ADVERTISEMENT

ಬಳ್ಳಾರಿ ಸೈಕಲ್‌ ಕೋವಾ

ಆರ್. ಹರಿಶಂಕರ್
Published 16 ಮಾರ್ಚ್ 2024, 23:45 IST
Last Updated 16 ಮಾರ್ಚ್ 2024, 23:45 IST
ಚಿತ್ರಗಳು: ಮುರಳಿಕಾಂತ ರಾವ್
ಚಿತ್ರಗಳು: ಮುರಳಿಕಾಂತ ರಾವ್   

ಬಳ್ಳಾರಿ ಸೈಕಲ್‌ ಕೋವಾ ಮುಂಬೈನ ತಾಜ್‌ ಹೋಟೆಲ್‌ನ ಮೆನುವಿನಲ್ಲಿ ಸ್ಥಾನ ಪಡೆದುಕೊಂಡಿದೆ! ಇದರ ಸವಿರುಚಿಗೆ ಅಲ್ಲಿನ ಗ್ರಾಹಕರು ಮನಸೋತಿದ್ದಾರೆ. ಇಷ್ಟೇ ಅಲ್ಲದೇ  ಬೆಂಗಳೂರು, ಮೈಸೂರು, ತುಮಕೂರಿನಲ್ಲಿ ಇದರ ಸ್ವಾದಕ್ಕೆ ಫಿದಾ ಆಗಿರುವ ಅಭಿಮಾನಿ ಬಳಗವೇ ಸೃಷ್ಟಿಯಾಗುತ್ತಿದೆ. ನೆರೆಯ ಆಂಧ್ರಪ್ರದೇಶದಲ್ಲೂ ಬೇಡಿಕೆ ಕುದುರಿಸಿಕೊಂಡಿದೆ.  

ಬಳ್ಳಾರಿಯ ಈ ವಿಶಿಷ್ಟ ಕೋವಾಕ್ಕೆ ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯಾ ನಂತರದ ಇತಿಹಾಸವಿದೆ. ಕೋವಾ ಮೊದಲಿಗೆ ತಯಾರಾಗಿದ್ದು ಬ್ರಿಟಿಷರ ಸೇನೆಯ ಪಾಕಶಾಲೆಯಲ್ಲಿ. ಮಿಲಿಟರಿ ಎಂದರೆ ಗೊತ್ತಲ್ಲ, ಅಲ್ಲಿ ಬರೀ ಬಂದೂಕು ಹಿಡಿಯುವವರು ಇರುವುದಿಲ್ಲ. ಸೈನಿಕರಿಗೆ ಭೋಜನ ಉಣಿಸುವ ಕೈಗಳೂ ಇರುತ್ತವೆ. ಸೇನೆಯ ಮೆನುವಿನಲ್ಲಿ ಬಳ್ಳಾರಿ ಕೋವಾ ಕೂಡ ಇತ್ತು.

ಬ್ರಿಟಿಷರ ಸೇನೆಯಲ್ಲಿನ ಪಾಕ ಪ್ರವೀಣ ಬಳ್ಳಾರಿಯ ಗುಡುಸಾಬ್‌ ಕೋವಾ ತಯಾರಿಸುವುದರಲ್ಲಿ ಪಳಗಿದ ಕೈ. 1947ರಲ್ಲಿ ಬ್ರಿಟಿಷರು ಭಾರತ ತೊರೆದರು. ಬಳಿಕ ಗುಡುಸಾಬರು ಮನೆಯಲ್ಲೇ ಕೋವಾ ತಯಾರು ಮಾಡಿ, ಹಿತ್ತಾಳೆ ಪಾತ್ರೆಯಲ್ಲಿಟ್ಟುಕೊಂಡು ಸೈಕಲ್‌ನಲ್ಲಿ ಬಳ್ಳಾರಿಯ ಗಲ್ಲಿ ಗಲ್ಲಿ ಸುತ್ತಿ ಮಾರಾಟ ಮಾಡುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು ರಸ್ತೆಯಲ್ಲಿ ಸೈಕಲ್‌ ನಿಲ್ಲಿಸಿ ಸಂಜೆ ವರೆಗೆ ಮಾರಾಟ ಮಾಡುತ್ತಿದ್ದರು. ಹೀಗಾಗಿ ಈ ಕೋವಾಕ್ಕೆ ‘ಸೈಕಲ್‌ ಕೋವಾ’ ಎಂಬ ಹೆಸರು ಬಂದಿದೆ. 

ADVERTISEMENT

ಗುಡುಸಾಬ್‌ ಅವರ ಮಕ್ಕಳು, ಮೊಮ್ಮಕ್ಕಳ ನಂತರ ಈಗ ನಾಲ್ಕನೇ ತಲೆಮಾರು ಸೈಕಲ್‌ ಕೋವಾ ಮಾರಾಟವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಕೋವಾದೊಂದಿಗೆ ಸೈಕಲ್‌ ಕೂಡ ಬೆಸೆದುಕೊಂಡಿರುವ ಕಾರಣಕ್ಕೆ ಈಗಲೂ ಸೈಕಲ್‌ ಮೇಲೆಯೇ ಮಾರಾಟ ಮಾಡಲಾಗುತ್ತದೆ. ಈಗ ಅದಕ್ಕೆ ದೊಡ್ಡ ವ್ಯವಹಾರದ ಸ್ಪರ್ಶ ಸಿಕ್ಕಿದ್ದು, ದ್ವಿಚಕ್ರ ವಾಹನಗಳು, ಅಂಗಡಿಗಳಲ್ಲಿ ಕೋವಾ ಮಾರಾಟ ಮಾಡಲಾಗುತ್ತಿದೆ. ಮುಂದೊಂದು ದಿನ ಇದಕ್ಕೆ ಉದ್ಯಮದ ರೂಪ ನೀಡಲಾಗುವುದು ಎನ್ನುತ್ತಾರೆ ಗುಡುಸಾಬರ ಮರಿಮೊಮ್ಮಗ ಅಫ್ತಾಬ್‌ ಪಾಷಾ.

ಈ ಸಿಹಿತಿನಿಸು ಸಿದ್ಧಪಡಿಸಲು ಎಮ್ಮೆ ಹಾಲೇ ಬೇಕು. ಅದರಲ್ಲೂ ಕೊಬ್ಬಿನಾಂಶ ಜಾಸ್ತಿ ಇರಲೇ ಬೇಕು. ಅದಕ್ಕಾಗಿಯೇ ಬಳ್ಳಾರಿ ಸಮೀಪದ ಮೋಕಾ, ದಮ್ಮೂರು, ಸೋಮಸಮುದ್ರ, ಲಕ್ಷ್ಮೀನಗರ ಕ್ಯಾಂಪ್, ಬತ್ರಿ, ಅಹಂಭಾವಿ, ಕೊಳಗಲ್, ಗುಗ್ಗರಹಟ್ಟಿಗಳಿಂದ ಪರಿಚಿತ ಹೈನುಗಾರರಿಂದ ಉತ್ತಮ ಜಾತಿಯ ಗಟ್ಟಿಮುಟ್ಟಾದ ಎಳೆಯ ಪ್ರಾಯದ ಎಮ್ಮೆಗಳಿಂದಲೇ ಹಾಲನ್ನು ಪಡೆಯಲಾಗುತ್ತದೆ. ಐದಾರು ಮಂದಿ ಹೈನುಗಾರರೇ ಕೋವಾಕ್ಕೆ ಹಿಂದಿನಿಂದಲೂ ನಿರಂತರವಾಗಿ ಹಾಲು ಸರಬರಾಜು ಮಾಡುತ್ತಿದ್ದಾರೆ. 

ಎಮ್ಮೆಗಳು ಉತ್ಕೃಷ್ಟ ಗುಣಮಟ್ಟದ ಹಾಲು ನೀಡಲೆಂದೇ, ಹಿಂಡಿ, ಹುರುಳಿ, ಅಕ್ಕಿ ಹೊಟ್ಟು, ಅಕ್ಕಿ ನುಚ್ಚು, ಸಜ್ಜೆಹಿಟ್ಟು, ಹಸಿಹುಲ್ಲು, ನೆಲ್ಲುಹುಲ್ಲನ್ನು ಹೈನುಗಾರರಿಗೆ ಗುಡುಸಾಬ್‌ ಕುಟುಂಬವೇ ಸರಬರಾಜು ಮಾಡುತ್ತದೆ. ಅಷ್ಟೇ ಅಲ್ಲ, ಪ್ರತಿ ಲೀಟರ್‌ ಹಾಲಿಗೆ ₹60 ಗಳನ್ನು ನೀಡುತ್ತದೆ. ಉತ್ತಮ ಜಾತಿಯ ಎಮ್ಮೆಗಳನ್ನು ಖರೀದಿಸಿ ತರಲೆಂದೇ ಆರ್ಥಿಕ ನೆರವನ್ನೂ ನೀಡುತ್ತದೆ. ಹಾಲು ಗಟ್ಟಿಯಾಗಿದ್ದರೆ, ಕೋವಾ ರುಚಿ ಹೆಚ್ಚಾಗುತ್ತದೆ ಎಂಬುದು ಇವರ ನಂಬಿಕೆ. ಹೀಗಾಗಿ ಹಾಲಿನ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ.

ನಿತ್ಯ ಒಂದು ಬಾರಿಗೆ 300 ಲೀಟರ್‌ ಹಾಲು ತರಿಸಿಕೊಳ್ಳಲಾಗುತ್ತದೆ. ಅದರಲ್ಲಿ 50 ರಿಂದ 60 ಕೆ.ಜಿಗಳಷ್ಟು ಕೋವಾ ತಯಾರಿಸಲಾಗುತ್ತದೆ. ಅದನ್ನು ಬೆಳಗ್ಗೆ ಮತ್ತು ಮಧ್ಯಾಹ್ನ ಪಾಳಿಯಂತೆ ಕೆ.ಜಿಗೆ ₹440ರಂತೆ ಮಾರಾಟ ಮಾಡಲಾಗುತ್ತದೆ. ಕೋವಾ ತಯಾರಿಕೆ, ಮಾರಾಟ, ವ್ಯಾಪಾರ ವ್ಯವಹಾರಕ್ಕೆಂದೇ ಕುಟುಂಬದ 20ಕ್ಕೂ ಹೆಚ್ಚು ಮಂದಿ ನಿತ್ಯ ಶ್ರಮಿಸುತ್ತಾರೆ.   

ಒಣಎಲೆಯಲ್ಲಿ ಕೋವಾ ಸವಿಯುವುದೇ ಚೆನ್ನ... 

‘ಕೋವಾ ತಯಾರಿಸಲು ಏಳು ಗಂಟೆ ಹಾಲನ್ನು ಮಂದ ಉರಿಯಲ್ಲಿ ಕಾಯಿಸಬೇಕು. ನಿರಂತರವಾಗಿ ತಿರುವುತ್ತಲೇ ಇರಬೇಕು. ಇಲ್ಲವಾದಲ್ಲಿ ತಳ ಹಿಡಿದು ಕೋವಾ ಕಹಿಯಾಗಿಬಿಡುತ್ತದೆ’ ಎನ್ನುತ್ತಾರೆ ಗುಡುಸಾಬ್‌ ಮರಿಮೊಮ್ಮಗ ಮೊಹಮದ್‌ ನವಾಜ್‌.   

ಸೈಕಲ್‌ ಕೋವಾಕ್ಕೆ ಸಕ್ಕರೆ, ಬಾದಾಮಿ, ಏಲಕ್ಕಿ ಪುಡಿಯನ್ನು ಹೊರತುಪಡಿಸಿ ಬೇರೇನನ್ನೂ ಸೇರಿಸಲಾಗುವುದಿಲ್ಲ. ಕೆಡದಂತೆ ಮಾಡಲು ರಾಸಾಯನಿಕಗಳನ್ನು ಬಳಸುವುದಿಲ್ಲ. ಮಂದ ಉರಿಯಲ್ಲಿ ಮಾಡಿದ ಯಾವುದೇ ಖಾದ್ಯ ಬಹಳ ದಿನಗಳ ವರೆಗೆ ಕೆಡುವುದಿಲ್ಲ. ಈ ಕೋವಾ ಕೂಡ ಒಂದು ವಾರದ ವರೆಗೆ ಇರುತ್ತದೆ. ಅರಬ್‌ ರಾಷ್ಟ್ರಗಳಿಗೆ ಕೋವಾ ಕೊಂಡೊಯ್ದವರು ಫ್ರಿಡ್ಜ್‌ನಲ್ಲಿ ಇರಿಸಿ 15 ದಿನಗಳ ವರೆಗೆ ತಿಂದ ಉದಾಹರಣೆಗಳೂ ಇವೆ ಎಂದು ಹೇಳುತ್ತಾರೆ.   

‘ಸ್ನೇಹಿತರು ಬಳ್ಳಾರಿ ಸೈಕಲ್‌ ಕೋವಾ ರುಚಿಯನ್ನು ತೋರಿಸಿದರು. ಆಗಿಂದಲೂ ಸ್ನೇಹಿತರಿಂದ  ಕೋವಾ ತರಿಸಿಕೊಳ್ಳುತ್ತಿದ್ದೆ. ಈಗ ನಾನೇ ಬಳ್ಳಾರಿಗೆ ಬಂದಿದ್ದು, ಅದೇ ಸ್ವಾದವನ್ನೇ ಹುಡುಕಿ ಖರೀದಿಸಿದ್ದೇನೆ’ ಎನ್ನುತ್ತಾರೆ ದಾವಣಗೆರೆಯ ಟೆಕ್ಸ್‌ಟೈಲ್ಸ್‌ ಉದ್ಯಮಿ ಗೋವಿಂದರಾಜು.   

ಕೋವಾ ತಯಾರಿಸಲು ಬಾಣಲೆಗೆ ಹಾಲು ಸುರಿಯುತ್ತಿರುವುದು  

‘ಎಂಬತ್ತು ವರ್ಷಗಳ ಹಿನ್ನೆಲೆಯ ಸೈಕಲ್‌ ಕೋವಾ ಬಳ್ಳಾರಿಯಿಂದ ಹೊರಗಿನ ಪ್ರಪಂಚಕ್ಕೆ  ಲಾಕ್‌ಡೌನ್‌ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯವಾಯಿತು. ಹೊರ ಜಿಲ್ಲೆಗಳಿಂದಲೂ ಬೇಡಿಕೆ ಬರಲಾರಂಭಿಸಿತು’ ಎಂದು ಗುಡುಸಾಬ್‌ ಅವರ ಮೊಮ್ಮಗ, ಎಂಜಿನಿಯರ್‌ ಪದವೀದರ ನಾಸಿರ್‌ ಹೇಳುತ್ತಾರೆ. 

ಕೋವಾಕ್ಕೆ ಸಿಕ್ಕಿರುವ ಜನಪ್ರಿಯತೆ, ಮನ್ನಣೆಯಿಂದ ಪ್ರೇರಣೆಗೊಂಡಿರುವ ಗುಡುಸಾಬ್‌ ಅವರ ಕುಟುಂಬ ‘ಬ್ರ್ಯಾಂಡ್‌’ ರೂಪ ಕೊಡಲು ಮುಂದಾಗಿದೆ. ‘ಬಳ್ಳಾರಿ ಸೈಕಲ್‌ ಕೋವಾ’ ಎಂಬ ಹೆಸರಿನಲ್ಲಿ, ಫ್ಯಾಕ್ಟರಿ ಆರಂಭಿಸಿ, ಮಾರ್ಕೆಟಿಂಗ್‌ ಮೂಲಕ ಉದ್ಯಮದ ಸ್ಪರ್ಶ ನೀಡಲು ಚಿಂತನೆ ನಡೆಸಿದೆ.

ಬಳ್ಳಾರಿಯ ಹಳೇ ಬೆಂಗಳೂರು ರಸ್ತೆಯಲ್ಲಿ ಕೋವಾ ಸವಿಯುತ್ತಿರುವ ಗ್ರಾಹಕರು  ಚಿತ್ರಗಳು: ಮುರಳಿಕಾಂತ ರಾವ್
ನನಗೆ ಪೈಲಟ್‌ ತರಬೇತಿ ಅವಕಾಶ ಸಿಕ್ಕಿತ್ತು. ಕೋವಾ ಕಾಯಕ ಬಳ್ಳಾರಿಯಲ್ಲೇ ಕಟ್ಟಿಹಾಕಿತು. ನನ್ನ ಅಪ್ಪನಿಗೆ ದಕ್ಕಿದ್ದ ಈ ಪಾಕಕಲೆ ನನ್ನ ಮೊಮ್ಮಕ್ಕಳವರೆಗೂ ಮುಂದುವರಿದಿದೆ. ಇದು ಉದ್ಯಮದ ಸ್ವರೂಪ ಪಡೆಯುತ್ತಿರುವುದು ಖುಷಿಯ ವಿಚಾರ.
- ಮೆಹಬೂಬ್ ಪಾಷಾ, ಗುಡುಸಾಬ್‌ ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.