ADVERTISEMENT

ಆರ್‌ಟಿಇ: ಸರ್ಕಾರಕ್ಕೆ ಖಾಸಗಿ ಶಾಲೆ ಸೆಡ್ಡು

ಮಂಜುನಾಥ್ ಹೆಬ್ಬಾರ್‌
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಒಂಬತ್ತು ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸುವ ಮೂಲಕ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ (ಸಿಬಿಎಸ್‌ಇ ಪಠ್ಯಕ್ರಮ) ಆಡಳಿತ ಮಂಡಳಿಯು ಶಿಕ್ಷಣ ಇಲಾಖೆಗೆ ಸೆಡ್ಡು ಹೊಡೆದಿದೆ.

ಶಾಲೆಯ ಪೂರ್ವ ಪ್ರಾಥಮಿಕ (ಎಲ್‌ಕೆಜಿ) ತರಗತಿಗೆ 10 ಅರ್ಜಿಗಳು ಬಂದಿದ್ದವು. ಅರ್ಜಿಗಳನ್ನು ಪರಿಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಕಾಯ್ದೆಯ ನಿಬಂಧನೆಗಳನ್ನು ಪೂರೈಸದ ಒಂದು ಅರ್ಜಿಯನ್ನು ತಿರಸ್ಕರಿಸಿ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಶಾಲೆಗೆ ಕಳುಹಿಸಿದ್ದರು. `ಶಾಲೆಯಲ್ಲಿ ಈಗಾಗಲೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ವರ್ಷದಿಂದ ಕಾಯ್ದೆ ಅನುಷ್ಠಾನ ಮಾಡಲಾಗುವುದು~ ಎಂದು ಶಾಲೆಯ ಆಡಳಿತ ಮಂಡಳಿಯು ಶಿಕ್ಷಣ ಇಲಾಖೆಗೆ ಹಿಂಬರಹ ನೀಡಿದೆ.

`ಶಾಲೆಯಲ್ಲಿ ಒಂದನೇ ತರಗತಿಗೂ ಒಂಬತ್ತು ಅರ್ಜಿಗಳು ಬಂದಿದ್ದವು. ಶಾಲೆಯ ಆರಂಭಿಕ ತರಗತಿಗೆ ಸೀಟು ಕೊಡಬೇಕು ಎಂಬ ನಿಯಮ ಇದೆ. ಹಾಗಾಗಿ ಒಂದನೇ ತರಗತಿಗೆ ಅರ್ಜಿ ಸಲ್ಲಿಸಿದವರಿಗೆ ಪಕ್ಕದ ಶಾಲೆಯಲ್ಲಿ ಪ್ರವೇಶಾವಕಾಶ ಕಲ್ಪಿಸಲಾಯಿತು. ಈಗ ಎಲ್‌ಕೆಜಿಗೆ ಸಹ ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳಲು ಆಡಳಿತ ಮಂಡಳಿ ನಿರಾಕರಿಸಿದ್ದು, ಡಿಡಿಪಿಐ ಅವರಿಗೆ ಈ ಬಗ್ಗೆ ವರದಿ ಸಲ್ಲಿಸಲಾಗಿದೆ. ಶಾಲೆಗೆ ಶೋಕಾಸ್ ನೋಟಿಸ್ ನೀಡಲಾಗುವುದು~ ಎಂದು ರಾಜಾಜಿನಗರ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ `ಪ್ರಜಾವಾಣಿ~ಗೆ ಬುಧವಾರ ತಿಳಿಸಿದರು.

`ಶೋಕಾಸ್ ನೋಟಿಸ್ ತಲುಪಿದ ಬಳಿಕ ಆಡಳಿತ ಮಂಡಳಿಯವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಸಿಇಒ ಅವರು ವಿಚಾರಣೆ ನಡೆಸಿ ಕಾಯ್ದೆಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವರು. ಶಾಲೆಯ ಮಾನ್ಯತೆ ರದ್ದುಪಡಿಸಲು ಅವಕಾಶ ಇದೆ~ ಎಂದು ಬೆಂಗಳೂರು ಉತ್ತರದ ಆರ್‌ಟಿಇ ನೋಡೆಲ್ ಅಧಿಕಾರಿ ಜಯಸಿಂಹ ಮಾಹಿತಿ ನೀಡಿದರು.

ಪೋಷಕರ ಕಿಡಿ: `ಮಗ ಬೃಜೇಶ್‌ಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದು ಕನಸಾಗಿತ್ತು. ಆಶಾಕಿರಣವಾಗಿ ಕಾಣಿಸಿದ್ದು ಶಿಕ್ಷಣ ಹಕ್ಕು ಕಾಯ್ದೆ. ಮಗನನ್ನು ಎಲ್‌ಕೆಜಿಗೆ ಸೇರಿಸಲು ನ್ಯಾಷನಲ್ ಪಬ್ಲಿಕ್ ಸ್ಕೂಲ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆತನಿಗೆ ನಾಲ್ಕೂವರೆ ವರ್ಷ ಆಗಿದೆ ಎಂಬ ಕಾರಣ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಆರು ವರ್ಷ ಪೂರೈಸಿದ ಮಗುವನ್ನು ಒಂದನೇ ತರಗತಿಗೆ ಸೇರ್ಪಡೆ ಮಾಡಲು ಅವಕಾಶ ಇದೆ ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ. ಆ ಪ್ರಕಾರ ನನ್ನ ಮಗನನ್ನು ಎಲ್‌ಕೆಜಿಗೆ ಸೇರಿಸಿಕೊಳ್ಳಬೇಕಿತ್ತು. ಅರ್ಜಿ ತಿರಸ್ಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಅನ್ಯಾಯ ಮಾಡಿದ್ದಾರೆ~ ಎಂದು ಬಸವೇಶ್ವರ ನಗರದ ನಿವಾಸಿ ಕಿಶೋರ್ ಆಕ್ರೋಶ ವ್ಯಕ್ತಪಡಿಸಿದರು.

`ಕಾಯ್ದೆಯ ಕುರಿತು ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಅವರಿಗೆ ಪೋಷಕರೇ ಮಾರ್ಗದರ್ಶನ ನೀಡಬೇಕಾದ ಸ್ಥಿತಿ ಇದೆ. ಅವರು ಕಾಟಾಚಾರಕ್ಕೆ ಆರ್‌ಟಿಇ ಅನುಷ್ಠಾನ ಮಾಡುತ್ತಿದ್ದಾರೆ. ಅಧಿಕಾರಿಗಳ ಧೋರಣೆಯಿಂದಾಗಿ ಹಿಂದುಳಿದ ಮಕ್ಕಳಿಗೆ ಅನ್ಯಾಯವಾಗುತ್ತಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಕ್ಕಳನ್ನು ನೆಲದಲ್ಲಿ ಕೂರಿಸಲು ಆಗುತ್ತದೆಯೇ ?

`ಆರ್‌ಟಿಇ ಕಾಯ್ದೆಗೆ ಶಾಲಾ ಆಡಳಿತ ಮಂಡಳಿಯ ವಿರೋಧ ಇಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಪ್ರಕ್ರಿಯೆ ಎರಡು ತಿಂಗಳ ಹಿಂದೆಯೇ ಪೂರ್ಣಗೊಂಡಿದೆ. ಮುಂದಿನ ವರ್ಷದಿಂದ ಕಾಯ್ದೆ ಅನುಷ್ಠಾನ ಮಾಡಲಾಗುವುದು. ಶಾಲೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ~ ಎಂದು ಶಾಲೆಯ ಆಡಳಿತಾಧಿಕಾರಿ ಎಂ.ಎಲ್.ತಿಪ್ಪಾ ರೆಡ್ಡಿ ತಿಳಿಸಿದರು.

`ಶಾಲೆಯಲ್ಲಿ ಎಲ್‌ಕೆಜಿಯಲ್ಲಿ ಮೂರು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ 25 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗಿದೆ. ಈಗ ಮಕ್ಕಳನ್ನು ಸೇರಿಸಿಕೊಂಡರೆ ಮತ್ತೊಂದು ವಿಭಾಗ ತೆರೆಯಬೇಕಾಗುತ್ತದೆ. ತರಾತುರಿಯಲ್ಲಿ ಶಿಕ್ಷಕರ ನೇಮಕ, ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಕರ್ಯದ ವ್ಯವಸ್ಥೆ ಮಾಡುವುದು ಕಷ್ಟ. ಅದಕ್ಕೆ ಕಾಲಾವಕಾಶ ಬೇಕು. ಅಲ್ಲದೆ ಶಿಕ್ಷಣದ ಗುಣಮಟ್ಟ ಕಾಪಾಡುವುದು ಮುಖ್ಯ. ಈಗ ಮಕ್ಕಳನ್ನು ಸೇರಿಸಿಕೊಂಡು ಸರ್ಕಾರಿ ಶಾಲೆಗಳಂತೆ ನೆಲದ ಮೇಲೆ ಕುಳ್ಳಿರಿಸುವುದಕ್ಕೆ ಆಗುತ್ತದೆಯೇ~ ಎಂದು ಅವರು ಪ್ರಶ್ನಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.