ADVERTISEMENT

ಇಂಗ್ಲೆಂಡ್‌ಗೆ ಪ್ರಯಾಸದ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 17:55 IST
Last Updated 22 ಫೆಬ್ರುವರಿ 2011, 17:55 IST
ಇಂಗ್ಲೆಂಡ್‌ಗೆ ಪ್ರಯಾಸದ ಗೆಲುವು
ಇಂಗ್ಲೆಂಡ್‌ಗೆ ಪ್ರಯಾಸದ ಗೆಲುವು   

ನಾಗಪುರ (ಐಎಎನ್‌ಎಸ್): ಆತಂಕ, ಒತ್ತಡದ ನಡುವೆಯೇ ಆಡಿದ ಇಂಗ್ಲೆಂಡ್ ಕೊನೆಗೂ ಗೆಲುವು ಪಡೆದು ನಿಟ್ಟುಸಿರು ಬಿಟ್ಟಿತು. ಸೋಲು ಅನುಭವಿಸಿದರೂ ಹಾಲೆಂಡ್ ಎದುರಾಳಿಗಳಲ್ಲಿ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಯಿತು.

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ಆರು ವಿಕೆಟ್‌ಗಳಿಂದ ಹಾಲೆಂಡ್ ವಿರುದ್ಧ ಜಯ ಪಡೆದ ಶುಭಾರಂಭ ಮಾಡಿತು. ಆದರೆ ಆ್ಯಂಡ್ರ್ಯೂ ಸ್ಟ್ರಾಸ್ ಬಳಗಕ್ಕೆ ಗೆಲುವು ಸುಲಭದಲ್ಲಿ ದಕ್ಕಲಿಲ್ಲ.

ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟ್ ಮಾಡಿದ ಹಾಲೆಂಡ್ ತಂಡ ರ್ಯಾನ್ ಟೆನ್ ಡಾಶೆಟ್ ಅವರ ಭರ್ಜರಿ 119 ರನ್‌ಗಳ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 292 ರನ್ ಗಳಿಸಲು ಯಶಸ್ವಿಯಾಯಿತು. ಇಂಗ್ಲೆಂಡ್ 48.4 ಓವರ್‌ಗಳಲ್ಲಿ 4 ವಿಕೆಟ್‌ಗೆ 296 ರನ್ ಗಳಿಸಿ ಜಯ ಒಲಿಸಿಕೊಂಡಿತು.

ಆ್ಯಂಡ್ರ್ಯೂ ಸ್ಟ್ರಾಸ್ (88, 83 ಎಸೆತ, 9 ಬೌಂ), ಜೊನಾಥನ್ ಟ್ರಾಟ್ (62, 65 ಎಸೆತ, 4 ಬೌಂ), ಕೆವಿನ್ ಪೀಟರ್‌ಸನ್ (61 ಎಸೆತಗಳಲ್ಲಿ 31) ಅವರು ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪಂದ್ಯದ ಹೆಚ್ಚಿನ ಅವಧಿಯಲ್ಲೂ ಪ್ರಭುತ್ವ ಮೆರೆದದ್ದು ಹಾಲೆಂಡ್. ಆದರೆ ಕೊನೆಯಲ್ಲಿ ಗೆಲುವು ಒಲಿದದ್ದು ಇಂಗ್ಲೆಂಡ್‌ಗೆ ಎಂಬುದು ವಿಶೇಷ.
ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಮತ್ತು ಪೀಟರ್‌ಸನ್ ಮೊದಲ ವಿಕೆಟ್‌ಗೆ 105 ರನ್‌ಗಳನ್ನು ಸೇರಿಸಿದರು. ಬಳಿಕ ಟ್ರಾಟ್ ಮತ್ತು ಇಯಾನ್ ಬೆಲ್ ತಂಡದ ಇನಿಂಗ್ಸ್‌ಗೆ ಬಲ ನೀಡಿದರು. ಕೊನೆಯಲ್ಲಿ ಅಜೇಯ ಆಟವಾಡಿದ ಪಾಲ್ ಕಾಲಿಂಗ್‌ವುಡ್ (23 ಎಸೆತಗಳಲ್ಲಿ 30) ಹಾಗೂ ರವಿ ಬೋಪಾರ (20 ಎಸೆತಗಳಲ್ಲಿ 30) ಹಾಲೆಂಡ್‌ನ ಗೆಲುವಿನ ಕನಸನ್ನು ಪುಡಿಗಟ್ಟಿದರು.

ಬ್ಯಾಟಿಂಗ್ ವೇಳೆ ತೋರಿದ ಪರಾಕ್ರಮವನ್ನು ಬೌಲಿಂಗ್‌ನಲ್ಲೂ ತೋರಿದ್ದಲ್ಲಿ ಹಾಲೆಂಡ್ ಅಚ್ಚರಿಯ ಫಲಿತಾಂಶ ನೀಡುವ ಸಾಧ್ಯತೆಯಿತ್ತು. ಆದರೆ ಅದಕ್ಕೆ ಇಂಗ್ಲೆಂಡ್ ಅವಕಾಶ ನೀಡಲಿಲ್ಲ.ಸೋಲಿನಲ್ಲೂ ಮಿಂಚಿದ ಡಾಶೆಟ್: ಹಾಲೆಂಡ್ ತಂಡ ಎಲ್ಲರಿಗೂ ಅಚ್ಚರಿ ಉಂಟಾಗುವ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ನಿಜ. ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ತನ್ನ ಮೊತ್ತವನ್ನು 300ರ ಗಡಿ ಸಮೀಪ ತಂದು ನಿಲ್ಲಿಸಿದ್ದು ಸುಲಭದ ವಿಚಾರವಲ್ಲ.

ಇದರ ಎಲ್ಲ ಕ್ರೆಡಿಟ್ ಶತಕ ಗಳಿಸಿದ ರ್ಯಾನ್ ಟೆನ್ ಡಾಶೆಟ್‌ಗೆ ಸಲ್ಲಬೇಕು. 110 ಎಸೆತಗಳನ್ನು ಎದುರಿಸಿದ ಅವರು ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಡಾಶೆಟ್ ಮೂರು ಉತ್ತಮ ಜೊತೆಯಾಟಗಳಲ್ಲಿ ಭಾಗಿಯಾದರು. ಟಾಮ್ ಕೂಪರ್ (47) ಜೊತೆ ಮೂರನೇ ವಿಕೆಟ್‌ಗೆ 78 ರನ್ ಸೇರಿಸಿದರು. ಆ ಬಳಿಕ ಟಾಮ್ ಡಿ ಗ್ರೂಥ್ ಜೊತೆ ಐದನೇ ವಿಕೆಟ್‌ಗೆ 64 ಹಾಗೂ ಪೀಟರ್ ಬಾರೆನ್ ಜೊತೆ ಆರನೇ ವಿಕೆಟ್‌ಗೆ 50 ರನ್‌ಗಳನ್ನು ಕೂಡಿಹಾಕಿದರು. ಕೊನೆಯಲ್ಲಿ ಪೀಟರ್ ಬಾರೆನ್ 24 ಎಸೆತಗಳಲ್ಲಿ 35 ರನ್ ಸಿಡಿಸಿದರು.

 ಶತಕ ಮಾತ್ರವಲ್ಲ, ಎರಡು ವಿಕೆಟ್ ಪಡೆದು ಆಲ್‌ರೌಂಡ್ ಆಟದ ಪ್ರದರ್ಶನ ತೋರಿದ ಡಾಶೆಟ್ ‘ಪಂದ್ಯಶ್ರೇಷ್ಠ’ ಎನಿಸಿಕೊಂಡು ಸೋಲಿನ ನಡುವೆಯೂ ಮಿಂಚಿದರು.

ಸ್ಕೋರ್ ವಿವರ
ಹಾಲೆಂಡ್: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 292
ಅಲೆಕ್ಸಿ ಕೆರ್ವೆಜಿ ಸಿ ಪ್ರಿಯೊರ್ ಬಿ ಟಿಮ್ ಬ್ರೆಸ್ನನ್ 16
ವೆಸ್ಲಿ ಬಾರೆಸಿ ಸ್ಟಂಪ್ ಪ್ರಿಯೊರ್ ಬಿ ಸ್ವಾನ್  29
ಟಾಮ್ ಕೂಪರ್ ಸಿ ಆ್ಯಂಡರ್‌ಸನ್ ಬಿ ಪಾಲ್ ಕಾಲಿಂಗ್‌ವುಡ್  47
ರ್ಯಾನ್ ಟೆನ್ ಡಾಶೆಟ್ ಸಿ ಬೋಪಾರ ಬಿ ಸ್ಟುವರ್ಟ್ ಬ್ರಾಡ್  119
ಬಾಸ್ ಜುಡೆರೆಂಟ್ ಸಿ ಕಾಲಿಂಗ್‌ವುಡ್ ಬಿ ಗ್ರೆಮ್ ಸ್ವಾನ್ 01
ಟಾಮ್ ಡಿ ಗ್ರೂಥ್ ಬಿ ಸ್ಟುವರ್ಟ್ ಬ್ರಾಡ್  28
ಪೀಟರ್ ಬಾರೆನ್ ಔಟಾಗದೆ  35
ಮುದಸ್ಸರ್ ಬುಖಾರಿ ಔಟಾಗದೆ  06
ಇತರೆ: (ಲೆಗ್‌ಬೈ-3, ಲೆಗ್‌ಬೈ-3, ವೈಡ್-2, ನೋಬಾಲ್-3)  11
ವಿಕೆಟ್ ಪತನ: 1-36 (ಕೆರ್ವೆಜಿ; 6.2), 2-58 (ಬಾರೆಸಿ; 11.4), 3-136 (ಕೂಪರ್; 28.1), 4-149 (ಜುಡೆರೆಂಟ್; 32.5), 5-213 (ಗ್ರೂಥ್; 42.5), 6-274 (ಡಾಶೆಟ್; 48.1).
ಬೌಲಿಂಗ್: ಜೇಮ್ಸ್ ಆ್ಯಂಡರ್‌ಸನ್ 10-0-72-0, ಸ್ಟುವರ್ಟ್ ಬ್ರಾಡ್ 10-2-65-2, ಟಿಮ್ ಬ್ರೆಸ್ನನ್ 10-0-49-1, ಗ್ರೇಮ್ ಸ್ವಾನ್ 10-0-35-2, ಪಾಲ್ ಕಾಲಿಂಗ್‌ವುಡ್ 8-0-46-1, ಕೆವಿನ್ ಪೀಟರ್‌ಸನ್ 2-0-19-0

ಇಂಗ್ಲೆಂಡ್: 48.4 ಓವರ್‌ಗಳಲ್ಲಿ 4 ವಿಕೆಟ್‌ಗೆ 296
ಸ್ಟ್ರಾಸ್ ಸಿ ಕೂಪರ್ ಬಿ ಮುದಸ್ಸರ್ ಬುಖಾರಿ  88
ಪೀಟರ್‌ಸನ್ ಸಿ ಬಾರೆನ್ ಬಿ ಪೀಟರ್ ಸೀಲಾರ್  39
ಜೊನಾಥನ್ ಟ್ರಾಟ್ ಸ್ಟಂಪ್ ಬಾರೆಸಿ ಬಿ ಟೆನ್ ಡಾಶೆಟ್  62
ಇಯಾನ್ ಬೆಲ್ ಬಿ ಟೆನ್ ಡಾಶೆಟ್  33
ಪಾಲ್ ಕಾಲಿಂಗ್‌ವುಡ್ ಔಟಾಗದೆ  30
ರವಿ ಬೋಪಾರ ಔಟಾಗದೆ  30
ಇತರೆ: (ಬೈ-1, ಲೆಗ್‌ಬೈ-2, ವೈಡ್-11)  14
ವಿಕೆಟ್ ಪತನ: 1-105 (ಪೀಟರ್‌ಸನ್; 17.4), 2-166 (ಸ್ಟ್ರಾಸ್; 29.2), 3-224 (ಟ್ರಾಟ್; 40.1), 4-241 (ಬೆಲ್; 42.6).
ಬೌಲಿಂಗ್: ಮುದಸ್ಸರ್ ಬುಖಾರಿ 9-0-54-1, ಬೆರೆಂಡ್ ವೆಸ್ಟ್‌ಡಿಕ್ 7-0-41-0, ಬರ್ನಾರ್ಡ್ ಲೂಟ್ಸ್ 9.4-0-74-0, ಪೀಟರ್ ಸೀಲಾರ್ 10-0-54-1, ರ್ಯಾನ್ ಟೆನ್ ಡಾಶೆಟ್ 10-0-47-2, ಟಾಮ್ ಕೂಪರ್ 3-0-23-0
ಫಲಿತಾಂಶ: ಇಂಗ್ಲೆಂಡ್‌ಗೆ ಆರು ವಿಕೆಟ್ ಜಯ
ಪಂದ್ಯಶ್ರೇಷ್ಠ: ರ್ಯಾನ್ ಟೆನ್ ಡಾಶೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.