ಲಂಡನ್: ಭಾರತಕ್ಕೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಪದಕ ಲಭಿಸುವುದೇ? ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಭಾರತದ ಕ್ರೀಡಾಪ್ರೇಮಿಗಳನ್ನು ಈ ಪ್ರಶ್ನೆ ಕಾಡುತ್ತದೆ. ಇಂತಹ ಪ್ರಶ್ನೆ ಮತ್ತೆ ಎದುರಾಗಿದೆ. ಆದರೆ ಈ ಬಾರಿಯೂ `ಅಂತಹ ಸಾಧ್ಯತೆ ತೀರಾ ಕಡಿಮೆ~ ಎಂಬ ಉತ್ತರ ಲಭಿಸುತ್ತದೆ.
ಲಂಡನ್ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ಗುರುವಾರ ಚಾಲನೆ ಲಭಿಸಲಿದ್ದು, ವಿಶ್ವದ ಪ್ರಮುಖ ಅಥ್ಲೀಟ್‌ಗಳು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಭಾರತದ 14 ಅಥ್ಲೀಟ್‌ಗಳು ಕಣದಲ್ಲಿದ್ದಾರೆ. ಆದರೆ ಯಾರೂ ಪದಕ ಗೆಲ್ಲುವ `ಫೇವರಿಟ್~ ಎಂಬ ಹಣೆಪಟ್ಟಿ ಹೊತ್ತುಕೊಂಡಿಲ್ಲ.
ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕೃಷ್ಣಾ ಪೂನಿಯಾ ಮಾತ್ರ ಅಲ್ಪ ಭರವಸೆ ಹುಟ್ಟಿಸಿರುವ ಅಥ್ಲೀಟ್. 64.76 ಮೀ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಸ್ಥಾಪಿಸಿರುವ ಪೂನಿಯಾ, ಪ್ರಸಕ್ತ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಆದರೆ ಪದಕದ ಸಾಧನೆ ಮಾಡಬೇಕೆಂದರೆ ಪ್ರದರ್ಶನ ಮಟ್ಟದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳುವುದು ಅಗತ್ಯ. ಏಕೆಂದರೆ ರಷ್ಯಾದ ಡರ್ಯಾ ಪಿಶಲ್ನಿಕೋವ್ (70.69 ಮೀ), ನದಿನ್ ಮುಲ್ಲೆರ್ (68.89) ಮತ್ತು ಕ್ರೊಯೇಷ್ಯದ ಸಾಂಡ್ರಾ ಪೆಕೋವಿಕ್ (68.24) ಅವರು ಕಣದಲ್ಲಿದ್ದಾರೆ.
ಪುರುಷರ ಡಿಸ್ಕಸ್ ಥ್ರೋ ಸ್ಪರ್ಧಿ ವಿಕಾಸ್ ಗೌಡ ಅವರೂ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಆರು ಸ್ಥಾನದೊಳಗೆ ಕಾಣಿಸಿಕೊಳ್ಳುವ ಗುರಿಯನ್ನು ಅವರು ಹೊಂದಿದ್ದಾರೆ. ವಿಕಾಸ್ ಏಪ್ರಿಲ್‌ನಲ್ಲಿ ರಾಷ್ಟ್ರೀಯ ದಾಖಲೆ (66.28) ಸ್ಥಾಪಿಸಿದ್ದರು.
ಮಹಿಳೆಯರ 800 ಮೀ. ಓಟದಲ್ಲಿ ಸ್ಪರ್ಧಿಸುತ್ತಿರುವ ಟಿಂಟು ಲೂಕಾ ತಮ್ಮ ವೈಯಕ್ತಿಕ ಶ್ರೇಷ್ಠ ಸಮಯವನ್ನು (1:59.17 ಸೆ.) ಇನ್ನಷ್ಟು ಉತ್ತಮಪಡಿಸಿಕೊಂಡರೆ ಮಾತ್ರ ಫೈನಲ್ ಪ್ರವೇಶಿಸಲು ಸಾಧ್ಯ. ಟ್ರಿಪಲ್ ಜಂಪ್ ಸ್ಪರ್ಧಿಗಳಾದ ಮಯೂಖಾ ಜಾನಿ ಮತ್ತು ರೆಂಜಿತ್ ಮಹೇಶ್ವರಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವ ಹಾಗಿಲ್ಲ.
ಹೈಜಂಪ್ ಸ್ಪರ್ಧಿ ಸಹನಾ ಕುಮಾರಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿ (1.92 ಮೀ.) ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ವಿಶ್ವದ ಪ್ರಮುಖ ಸ್ಪರ್ಧಿಗಳು ಯಾರೂ ಪ್ರಸಕ್ತ ಋತುವಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ಪ್ರದರ್ಶನಮಟ್ಟವನ್ನು ಇನ್ನಷ್ಟು ಸುಧಾರಿಸಿ ಫೈನಲ್ ಪ್ರವೇಶಿಸುವ ಕನಸಿನಲ್ಲಿ ಸಹನಾ ಇದ್ದಾರೆ. ಈ ಬಾರಿ ನಡಿಗೆ ಸ್ಪರ್ಧೆಯಲ್ಲಿ ಭಾರತದ ನಾಲ್ಕು ಅಥ್ಲೀಟ್‌ಗಳು ಕಣದಲ್ಲಿದ್ದಾರೆ. ಗುರ್ಮೀತ್ ಸಿಂಗ್, ಬಲ್ಜಿಂದರ್ ಸಿಂಗ್, ಕೆ.ಟಿ. ಇರ್ಫಾನ್ ಮತ್ತು ಬಸಂತ್ ಬಹಾದೂರ್ ರಾಣಾ ತಮ್ಮ ವೈಯಕ್ತಿಕ ಸಮಯವನ್ನು ಉತ್ತಮಪಡಿಸಿಕೊಳ್ಳುವತ್ತ ಗಮನಹರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.