ADVERTISEMENT

ಆಫ್ಘಾನಿಸ್ತಾನಕ್ಕೆ ‘ಸ್ಯಾಫ್‌’ ಕಿರೀಟ

ಫುಟ್‌ಬಾಲ್‌: ಭಾರತದ ಹ್ಯಾಟ್ರಿಕ್‌ ಕನಸು ಭಗ್ನ, ಅಮೀರ್‌ ಪಡೆ ಅಮೋಘ ಸಾಧನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST
ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ಸ್ಯಾಫ್‌ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡ ಆಫ್ಘಾನಿಸ್ತಾನ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದ ಕ್ಷಣ 	–ಎಎಫ್‌ಪಿ ಚಿತ್ರ
ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ಸ್ಯಾಫ್‌ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡ ಆಫ್ಘಾನಿಸ್ತಾನ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದ ಕ್ಷಣ –ಎಎಫ್‌ಪಿ ಚಿತ್ರ   

ಕಠ್ಮಂಡು (ಪಿಟಿಐ): ಹಾಲಿ ಚಾಂಪಿಯನ್‌ ಹಾಗೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದ ಭಾರತ ಮುಖಭಂಗಕ್ಕೆ ಒಳಗಾಗಿದೆ. ಸ್ಯಾಫ್‌ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಸುನಿಲ್‌ ಚೆಟ್ರಿ ಪಡೆಯನ್ನು ಮಣಿಸಿದ ಆಫ್ಘಾನಿಸ್ತಾನ ಟ್ರೋಫಿಯನ್ನು ತನ್ನದಾಗಿಸಿಕೊಂಡಿತಲ್ಲದೆ, ಫುಟ್‌ಬಾಲ್‌ನಲ್ಲಿ ತಮ್ಮ ರಾಷ್ಟ್ರದ ಶಕ್ತಿಯೇನೆಂಬುದನ್ನೂ ಸಾಬೀತು ಮಾಡಿತು.

ದಶರಥ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್‌ ಹೋರಾಟದಲ್ಲಿ ಆಫ್ಘಾನಿಸ್ತಾನ 2–0 ಗೋಲುಗಳಿಂದ ಭಾರತವನ್ನು ಮಣಿಸಿ ಸ್ಯಾಫ್‌ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು. ಇದರ ಜೊತೆಗೆ ಹೋದ ಸಲದ ‘ಮಹಾಸಮರ’ದ ಸೋಲಿಗೆ ತಿರುಗೇಟು ನೀಡಿತು. 2011ರ ಸ್ಯಾಫ್‌ ಕಪ್‌ ಫೈನಲ್ ನವದೆಹಲಿಯಲ್ಲಿ ನಡೆದಿತ್ತು. ಆಗ ಭಾರತ 4–0 ಗೋಲುಗಳಿಂದ ಆಫ್ಘಾನಿಸ್ತಾನವನ್ನು ಮಣಿಸಿತ್ತು.

ಚಾಂಪಿಯನ್‌ ತಂಡದ ಮುಸ್ತಫಾ ಅಜಾದ್‌ಜಾಯ್‌ 9ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಇನ್ನೊಂದು ಗೋಲನ್ನು ಸಂಜರ್‌ ಅಹ್ಮಾದಿ 63ನೇ ನಿಮಿಷದಲ್ಲಿ ಗಳಿಸಿ ವಿಜಯ ವೇದಿಕೆ ಮೇಲೆ ನಿಂತು ಸಂಭ್ರಮಿಸಿದರು.

ಆಫ್ಘಾನಿಸ್ತಾನ ತಂಡದ ಅಮೋಘ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆ ರಾಷ್ಟ್ರದ ಕೆಲ ಸಂಸತ್‌ ಸದಸ್ಯರು ಇಲ್ಲಿಗೆ ಬಂದು ತಂಡದ ಆಟಗಾರರಿಗೆ ಶುಭ ಕೋರಿದ್ದರು. ಐತಿಹಾಸಿಕ ಸಾಧನೆಗೆ ಆಫ್ಘಾನಿಸ್ತಾನ ಸರ್ಕಾರ ಪ್ರತಿ ಆಟಗಾರನಿಗೂ ತಲಾ 16 ಲಕ್ಷ ರೂಪಾಯಿ ಬಹುಮಾನ   ಘೋಷಿಸಿದೆ.

ಭಾರತದ ಕೋಚ್‌ ವಿಮ್‌ ಕೊವರ್‌ಮನ್ಸ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಅವರನ್ನು ಮೊದಲ ಇಲೆವೆನ್‌ನಲ್ಲಿ ಕಣಕ್ಕಿಳಿಸಲಿಲ್ಲ. ಅವರ ಈ ಯೋಜನೆ ಹೆಚ್ಚಿನ ಫಲ ನೀಡಲಿಲ್ಲ. ಭಾರತ ತಂಡ ಗೋಲು ಗಳಿಸಲು ಹಲವು ಪ್ರಯತ್ನಗಳನ್ನು ನಡೆಸಿತು. ಆದರೆ, ಆಫ್ಘಾನಿಸ್ತಾನದ ರಕ್ಷಣಾ ವಿಭಾಗದ ‘ಭದ್ರಕೋಟೆ’ ಭೇದಿಸಲು ಸಾಧ್ಯವಾಗಲಿಲ್ಲ.

19ನೇ ನಿಮಿಷದಲ್ಲಿ  ಭಾರತದ  ಮೆಹ್ತಾಬ್‌ ಹೊಸೈನ್‌ ದೀರ್ಘ ದೂರದಲ್ಲಿದ್ದ ಚೆಂಡನ್ನು ಗುರಿ ಸೇರಿಸಲು ಪ್ರಯತ್ನ ನಡೆಸಿದರು. ರಾಬಿನ್‌ ಸಿಂಗ್‌ ಇದಕ್ಕೆ ನೆರವಾದರು. ಆದರೆ, ಎದುರಾಳಿ ತಂಡದ ಮಸೂರ್‌ ಫಾಗಿರ್‌ಯರ್ ಅಪಾಯಕ್ಕೆ ಅವಕಾಶ ನೀಡಲಿಲ್ಲ. 26ನೇ ನಿಮಿಷದಲ್ಲಿ ಮತ್ತೊಂದು ಮಹತ್ವದ ಅವಕಾಶವನ್ನು ಭಾರತ ಕಳೆದುಕೊಂಡಿತು.

ಆಫ್ಘಾನಿಸ್ತಾನ ಆರಂಭದಿಂದ ಮುನ್ನಡೆ ಸಾಧಿಸಿದ್ದ ಕಾರಣ ಆರು ಬಾರಿಯ ಚಾಂಪಿಯನ್‌ ಭಾರತ ಒತ್ತಡಕ್ಕೆ ಒಳಗಾಯಿತು. ಗೋಲು ಗಳಿಸಲು ಪದೇ ಪದೇ ವಿಫಲ ಯತ್ನಗಳನ್ನು ನಡೆಸಿತು. ‘ಫೇರ್‌ ಪ್ಲೇ’ ಪ್ರಶಸ್ತಿಯನ್ನು ಆತಿಥೇಯ ನೇಪಾಳ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.