ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಾರ್ಕೆಲ್‌ ವಿದಾಯ

ಏಜೆನ್ಸೀಸ್
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಾರ್ಕೆಲ್‌ ವಿದಾಯ
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಾರ್ಕೆಲ್‌ ವಿದಾಯ   

ಕೇಪ್‌ಟೌನ್‌ (ರಾಯಿಟರ್ಸ್‌): ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ಮಾರ್ನ್‌ ಮಾರ್ಕೆಲ್‌ ಸೋಮವಾರ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ತವರಿನಲ್ಲಿ ಆಯೋಜನೆಗೊಂಡಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವುದಾಗಿ ಅವರು ಹೇಳಿದ್ದಾರೆ.

33 ವರ್ಷದ ಮಾರ್ಕೆಲ್‌ ಅವರು ಕುಟುಂಬದ ಒತ್ತಡದಿಂದಾಗಿ ನಿವೃತ್ತಿ ಘೋಷಿಸಿರುವುದಾಗಿ ಹೇಳಿದ್ದಾರೆ. ಆದರೆ ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ ಅವರು ಇಂಗ್ಲೆಂಡ್‌ನ ಕೋಲ್ಪಕ್‌ ಸಂಸ್ಥೆಯೊಂದರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ADVERTISEMENT

‘ಇದೊಂದು ಕಠಿಣ ನಿರ್ಧಾರ. ಆದರೆ ಹೊಸ ವೃತ್ತಿಜೀವನವನ್ನು ಆರಂಭಿಸಲು ಇದು ಸರಿಯಾದ ಕಾಲ. ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಇತ್ತೀಚೆಗೆ ವಿದೇಶದ ಗೆಳತಿಯನ್ನು ಮದುವೆಯಾಗಿದ್ದೇನೆ. ಅಂತರರಾಷ್ಟ್ರೀಯ ವೇಳಾಪಟ್ಟಿಯ ನಡುವೆ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಕಷ್ಟು ಒತ್ತಡ ಆಗುತ್ತಿದೆ’ ಎಂದು ಮಾರ್ಕೆಲ್‌ ಹೇಳಿರುವುದಾಗಿ ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಸದ್ಯಕ್ಕೆ ಆಸ್ಟ್ರೇಲಿಯಾ ಸರಣಿಯಲ್ಲಿ ನಮ್ಮ ತಂಡವನ್ನು ಗೆಲ್ಲಿಸುವ ಕನಸು ಇದೆ. ಅದರ ಬಗ್ಗೆ ಮಾತ್ರ ಗಮನಹರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಆಟಗಾರರ ಹರಾಜಿನಲ್ಲಿ ಮಾರ್ಕೆಲ್‌ ಅವರನ್ನು ಯಾವುದೇ ತಂಡ ಕೊಂಡುಕೊಳ್ಳಲು ಉತ್ಸಾಹ ತೋರಿಸಿಲ್ಲ. ಆದರೆ ನಿವೃತ್ತಿಯ ಬಳಿಕವೂ ಅವರು ವಿಶ್ವದ ಯಾವುದೇ ಲೀಗ್‌ನಲ್ಲಿ ಪಾಲ್ಗೊಳ್ಳಲು ಸ್ವತಂತ್ರರಿದ್ದಾರೆ.

2006ರಲ್ಲಿ ಮಾರ್ಕೆಲ್‌ ಭಾರತ ತಂಡದ ಎದುರು ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಮೂರೂ ಮಾದರಿಗಳಲ್ಲಿ ಒಟ್ಟು 529 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.