ADVERTISEMENT

ಆ್ಯಂಟೊನಿಯೊ ಜೊತೆ ಬಿಎಫ್‌ಸಿ ಒಪ್ಪಂದ

ಪಿಟಿಐ
Published 17 ಜುಲೈ 2017, 19:31 IST
Last Updated 17 ಜುಲೈ 2017, 19:31 IST
ಆ್ಯಂಟೊನಿಯೊ ಜೊತೆ ಬಿಎಫ್‌ಸಿ ಒಪ್ಪಂದ
ಆ್ಯಂಟೊನಿಯೊ ಜೊತೆ ಬಿಎಫ್‌ಸಿ ಒಪ್ಪಂದ   

ಬೆಂಗಳೂರು: ಆ್ಯಂಟೊನಿಯೊ ರಾಡ್ರಿಗಸ್ ದೊವಲೆ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಮತ್ತೊಬ್ಬ ಸ್ಪೇನ್ ಆಟಗಾರನನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

‘2017–18ನೇ ಸಾಲಿನ ಟೂರ್ನಿಗಳಿಗಾಗಿ ಆ್ಯಂಟೊನಿಯೊ ಅವರ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದು ಯುವ ಆಟಗಾರ ತಂಡಕ್ಕೆ ಹೆಚ್ಚು ಬಲ ತುಂಬುವ ನಿರೀಕ್ಷೆ ಇದೆ’ ಎಂದು ಬಿಎಫ್‌ಸಿ ಮುಖ್ಯ ಕೋಚ್‌ ಆಲ್ಬರ್ಟ್ ರೋಕಾ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಸ್ಪೇನ್‌ನಲ್ಲಿ ಸಾಕಷ್ಟು ಪಂದ್ಯಗಳಲ್ಲಿ ಆಡಿರುವ ಆ್ಯಂಟೊನಿಯೊ ಉತ್ತಮ ಅನುಭವ ಹೊಂದಿರುವ ಆಟಗಾರ. ತಮ್ಮ ಸಾಮರ್ಥ್ಯವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಏರಿಸುವ ಬಯಕೆ ಹೊಂದಿದ್ದಾರೆ. ಅವರ ಈ ಮನಸ್ಥಿತಿ ಬಿಎಫ್‌ಸಿಗೆ ಪೂರಕವಾಗಿ ಪರಿಣಮಿಸಲಿದೆ’ ಎಂದು ಆಲ್ಬರ್ಟ್ ಹೇಳಿದರು.

ADVERTISEMENT

ಜುವಾನನ್‌ ಗೊನ್ಸಾಲೆಸ್ ಮತ್ತು ದಿಮಾಸ್ ಡೆಲ್ಗಾಡೊ ಈ ಹಿಂದೆ ಬಿಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದರು. 27 ವರ್ಷದ ಆ್ಯಂಟೊನಿಯೊ ಅವರು ‘ಟೋನಿ’ ಎಂಬ ಹೆಸರಿನಲ್ಲಿ ಖ್ಯಾತಿ ಹೊಂದಿದ್ದಾರೆ.

ಉತ್ತರ ಸ್ಪೇನ್‌ನಲ್ಲಿ ಜನಿಸಿದ ಅವರು ಆರಂಭದಲ್ಲಿ ಒಬ್ರಡೊರ್ಯೊ ಮತ್ತು ಬಾರ್ಸಿಲೋನಾ ಎಫ್‌ಸಿಯಲ್ಲಿ ಆಡಿದ್ದರು. 2005ರಲ್ಲಿ ಸೆಲ್ಟಾ ಡಿ ವೇಗೊ ತಂಡವನ್ನು ಸೇರಿಕೊಂಡರು. 2009ರಲ್ಲಿ ಸೆಗುಂಡಾ ಡಿವಿಷನ್‌ನಲ್ಲಿ ಚೊಚ್ಚಲ ಪಂದ್ಯ ಆಡಿದರು.

‘ಬೆಂಗಳೂರು ಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡು ವೃತ್ತಿ ಜೀವನದಲ್ಲಿ ಹೊಸ ಸವಾಲು ಎದುರಿಸಲು ಸಜ್ಜಾಗಿದ್ದೇನೆ. ಇದು ಅತ್ಯಂತ ರೋಮಾಂಚಕ ಕ್ಷಣ. ಬೆಂಗಳೂರು ಎಫ್‌ಸಿಯಲ್ಲಿ ಆಡಲು ಅವಕಾಶ ಲಭಿಸಿರುವುದು ಮಹತ್ವದ ವಿಷಯ. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಮುಂದೆ ಸಾಗಬೇಕಿದೆ. ಆದ್ದರಿಂದ ಶೀಘ್ರದಲ್ಲೇ ತರಬೇತಿಗೆ ಹಾಜರಾಗುತ್ತೇನೆ’ ಎಂದು ಆ್ಯಂಟೊನಿಯೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.