ADVERTISEMENT

ಅಮಿತ್ ಕುಮಾರ್‌ಗೆ ಚಿನ್ನದ ಪದಕ

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್; ಕಂಚು ಗೆದ್ದ ಬಜರಂಗ್, ಬಬಿತಾ ಕುಮಾರಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಭಾರತದ ಅಮಿತ್ ಕುಮಾರ್ ಇಲ್ಲಿ ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಪುರುಷರ 55 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಗೆದ್ದುಕೊಂಡರು. ಬಜರಂಗ್ (60 ಕೆ.ಜಿ ವಿಭಾಗ) ಕಂಚಿನ ಪದಕ ಜಯಿಸಿದರೆ, ಮಹಿಳೆಯರ 51 ಕೆ.ಜಿ ಮತ್ತು 55 ಕೆ.ಜಿ ವಿಭಾಗದಲ್ಲಿ ವಿನೇಶ್ ಹಾಗೂ ಬಬಿತಾ ಕುಮಾರಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಹರಿಯಾಣದ 20ರ ಹರೆಯದ ಅಮಿತ್, ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ 1-0, 5-2ರಿಂದ ಉತ್ತರ ಕೊರಿಯಾದ ಕ್ಯೋಂಗ್ ಯಾಂಗ್ ವಿರುದ್ಧ ಜಯ ಕಂಡರು. ಸೆಮಿಫೈನಲ್ ಪಂದ್ಯದ ವೇಳೆ ತಲೆಗೆ ಗಾಯ ಮಾಡಿಕೊಂಡು ರಕ್ತ ಸುರಿಯುತ್ತಿದ್ದರೂ ಹೋರಾಟ ನಿಲ್ಲಿಸದ ಅಮಿತ್‌ಗೆ ಮೆಡಿಕಲ್ ಟೈಮ್‌ಔಟ್ ನೀಡಲಾಗಿತ್ತು. ಈ ನೋವಿನಿಂದ ಎದೆಗುಂದದ ಅಮಿತ್, ಭಾರತದ ಚಿನ್ನದ ಪದಕಗಳ ಖಾತೆ ತೆರೆದರು.

`ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಅವುಗಳನ್ನು ಪೂರೈಸಿದ್ದೇನೆ ಎಂಬ ಸಂತಸ ನನಗಿದೆ. ಸ್ಪರ್ಧೆಗೆ ಇಳಿದಾಗ ನಾನು ಗಾಯವನ್ನು ಮರೆತೇ ಬಿಟ್ಟಿದ್ದೆ' ಎಂದು ಅಮಿತ್ ಪ್ರತಿಕ್ರಿಯಿಸಿದ್ದಾರೆ.

ಪುರುಷರ 60 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಬಜರಂಗ್ ಕಂಚಿನ ಪದಕ ಗೆದ್ದುಕೊಂಡರು. ಅವರು 1-1, 3-1ರಿಂದ ಜಪಾನ್‌ನ ಶೋಗೋ ಮಯಿಡಾರನ್ನು ಸೋಲಿಸಿದರು. ಈ ವಿಭಾಗದಲ್ಲಿ ಉತ್ತರ ಕೊರಿಯಾದ ಹಾಕ್ ಹ್ವಾಂಗ್ ರ‌್ಯೋಂಗ್ ಬಂಗಾರ ಪದಕ ಗೆದ್ದರು. ಕೊರಿಯಾದ ಜಯೀ ಹೂನ್ ಯಾಂಗ್ ಬೆಳ್ಳಿ ಪದಕ ಜಯಿಸಿದರು.

ಈ ಬಾರಿಯ ಟೂರ್ನಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ವಿನೇಶ್ ತಂದಿತ್ತರು. ಅವರು ಮಹಿಳೆಯರ 51 ಕೆ.ಜಿ  ವಿಭಾಗದಲ್ಲಿ ಕಂಚಿನ ಪದಕ ಗ್ದ್ದೆದುಕೊಂಡರು. 1-0, 3-0ಯಿಂದ ಥಾಯ್ಲೆಂಡ್‌ನ ಶ್ರೀಪಾಪ ಥೋ-ಕಾಯೇವ್ ವಿರುದ್ಧ ಗೆಲುವು ಕಂಡರು. ಬಂಗಾರದ ಪದಕವನ್ನು ಕಜಕಸ್ತಾನದ ತಾತ್ಯಾನ ಅಮನ್‌ಜೋಲ್ ಗೆದ್ದರು. ಚೀನಾದ ಹೈ ಪಿಂಗ್ ಲಿಯು ರಜತ ಪದಕ ತಮ್ಮದಾಗಿಸಿಕೊಂಡರು.

ಇದೇ ರೀತಿ, ಬಬಿತಾ ಕುಮಾರಿ ಕೂಡ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಮಹಿಳೆಯರ 55 ಕೆ.ಜಿ ವಿಭಾಗದಲ್ಲಿ ಅವರು 1-1, 3-0ಯಿಂದ ಮೊಂಗೊಲಿಯಾದ ಬ್ಯಾಂಬತ್ಸೆರೇನ್ ಸುಂಡೇವ್‌ರನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡರು. ಈ ವಿಭಾಗದಲ್ಲಿ ಚಿನ್ನದ ಪದಕವನ್ನು ಚೀನಾದ ಸೆನ್‌ಲಿಯಾನ್ ಯಾಂಗ್ ಗೆದ್ದರೆ, ಕನಕೋ ಮುರಾತಾ ಬೆಳ್ಳಿ ಪದಕ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.