ADVERTISEMENT

ಅಬ್ಬಾಸಿ ಆರೋಗ್ಯದಲ್ಲಿ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಬೆಂಗಳೂರು: ಅಂಧರ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನಾಡಲು ಇಲ್ಲಿಗೆ ಆಗಮಿಸಿರುವ ಪಾಕಿಸ್ತಾನ ತಂಡದ ನಾಯಕ ಜೀಶನ್ ಅಬ್ಬಾಸಿ ನೀರು ಎಂದು ಭಾವಿಸಿ ಫಿನಾಯಿಲ್ ಕುಡಿದು ಆಸ್ಪತ್ರೆ ಸೇರಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಸಂಜೆ ವೇಳೆಗೆ ಗುಣಮುಖರಾಗಿ ಅವರು ಹೋಟೆಲ್‌ಗೆ ವಾಪಸ್ಸಾಗಿದ್ದಾರೆ.

`ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಪಂದ್ಯ ಆಡಲು ಸಜ್ಜುಗೊಳ್ಳುತ್ತಿತ್ತು. ಅಬ್ಬಾಸಿ ಟೇಬಲ್ ಮೇಲೆ ಇಡಲಾಗಿದ್ದ ಉಪಹಾರ ಸೇವಿಸುತ್ತಿದ್ದರು. ಅದೇ ಟೇಬಲ್‌ನಲ್ಲಿಟ್ಟಿದ್ದ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ನೀರನ್ನು ಕುಡಿದಿದ್ದಾರೆ. ಅದು ಫಿನಾಯಿಲ್ ಮಿಶ್ರಣ ಮಾಡಿದ ನೀರು ಎಂಬುದು ತಕ್ಷಣ ಗೊತ್ತಾಗಿದೆ. ಇದರಿಂದ ಅವರು ಸ್ಥಳದಲ್ಲಿಯೇ ವಾಂತಿ ಮಾಡಿಕೊಂಡಿದ್ದಾರೆ. ನಂತರ ಅವರನ್ನು ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆಗೆ ಸೇರಿಸಲಾಯಿತು. ಸಂಜೆ ವೇಳೆಗೆ ಅವರು ಗುಣಮುಖರಾಗಿ ಹೋಟೆಲ್‌ಗೆ ಮರಳಿದ್ದಾರೆ' ಎಂದು ಪಾಕಿಸ್ತಾನ ಅಂಧರ ಕ್ರಿಕೆಟ್ ಸಂಸ್ಥೆಯ ಮ್ಯಾನೇಜರ್ ಮತ್ತು ವಿಶ್ವ ಅಂಧ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸಯ್ಯದ್ ಸುಲ್ತಾನ್ ಷಾ ಘಟನೆಯನ್ನು ವಿವರಿಸಿದ್ದಾರೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಶುಕ್ರವಾರ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಇದೇ ಸೇಡಿನಿಂದ ಉದ್ದೇಶಪೂರ್ವಕವಾಗಿಯೇ ಸ್ಥಳದಲ್ಲಿ ನೀರಿನ ಬದಲು ಫಿನಾಯಿಲ್ ಬಾಟಲಿ ಇಡಲಾಗಿತ್ತು ಎಂಬ ಉಹಾಪೋಹ ಮೊದಲು ಎದ್ದಿತ್ತು.

`ಉದ್ದೇಶ ಪೂರ್ವಕವಾಗಿ ನಡೆದ ಘಟನೆ ಇದಲ್ಲ. ಇದು ತೀರಾ ಅಕಸ್ಮಿಕ. ಅಂಧರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪಾಲ್ಗೊಂಡು ಎರಡೂ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದೆ. ಈ ಘಟನೆಗೆ ಹೆಚ್ಚಿನ ಮಹತ್ವ ನೀಡುವುದು ಬೇಡ. ವಿಶ್ವಕಪ್ ಗೆಲ್ಲುವತ್ತ ಮಾತ್ರ ನಮ್ಮ ಗಮನ' ಎಂದು ಪಾಕ್ ತಂಡದ ಮ್ಯಾನೇಜರ್ ಮಹಮ್ಮದ್ ಬಿಲಾಲ್ ಸುದ್ದಿಗಾರರಿಗೆ ತಿಳಿಸಿದರು.

ಆರೋಗ್ಯ ಸುಧಾರಣೆ: `ಅಬ್ಬಾಸಿ ಆರೋಗ್ಯವಾಗಿದ್ದಾರೆ. ವಿವಿಧ ಪರೀಕ್ಷೆಗಳನ್ನು ಮಾಡಬೇಕಿದ್ದ ಕಾರಣ ಕೆಲ ಗಂಟೆಗಳ ಕಾಲ ಅವರನ್ನು ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗಿತ್ತು. ಏನೂ ಅಪಾಯವಿಲ್ಲ' ಎಂದು ರಾಮಯ್ಯ ಆಸ್ಪತ್ರೆಯ ಅಧ್ಯಕ್ಷ ನರೇಶ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಅಮಾನತು: `ಟೇಬಲ್ ಹಾಗೂ ಕಿಟಕಿಯ ಗಾಜುಗಳನ್ನು ಸ್ವಚ್ಚಗೊಳಿಸಲು ಅಲ್ಲಲ್ಲಿ ಟೇಬಲ್ ಮೇಲೆ ಫಿನಾಯಿಲ್ ಮಿಶ್ರಿತ ನೀರಿನ ಬಾಟಲಿಯನ್ನು ಇಡಲಾಗಿರುತ್ತದೆ. ಆದರೆ, ಅಬ್ಬಾಸಿ ಅವರು ಆಕಸ್ಮಿಕವಾಗಿ ಬಾಟಲಿಯಲ್ಲಿದ್ದದ್ದನ್ನು ನೀರು ಎಂದು ಭಾವಿಸಿ ಕುಡಿದ ಕಾರಣ ಈ ಘಟನೆ ಜರುಗಿದೆ. ಹೋಟೆಲ್ ಸಿಬ್ಬಂದಿ ಅಲ್ಲಿ ಬಾಟಲಿಯನ್ನು ಇಡಬಾರದಿತ್ತು. ಆದ ಕಾರಣ ಆ ಸಿಬ್ಬಂದಿಯನ್ನು ಕೆಲಸದಿಂದ ತಗೆದು ಹಾಕಲಾಗಿದೆ' ಎಂದು ಆಟಗಾರರು ತಂಗಿರುವ ಪಿಕ್ ಅಂಡ್ ಮೂವ್ ಹೋಟೆಲ್‌ನ ಜನರಲ್ ಮ್ಯಾನೇಜರ್ ಬಿಸ್ವಜಿತ್ ಚಕ್ರಬೋಟೆ ತಿಳಿಸಿದ್ದಾರೆ.

`ಕಿಡಿಗೇಡಿಗಳು ನಡೆಸಿದ ಹುನ್ನಾರ'
`ಅಬ್ಬಾಸಿ ಬಿ-3 (ಒಂದು ಕಣ್ಣು ಕಾಣುವವರು) ಆಟಗಾರ. ಆದರೂ ಈ ಘಟನೆ ಹೇಗೆ ನಡೆಯಿತು ಎನ್ನುವ ಬಗ್ಗೆ ಅಚ್ಚರಿ ಉಂಟಾಗುತ್ತಿದೆ. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನೀಡುವಂತೆ ಹೋಟೆಲ್‌ಗೆ ಕೇಳಿಕೊಂಡಿದ್ದೇವೆ. ಫಿನಾಯಿಲ್ ಕುಡಿದ ಬಾಟಲಿ ಎಲ್ಲಿದೆ ಎನ್ನುವ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಿಲ್ಲ. ಬಾಟಲಿ ಲಭ್ಯವಾಗಿದ್ದರೆ ಅದನ್ನು ಪರೀಕ್ಷೆಗೆ ಒಳಪಡಿಸಬಹುದಿತ್ತು' ಎಂದು ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಜಿ.ಕೆ. `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.

`ಖಾಸಗಿ ಸಂಸ್ಥೆ ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯನ್ನು ಆಯೋಜನೆ ಮಾಡಿದೆ. ಇದಕ್ಕೆ ಕಳಂಕ ತರಲು ಕೆಲ ಕಿಡಿಗೇಡಿಗಳು ವ್ಯವಸ್ಥಿತವಾಗಿ ನಡೆಸಿದ ಹುನ್ನಾರ ಇದು. ಭಾರತ ತಂಡ ಪಾಕ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದಕ್ಕೂ, ಈ ಘಟನೆಗೂ ಸಂಬಂಧವಿಲ್ಲ. ಎರಡೂ ರಾಷ್ಟ್ರಗಳು ಉತ್ತಮ ಬಾಂಧವ್ಯ ಹೊಂದಿವೆ' ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT