ADVERTISEMENT

ಅಶ್ವಿನಿಗೆ ಎರಡು ವರ್ಷ ನಿಷೇಧ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST
ಅಶ್ವಿನಿಗೆ ಎರಡು ವರ್ಷ ನಿಷೇಧ
ಅಶ್ವಿನಿಗೆ ಎರಡು ವರ್ಷ ನಿಷೇಧ   

ನವದೆಹಲಿ (ಪಿಟಿಐ): ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಅಶ್ವಿನಿ ಅಕ್ಕುಂಜಿ ಸೇರಿದಂತೆ ನಾಲ್ಕು ಮಹಿಳಾ ಅಥ್ಲೀಟ್‌ಗಳ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕು ಎಂದು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಒತ್ತಾಯ ಮಾಡಿದೆ.

ಈ ವಿಷಯವಾಗಿ ಭಾರತದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ(ನಾಡಾ)ಕ್ಕೆ ಪತ್ರ ಬರೆದಿರುವ ವಾಡಾ ತಪ್ಪಿತಸ್ಥ ಅಥ್ಲೀಟ್‌ಗಳಿಗೆ ಕೇವಲ ಒಂದು ವರ್ಷದ ನಿಷೇಧ ಶಿಕ್ಷೆ ವಿಧಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಅಥ್ಲೀಟ್‌ಗಳು ನಿಷೇಧ ಅವಧಿ ಕಡಿಮೆ ಮಾಡಬೇಕೆಂದು ನಾಡಾ ಮೇಲ್ಮನವಿ ಸಮಿತಿಗೆ ಸಲ್ಲಿಸಿರುವ ವಿನಂತಿಯನ್ನು ಕೂಡ ಪರಿಗಣಿಸಬಾರದು ಎಂದು ಒತ್ತಡ ಹೇರಿದೆ.

ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದಿದ್ದ ಅಶ್ವಿನಿ, ಸಿನಿ ಜೋಸ್, ಪ್ರಿಯಾಂಕಾ ಪನ್ವಾರ್ ಮತ್ತು ಟಿಯಾನಾ ಮೇರಿ ಥಾಮಸ್ ಅವರು ಒಂದು ವರ್ಷ ನಿಷೇಧಕ್ಕೊಳಗಾಗಿದ್ದಾರೆ. ಆದರೆ ಈ ಶಿಕ್ಷೆ ಪ್ರಮಾಣ ತುಂಬಾ ಕಡಿಮೆ ಆಯಿತು ಎನ್ನುವುದು ನಾಡಾ ನಿರ್ಣಯ. ಆದ್ದರಿಂದಲೇ ಎರಡು ವರ್ಷಕ್ಕೆ ಹೆಚ್ಚಿಸುವುದು ಸರಿಯಾದ ನಿರ್ಧಾರವಾಗುತ್ತದೆಂದು ನಾಡಾಕ್ಕೆ ತಿಳಿಸಿದೆ.

ಒಂದೇ ವರ್ಷದ ಶಿಕ್ಷೆಯಿಂದಲೇ ಈ ನಾಲ್ವರು ಅಥ್ಲೀಟ್‌ಗಳ ಲಂಡನ್ ಒಲಿಂಪಿಕ್ ಕನಸು ನುಚ್ಚುನೂರಾಗಿದೆ. ನಿಷೇಧದ ಅವಧಿ ಇನ್ನಷ್ಟು ಹೆಚ್ಚಿದರೆ ಅದರಿಂದ ಈ ಓಟಗಾರ್ತಿಯರಿಗೆ ಗಾಯದ ಮೇಲೆ ಉಪ್ಪು ಸುರಿದಂಥ ಅನುಭವ ಆಗುವುದು ಸಹಜ. ವಾಡಾ ಅಂತೂ ಇವರೆಲ್ಲಾ ಇನ್ನೊಂದು ವರ್ಷ ಅಜ್ಞಾತವಾಸ ಅನುಭವಿಸಲೇಬೇಕು ಎಂದು ಪಟ್ಟು ಹಿಡಿದಿದೆ. ಈ ವಿಷಯವಾಗಿ ಮೇಲ್ಮನವಿ ಸಮಿತಿ ಮುಂದೆ ಆಕ್ಷೇಪ ಸಲ್ಲಿಸುವ ತೀರ್ಮಾನಕ್ಕೂ ಬಂದಿದೆ.

ನಾಡಾ ವಿಚಾರಣಾ ಸಮಿತಿಯು ಇತ್ತೀಚೆಗೆ ನೀಡಿದ್ದ ವರದಿಯಲ್ಲಿ `ಅಥ್ಲೀಟ್‌ಗಳು ಉದ್ದೇಶಪೂರ್ವಕವಾಗಿ ಉದ್ದೀಪನ ಮದ್ದು ತೆಗೆದುಕೊಂಡಿಲ್ಲ~ ಎಂದು ತಿಳಿಸಿತ್ತು. ಇದೇ ಕಾರಣಕ್ಕಾಗಿ ಎರಡು ವರ್ಷಗಳ ಬದಲಾಗಿ ಒಂದು ವರ್ಷಕ್ಕೆ ಶಿಕ್ಷೆಯನ್ನು ಕಡಿಮೆ ಮಾಡಲಾಗಿತ್ತು. ಇದೇ ಕಾರಣಕ್ಕೆ ವಾಡಾ ಅಸಮಾಧಾನಗೊಂಡಿದೆ. ಈ ನಡುವೆ ಅಥ್ಲೀಟ್‌ಗಳು ಶಿಕ್ಷೆ ಇನ್ನಷ್ಟು ರದ್ದು ಮಾಡಬೇಕು ಇಲ್ಲವೆ ತಗ್ಗಿಸಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮನವಿಯು ಸಿ.ಕೆ.ಮಹಾಜನ್ ಮುಂದಿದೆ. ಮೊದಲ ಹಂತದ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ.

ವಾಡಾ ಕೂಡ ಶಿಕ್ಷೆ ಹೆಚ್ಚಿಸಬೇಕೆಂದು ಮೇಲ್ಮನವಿ ಸಲ್ಲಿಸಿದೆ. ಆ ಕುರಿತು ವಿಚಾರಣೆಯು ಫೆಬ್ರುವರಿ 15ರಂದು ನಡೆಯಲಿದೆ ಎಂದು ನಾಡಾ ಪ್ರಧಾನ ನಿರ್ದೇಶಕ ರಾಹುಲ್ ಭಟ್ನಾಗರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
`ಗಂಭೀರವಾದ ಕ್ರಮ ಅಗತ್ಯವಾಗಿದೆ. ನಿಯಮದಂತೆ ಎರಡು ವರ್ಷಗಳ ನಿಷೇಧವೇ ಸರಿ. ದೊಡ್ಡ ಪ್ರಮಾದ ಮಾಡಿರುವ ಅಥ್ಲೀಟ್‌ಗಳ ಮೇಲೆ ಅನುಕಂಪ ಅಗತ್ಯವಿಲ್ಲವೆಂದು ವಾಡಾ ತನ್ನ ಮೇಲ್ಮನವಿಯಲ್ಲಿ ವಿವರಿಸಿದೆ~ ಎಂದು ಭಟ್ನಾಗರ್ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.