ADVERTISEMENT

ಅಗತ್ಯವಾದ ಗೆಲುವಿನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಯಾವುದೇ ಒಂದು ಅಂಶದ ಕಡೆಗೆ ಬೆರಳು ತೋರಿಸುವ ಕಾಲ ಇದಲ್ಲ. ಇಂಗ್ಲೆಂಡ್ ತಂಡದ ಮಟ್ಟಿಗೆ ಎಲ್ಲ ನಿಟ್ಟಿನಿಂದ ಯೋಚಿಸಬೇಕಾದ ಪರಿಸ್ಥಿತಿ. ಸಂಕಷ್ಟದ ಸುಳಿಯಲ್ಲಿ ಸಿಲುಕಿ ತೊಳಲಾಗುತ್ತಿದೆ ಇಂಗ್ಲೆಂಡ್. ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸುವುದೇ ಭಾರಿ ಕಷ್ಟವಾಗಿದೆ. ಗುಂಪಿನಲ್ಲಿ ಆಗಿರುವ ಬೆಳವಣಿಗೆಗಳ ಪರಿಣಾಮವಾಗಿ ಹಲವು ನಿಟ್ಟಿನಿಂದ ಒತ್ತಡವೂ ಹೆಚ್ಚಿದೆ. ಲೆಕ್ಕಾಚಾರ ಮಾಡಿಕೊಂಡು ಆಡಬೇಕಾದ ಇಕ್ಕಟ್ಟು. ಇದು ಖಂಡಿತವಾಗಿಯೂ ಸಹನೀಯವಲ್ಲ.

ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಸೋಲನುಭವಿಸಿದ ರೀತಿಗೆ ನೆಪಗಳನ್ನು ಹೇಳುವುದಕ್ಕೂ ಆಗದು. ಸರಿಯಾದ ಆಟವಾಡದ ಕಾರಣ ನಿರಾಸೆ ಎಂದು ಸುಮ್ಮನಾಗಿಬಿಡಬೇಕು. ನಾನು ವಿಶ್ವಕಪ್ ಕ್ರಿಕೆಟ್ ಆರಂಭಕ್ಕೆ ಮುನ್ನವೇ ಹೇಳಿದ್ದೆ, ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸಬೇಡಿ ಎಂದು. ಸ್ವಂತ ನೆಲದಲ್ಲಿ ಆಡುವಾಗ ಬಾಂಗ್ಲಾದವರು ಎಷ್ಟೇ ಬಲಾಢ್ಯ ತಂಡಕ್ಕೂ ಸವಾಲಾಗಿ ನಿಲ್ಲುತ್ತಾರೆ. ಆದರೆ ಆ್ಯಂಡ್ರ್ಯೂ ಸ್ಟ್ರಾಸ್ ಪಡೆಯು ನನ್ನ ಮಾತನ್ನು ಸರಿಯಾಗಿ ಸ್ವೀಕರಿಸಲಿಲ್ಲ ಎನಿಸುತ್ತದೆ. ಬಾಳೆ ಹಣ್ಣಿನ ಸಿಪ್ಪೆ ಬಿದ್ದಿದೆ ಎಂದು ಹೇಳಿದರೂ ಅದರ ಮೇಲೆಯೇ ಕಾಲಿಟ್ಟು ಮುಗ್ಗರಿಸಿ ಬಿದ್ದಂತೆ ಆಗಿದೆ ಇಂಗ್ಲೆಂಡ್ ಕಥೆ. ಐರ್ಲೆಂಡ್ ವಿರುದ್ಧದ ಸೋಲು, ದಕ್ಷಿಣ ಆಫ್ರಿಕಾ ವಿರುದ್ಧದ ಅಚ್ಚರಿಯ ಗೆಲುವು ಎಲ್ಲವೂ ನಾಟಕೀಯ ಬೆಳವಣಿಗೆಗಳು. ಅದರ ಜೊತೆಗೆ ಬಾಂಗ್ಲಾ ಎದುರಿನ ಆಘಾತವೂ ಸೇರಿಕೊಂಡಿದೆ. ಇದೆಲ್ಲದರ ಪರಿಣಾಮವಾಗಿ ಇಂಗ್ಲೆಂಡ್ ಮುಂದಿನ ಹಂತದಲ್ಲಿ ಆಡುತ್ತದೆ ಎನ್ನುವ ಲೋಲಕ ಅತ್ತ-ಇತ್ತ ತೂಗುತ್ತಿದೆ.

ಇಂಗ್ಲೆಂಡ್‌ನವರು ಬಾಂಗ್ಲಾವನ್ನು ಸೋಲಿಸಲು ಆಗಲಿಲ್ಲ. ಅದು ಕಣ್ಣೆದುರು ಕಂಡ ಸತ್ಯ. ಗುರುವಾರ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ಎದುರು ಆಡಬೇಕು. ಆದರೆ ಅಲ್ಲಿ ತಪ್ಪಿಗೆ ಅವಕಾಶ ಇರಬಾರದು. ಗೆಲ್ಲುವುದು ಅನಿವಾರ್ಯ. ಅದರ ಹೊರತಾಗಿ ಬೇರೆ ದಾರಿಯೇ ಇಲ್ಲ. ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಸೋಲು ಇಂಗ್ಲೆಂಡ್‌ಗೆ ಸಹಕಾರಿ. ವಿಂಡೀಸ್ ತಂಡವನ್ನು ಪರಾಭವಗೊಳಿಸುವುದು ಇಂಗ್ಲೆಂಡ್ ಕೈಯಲ್ಲಿಯೇ ಇರುವ ಅವಕಾಶ.

ಇಂಥದೊಂದು ದೊಡ್ಡ ಕ್ರಿಕೆಟ್ ಟೂರ್ನಿಯಲ್ಲಿ ಹೀಗೆ ಲೆಕ್ಕಾಚಾರ ಮಾಡುವಂಥ ಪರಿಸ್ಥಿತಿ ಎದುರಾಗು ವುದು ಅಚ್ಚರಿಯೇನಲ್ಲ. ಎಷ್ಟೇ ಅಂದರೂ ಇದು ವಿಶ್ವಕಪ್. ಭವಿಷ್ಯವನ್ನು ಮೊದಲೇ ಹೇಳುವುದು ಸಾಧ್ಯವೇ? ಖಂಡಿತ ಇಲ್ಲ.

ಇಂಗ್ಲೆಂಡ್ ಕುರಿತು ಭವಿಷ್ಯ ನುಡಿಯುವುದು ಕೂಡ ಈಗಲೇ ಆಗದು. ಒಂದಂತೂ ಸತ್ಯ; ಈ ತಂಡವು ತಪ್ಪು ಹೆಜ್ಜೆಯಿಟ್ಟು ಮುಗ್ಗರಿಸಿಬಿದ್ದ ಬಾಲಕನಂತೆ ಮುಖಮಾಡಿಕೊಂಡಿದೆ. ಅಗತ್ಯ ಗೆಲುವಿಗಾಗಿ ಹೋರಾಡ ಬೇಕಾದ ಪರಿಸ್ಥಿತಿಯ ್ಲಲಿಯೇ ಇಂಗ್ಲೆಂಡ್ ಮುಂದೆ ಸಮಸ್ಯೆಗಳು ಎದ್ದು ನಿಂತಿವೆ. ಆ್ಯಂಡ್ರ್ಯೂ ಸ್ಟ್ರಾಸ್ ಹಾಗೂ ಗೇಮ್ ಸ್ವಾನ್ ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಈ ಭಾಗದಲ್ಲಿ ಪ್ರವಾಸ ಕೈಗೊಂಡಾಗ ಇಂಗ್ಲೆಂಡ್‌ನವರು ಹೀಗೆ ಆರೋಗ್ಯ ತೊಂದರೆಗೆ ಒಳಗಾಗುವುದು ಸಹಜವೂ ಆಗಿದೆ. ವಿಂಡೀಸ್ ವಿರುದ್ಧದ ಪಂದ್ಯವು ಆರಂಭವಾಗುವ ಹೊತ್ತಿಗೆ ಅವರು ಚೇತರಿಸಿಕೊಂಡು ಆಡಲು ಸಜ್ಜಾಗಬೇಕು ಎನ್ನುವುದು ಆಶಯ. ಸ್ವಾನ್  ನೆರವಿಲ್ಲದೆಯೇ ಇಂಗ್ಲೆಂಡ್ ಹೋರಾಟಕ್ಕೆ ಇಳಿದರೆ ಅಂಗಳದಲ್ಲಿ ತೊಂದರೆಗಳ ಸುಳಿಯಲ್ಲಿ ಸಿಲುಕಬಹುದು. ಕೆವಿನ್ ಪೀಟರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಕೊರತೆಯನ್ನೇ ತುಂಬಿಕೊಳ್ಳುವಲ್ಲಿ ವಿಫಲವಾಗಿರುವ ಈ ತಂಡಕ್ಕೆ ಮತ್ತಿಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿ ಆಘಾತಕಾರಿ ಆಗುವ ಆತಂಕವಿದೆ.
 
 -ಗೇಮ್‌ಪ್ಲಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.