ADVERTISEMENT

ಅಥ್ಲೀಟ್‌ಗಳ ಸಾಧನೆಗೆ ಉಷಾ ಅತೃಪ್ತಿ

ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ಮಂಗಳೂರು: ಇತ್ತೀಚೆಗೆ ಪುಣೆಯಲ್ಲಿ ನಡೆದ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆ ಬಗ್ಗೆ ಒಲಿಂಪಿಯನ್ ಪಿ.ಟಿ.ಉಷಾ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ನೂತನ ಸಿಂಥೆಟಿಕ್ ಟ್ರ್ಯಾಕ್ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

`ಏಷ್ಯಾ ಅಥ್ಲೆಟಿಕ್ಸ್‌ನಲ್ಲಿ ದೇಶದ ಅಥ್ಲೀಟ್‌ಗಳು ಉತ್ತಮ ನಿರ್ವಹಣೆ ತೋರುತ್ತಿದ್ದರು. ನಾನೊಬ್ಬಳೇ ನಾಲ್ಕು ಚಿನ್ನದ ಪದಕಗಳನ್ನು ಗೆದ್ದ ಉದಾಹರಣೆಗಳಿವೆ. ಈ ಬಾರಿ ಅಥ್ಲೀಟ್‌ಗಳ ಇಡೀ ತಂಡಕ್ಕೆ ನಾಲ್ಕು ಚಿನ್ನದ ಪದಕ ಗೆಲ್ಲುವುದಕ್ಕೂ ಸಾಧ್ಯವಾಗಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

`ಉತ್ತಮ ಸೌಕರ್ಯ ಕಲ್ಪಿಸಿದರೂ ಉದಯೋನ್ಮುಖ ಅಥ್ಲೀಟ್‌ಗಳು ಸಾಮರ್ಥ್ಯ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಹಳೆ ತಲೆಮಾರಿನ ಅಥ್ಲೀಟ್‌ಗಳ ದಾಖಲೆಗಳನ್ನು ಈಗಿನ ಅಥ್ಲೀಟ್‌ಗಳಿಂದ ಮುರಿಯಲು ಸಾಧ್ಯವಾಗುತ್ತಿಲ್ಲ. ಗೆಲುವಿನ ಅಂತರ ಕಡಿಮೆಯಾಗುತ್ತಿರುವುದೂ ನಿರಾಶಾದಾಯಕ ಬೆಳವಣಿಗೆ. ಪುಣೆಯ ಕೂಟದಲ್ಲೂ ಇದು ನಿಚ್ಚಳವಾಗಿದೆ. ಕಠಿಣ ಸನ್ನಿವೇಶಗಳನ್ನು ಎದುರಿಸುವುದಕ್ಕೆ ಅಥ್ಲೀಟ್‌ಗಳು ಸಜ್ಜಾಗುವುದು ಬಹಳ ಮುಖ್ಯ' ಎಂದರು.

`ಭಾಗ್ ಮಿಲ್ಖಾ ಭಾಗ್' ಉತ್ತೇಜನಕಾರಿ: ಅಥ್ಲೀಟ್ ಮಿಲ್ಖಾ ಸಿಂಗ್ ಜೀವನಗಾಥೆಯನ್ನು ಆಧರಿಸಿದ ಹಿಂದಿ ಸಿನಿಮಾ `ಭಾಗ್ ಮಿಲ್ಖಾ ಭಾಗ್' ಬಗ್ಗೆ ಪ್ರತಿಕ್ರಿಯಿಸಿದ ಉಷಾ, `ಈ ಸಿನಿಮಾ ವೀಕ್ಷಿಸಿದ್ದೇನೆ. ಉತ್ತೇಜನಕಾರಿಯಾಗಿದೆ' ಎಂದರು.

`ಮಂಗಳೂರಿನ ಸಿಂಥೆಟಿಕ್ಸ್ ಟ್ರ್ಯಾಕ್ ಚೆನ್ನಾಗಿದೆ. ಕೇರಳದಲ್ಲಿ ಕೇವಲ ಮೂರು ಸಿಂಥೆಟಿಕ್ ಟ್ರ್ಯಾಕ್‌ಗಳಿವೆ. ಉಷಾ ಅಕಾಡೆಮಿಯ ಅಥ್ಲೀಟ್‌ಗಳಿಗೆ ಮೈಸೂರಿನ ಇನ್ಫೊಸಿಸ್ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ತರಬೇತಿ ನೀಡುತ್ತಿದ್ದೆ. ಮಂಗಳೂರಿನಲ್ಲೂ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಿರುವುದರಿಂದ ಇಲ್ಲೇ ತರಬೇತಿ ನೀಡಬಹುದು' ಎಂದರು.

`ಅಶ್ವಿನಿಗೆ ಮತ್ತೆ ಅವಕಾಶ ಸಿಗಲಿ'
`ಅಶ್ವಿನಿ ಅಕ್ಕುಂಜಿ ಅವರಿಗೆ ಇನ್ನೊಂದು ಅವಕಾಶ ನೀಡಬೇಕು. ಆಕೆಯದು ಇನ್ನೂ ಎಳೆಯ ಪ್ರಾಯ. ಅಂಗಣದಲ್ಲಿ ಆಕೆ ಉತ್ತಮ ಸಾಧನೆ ತೋರಿಸಬೇಕು. ಸಣ್ಣ ಪುಟ್ಟ ತಪ್ಪುಗಳಿಗಾಗಿ ಅಥ್ಲೀಟ್‌ಗಳನ್ನು ನಿರಾಸೆಗೊಳಿಸಬಾರದು' ಎಂದು  ಉಷಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.