ADVERTISEMENT

ಬೆಂಗಳೂರಿನ ಸೇಂಟ್‌ ಪಾಲ್ಸ್‌ ಶಾಲೆ ಚಾಂಪಿಯನ್‌

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಬೆಂಗಳೂರಿನಲ್ಲಿ ಶನಿವಾರ ನಡೆದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ  ಬೆಂಗಳೂರಿನ ಜೆ.ಪಿ.ನಗರದ ಸೇಂಟ್‌ ಪಾಲ್ಸ್‌ ಇಂಗ್ಲಿಷ್‌ ಸ್ಕೂಲ್‌ನ ವಿದ್ಯಾರ್ಥಿಗಳಾದ ಚಂದ್ರಚೂಡ್‌ (ಎಡದಿಂದ ನಾಲ್ಕನೆಯವರು) ಹಾಗೂ ಸುಚೇತ್‌ ಅವರಿಗೆ ನಟ ಚೇತನ್‌, ಸಿಂಡಿಕೇಟ್‌ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸ್ವೀವನ್‌ ವಾಜ್‌ ಹಾಗೂ ಭಾರತ ಹಾಕಿ ತಂಡದ ಮಾಜಿ ನಾಯಕ ಮತ್ತು ರಾಷ್ಟ್ರೀಯ ಹಾಕಿ ತಂಡದ ಆಯ್ಕೆ ಸಮಿತಿ ಸದಸ್ಯ ಅರ್ಜುನ್‌ ಹಾಲಪ್ಪ ಬಹುಮಾನದ ಚೆಕ್‌ ವಿತರಿಸಿದರು. ಕ್ವಿಜ್‌ ಮಾಸ್ಟರ್‌ ರಾಘವ ಚಕ್ರವರ್ತಿ ಇದ್ದಾರೆ
ಬೆಂಗಳೂರಿನಲ್ಲಿ ಶನಿವಾರ ನಡೆದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಜೆ.ಪಿ.ನಗರದ ಸೇಂಟ್‌ ಪಾಲ್ಸ್‌ ಇಂಗ್ಲಿಷ್‌ ಸ್ಕೂಲ್‌ನ ವಿದ್ಯಾರ್ಥಿಗಳಾದ ಚಂದ್ರಚೂಡ್‌ (ಎಡದಿಂದ ನಾಲ್ಕನೆಯವರು) ಹಾಗೂ ಸುಚೇತ್‌ ಅವರಿಗೆ ನಟ ಚೇತನ್‌, ಸಿಂಡಿಕೇಟ್‌ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸ್ವೀವನ್‌ ವಾಜ್‌ ಹಾಗೂ ಭಾರತ ಹಾಕಿ ತಂಡದ ಮಾಜಿ ನಾಯಕ ಮತ್ತು ರಾಷ್ಟ್ರೀಯ ಹಾಕಿ ತಂಡದ ಆಯ್ಕೆ ಸಮಿತಿ ಸದಸ್ಯ ಅರ್ಜುನ್‌ ಹಾಲಪ್ಪ ಬಹುಮಾನದ ಚೆಕ್‌ ವಿತರಿಸಿದರು. ಕ್ವಿಜ್‌ ಮಾಸ್ಟರ್‌ ರಾಘವ ಚಕ್ರವರ್ತಿ ಇದ್ದಾರೆ   

ಬೆಂಗಳೂರು: ಬೆಂಗಳೂರಿನ ಜೆ.ಪಿ.ನಗರದ ಸೇಂಟ್‌ ಪಾಲ್ಸ್‌ ಇಂಗ್ಲಿಷ್‌ ಸ್ಕೂಲ್‌ ತಂಡವು ‘ಪ್ರಜಾವಾಣಿ  ಕ್ವಿಜ್‌ ಚಾಂಪಿಯನ್‌ಶಿಪ್‌’ ಗೆದ್ದುಕೊಂಡಿತು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಕ್ವಿಜ್‌ ಚಾಂಪಿಯನ್‌ಶಿಪ್‌ನ  ಅಂತಿಮ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ವಲಯಗಳಿಂದ ಆಯ್ಕೆಯಾದ 10 ತಂಡಗಳು  ಭಾಗವಹಿಸಿದವು.

ಬೆಂಗಳೂರು ವಲಯದಲ್ಲಿ ಮೊದಲ ಸ್ಥಾನ ಪಡೆದ ಸೇಂಟ್‌ ಪಾಲ್ಸ್‌ ಶಾಲೆಯ ಚಂದ್ರಚೂಡ್‌ ಹಾಗೂ ಸುಚೇತ್‌  ಫೈನಲ್‌ನಲ್ಲಿ 80 ಅಂಕಗಳನ್ನು ಗಳಿಸುವ ಮೂಲಕ ಚಾಂಪಿಯನ್‌  ಆದರು. ಮೊದಲ ಮೂರು ಸುತ್ತುಗಳಲ್ಲಿ  ಈ ತಂಡವು  ಹಿನ್ನಡೆ ಅನುಭವಿಸಿತು. ಮೂರು ಸುಳಿವುಗಳನ್ನು ಆಧರಿಸಿ ಉತ್ತರಿಸುವ ನಾಲ್ಕನೇ ಸುತ್ತಿನಲ್ಲಿ  ಹಾಗೂ ಬಜರ್‌ ಒತ್ತುವ ಮೂಲಕ ಉತ್ತರಿಸುವ ಅಂತಿಮ ಸುತ್ತಿನಲ್ಲಿ ಪ್ರಶ್ನೆಗಳಿಗೆ ಆತ್ಮವಿಶ್ವಾಸದಿಂದ ಉತ್ತರಿಸುವ ಮೂಲಕ  ಪ್ರಶಸ್ತಿಯ ಹಾದಿಗೆ ಮರಳಿತು.  

ಧಾರವಾಡ ವಲಯದಿಂದ ಆಯ್ಕೆಯಾಗಿದ್ದ ಶಿರಸಿಯ ಲಯನ್ಸ್‌  ಸ್ಕೂಲ್‌ ತಂಡ 60 ಅಂಕಗಳೊಂದಿಗೆ ದ್ವಿತೀಯ ಪಡೆಯಿತು.  ತಂಡದ  ಪ್ರಜ್ವಲ್‌ ಯಾಜಿ ಹಾಗೂ ಚಿನ್ಮಯ್‌ ಹೆಗಡೆ ಮೊದಲ ಮೂರು ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಕೊನೆಯ ಎರಡು  ಸುತ್ತುಗಳಲ್ಲಿ ಆರಂಭಿಕ ಮುನ್ನಡೆ ಉಳಿಸಿಕೊಳ್ಳುವಲ್ಲಿ ಅವರು ವಿಫಲರಾಗಿದ್ದರಿಂದ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಹಾಸನ ವಲಯದಿಂದ ಆಯ್ಕೆಯಾದ ಹಾಸನದ ಯುನೈಟೆಡ್‌ ಅಕಾಡೆಮಿ ಶಾಲಾ ತಂಡದ 30 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆಯಿತು. ಆದಿತ್ಯ ಹಾಗೂ ಅನೂಪ್‌ ತಂಡವನ್ನು ಪ್ರತಿನಿಧಿಸಿದ್ದರು.
 
ಮಂಗಳೂರು ವಲಯದಿಂದ ಆಯ್ಕೆಯಾದ ಮಂಗಳೂರಿನ ಶಾರದಾ ವಿದ್ಯಾಲಯದ ತಂಡ (ಪ್ರದ್ಯುಮ್ನ ಮತ್ತು ಪನ್ನಗ) ಹಾಗೂ ತುಮಕೂರು ವಲಯದಿಂದ ಆಯ್ಕೆಯಾಗಿದ್ದ ತುಮಕೂರಿನ ಸೇಂಟ್‌ ಮೇರೀಸ್‌ ಗರ್ಲ್ಸ್‌ ಸ್ಕೂಲ್‌ (ಸುಹಾ ಸಯ್ಯದ್‌ ಮತ್ತು ಎಚ್‌.ಕೆ.ಐಶ್ವರ್ಯ)  ತಂಡಗಳು ತಲಾ 25 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನವನ್ನು ಹಂಚಿಕೊಂಡವು. 

ಭಾರತ ಹಾಕಿ ತಂಡದ ಮಾಜಿ ನಾಯಕ ಮತ್ತು ರಾಷ್ಟ್ರೀಯ ಹಾಕಿ ತಂಡದ ಆಯ್ಕೆ ಸಮಿತಿ ಸದಸ್ಯ  ಅರ್ಜುನ್‌ ಹಾಲಪ್ಪ, ನಟ ಚೇತನ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಸ್ಟೀವನ್‌ ವಾಜ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.
*
ಅಂಕ ಗಳಿಸಲು ಸಮಾನ ಅವಕಾಶ
ಅಂತಿಮ ಸ್ಪರ್ಧೆಯಲ್ಲಿ ಒಟ್ಟು ಐದು ಸುತ್ತುಗಳಿದ್ದವು. ಸರಿ ಉತ್ತರ ಗೊತ್ತಿರುವ ತಂಡಕ್ಕೆ ಅಂಕ ಗಳಿಸಲು ಸಮಾನ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ  ಪ್ರತಿ ಸುತ್ತಿನಲ್ಲೂ ಬಜರ್‌   ಒತ್ತಲು ಅವಕಾಶ ನೀಡಲಾಯಿತು. ಇದರಿಂದಾಗಿ ಸರದಿ ಪ್ರಕಾರ ಪ್ರಶ್ನೆ ಎದುರಿಸುವ ತಂಡದ ಜೊತೆಗೆ ಬಜರ್‌ ಒತ್ತಿ ಸರಿ ಉತ್ತರ ಹೇಳಿದ ತಂಡಕ್ಕೂ ಅಂಕ ಪಡೆಯುವ ಅವಕಾಶ ಸಿಕ್ಕಿತು.  ತಪ್ಪು ಉತ್ತರ ಹೇಳಿದ ತಂಡಕ್ಕೆ ಐದು ಅಂಕ ಕಡಿತ ಮಾಡಲಾಯಿತು. ಮಿಶ್ರ ಪ್ರಶ್ನೆಗಳನ್ನು ಒಳಗೊಂಡ ಪಾಟ್‌ ಪುರಿ ಸುತ್ತು, ವಿಷಯವನ್ನು ಆಯ್ಕೆ ಮಾಡಿ ಉತ್ತರಿಸುವ ಸುತ್ತು, ವಿವಿಧ  ಸಂಬಂಧಗಳನ್ನು ಜೋಡಿಸುವ ಕನೆಕ್ಟ್‌ ಸುತ್ತು, ಮೂರು ಸುಳಿವುಗಳನ್ನು ಬಳಸಿ ಉತ್ತರ ಹೇಳುವ ಸುತ್ತು ಹಾಗೂ ಬಜರ್‌ ಸುತ್ತುಗಳಿದ್ದವು.
*
ಪ್ರಥಮ ಬಹುಮಾನ ₹50 ಸಾವಿರ
ದ್ವಿತೀಯ  ಬಹುಮಾನ ₹30 ಸಾವಿರ
ತೃತೀಯ  ಬಹುಮಾನ ₹10 ಸಾವಿರ
ನಾಲ್ಕನೇ ಬಹುಮಾನ ₹ 5 ಸಾವಿರ
*

ಗುಟಮಟ್ಟ ಉತ್ಕೃಷ್ಟ­ವಾಗಿತ್ತು. ಕಠಿಣ ಪ್ರಶ್ನೆಗಳಿಗೂ  ಅವರು ಜಿದ್ದಿಗೆ ಬಿದ್ದು ಉತ್ತರ ನೀಡಿದರು. ರಾಜ್ಯದಾದ್ಯಂತ ವಿದ್ಯಾರ್ಥಿಗಳಿಂದ ನಿರೀಕ್ಷೆಯನ್ನೂ ಮೀರಿ ಪ್ರತಿಕ್ರಿಯೆ ಸಿಕ್ಕಿದೆ.
ರಾಘವ ಚಕ್ರವರ್ತಿ,
ಕ್ವಿಜ್‌ ಮಾಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.