ADVERTISEMENT

ಅರಮನೆ ನಗರದಲ್ಲಿ ಕಿಂಗ್ಸ್-ರಾಯಲ್ಸ್ ಸಮರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST
ಅರಮನೆ ನಗರದಲ್ಲಿ ಕಿಂಗ್ಸ್-ರಾಯಲ್ಸ್ ಸಮರ
ಅರಮನೆ ನಗರದಲ್ಲಿ ಕಿಂಗ್ಸ್-ರಾಯಲ್ಸ್ ಸಮರ   

ಜೈಪುರ (ಪಿಟಿಐ): ಕನ್ನಡನಾಡಿನ ಹೆಮ್ಮೆಯ ಆಟಗಾರ ರಾಹುಲ್ ದ್ರಾವಿಡ್ ನೇತೃತ್ವದ ರಾಜಸ್ತಾನ್ ರಾಯಲ್ಸ್ ತಂಡದವರು ಪ್ರಸಕ್ತ `ಐಪಿಎಲ್ ಋತು~ವಿನ ತಮ್ಮ ಚೊಚ್ಚಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲ್ಲುವ ಹುಮ್ಮಸ್ಸಿನಿಂದಿದ್ದಾರೆ.

ಐಪಿಎಲ್ ಮೊದಲ ಅವತರಣಿಕೆಯಲ್ಲಿ ಪ್ರತಿಷ್ಠಿತ ಟ್ರೋಫಿ ಎತ್ತಿಕೊಂಡು ಅಚ್ಚರಿ ಮೂಡಿಸಿದ್ದ, ರಾಜಸ್ತಾನ್ ಆಟಗಾರರು ಆ ನಂತರ ಅದೇ ಸಾಮರ್ಥ್ಯವನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ಸು ಗಳಿಸಲಿಲ್ಲ. ಕ್ರಿಕೆಟ್ ಜಗತ್ತಿನ ತಾರಾಮೌಲ್ಯದ ಆಟಗಾರ ಶೇನ್ ವಾರ್ನ್ ಮೊದಲ ನಾಲ್ಕು ವರ್ಷಗಳ ಕಾಲ ರಾಯಲ್ಸ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಆದರೆ ಈ ವರ್ಷ ಅವರ ಬದಲಿಗೆ ದ್ರಾವಿಡ್ ನೇತೃತ್ವ ವಹಿಸಿಕೊಂಡಿದ್ದಾರೆ.

ಪಂಜಾಬ್ ತಂಡಕ್ಕೆ ಐಪಿಎಲ್‌ನಲ್ಲಿ ಎತ್ತರದ ಸಾಧನೆಯ ಪರಂಪರೆಯಂತೂ ಇಲ್ಲ. ಆಸ್ಟ್ರೇಲಿಯಾದ ಡೇವಿಡ್ ಹಸ್ಸಿ, ಶಾನ್ ಮಾರ್ಷ್ ಮುಂತಾದ ಆಟಗಾರರನ್ನು ಹೊರತು ಪಡಿಸಿದರೆ ಖ್ಯಾತನಾಮರ ದಂಡೂ ಇಲ್ಲ. ಆದರೆ ಗಿಲ್‌ಕ್ರಿಸ್ಟ್ ಅವರಂತಹ ಅನುಭವಿ ಆಟಗಾರನ ನಾಯಕತ್ವವೇ ಕಿಂಗ್ಸ್ ಇಲೆವೆನ್ ತಂಡದ ಹೆಗ್ಗಳಿಕೆ. ಹೀಗಾಗಿ ಈ ಪಂದ್ಯ ದ್ರಾವಿಡ್ ಮತ್ತು ಗಿಲ್‌ಕ್ರಿಸ್ಟ್ ಪ್ರತಿಷ್ಠೆಯ ಪ್ರಶ್ನೆಯಂತಿದೆ.

ದ್ರಾವಿಡ್ ಜತೆಗೆ ಶೇನ್ ವಾಟ್ಸನ್, ಶಾನ್ ಟೇಟ್, ಶ್ರೀಶಾಂತ್ ಮುಂತಾದವರ ಆನೆಬಲವಿದೆ ನಿಜ, ಆದರೆ ಪಂಜಾಬ್ ಎದುರು ಗಾಯಳು ಶ್ರೀಶಾಂತ್ ಹಾಗೂ ವಾಟ್ಸನ್ ಇಲ್ಲದೆಯೇ ದಂಡನ್ನು ಮುನ್ನಡೆಸುವ ಸವಾಲು ದ್ರಾವಿಡ್ ಮೇಲಿದೆ.

ದ್ರಾವಿಡ್ ಈಚೆಗಷ್ಟೇ ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಿದವರು. ಅವರು ವಾರ್ನ್ ಹಚ್ಚಿಟ್ಟ ರಾಜಸ್ತಾನ್ ರಾಯಲ್ಸ್ `ಯಶೋಜ್ಯೋತಿ~ಯನ್ನು ಅದೆಷ್ಟರ ಮಟ್ಟಿಗೆ ಇನ್ನೂ ಪ್ರಖರಗೊಳಿಸುತ್ತಾರೆನ್ನುವುದನ್ನು ಕಾದು ನೋಡಬೇಕಿದೆ. ಆದರೆ ಟೆಸ್ಟ್ ಲೋಕದಲ್ಲಿ ಮಹತ್ತರ ಹೆಜ್ಜೆಗುರುತುಗಳನ್ನು ಮೂಡಿಸಿರುವ `ಮಹಾಗೋಡೆ~ ದ್ರಾವಿಡ್ ಚುಟುಕು ಕ್ರಿಕೆಟ್‌ನಲ್ಲಿ `ಶಿಖರ~ವಾಗಿದ್ದಂತೂ ಅಷ್ಟರಲ್ಲೇ ಇದೆ.

ವಾರ್ನ್ ಅವರ ಸಾಂಪ್ರದಾಯಿಕವಲ್ಲದ, ಸ್ಪೋಪಜ್ಞತೆಯ ದಿಟ್ಟ ತಂತ್ರಗಳು ರಾಜಸ್ತಾನ್ ತಂಡಕ್ಕೆ ಆರಂಭದ ದಿನಗಳಲ್ಲಿ ಹೊಸ ಚೇತನ ನೀಡಿತ್ತು. ಇದೀಗ ದ್ರಾವಿಡ್ ಅವರೂ ಕೋಚಿಂಗ್‌ಗೆ ಸಂಬಂಧಿಸಿದ ವಾರ್ನ್ ಅವರಷ್ಟು ಯಶಸ್ವಿಯಾಗಬಲ್ಲರೇ, ಕಾದು ನೋಡಬೇಕಿದೆ.

ಆತಿಥೇಯ ತಂಡದ ಬ್ಯಾಟಿಂಗ್‌ನಲ್ಲಿ ದ್ರಾವಿಡ್ ಜತೆಗೆ ಅಜಿಂಕ್ಯ ರಹಾನೆ, ಅಶೋಕ್ ಮೆನಾರಿಯ, ಕೆವೊನ್ ಕೂಪರ್ ಮತ್ತು ಒವೇಸ್ ಷಹಾ ಗಮನ ಸೆಳೆಯಲಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ವೇಗಿ ಶಾನ್ ಟೇಟ್ ಅವರೇ ಅಲ್ಲದೆ, ಸಿದ್ದಾರ್ಥ ತ್ರಿವೇದಿ, ಪಂಕಜ್ ಸಿಂಗ್ ಮತ್ತು ಅಮಿತ್ ಸಿಂಗ್ ಎದುರಾಳಿಗಳನ್ನು ಕಾಡಲಿದ್ದಾರೆ. ಸ್ಪಿನ್ನರ್‌ಗಳಾದ ಜೊಹಾನ್ ಬೋಥಾ ಅವರ ಜತೆಗೆ ಸ್ಥಳೀಯ ಆಟಗಾರ ಗಜೇಂದ್ರ ಸಿಂಗ್ ಅವರಿಗೂ ಆಡಲು ಅವಕಾಶ ಸಿಗಬಹುದು.

ಪಂಜಾಬ್ ತಂಡದಲ್ಲಿ ಗಿಲ್‌ಕ್ರಿಸ್ಟ್ ನಾಯಕತ್ವದ ಜವಾಬ್ದಾರಿಯ ಜತೆಗೆ ಕೋಚಿಂಗ್ ಹೊಣೆಯನ್ನೂ ಹೊತ್ತಿದ್ದಾರೆ. ಹಿಂದೆ ಆಸ್ಟ್ರೇಲಿಯ ಮೂರು ಸಲ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಇದೀಗ ಪಂಜಾಬ್ ತಂಡಕ್ಕೆ ಅಷ್ಟೇ `ಅದೃಷ್ಟಶಾಲಿ~ಯಾಗಲು ಸಾಧ್ಯವೇ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

ಪಾಲ್ ವಾಲ್ತಾಟಿ, ಶಾನ್ ಮಾರ್ಷ್ ಬ್ಯಾಟಿಂಗ್‌ನಲ್ಲಿ ಗಮನ ಸೆಳೆಯಲಿದ್ದಾರೆ. ಈಗಾಗಲೆ ಸಾಕಷ್ಟು ಗಮನ ಸೆಳೆದಿರುವ ಕಿರಿಯ ಆಟಗಾರರಾದ ಅಭಿಷೇಕ್ ನಾಯರ್, ಪಿಯೂಷ್ ಚಾವ್ಲಾ, ಪರಸ್ ಡೋಗ್ರಾ ಅವರ ಸಾಮರ್ಥ್ಯವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸುವಂತಿಲ್ಲ. ಅನುಭವಿ ರಮೇಶ್ ಪೊವಾರ್ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಇದ್ದೇ ಇದೆ.

ಗಾಯಾದ ಕಾಟ: ಮಧ್ಯಮ ವೇಗಿ ಶ್ರೀಶಾಂತ್ ಗಾಯಾಳುವಾಗಿರುವುದರಿಂದ ಮೊದಲ ಮೂರು ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ತಂಡದ ನಾಯಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.ಶ್ರೀಶಾಂತ್ ನೆಟ್ಸ್ ಅಭ್ಯಾಸದಲ್ಲಿ ಗುರುವಾರ ಪಾಲ್ಗೊಂಡಿದ್ದರಾದರೂ, ಅವರು ಪೂರ್ಣ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದ ಇವರು ಇದೇ ಕಾರಣಕ್ಕೆ ಈಚೆಗಿನ ಆಸ್ಟ್ರೇಲಿಯ ಪ್ರವಾಸಕ್ಕೂ ಆಯ್ಕೆಯಾಗಿರಲಿಲ್ಲ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶ್ರೀಶಾಂತ್ ಅವರಷ್ಟೇ ಅಲ್ಲ, ಶೇನ್ ವಾಟ್ಸನ್ ಮತ್ತು ದಿನೇಶ್ ಚಂಡಿಮಲ್ ಕೂಡಾ ಆಡುತ್ತಿಲ್ಲ. `ಜೈಪುರದಲ್ಲಿ ಈ ಮೂವರ ಕೊರತೆ ತಂಡವನ್ನು ಕಾಡಲಿದೆ ನಿಜ, ಆದರೂ ನಮ್ಮಲ್ಲಿರುವ ಹಲವು ಯುವ ಆಟಗಾರರು ಆ ಕೊರತೆಯನ್ನು ಸಮರ್ಥವಾಗಿಯೇ ತುಂಬಲಿದ್ದಾರೆ~ ಎಂದೂ ದ್ರಾವಿಡ್ ಹೇಳಿದ್ದಾರೆ.

ತಂಡಗಳು

ರಾಜಸ್ತಾನ್ ರಾಯಲ್ಸ್: ರಾಹುಲ್ ದ್ರಾವಿಡ್ (ನಾಯಕ), ಸಿದ್ಧಾರ್ಥ ತ್ರಿವೇದಿ, ಶೇನ್ ವಾಟ್ಸನ್, ಶಾನ್ ಟೇಟ್, ದಿಶಾಂತ್ ಯಾಗ್ನಿಕ್, ಪಾಲ್ ಕಾಲಿಂಗ್‌ವುಡ್, ಎಸ್.ಶ್ರೀಶಾಂತ್, ಬ್ರಾಡ್ ಹಾಡ್ಜ್, ಶ್ರೀವತ್ಸ್ ಗೋಸ್ವಾಮಿ, ಫೈಜ್ ಫಜಲ್, ಸಮದ್ ಫಲಾ, ಆದಿತ್ಯ ದೊಲೆ, ಕೆವೊನ್ ಕೂಪರ್, ಬ್ರಾಡ್ ಹಾಗ್, ಆಕಾಶ್ ಚೋಪ್ರಾ, ಅಂಕಿತ್ ಚವಾಣ್, ದಿನೇಶ್ ಚಂಡಿಮಾಲ್, ದೀಪಕ್ ಚಾಹರ್, ಜೊಹಾನ್ ಬೋಥಾ, ಸ್ಟುವರ್ಟ್ ಬಿನ್ನಿ, ಅಶೋಕ್ ಮೆನಾರಿಯಾ, ಸುಮಿತ್ ನಾರ್ವಲ್, ಪಂಕಜ್ ಸಿಂಗ್, ಪಿನಾಲ್ ಷಹಾ, ಒವೇಸ್ ಷಹಾ, ಅಭಿಷೇಕ್ ರಾವುತ್, ಅಜಿಂಕ್ಯ ರಹಾನೆ, ಅಮಿತ್ ಸಿಂಗ್, ಅಮಿತ್ ಪಾನ್ ಇಕಾರ್.

ಕಿಂಗ್ಸ್ ಇಲೆವೆನ್ ಪಂಜಾಬ್: ಆ್ಯಡಮ್ ಗಿಲ್‌ಕ್ರಿಸ್ಟ್ (ನಾಯಕ), ವಿಪುಲ್ ಶರ್ಮ, ಪರಸ್ ಡೋಗ್ರಾ, ಹರಮಿತ್ ಸಿಂಗ್, ಸಿದ್ಧಾರ್ಥ ಚಿಟ್ನಿಸ್, ಲವ್ ಅಬ್ಲಿಷ್, ಪಿಯೂಷ್ ಚಾವ್ಲಾ, ಪರ್ವಿಂದರ್ ಅವಾನಾ, ಸ್ಟುವರ್ಟ್ ಬ್ರಾಡ್, ಅಜರ್ ಮಹಮೂದ್, ರ‌್ಯಾನ್ ಹ್ಯಾರಿಸ್, ವಿಕ್ರಮ್‌ಜಿತ್ ಮಲಿಕ್, ಪಾಲ್ ವಾಲ್ತಾಟಿ, ಸನ್ನಿ   ಸಿಂಗ್, ಶಲಭ್ ಶ್ರೀವಾಸ್ತವ, ರಾಜಗೋಪಾಲ್ ಸತೀಶ್, ನಿತಿನ್ ಸೈನಿ, ಅಭಿಷೇಕ್ ನಾಯರ್, ಡೇವಿಡ್  ಮಿಲ್ಲರ್, ಜೇಮ್ಸ    ಫಾಕ್ನರ್, ಪ್ರವೀಣ್  ಕುಮಾರ್, ಶಾನ್ ಮಾರ್ಷ್, ಡಿಮಿತ್ರಿ ಮಸ್ಕರೆನಾಸ್, ರಮೇಶ್ ಪೊವಾರ್.
ಪಂದ್ಯ ಆರಂಭ: ರಾತ್ರಿ 8 ಗಂಟೆಗೆ. ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.