ADVERTISEMENT

ಅನಧಿಕೃತ ಸ್ಮರಣಿಕೆಗಳಿಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST
ಅನಧಿಕೃತ ಸ್ಮರಣಿಕೆಗಳಿಗೆ ಕಡಿವಾಣ
ಅನಧಿಕೃತ ಸ್ಮರಣಿಕೆಗಳಿಗೆ ಕಡಿವಾಣ   

ಲಂಡನ್ (ಎಎಫ್‌ಪಿ): ಒಲಿಂಪಿಕ್ ಕಾವು ಹೆಚ್ಚುತ್ತಿರುವಂತೆ ಈ ಕೂಟದ ಸ್ಮರಣಿಕೆಗಳ ಅನಧಿಕೃತ ಮಾರಾಟವೂ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕಲು ಲಂಡನ್ ಒಲಿಂಪಿಕ್ ಸಂಘಟನಾ ಸಮಿತಿ ಮುಂದಾಗಿದೆ.

ಮಾರುಕಟ್ಟೆಯಲ್ಲಿ ಅನಧಿಕೃತ ಸ್ಮರಣಿಕೆಗಳು ಮಾರಾಟವಾಗುತ್ತಿರುವ ಮಾಹಿತಿ ಪಡೆದು ಅವುಗಳನ್ನು ಮುಟ್ಟುಗೋಲು ಹಾಕಲು ಪೊಲೀಸರ ನೆರವು ಪಡೆಯಲಾಗುತ್ತಿದೆ. `ಟೀ ಪಾಟ್~ ಹಾಗೂ ಒಂದು ಕಣ್ಣಿನ ಲಾಂಛನವಾದ ವೆನ್‌ಲಾಕ್ ಪ್ರತಿಕೃತಿ ಸೇರಿದಂತೆ ಅನೇಕ ಸ್ಮರಣಿಕೆಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳನ್ನು ಪತ್ತೆ ಹಚ್ಚಲಾಗುತ್ತಿದೆ.

ಅನಧಿಕೃತ ಮಾರಾಟ ಹೆಚ್ಚಿದರೆ ಅದರ ಪರಿಣಾಮ ಸ್ಮರಣಿಕೆಗಳ ಮಾರಾಟದ ಮೂಲ ಹಕ್ಕು ಪಡೆದವರಿಗೆ ಆಗುತ್ತದೆ. ಈ ಕಾರಣಕ್ಕಾಗಿ ಸಂಘಟನಾ ಸಮಿತಿ ಕ್ರಮಕ್ಕೆ ಮುಂದಾಗಿದೆ. ವಿಶ್ವದ ದೊಡ್ಡ ಕ್ರೀಡಾಕೂಟ ಮುಗಿಯುವ ಹೊತ್ತಿಗೆ ಶತಕೋಟಿ ಪೌಂಡ್ ಮೊತ್ತದ ಸ್ಮರಣಿಕೆಗಳು ಮಾರಾಟವಾಗುತ್ತವೆಂದು ನಿರೀಕ್ಷೆ ಮಾಡಲಾಗಿದೆ. 

ADVERTISEMENT

ಯೂನಿಯನ್ ಜಾಕ್ ವರ್ಣ ಹಾಗೂ ಒಲಿಂಪಿಕ್ ಲಾಂಛನದ ಚಿತ್ರ ಇರುವ ಕೊಡೆಗಳನ್ನು ಭಾರಿ ಸಂಖ್ಯೆಯಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ. ಒಲಿಂಪಿಕ್ ಕೂಟದ ಸಮಯದಲ್ಲಿ ಜಿನುಗು ಮಳೆ ಇರುವುದೆಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಕೊಡೆಗಳ ಮಾರಾಟ ನಿರೀಕ್ಷೆ ಮೀರಿದರೂ ಅಚ್ಚರಿಯಿಲ್ಲ.

ಇಲ್ಲಿನ ಮಾರುಕಟ್ಟೆಯೊಂದರಲ್ಲಿ ಒಲಿಂಪಿಕ್ ಕೂಟದ ಚಿನ್ಹೆ ಇರುವ ಟಿ-ಶರ್ಟ್‌ಗಳು ಕಾಣಿಸಿಕೊಂಡಿದ್ದನ್ನು ಪತ್ತೆ ಮಾಡಲಾಗಿದೆ. ಅಂತರ್‌ಜಾಲದಿಂದ ಚಿನ್ಹೆ ಹಾಗೂ ಲಾಂಛನಗಳ ಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಅದೇ ಚಿತ್ರಗಳನ್ನು ಮುದ್ರಿಸಿದ ಟಿ-ಶರ್ಟ್ ಇವು.

ಇಂಥ ಎಲ್ಲ ಸ್ಮರಣಿಕೆಗಳನ್ನು ಮುಟ್ಟುಗೋಲು ಹಾಕಲಾಗುವುದೆಂದು ಸಂಘಟನಾ ಸಮಿತಿ ಈಗಾಗಲೇ ಎಚ್ಚರಿಕೆ ನೀಡಿದೆ. ಸ್ಮರಣಿಕೆಗಳು ಮಾತ್ರವಲ್ಲ ಒಲಿಂಪಿಕ್ ರಿಂಗ್‌ಗಳನ್ನು ಕೂಡ ಮನಬಂದಂತೆ ಪ್ರದರ್ಶಿಸುವಂತಿಲ್ಲವೆಂದು ಸೂಚನೆ ನೀಡಲಾಗಿದೆ. ಒಳ ಉಡುಪುಗಳ ಅಂಗಡಿಯೊಂದರ ಮುಂದೆ `ಸ್ಪೋರ್ಟ್ಸ್ ಬ್ರಾ~ಗಳ ಜೊತೆಗೆ ಹುಲಾಹೂಪ್ಸ್ ರಿಂಗ್‌ಗಳನ್ನು ಜೋಡಿಸಿ ಹಾಕಲಾಗಿತ್ತು. ಅವುಗಳನ್ನು ಅಧಿಕಾರಿಗಳು ತೆಗೆದು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.