ಅದನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂದು ತನ್ನ ಗುರುಗಳ ಬಳಿಗೆ ಸಾಗಿ ತನ್ನ ಪ್ರಸ್ತಾಪವನ್ನು ಮುಂದಿಟ್ಟ: ‘ಗುರುಗಳೇ, ನಮ್ಮ ದೇಶದ ಜನಸಂಖ್ಯಾ ನಿಯಂತ್ರಣಕ್ಕೊಂದು ಮಾರ್ಗ ಕಂಡುಕೊಂಡಿದ್ದೇನೆ, ಅದೇನೆಂದರೆ ಇನ್ನುಮುಂದೆ ಯುವಕರೆಲ್ಲರೂ ಬ್ರಹ್ಮಚರ್ಯ ಪಾಲಿಸಿದರೆ ಈ ಸಮಸ್ಯೆಯಿಂದ ದೇಶವನ್ನು ಉಳಿಸಬಹುದು!’

‘ಹೌದೌದು! ನೀನೊಬ್ಬನೇ ಅಲ್ಲ, ನಿನ್ನ ಮಗ ಮತ್ತು ಅವನ ಮಗ - ನಿನ್ನ ಮೊಮ್ಮಗ, ಹೀಗೆ ಮೂರು ತಲೆಮಾರೂ ಬ್ರಹ್ಮಚರ್ಯವನ್ನು ಪಾಲಿಸಬೇಕು’ ಎಂದು ಗುರುಗಳು ಮರು ನುಡಿದರು.
(ಬೀchi ಅವರ ಸಾಹಿತ್ಯದಿಂದ ಹೆಕ್ಕಿದ್ದು)

*
ಟೈಟಾನಿಕ್‌ (ಇಂಗ್ಲಿಷ್‌)‌
ಮದುವೆ ನಿಶ್ಚಯವಾದ ಶ್ರೀಮಂತ ಮನೆತನದ ಯುವತಿಯೊಬ್ಬಳು ನತದೃಷ್ಟ ಹಡಗು ಆರ್‌ಎಂಎಸ್‌ ಟೈಟಾನಿಕ್‌ ದುರಂತಕ್ಕೆ ಈಡಾಗುವ ಮುನ್ನ ಬಡ ಕಲಾವಿದನೊಬ್ಬನ ಪ್ರೀತಿಯ ಬಂಧನದಲ್ಲಿ ಬೀಳುವ ಅಮರ ಪ್ರೇಮಕಾವ್ಯ.

*
ಡಿಡಿಎಲ್‌ಜೆ (ಹಿಂದಿ)ಯುರೋ
ಪಿನಲ್ಲಿ ಪ್ರವಾಸ ಹೊರಟಾಗ ರೈಲಿನಲ್ಲಿ ಹುಡುಗನೊಬ್ಬ ಹುಡುಗಿಯೊಂದಿಗೆ ಮುಖಾಮುಖಿ ಆಗುತ್ತಾನೆ. ಆ ಹುಡುಗಿಗೋ ಬೇರೆ ಹುಡುಗನೊಂದಿಗೆ ಮೊದಲೇ ಮದುವೆ ನಿಶ್ಚಯವಾಗಿರುತ್ತದೆ. ಮದುವೆಯ ಸಂಪ್ರದಾಯಗಳಲ್ಲಿ ಕಥೆ ವಿಶಿಷ್ಟವಾಗಿ ವಿಸ್ತರಿಸುತ್ತಾ ಹೋಗುತ್ತದೆ.

*
ಕಾಸಾಬ್ಲಾಂಕಾ (ಇಂಗ್ಲಿಷ್‌)
ಅದು 1941ರ ಸಮಯ. ಅಮೆರಿಕದಿಂದ ವಲಸೆ ಬಂದ ರಿಕ್‌ ಬ್ಲೇನ್‌ ಎಂಬಾತ ಕಾಸಾಬ್ಲಾಂಕಾ ಎಂಬ ನೈಟ್‌ಕ್ಲಬ್‌ನ ಒಡೆಯನಾಗಿರುತ್ತಾನೆ. ಒಂದುದಿನ ಆತನ ಮಾಜಿ ಪ್ರೇಯಸಿಯೊಂದಿಗೆ ಆಕಸ್ಮಿಕವಾಗಿ ಮುಖಾಮುಖಿ ಆಗುತ್ತಾನೆ. ಮುಂದಿನ ದಿನಗಳಲ್ಲಿ ಇಬ್ಬರ ಬದುಕೂ ಬದಲಾಗುತ್ತದೆ!

*
ಬಾಂಬೆ (ಹಿಂದಿ)
ಮುಸ್ಲಿಂ ಹುಡುಗಿ ಮತ್ತು ಹಿಂದೂ ಹುಡುಗ ಪ್ರೇಮಪಾಶದಲ್ಲಿ ಬಿದ್ದಾಗ ನಮ್ಮ ಸುತ್ತಮುತ್ತ ನಡೆಯುವಂತಹ ಘಟನೆಗಳೇ ಈ ಚಿತ್ರದ ಕಥಾವಸ್ತು. ಕೋಮುಗಲಭೆ ಸೇರಿದಂತೆ ಎಲ್ಲ ವಿಧದ ಅಡೆತಡೆಗಳನ್ನು ಪ್ರೇಮ ಜಯಿಸಿ ನಿಂತ ನವಿರಾದ ಪ್ರೇಮಕಥನ.

*
ದಿ ನೋಟ್‌ಬುಕ್‌ (ಇಂಗ್ಲಿಷ್‌)
ಬಡ ಯುವಕನೊಬ್ಬನಿಗೆ ಸಿರಿವಂತ ಹುಡುಗಿಯ ಜತೆ ಪ್ರೇಮಾಂಕುರ ಆಗುತ್ತದೆ. ಅವರ ಪ್ರೇಮವನ್ನು ಸಮಾಜ ಸ್ವೀಕರಿಸಲು ಸಿದ್ಧವಿರುವುದಿಲ್ಲ. ಅವರು ಕಾನೂನು ಕಟ್ಟಳೆಗಳಿಗೆ ಕಿವಿಗೊಟ್ಟರೋ, ಹೃದಯದ ಮಾತಿಗೆ ಓಗೊಟ್ಟರೋ? ಕಣ್ಣೀರು ತರಿಸುವಂತಹ ಪ್ರೇಮಕಾವ್ಯ.

*


ಸಾಕ್ಷಾತ್ಕಾರ (ಕನ್ನಡ)
‘ಒಲವೇ ಜೀವನ ಸಾಕ್ಷಾತ್ಕಾರ’ ಎಂಬ ಅದ್ಭುತ ಮಂತ್ರವನ್ನು ಕೊಟ್ಟ ಸಿನಿಮಾ. ಸಮಾಜದಲ್ಲಿರುವ ಮೂಢನಂಬಿಕೆಗಳು ಹೇಗೆ ಸ್ವಹಿತಾಸಕ್ತಿಗೆ ಬಳಕೆ ಆಗುತ್ತವೆ ಎಂಬುದನ್ನು ಕಟ್ಟಿಕೊಡುತ್ತಲೇ ಪ್ರೇಮದ ಅಮರತ್ವವನ್ನೂ ಸಾರುತ್ತದೆ ಈ ಚಿತ್ರ.

*
ಸೀತಾಕೋಕ ಚಿಲುಕ (ತೆಲುಗು)
ಹಿಂದೂ ಹುಡುಗನೊಬ್ಬ ಕ್ರಿಶ್ಚಿಯನ್‌ ಹುಡುಗಿಗೆ ಮನಸೋತ ಚಿತ್ರ. ಅಮ್ಮ ಬುದ್ಧಿವಾದ ಹೇಳಿದರೂ ಇಡೀ ಊರಿಗೆ ಊರೇ ಎದುರು ಬಿದ್ದರೂ ಪ್ರೇಮಿಗಳು ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.