ADVERTISEMENT

ಅಗ್ರಸ್ಥಾನಕ್ಕೇರಿದ ಜಡೇಜ

ಕ್ರಿಕೆಟ್: ಏಕದಿನ ರ‌್ಯಾಂಕಿಂಗ್, ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST
ಅಗ್ರಸ್ಥಾನಕ್ಕೇರಿದ ಜಡೇಜ
ಅಗ್ರಸ್ಥಾನಕ್ಕೇರಿದ ಜಡೇಜ   

ದುಬೈ (ಪಿಟಿಐ): ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಏಕದಿನ ರ‍್ಯಾಂಕಿಂಗ್‌ನ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿ ಕೊಂಡಿದ್ದಾರೆ.

ಅನಿಲ್ ಕುಂಬ್ಳೆ ಬಳಿಕ ಭಾರತದ ಆಟಗಾರನೊಬ್ಬ ಐಸಿಸಿ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದದ್ದು ಇದೇ ಮೊದಲು. ಜಿಂಬಾಬ್ವೆ ವಿರುದ್ಧ ಶನಿವಾರ ಕೊನೆಗೊಂಡ ಐದು ಪಂದ್ಯಗಳ ಸರಣಿಯಲ್ಲಿ ಜಡೇಜ ಐದು ವಿಕೆಟ್ ಪಡೆದಿದ್ದರು. ಜಡೇಜ ನಾಲ್ಕು ಸ್ಥಾನಗಳಷ್ಟು ಮೇಲಕ್ಕೇರಿ ವೆಸ್ಟ್‌ಇಂಡೀಸ್‌ನ ಸುನಿಲ್ ನಾರಾಯಣ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಅನಿಲ್ ಕುಂಬ್ಳೆ 1996ರ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಅಗ್ರಸ್ಥಾನದಲ್ಲಿ  ಕಾಣಿಸಿಕೊಂಡಿದ್ದರು. ಒಟ್ಟಾರೆಯಾಗಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಗೌರವ ಜಡೇಜಗೆ ಒಲಿದಿದೆ. ಕುಂಬ್ಳೆ ಅವರಿಗೂ ಮುನ್ನ ಕಪಿಲ್‌ದೇವ್ (ಮಾರ್ಚ್ 1989) ಮತ್ತು ಮಣಿಂದರ್ ಸಿಂಗ್ (ಡಿಸೆಂಬರ್ 1987- ನವೆಂಬರ್ 1988) ಈ ಸಾಧನೆ ಮಾಡಿದ್ದರು.

ಜಿಂಬಾಬ್ವೆ ವಿರುದ್ಧದ ಸರಣಿ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ರ‍್ಯಾಂಕಿಂಗ್‌ನಲ್ಲೂ ಭಾರಿ ಬದಲಾವಣೆಗೆ ಕಾರಣವಾಗಿದೆ. ಮಿಶ್ರಾ 47 ಸ್ಥಾನಗಳಷ್ಟು ಮೇಲಕ್ಕೇರಿದ್ದು, 32ನೇ ಸ್ಥಾನ ಪಡೆದಿದ್ದಾರೆ. ಅವರು ಈ ಸರಣಿಯಲ್ಲಿ ಒಟ್ಟು 18 ವಿಕೆಟ್ ಪಡೆದಿದ್ದರು.

ಭಾರತ ತಂಡ ಇದೇ ವೇಳೆ ರ‍್ಯಾಂಕಿಂಗ್‌ನಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ `ಕ್ಲೀನ್‌ಸ್ವೀಪ್' ಸಾಧನೆ ಮಾಡಿರುವ ತಂಡದ ಬಳಿ ಇದೀಗ ಒಟ್ಟು 123 ರೇಟಿಂಗ್ ಪಾಯಿಂಟ್‌ಗಳಿವೆ. ಎರಡನೇ ರ‌್ಯಾಂಕ್‌ನಲ್ಲಿರುವ ಆಸ್ಟ್ರೇಲಿಯಾಕ್ಕಿಂತ ಭಾರತ ಒಂಬತ್ತು ಪಾಯಿಂಟ್‌ಗಳಿಂದ ಮುಂದಿದೆ.

ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ದೋನಿ ತಲಾ ಒಂದು ಕ್ರಮಾಂಕ ಕೆಳಕ್ಕೆ ಕುಸಿದಿದ್ದು, ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕ್ರಮವಾಗಿ ನಾಲ್ಕು ಹಾಗೂ ಏಳನೇ ಸ್ಥಾನ ಪಡೆದಿದ್ದಾರೆ.

ಒಂದು ಕ್ರಮಾಂಕ ಮೇಲಕ್ಕೇರಿರುವ ಸುರೇಶ್ ರೈನಾ 17ನೇ ಸ್ಥಾನದಲ್ಲಿದ್ದರೆ, 16 ಕ್ರಮಾಂಕ ಮೇಲಕ್ಕೇರಿದ ಶಿಖರ್ ಧವನ್ 23ನೇ ಸ್ಥಾನ ತಮ್ಮದಾಗಿಸಿಕೊಂಡಿರುವರು.

ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚೆಗೆ ನಡೆದ ಸರಣಿಯಲ್ಲಿ ಸಂಗಕ್ಕಾರ ಉತ್ತಮ ಪ್ರದರ್ಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.