ADVERTISEMENT

ಆಸೀಸ್ ಗೆಲುವಿನ ಕನಸಿಗೆ ಮಳೆ ಅಡಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಮ್ಯಾಂಚೆಸ್ಟರ್ (ಎಎಫ್‌ಪಿ): ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಪಡೆದು, ಆ್ಯಷಸ್ ಟ್ರೋಫಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಆಸ್ಟ್ರೇಲಿಯಾ ತಂಡಕ್ಕೆ ಮಳೆ ಅವಕಾಶ ನೀಡಲಿಲ್ಲ.

ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಕೊನೆಗೊಂಡ ಪಂದ್ಯದ ಅಂತಿಮ ದಿನವಾದ ಸೋಮವಾರ ಮಳೆಯದ್ದೇ ಆಟ. ಗೆಲುವಿಗೆ 332 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ 20.3 ಓವರ್‌ಗಳಲ್ಲಿ 3 ವಿಕೆಟ್‌ಗೆ 37 ರನ್ ಗಳಿಸಿ ಸೋಲಿನ ಭೀತಿ ಎದುರಿಸಿತ್ತು. ಆದರೆ ಈ ವೇಳೆ ಮಳೆ ಸುರಿದ ಕಾರಣ ಆಟ ಮುಂದುವರಿಸಲು ಆಗಲಿಲ್ಲ. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಇದೀಗ ಅಲಸ್ಟೇರ್ ಕುಕ್ ಬಳಗ ಸರಣಿಯಲ್ಲಿ 2-0 ಮುನ್ನಡೆಯಲ್ಲಿದೆ. ಮಾತ್ರವಲ್ಲ ಆ್ಯಷಸ್ ಟ್ರೋಫಿಯನ್ನು ಖಚಿತಪಡಿಸಿಕೊಂಡಿದೆ.

ಆಸೀಸ್ ಕೊನೆಯ ಎರಡೂ ಟೆಸ್ಟ್ ಜಯಿಸಿ ಸರಣಿಯನ್ನು 2-2 ಸಮಬಲ ಮಾಡಿಕೊಂಡರೂ ಟ್ರೋಫಿ ಇಂಗ್ಲೆಂಡ್‌ಗೆ ಒಲಿಯಲಿದೆ. ಏಕೆಂದರೆ ಸರಣಿ ಡ್ರಾದಲ್ಲಿ ಕೊನೆಗೊಂಡರೆ, ಹಿಂದಿನ ಸರಣಿ ಗೆದ್ದವರಿಗೆ ಟ್ರೋಫಿ ಒಲಿಯಲಿದೆ. 2010/11ರಲ್ಲಿ ನಡೆದ ಸರಣಿಯನ್ನು ಇಂಗ್ಲೆಂಡ್ 3-1 ರಲ್ಲಿ ಜಯಿಸಿತ್ತು.

ಈ ಸರಣಿ ಇದುವರೆಗೆ ಒಟ್ಟು 66 ಸಲ ನಡೆದಿದೆ.  31 ಸಲ ಆಸ್ಟ್ರೇಲಿಯಾ ಚಾಂಪಿಯನ್ ಆದರೆ, 30 ಸಲ ಇಂಗ್ಲೆಂಡ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಐದು ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿವೆ. ಈ ಸಲ ಇಂಗ್ಲೆಂಡ್ ಸರಣಿ ಗೆದ್ದರೆ, ಉಭಯ ತಂಡಗಳು ಸಮನಾಗಿ ಟ್ರೋಫಿ ಗೆದ್ದ ಗೌರವಕ್ಕೆ ಪಾತ್ರವಾಗಲಿವೆ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 146 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 527 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 36 ಓವರ್‌ಗಳಲ್ಲಿ 7 ವಿಕೆಟ್‌ಗೆ 172 ಡಿಕ್ಲೇರ್ಡ್. ಇಂಗ್ಲೆಂಡ್: ಮೊದಲ ಇನಿಂಗ್ಸ್ 139.3 ಓವರ್‌ಗಳಲ್ಲಿ 368 ಮತ್ತು ಎರಡನೇ ಇನಿಂಗ್ಸ್ 20.3 ಓವರ್‌ಗಳಲ್ಲಿ 3 ವಿಕೆಟ್‌ಗೆ 37 (ಜೋ ರೂಟ್ ಔಟಾಗದೆ 13, ಜೊನಾಥನ್ ಟ್ರಾಟ್ 11,  ಹ್ಯಾರಿಸ್ 13ಕ್ಕೆ 2) ಫಲಿತಾಂಶ: ಪಂದ್ಯ ಡ್ರಾ, ಪಂದ್ಯಶ್ರೇಷ್ಠ: ಮೈಕಲ್ ಕ್ಲಾರ್ಕ್

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.