ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ಮೂರನೇ ಸುತ್ತಿಗೆ ನಡಾಲ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST
ಆಸ್ಟ್ರೇಲಿಯಾ ಓಪನ್ ಟೆನಿಸ್: ಮೂರನೇ ಸುತ್ತಿಗೆ ನಡಾಲ್
ಆಸ್ಟ್ರೇಲಿಯಾ ಓಪನ್ ಟೆನಿಸ್: ಮೂರನೇ ಸುತ್ತಿಗೆ ನಡಾಲ್   

ಮೆಲ್ಬರ್ನ್ (ಎಎಫ್‌ಪಿ/ಪಿಟಿಐ): ಪ್ರಶಸ್ತಿ ಜಯಿಸುವ ನೆಚ್ಚಿನ ಸ್ಪರ್ಧಿಗಳೆನಿಸಿರುವ ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೆಲ್ಬರ್ನ್ ಪಾರ್ಕ್ ಅಂಗಳದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನಡಾಲ್ 6-4, 6-3, 6-4 ನೇರ ಸೆಟ್‌ಗಳಲ್ಲಿ ಜರ್ಮನಿಯ ಟಾಮಿ ಹಾಸ್ ಎದುರು ಗೆಲುವು ಸಾಧಿಸಿದರು.

ಮೂರು ಸೆಟ್‌ಗಳಲ್ಲಿ ಎರಡನೇ ಶ್ರೇಯಾಂಕದ ಆಟಗಾರ ನಡಾಲ್‌ಗೆ ಪ್ರಬಲ ಪ್ರತಿರೋಧ ಎದುರಾಯಿತು. ಈ ಹೋರಾಟ ಎರಡು ಗಂಟೆ 30 ನಿಮಿಷ ಕಾಲ ನಡೆಯಿತು.

`ಉತ್ತಮವಾಗಿ ಆಡಿದೆ. ಗೆಲುವು ಲಭಿಸಿತು. ಮೂರು ಸೆಟ್‌ಗಳನ್ನು ಆಡಲು ನಾಲ್ಕು ಅಥವಾ ಐದು ಗಂಟೆ ತಗುಲಿದರೆ, ತುಂಬಾ ಕಷ್ಟವಾಗುತ್ತದೆ. ಮುಂದಿನ ಪಂದ್ಯಗಳಲ್ಲಿ ನನ್ನ ಪ್ರದರ್ಶನ ಹೀಗೆಯೇ ಮುಂದುವರಿಯಲಿದೆ~ ಎಂದು ನಡಾಲ್ ಪ್ರತಿಕ್ರಿಯಿಸಿದರು.

ಮೂರನೇ ಶ್ರೇಯಾಂಕದ ಫೆಡರರ್ ಸುಲಭವಾಗಿ ಮೂರನೇ ಸುತ್ತಿಗೆ ಪ್ರವೇಶಿಸಿದರು. ಜರ್ಮನಿಯ ಆ್ಯಂಡ್ರಸ್ ಬೆಕ್ ಅವರಿಂದ `ವಾಕ್ ಓವರ್~ ಪಡೆದರು.

ಪುರುಷರ ವಿಭಾಗದ ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಗೊಪೋಲೊವಾ 4-6, 6-1, 6-1, 3-6, 8-6ರಲ್ಲಿ ಜರ್ಮನಿಯ ತಾಬಿಯಸ್ ಕಾಮ್ಕೆ ಮೇಲೂ, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 6-1, 6-0, 7-6ರಲ್ಲಿ ಬಲ್ಗೇರಿಯಾದ ಒಲಿವರ್ ರಾಚಸ್ ವಿರುದ್ಧವೂ, ಅಮೆರಿಕದ ಜಾನ್ ಇಸ್ನೆರ್ 4-6, 6-3, 2-6, 7-6, 10-8ರಲ್ಲಿ ಅರ್ಜೆಂಟೀನಾದ ಡೇವಿಡ್ ನಲ್ಬಂಡಿಯನ್ ಮೇಲೂ, ಬೆರ್ನಾರ್ಡ್ ಟಾಮಿಕ್ 3-6,  6-3, 7-6, 6-3ರಲ್ಲಿ ಅಮೆರಿಕದ ಸ್ಯಾಮ್ ಕ್ವಾರಿ ವಿರ‌್ಧುವೂ, ಸ್ಟಾನಿಸ್ಲಾಸ್ ವಾವ್ರಿಂಕಾ 7-6, 6-4, 5-7, 6-1ರಲ್ಲಿ ಮಾರ್ಕೊಸ್ ಬಗ್ದಾಟಿಸ್ ಮೇಲೂ ಜಯ ಪಡೆದು ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.

ಕಿಮ್ ಕ್ಲೈಸ್ಟರ್ಸ್ ಜಯ: ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ 6-0, 6-1ರಲ್ಲಿ ಫ್ರಾನ್ಸ್‌ನ ಸ್ಟೆಫಾನಿ ಫೋರೆಟ್ಜ್ ಎದುರು ಗೆಲುವು ಸಾಧಿಸಿದರು. 11ನೇ ಶ್ರೇಯಾಂಕದ ಈ ಆಟಗಾರ್ತಿ ಎರಡೂ ಸೆಟ್‌ಗಳಲ್ಲಿ ಸುಲಭ ಜಯ ಪಡೆದು ಮುಂದಿನ ಸುತ್ತು ಪ್ರವೇಶಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಚೀನಾದ ನಾ ಲೀ 6-2, 6-2ರಲ್ಲಿ ಆಸ್ಟ್ರೇಲಿಯಾದ ಒಲಿವಿಯಾ ರೊಕೋವ್‌ಸ್ಕಾ ಮೇಲೂ, ಡೆನ್ಮಾರ್ಕ್‌ನ ಕ್ಯಾರೊಲಿನ್ ವೊನಿಯಾಕಿ 6-1, 7-6ರಲ್ಲಿ ಜಾರ್ಜಿಯಾದ ಅನ್ನಾ ಟಿಟಿಶಿವೇಯಾ ವಿರುದ್ಧವೂ, ಸರ್ಬಿಯಾದ ಜೆಲೆನಾ ಜಾಂಕೊವಿಕ್ 6-4, 6-2ರಲ್ಲಿ ಚೈನೀಸ್ ತೈಪೆಯ ಕಾಯಿ ಚೆನ್ ಚಾಂಗ್ ಮೇಲೂ, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 6-1, 6-0ರಲ್ಲಿ ಕ್ಯಾಸ್ಸೆ ಡಲಾಕ್ವ ವಿರುದ್ಧವೂ ಗೆಲುವು ಸಾಧಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದರು.

ಭೂಪತಿ-ಬೋಪಣ್ಣ ಶುಭಾರಂಭ: ಭಾರತದ ಭರವಸೆ ಎನಿಸಿರುವ ಮಹೇಶ್ ಭೂಪತಿ-ರೋಹನ್ ಬೋಪಣ್ಣ ಜೋಡಿ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿತು. ನಾಲ್ಕನೇ ಶ್ರೇಯಾಂಕದ ಈ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ 5-7, 6-4, 6-4ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಡ್ಬನ್-ಕ್ರಿಸ್ ಗುಸಿಯೊನ್ ಎದುರು ಪ್ರಯಾಸದ ಗೆಲುವು ಪಡೆಯಿತು. ಒಂದು ಗಂಟೆ 43 ನಿಮಿಷ  ನಡೆದ ಹೋರಾಟದಲ್ಲಿ ಭಾರತದ ಜೋಡಿ ಒಟ್ಟು 10 ಏಸ್‌ಗಳನ್ನು ಸಿಡಿಸಿತು.

ಭಾರತದ ಲಿಯಾಂಡರ್ ಪೇಸ್-ಜೆಕ್ ಗಣರಾಜ್ಯದ ರಾಡೆಕ್ ಸ್ಪೆಪಾನೆಕ್ ಜೋಡಿ 6-2, 6-2ರಲ್ಲಿ ಆಸೀಸ್‌ನ ಗ್ರೇಗ್ ಜಾನ್ಸ್-ಜಾನ್ ಪ್ಯಾಟ್ರಿಕ್ ಸ್ಮಿತ್ ಎದುರು ಗೆಲುವು ಪಡೆದು ಎರಡನೇ ಸುತ್ತಿಗೆ ಮುನ್ನಡೆಯಿತು. ಈ ಹೋರಾಟ ಒಂದು ಗಂಟೆ 13 ನಿಮಿಷ ನಡೆಯಿತು.

ಇತ್ತೀಚಿಗೆ ನಡೆದ ಚೆನ್ನೈ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಪೇಸ್ ಅವರು ಜಾಂಕೊ ತಿಪ್ಸರೆವಿಕ್ ಜೊತೆಗೂಡಿ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದರಿಂದ ಭಾರತದ ಆಟಗಾರನ ಆತ್ಮವಿಶ್ವಾಸ ಹೆಚ್ಚಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.