ADVERTISEMENT

ಅಂಪೈರ್ ತೀರ್ಪಿಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಬೆಂಗಳೂರು: ಈ ಪಂದ್ಯದಲ್ಲಿ ಅಂಪೈರುಗಳು ನೀಡಿದ ಎರಡು ತೀರ್ಪುಗಳ ಬಗ್ಗೆ ದೆಹಲಿ ತಂಡದ ತರಬೇತುದಾರ ವಿಜಯ್ ದಹಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ಎರಡನೇ ಇನಿಂಗ್ಸ್‌ನಲ್ಲಿ ಉನ್ಮುಕ್ತ ಚಾಂದ್ ಮತ್ತು ರಜತ್ ಭಾಟಿಯಾ ಔಟಾದ ರೀತಿ ಅನುಮಾನಸ್ಪದ ವಾಗಿತ್ತು. ಭಾಟಿಯಾ ಅವರ ಕ್ಯಾಚ್ ಪಡೆದ ಕುನಾಲ್ ಕಪೂರ್ ಕ್ಯಾಚ್ ಹಿಡಿಯುವ ಮುನ್ನವೇ ಚೆಂಡು ನೆಲಕ್ಕೆ ತಾಗಿತ್ತು. ಈ ಎರಡು ಕೆಟ್ಟ ತೀರ್ಪುಗಳು ಬೇಸರ ಮೂಡಿಸಿವೆ' ಎಂದು ಭಾರತ ತಂಡದ ಮಾಜಿ ವಿಕೆಟ್ ಕೀಪರ್ ದಹಿಯಾ ನುಡಿದರು.

`ಉನ್ಮುಕ್ತ್ ಸೋಮವಾರ ವಿನಯ್ ಕುಮಾರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆಗಿದ್ದರು. ಇದು ಕೂಡಾ ಖಚಿತವಾಗಿರಲಿಲ್ಲ. ಆದರೂ ಅಂಪೈರ್ ಔಟೆಂದು ತೀರ್ಪು ನೀಡಿದರು. ಜೊತೆಗೆ ನಮ್ಮ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಮೊದಲ    ಇನಿಂಗ್ಸ್‌ನಲ್ಲಿ ಇನ್ನೂ ಹೆಚ್ಚಿನ ಮುನ್ನಡೆ ಸಾಧಿಸಲು ಅವಕಾಶವಿತ್ತು' ಎಂದು ಅವರು ಅಭಿಪ್ರಾಯ ಪಟ್ಟರು.

ಅಂಕ ಪಟ್ಟಿಯಲ್ಲಿ ಹಿಂದೆ: ದೆಹಲಿ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿದರೂ, ಅಂಕ ಪಟ್ಟಿಯಲ್ಲಿ ದೆಹಲಿಯ ಹಿಂದಿದೆ. ಎರಡೂ ತಂಡಗಳು ಸಮಾನದ (11) ಅಂಕ ಹೊಂದಿದ್ದರೂ ರನ್ ಸರಾಸರಿಯಲ್ಲಿ ದೆಹಲಿ ಮುಂದಿದೆ. ಮೊದಲ ಗೆಲುವು ಸಾಧಿಸಿರುವ ವಿನಯ್ ಪಡೆಯ ಎಂಟರ ಘಟ್ಟದ ಕನಸು ನನಸಾಗಬೇಕಾದರೆ, ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.