ADVERTISEMENT

ಅಗ್ರಸ್ಥಾನಕ್ಕಾಗಿ ಪಾಕ್, ಆಸೀಸ್ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST
ಅಗ್ರಸ್ಥಾನಕ್ಕಾಗಿ ಪಾಕ್, ಆಸೀಸ್ ಪೈಪೋಟಿ
ಅಗ್ರಸ್ಥಾನಕ್ಕಾಗಿ ಪಾಕ್, ಆಸೀಸ್ ಪೈಪೋಟಿ   

ಕೊಲಂಬೊ:ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಶನಿವಾರ ಪರಸ್ಪರ ಪೈಪೋಟಿ ನಡೆಸಲಿವೆ. ಗೆಲುವು ಪಡೆಯುವ ತಂಡ ಅಗ್ರಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯಲಿದೆ.

ಆಸ್ಟ್ರೇಲಿಯಾ ಐದು ಪಂದ್ಯಗಳಿಂದ ಒಂಬತ್ತು ಪಾಯಿಂಟ್‌ಗಳೊಂದಿಗೆ ಇದೀಗ ಎರಡನೇ ಸ್ಥಾನದಲ್ಲಿದೆ. ಶಾಹಿದ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ಐದು ಪಂದ್ಯಗಳಿಂದ ಎಂಟು ಪಾಯಿಂಟ್ ಹೊಂದಿದೆ.

ಆಸ್ಟ್ರೇಲಿಯಾ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ 34 ಪಂದ್ಯಗಳ ಗೆಲುವಿನ ದಾಖಲೆಯನ್ನು ಹೊಂದಿದೆ. ಪಾಕ್ ತಂಡ ಅದಕ್ಕೆ ‘ಬ್ರೇಕ್’ ಹಾಕಲಿದೆಯೇ ಎಂಬ ಪ್ರಶ್ನೆ ಎಲ್ಲರಿಗೆ ಕಾಡುತ್ತಿದೆ.

ಎರಡೂ ತಂಡಗಳು ಈಗಾಗಲೇ ಎಂಟರಘಟ್ಟ ಪ್ರವೇಶಿಸಿರುವ ಕಾರಣ ಶನಿವಾರ ನಡೆಯುವ ಪಂದ್ಯಕ್ಕೆ ಯಾವುದೇ ಮಹತ್ವವಿಲ್ಲ. ಆದರೆ ಗೆಲುವು ಪಡೆದರೆ ನಾಕೌಟ್ ಹಂತಕ್ಕೆ ಮುನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಇದೇ ಉದ್ದೇಶದಿಂದ ಉಭಯ ತಂಡಗಳು ಪ್ರೇಮದಾಸ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿವೆ.

ಈ ಪಂದ್ಯ ಒಂದು ರೀತಿಯಲ್ಲಿ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಮತ್ತು ಪಾಕಿಸ್ತಾನ ಬೌಲರ್‌ಗಳ ನಡುವಿನ ಹೋರಾಟವಾಗಿ ಪರಿಣಮಿಸಿದೆ. ಆಸೀಸ್ ತಂಡದ ಎಲ್ಲ ಪ್ರಮುಖ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಲಂಕಾದ ಪಿಚ್‌ಗಳಲ್ಲಿ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿರುವ ಅಫ್ರಿದಿ ಅವರು ಆಸೀಸ್ ಬ್ಯಾಟ್ಸ್‌ಮನ್‌ಗಳ ಮೇಲೆ ಹೇಗೆ ಕಡಿವಾಣ ತೊಡಿಸುವರು ಎಂಬುದನ್ನು ನೋಡಬೇಕು.

ಪಾಂಟಿಂಗ್ ಬಳಗ ತನ್ನದ ವೇಗದ ಬೌಲರ್‌ಗಳನ್ನು ನೆಚ್ಚಿಕೊಂಡಿದೆ. ಬ್ರೆಟ್ ಲೀ. ಶಾನ್ ಟೇಟ್ ಮತ್ತು ಮಿಷೆಲ್ ಜಾನ್ಸನ್ ಸಾಕಷ್ಟು ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಇಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವ ಕಾರಣ ಈ ವೇಗಿಗಳು ಎಷ್ಟಮಟ್ಟಿಗೆ ಪ್ರಭಾವಿ ಎನಿಸುವರು ಎಂಬ ಕುತೂಹಲ ಎಲ್ಲರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.