ADVERTISEMENT

ಆತಿಥೇಯರಿಗೆ ಮಣಿದ ಆಂಧ್ರ

​ಪ್ರಜಾವಾಣಿ ವಾರ್ತೆ
Published 31 ಮೇ 2012, 19:30 IST
Last Updated 31 ಮೇ 2012, 19:30 IST
ಆತಿಥೇಯರಿಗೆ ಮಣಿದ ಆಂಧ್ರ
ಆತಿಥೇಯರಿಗೆ ಮಣಿದ ಆಂಧ್ರ   

ಬೆಂಗಳೂರು: ಗೋಲುಗಳ ಮಳೆ ಸುರಿಸಿದ ಆತಿಥೇಯ ಕರ್ನಾಟಕ ತಂಡ ದಕ್ಷಿಣ ವಲಯ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ 17-0ಗೋಲುಗಳಿಂದ ಆಂಧ್ರಪ್ರದೇಶ ತಂಡವನ್ನು ಸೋಲಿಸಿತು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಏಕಪಕ್ಷೀಯವಾಗಿ ಕೊನೆಗೊಂಡಿತು. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಎಚ್‌ಎಎಲ್‌ನ ಮಹಮ್ಮದ್ ನಯೀಮುದ್ದಿನ್ ಈ ಪಂದ್ಯದಲ್ಲಿ ಐದು ಗೋಲುಗಳನ್ನು ಗಳಿಸಿದರು.

ಇದಕ್ಕೂ ಮುನ್ನ ಮೋಹನ್ ಮುತ್ತಣ್ಣ 4ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದೇ ಆಟಗಾರ 19ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ತಂದಿತ್ತರು. ನಂತರ ಬಿಜ್ಜು ಯರಕಲ್ (13ನೇ ನಿ.) ಗಳಿಸಿದರು.
ನಯೀಮುದ್ದಿನ್ (18, 24, 25, 34 ಹಾಗೂ 62ನೇ ನಿ.), ಜಯರಾಜ್ (36 ಹಾಗೂ 37ನೇ ನಿ.), ಸಿ.ಕೆ. ಸೋಮಣ್ಣ (41ನೇ ನಿ.), ನವೀನ್ ಕುಮಾರ್ ಎಂ. (43, 64, 65ನೇ ನಿ.), ದೀಪಕ್ ಬಿಜ್ವಾಡ್ (44ನೇ ನಿ.), ವಿನಾಯಕ್ ಬಿಜ್ವಾಡ್ (60ನೇ ನಿ.) ಮತ್ತು ದರ್ಶನ್ (61ನೇ ನಿ.) ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ತಮಿಳುನಾಡು 8-2ಗೋಲುಗಳಿಂದ ಕೇರಳ ಮೇಲೂ, ಪುದುಚೇರಿ 7-3ರಲ್ಲಿ ಹೈದರಾಬಾದ್ ವಿರುದ್ಧವೂ ಗೆಲುವು ಪಡೆಯಿತು.

ಕರ್ನಾಟಕ-ತಮಿಳುನಾಡು ಸಮಬಲ: ಆಡಿರುವ ಎಲ್ಲಾ ಲೀಗ್ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಕರ್ನಾಟಕ ಹಾಗೂ ತಮಿಳುನಾಡು ತಲಾ 12 ಪಾಯಿಂಟ್ಸ್‌ನಿಂದ ಅಗ್ರಸ್ಥಾನದಲ್ಲಿವೆ. ಈ ಎರಡೂ ತಂಡಗಳ ನಡುವೆ ಶುಕ್ರವಾರ ನಡೆಯುವ ಕೊನೆಯ ಲೀಗ್ ಪಂದ್ಯ ಮಹತ್ವದ್ದಾಗಿದೆ. ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿರುವ ರಾಜ್ಯ ತಂಡ ಈ ಪಂದ್ಯದಲ್ಲಿ ಗೆಲುವು ಪಡೆಯಬೇಕು.
 
ಸೋಲು ಎದುರಾದರೆ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವ ಅವಕಾಶ ತಮಿಳುನಾಡು ಪಾಲಾಗಲಿದೆ. ಒಂದು ವೇಳೆ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡರೂ ಅದು ಆತಿಥೇಯರಿಗೆ ಲಾಭ. ಏಕೆಂದರೆ, ಲೀಗ್ ಪಂದ್ಯಗಳಲ್ಲಿ ಹೆಚ್ಚು ಗೋಲು ಗಳಿಸಿರುವ ಕರ್ನಾಟದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದೆ.

ಪಾಯಿಂಟ್ಸ್ ವಿವರ: ಕರ್ನಾಟಕ ಹಾಗೂ ತಮಿಳುನಾಡು (ತಲಾ 12), ಪುದುಚೇರಿ (6), ಹೈದರಾಬಾದ್ (4), ಕೇರಳ (1), ಆಂಧ್ರಪ್ರದೇಶ (0). ಶುಕ್ರವಾರದ ಪಂದ್ಯಗಳು: ಕೇರಳ-ಪುದುಚೇರಿ (ಮಧ್ಯಾಹ್ನ 1.30ಕ್ಕೆ), ಹೈದರಾಬಾದ್-ಆಂಧ್ರಪ್ರದೇಶ (ಮಧ್ಯಾಹ್ನ 3ಕ್ಕೆ) ಹಾಗೂ ಕರ್ನಾಟಕ-ತಮಿಳುನಾಡು (ಸಂಜೆ 4.30ಕ್ಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.