ADVERTISEMENT

ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌; ಪ್ರಣಯ್‌ಗೆ ಜಯ

ಪಿಟಿಐ
Published 15 ಮಾರ್ಚ್ 2018, 20:42 IST
Last Updated 15 ಮಾರ್ಚ್ 2018, 20:42 IST
ಪಿ.ವಿ ಸಿಂಧು
ಪಿ.ವಿ ಸಿಂಧು   

ಬರ್ಮಿಂಗ್‌ಹ್ಯಾಮ್‌ (ಪಿಟಿಐ): ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಿ.ವಿ.ಸಿಂಧು ಗೆಲುವಿನ ಓಟ ಮುಂದುವರಿಸಿದ್ದಾರೆ. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅವರು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿರುವ ಎಚ್‌.ಎಸ್‌.ಪ್ರಣಯ್‌ ಶುಭಾರಂಭ ಮಾಡಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಹೋರಾಟದಲ್ಲಿ ಸಿಂಧು 21–13, 13–21, 21–18ರಲ್ಲಿ ಜಪಾನ್‌ನ ನಿಚಾವೊನ್‌ ಜಿಂದಾಪೊಲ್‌ ಅವರನ್ನು ಸೋಲಿಸಿದರು.

ADVERTISEMENT

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿರುವ ಸಿಂಧು ಮೊದಲ ಸುತ್ತಿನ ಪೈಪೋಟಿಯಲ್ಲಿ 20–22, 21–17, 21–9ರಲ್ಲಿ ಥಾಯ್ಲೆಂಡ್‌ನ ರಚನೊಕ್‌ ಇಂಟನನ್‌ ವಿರುದ್ಧ ಗೆದ್ದಿದ್ದರು. ನಿಚಾವೊನ್‌ ಎದುರಿನ ಹೋರಾಟದಲ್ಲಿ ಸಿಂಧು ಆರಂಭದಿಂದಲೇ ಪರಿಣಾಮಕಾರಿ ಆಟ ಆಡಿದರು. ಚುರುಕಿನ ಸರ್ವ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಗಳಿಸಿದ ಭಾರತದ ಆಟಗಾರ್ತಿ 7–3ರ ಮುನ್ನಡೆ ಗಳಿಸಿದರು.

ಆ ನಂತರ ಕಂಡು ಬಂದ ದೀರ್ಘ ರ‍್ಯಾಲಿಯಲ್ಲಿ ಬ್ಯಾಕ್‌ಹ್ಯಾಂಡ್‌ ರಿಟರ್ನ್‌ ಮೂಲಕ ಪಾಯಿಂಟ್‌ ಹೆಕ್ಕಿದ ಸಿಂಧು ಮುನ್ನಡೆಯನ್ನು 8–3ಕ್ಕೆ ಹೆಚ್ಚಿಸಿಕೊಂಡರು. ಅನಂತರ ಚುರುಕಿನ ಡ್ರಾಪ್‌ಗಳ ಮೂಲಕ ಸುಲಭವಾಗಿ ಪಾಯಿಂಟ್ಸ್‌ ಗಳಿಸಿದ ಸಿಂಧು 15–7ರ ಮುನ್ನಡೆ ಪಡೆದು ಗೇಮ್‌ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಜಿಂದಾಪೊಲ್‌ ಹಲವು ತಪ್ಪುಗಳನ್ನು ಮಾಡಿ ಕೈ ಸುಟ್ಟುಕೊಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಜಪಾನ್‌ನ ಆಟಗಾರ್ತಿ ಎರಡನೇ ಗೇಮ್‌ನಲ್ಲಿ ಮೋಡಿ ಮಾಡಿದರು. ಆರಂಭಿಕ ನಿರಾಸೆಯಿಂದ ವಿಶ್ವಾಸ ಕಳೆದುಕೊಳ್ಳದ ಅವರು ಆಕ್ರಮಣಕಾರಿ ಆಟ ಆಡಿದರು. ಅಮೋಘ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿ 7–3ರ ಮುನ್ನಡೆ ಪಡೆದರು. ನಂತರ ದೀರ್ಘ ರ‍್ಯಾಲಿಗಳಿಗೆ ಒತ್ತು ನೀಡಿದ ಜಪಾನ್‌ನ ಆಟಗಾರ್ತಿ ಮುನ್ನಡೆಯನ್ನು 11–3ಕ್ಕೆ ಹೆಚ್ಚಿಸಿಕೊಂಡರು.

ವಿರಾಮದ ನಂತರ ಸಿಂಧು ಮಿಂಚಿದರು. ಚುರುಕಿನ ಡ್ರಾ‍ಪ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿದ ಅವರು ಹಿನ್ನಡೆಯನ್ನು 10–14ಕ್ಕೆ ತಗ್ಗಿಸಿಕೊಂಡರು.

ಇದರಿಂದ ಎಳ್ಳಷ್ಟೂ ಅಂಜದ ಜಿಂದಾಪೊಲ್‌ ಆಕರ್ಷಕ ರಿಟರ್ನ್‌ಗಳ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿ ಮುನ್ನಡೆಯನ್ನು 17–10ಕ್ಕೆ ಹೆಚ್ಚಿಸಿದರು. ಈ ಹಂತದಲ್ಲಿ ಸಿಂಧು ಸತತ ಮೂರು ಪಾಯಿಂಟ್ಸ್‌ ಗಳಿಸಿದರು. ಹೀಗಾಗಿ ಹಿನ್ನಡೆ 13–17ಕ್ಕೆ ತಗ್ಗಿತು. ಬಳಿಕ ಎಚ್ಚರಿಕೆಯ ಆಟ ಆಡಿದ ಜಿಂದಾಪೊಲ್‌ ಗೆಲುವಿನ ತೋರಣ ಕಟ್ಟಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಸಿಂಧು ಆಟ ರಂಗೇರಿತು. ಆರಂಭದಲ್ಲೇ ಮೂರು ಪಾಯಿಂಟ್ಸ್‌ ಕಲೆಹಾಕಿದ ಭಾರತದ ಆಟಗಾರ್ತಿ ಬಳಿಕ ಇದನ್ನು 8–5ಕ್ಕೆ ಹೆಚ್ಚಿಸಿಕೊಂಡರು.

ನಂತರವೂ ಬ್ಯಾಕ್‌ಹ್ಯಾಂಡ್‌ ಮತ್ತು ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. 11–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಸಿಂಧು ನಂತರ 12–15ರಲ್ಲಿ ಹಿನ್ನಡೆ ಕಂಡರು.

ಇದರಿಂದ ಎದೆಗುಂದದೆ ಛಲದಿಂದ ಹೋರಾಡಿ ಖುಷಿಯ ಕಡಲಲ್ಲಿ ತೇಲಿದರು. ಈ ಹೋರಾಟ 1 ಗಂಟೆ 7 ನಿಮಿಷ ನಡೆಯಿತು.

ಪ್ರಣಯ್‌ ಶುಭಾರಂಭ: ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಎಚ್‌.ಎಸ್‌.ಪ್ರಣಯ್ 9–21, 21–18, 21–18ರಲ್ಲಿ ಎಂಟನೇ ಶ್ರೇಯಾಂಕಿತ ಆಟಗಾರ ಚೌ ತಿಯಾನ್‌ ವಿರುದ್ಧ ಗೆದ್ದರು. ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್‌ 21–13, 15–21, 11–21ರಲ್ಲಿ ಸನ್ ವಾನ್‌ ಹೊ ವಿರುದ್ಧ ಸೋತರು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಪ್ರಣವ್‌ ಜೆರ‍್ರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ 21–19, 21–13ರಲ್ಲಿ ಜರ್ಮನಿಯ ಮರ್ವಿನ್‌ ಎಮಿಲ್‌ ಸೀಡೆಲ್‌ ಮತ್ತು ಲಿಂಡಾ ಎಫ್ಲರ್‌ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.