ನೊಮಿ ಸಿಟಿ, ಜಪಾನ್ (ಪಿಟಿಐ): ಪಂಜಾಬ್‌ನ ಅಥ್ಲೀಟ್ ಬಲ್ಜಿಂದರ್ ಸಿಂಗ್ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇಲ್ಲಿ ನಡೆದ ಏಷ್ಯನ್ ನಡಿಗೆ ಚಾಂಪಿಯನ್‌ಷಿಪ್‌ನ 20 ಕಿ.ಮೀ. ವಿಭಾಗದಲ್ಲಿ ಅವರು ಐದನೇ ಸ್ಥಾನ ಪಡೆಯುವ ಮೂಲಕ ಈ ಅರ್ಹತೆ ತಮ್ಮದಾಗಿಸಿಕೊಂಡರು.
ಸೋಮವಾರ ನಡೆದ ಸ್ಪರ್ಧೆಯಲ್ಲಿ ಬಲ್ಜಿಂದರ್ ನಿಗದಿತ ಅಂತರವನ್ನು 1:22:12 ಸೆಕೆಂಡ್‌ಗಳಲ್ಲಿ ತಲುಪಿದರು. `ಎ~ ದರ್ಜೆಯ ಅರ್ಹತೆ ಪಡೆಯಲು 1:22:30 ಸೆಕೆಂಡ್‌ಗಳ ಒಳಗೆ ಗುರಿ ಮುಟ್ಟುವುದು ಅಗತ್ಯವಿತ್ತು.
ಇನ್ನೊಬ್ಬ ಅಥ್ಲೀಟ್ ಗುರ್ಮಿತ್ ಸಿಂಗ್ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಡಬ್ಲಿನ್‌ಯಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 1:22:05 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಈ ಅಥ್ಲೀಟ್ ಇಲ್ಲಿ ಬೆಳ್ಳಿ ಪದಕ ಜಯಿಸಿದರು. ಕಳೆದ ವರ್ಷ ಇದೇ ಚಾಂಪಿಯನ್‌ಷಿಪ್‌ನಲ್ಲಿ ಗುರ್ಮಿತ್ ಏಳನೇ ಸ್ಥಾನ ಪಡೆದಿದ್ದರು.
ಆರಂಭದಿಂದಲೂ ಸ್ಪರ್ಧೆಯಲ್ಲಿ ಗುರ್ಮಿತ್ ಮೊದಲ ಸ್ಥಾನದಲ್ಲಿದ್ದರು. ಆದರೆ, ಕೊನೆಯ ಒಂದು ಕಿ.ಮೀ. ಬಾಕಿ ಇರುವಾಗ ನಡೆಗೆ ನಿಧಾನವಾಯಿತು. ಕೇವಲ 9 ಸೆಕೆಂಡ್‌ಗಳ ಅಂತರದಲ್ಲಿ ಸ್ವರ್ಣ ಜಯಿಸುವ ಅವಕಾಶ ತಪ್ಪಿ ಹೋಯಿತು. ಚೀನಾದ ಜೂ ಚೌನ್‌ಡಾಂಗ್ (1:21:22ಸೆ.) ಮೊದಲ ಸ್ಥಾನ ಗಿಟ್ಟಿಸಿದರು. ಕಳೆದ ತಿಂಗಳು ಭುವನೇಶ್ವರದಲ್ಲಿ ಜರುಗಿದ ಅಂತರ ರೈಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಗುರ್ಮಿತ್ 1:20:23 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದರು.
ಭಾರತದ ಇನ್ನಿಬ್ಬ ಅಥ್ಲೀಟ್‌ಗಳಾದ ಸುರೇಂದರ್ ಸಿಂಗ್ (1:23:53ಸೆ.) ಹಾಗೂ ಅಬ್ದುಲ್ ಸಿಂಗ್ ರಾಣಾ (1:27:50ಸೆ.)ರಲ್ಲಿ ಗುರಿ ತಲುಪಿದರು.
ಮಹಿಳಾ ವಿಭಾಗದಲ್ಲಿ ದೀಪಾಮಾಲಾ (1:42:01ಸೆ.) ನಾಲ್ಕನೇ ಸ್ಥಾನ, ರಾಷ್ಟ್ರೀಯ ಚಾಂಪಿಯನ್ ಕುಸ್ಬೀರ್ ಕೌರ್ (1:44:30ಸೆ.) ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಗೌರವ ಕುಮಾರಿಗೆ ಸ್ಪರ್ಧೆ ಕೊನೆಗೊಳಿಸಲು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.