ADVERTISEMENT

ಆಸೀಸ್‌ಗೆ ಗೆಲುವು

ಅಭ್ಯಾಸ ಪಂದ್ಯ: ನ್ಯೂಜಿಲೆಂಡ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಫಟುಲ್ಲಾ: ಬ್ಯಾಟ್ಸ್‌ಮನ್‌ಗಳ ಮೇಲಾಟ ಕಂಡುಬಂದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್‌ ವಿರುದ್ಧ ಮೂರು ರನ್‌ಗಳ ರೋಚಕ ಗೆಲುವು ಪಡೆದಿದೆ.

ಫಟುಲ್ಲಾದ ಖಾನ್‌ ಸಾಹೇಬ್‌ ಒಸ್ಮಾನ್‌ ಅಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಜಯ ಪಡೆಯುವ ಮೂಲಕ ಆಸೀಸ್‌ ತಂಡ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಜಾರ್ಜ್‌ ಬೇಲಿ ಬಳಗ 20 ಓವರ್‌ ಗಳಲ್ಲಿ 7 ವಿಕೆಟ್‌ಗೆ 200 ರನ್‌ ಕಲೆ ಹಾಕಿತು. ಕಠಿಣ ಗುರಿಯನ್ನು ದಿಟ್ಟತನ ದಿಂದ ಬೆನ್ನಟ್ಟಿದ ಕಿವೀಸ್‌ ಗೆಲುವಿನ ದಡದಲ್ಲಿ ಎಡವಿತು. ಬ್ರೆಂಡನ್‌ ಮೆಕ್ಲಮ್‌ ಬಳಗ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 197 ರನ್‌ ಗಳಿಸಿತು.

ಡೇವಿಡ್‌ ವಾರ್ನರ್‌ (65, 26 ಎಸೆತ, 7 ಬೌಂ, 5 ಸಿಕ್ಸರ್‌) ಮತ್ತು ಆ್ಯರನ್‌ ಫಿಂಚ್‌ (47, 22 ಎಸೆತ, 9 ಬೌಂ, 1 ಸಿಕ್ಸರ್‌) ಮೊದಲ ವಿಕೆಟ್‌ಗೆ 8 ಓವರ್‌ಗಳಲ್ಲಿ 113 ರನ್‌ ಸೇರಿಸಿ ಆಸೀಸ್‌ಗೆ ಭರ್ಜರಿ ಆರಂಭ ನೀಡಿದರು. ಇತರರಿಗೆ ಬ್ಯಾಟಿಂಗ್‌ ಅವಕಾಶ ನೀಡಲು ಇಬ್ಬರೂ ಪೆವಿಲಿಯನ್‌ಗೆ ಮರಳಿದರು.
ಆ ಬಳಿಕ ಶೇನ್‌ ವಾಟ್ಸನ್‌ (27), ಜಾರ್ಜ್‌ ಬೇಲಿ (19) ಮತ್ತು ಬ್ರಾಡ್‌ ಹಾಡ್ಜ್‌ (25) ಉತ್ತಮ ಆಟವಾಡಿದ ಕಾರಣ ತಂಡ 200 ರನ್‌ ಪೇರಿಸಿತು.
ಕಿವೀಸ್‌ ತಂಡ ಕೂಡಾ ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಮಾರ್ಟಿನ್‌ ಗುಪ್ಟಿಲ್‌ (62, 34 ಎಸೆತ, 5 ಬೌಂ, 4 ಸಿಕ್ಸರ್‌) ಎದರಾಳಿ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು.

ಅಂತಿಮ ಓವರ್‌ನಲ್ಲಿ ಕಿವೀಸ್‌ ಗೆಲುವಿಗೆ ಮೂರು ವಿಕೆಟ್‌ಗಳಿಂದ 9 ರನ್‌ಗಳು ಬೇಕಿದ್ದವು. ಆದರೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ತಂಡ ಕೇವಲ ಐದು ರನ್‌ ಮಾತ್ರ ಗಳಿಸಿತು. 

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 200 (ಡೇವಿಡ್‌ ವಾರ್ನರ್‌ 65, ಆ್ಯರನ್‌ ಫಿಂಚ್‌ 47, ಶೇನ್‌ ವಾಟ್ಸನ್‌ 27, ಬ್ರಾಡ್‌ ಹಾಡ್ಜ್‌ 25, ಕೈಲ್‌ ಮಿಲ್ಸ್‌ 21ಕ್ಕೆ 2) ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 197 (ಮಾರ್ಟಿನ್‌ ಗುಪ್ಟಿಲ್‌ 62, ಬ್ರೆಂಡನ್‌ ಮೆಕ್ಲಮ್‌ 37, ಕೋರಿ ಆ್ಯಂಡರ್‌ಸನ್‌ 29,  ಮಿಷೆಲ್‌ ಸ್ಟಾರ್ಕ್‌ 21ಕ್ಕೆ 2, ನಥಾನ್‌ ಕೋಲ್ಟರ್‌ ನೈಲ್‌ 36ಕ್ಕೆ 2, ಬ್ರಾಡ್‌ ಹಾಗ್‌ 36ಕ್ಕೆ 2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ ಮೂರು ರನ್‌ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.