ADVERTISEMENT

ಅಪಾಯ ತಪ್ಪಿಸಲು ಮುಂಜಾಗ್ರತೆಯೇ ಮದ್ದು!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಬೆಂಗಳೂರು: ಹೃದಯಾಘಾತವಾದಾಗ ದಿಢೀರನೇ ದೇಹದಲ್ಲಿ ಆಗುವ ಬದಲಾವಣೆಯೇನು? ಕ್ರೀಡಾ ಪಟು ಏನು ಮಾಡಬೇಕು? ಈ ವೇಳೆ ರಕ್ತ ಚಲನೆ ಆಗುತ್ತದೆಯಾ? ಯಾವ ರೀತಿ ಎಚ್ಚರಿಕೆ ವಹಿಸಬೇಕು?

-ಫುಟ್‌ಬಾಲ್ ಆಟಗಾರ ವೆಂಕಟೇಶ್ ಆಡುತ್ತಲೇ ಮೃತಪಟ್ಟ ನಂತರ ಈ ಪ್ರಶ್ನೆಗಳು ಮತ್ತೆ ಮತ್ತೆ ಕಾಡುತ್ತಿವೆ. ಇದಕ್ಕೆ ಕಾರಣವೇನು ಎಂಬ ಉತ್ತರವೂ ದೊರೆಯುತ್ತದೆ. ಆದರೆ, ಪರಿಹಾರ ಉಪಾಯಗಳನ್ನು ಸರಿಯಾಗಿ ಪಾಲಿಸದ ಕಾರಣ ಕ್ರೀಡಾಪಟುಗಳಿಗೆ ದುರಂತ ಸಾವು ಎದುರಾಗುತ್ತದೆ. ಆದ್ದರಿಂದ ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಿರಿಯ ಹೃದ್ರೋಗ ತಜ್ಞ ಡಾ. ಎಚ್.ಸಿ. ಸತ್ಯ ಅವರು `ಪ್ರಜಾವಾಣಿ~ ಜೊತೆ ಹಂಚಿಕೊಂಡ ವಿಷಯಗಳನ್ನು ಇಲ್ಲಿ ನೀಡಲಾಗಿದೆ.

ದಿಢೀರನೇ ದೇಹದಲ್ಲಾಗುವ ಬದಲಾವಣೆ ಏನು: ಸಾಮಾನ್ಯ ಮನುಷ್ಯನ ಹೃದಯ ಬಡಿತ ಪ್ರತಿ ನಿಮಿಷಕ್ಕೆ 60 ರಿಂದ 90 ಸಲ ಇರುತ್ತದೆ. ಹೃದಯಾಘಾತ ಸಂಭವಿಸಿದಾಗ ಇದು 160ರಿಂದ 180ಕ್ಕೆ ಹೆಚ್ಚಾಗುತ್ತದೆ. ಮಿದುಳಿಗೆ ರಕ್ತ ಚಲನೆ ನಿಲ್ಲುತ್ತದೆ. ಪ್ರಜ್ಞೆ ತಪ್ಪುತ್ತದೆ.

ಈ ವೇಳೆ ಏನು ಮಾಡಬೇಕು: ವ್ಯಕ್ತಿ ಕುಸಿದು ಬಿದ್ದಾಗ ತಕ್ಷಣ ನಾಡಿ ಮಿಡಿತ ಪರೀಕ್ಷಿಸಬೇಕು. ಹೃದಯಾಘಾತವಾಗಿ ಕೇವಲ 30 ಸೆಕೆಂಡ್ ಒಳಗಾಗಿ ಎದೆಯನ್ನು ಗಟ್ಟಿಯಾಗಿ ಒತ್ತಬೇಕು. ಹಿತವಾಗಿ ಗುದ್ದಬೇಕು. ಇಲ್ಲವೇ ಇನ್ನೊಬ್ಬ ವ್ಯಕ್ತಿಯ ಬಾಯಿಯಿಂದ ಆಘಾತಕ್ಕೊಳಗಾದ ವ್ಯಕ್ತಿಯ ಬಾಯಿಯ ಮೂಲಕ ಹೃದಯಕ್ಕೆ ಗಾಳಿ ತಾಕುವಂತೆ ಮಾಡಬೇಕು.

ಇಟಲಿಯಲ್ಲಿ ಫುಟ್‌ಬಾಲ್ ಆಡಬೇಕೆಂದರೆ ಮೊದಲು ಫುಟ್‌ಬಾಲ್ ಕ್ರೀಡಾ ಸಮಿತಿಯ ಎದುರು ಹಾಜರಾಗಬೇಕು. ಸಮಿತಿ ಮಾಡುವ ವಿವಿಧ ಪರೀಕ್ಷೆಗಳಿಗೆ ಒಳಪಡಬೇಕು. ಎಲ್ಲಾ ಪರೀಕ್ಷೆಯ ವರದಿ ಬಂದ ನಂತರ ಈ ವ್ಯಕ್ತಿ ಫುಟ್‌ಬಾಲ್ ಆಡಲು ಯೋಗ್ಯ ಎನ್ನುವ ಪ್ರಮಾಣ ಪತ್ರ ಪಡೆಯಬೇಕು. ಈ ತರಹದ ಪದ್ಧತಿ ಬೇರೆ ದೇಶಗಳಲ್ಲಿ ಇಲ್ಲ. ಇದನ್ನು ಎಲ್ಲೆಡೆಗೂ ಜಾರಿಗೆ ತರಬೇಕು. ಆಗ ಈ ತರಹದ ಘಟನೆಗಳನ್ನು ತಡೆಯಲು ಸಾಧ್ಯ.

ಪ್ರತಿ ವ್ಯಕ್ತಿ ಸ್ಪರ್ಧಾತ್ಮಕ ಕ್ರೀಡಾಕ್ಷೇತ್ರಕ್ಕೆ ಧುಮುಕುವಾಗ ರಕ್ತದ ಒತ್ತಡ, ಟ್ರೇಡ್‌ಮೆಲ್, ಇಸಿಜಿ, ಏಕೋ ಪರೀಕ್ಷೆಗೆ ಮಾಡಿಸಿಕೊಳ್ಳುವುದು ಒಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.