ADVERTISEMENT

ಇಂಗ್ಲೆಂಡ್‌ಗೆ ಹಾಲೆಂಡ್ ಸವಾಲು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 17:35 IST
Last Updated 21 ಫೆಬ್ರುವರಿ 2011, 17:35 IST


ನಾಗಪುರ (ಪಿಟಿಐ): ಇಂಗ್ಲೆಂಡ್ ತಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ಚಾಂಪಿಯನ್ ಎನಿಸಿಲ್ಲ. ಕಳೆದ ಒಂಬತ್ತು ಟೂರ್ನಿಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಂಡಕ್ಕೆ ನಿರಾಸೆ ಎದುರಾಗಿದೆ. ಈ ಬಾರಿ ನಡೆಯುತ್ತಿರುವ 10ನೇ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ.

ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ತಂಡ ಮಂಗಳವಾರ ನಡೆಯುವ ಹಾಲೆಂಡ್ ವಿರುದ್ಧದ ಪಂದ್ಯದೊಂದಿಗೆ ಈ ಬಾರಿಯ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ಪ್ರಬಲ ತಂಡಗಳ ಜೊತೆ ಪೈಪೋಟಿ ನಡೆಸಬೇಕಾಗಿರುವ ಕಾರಣ ಹಾಲೆಂಡ್ ವಿರುದ್ಧ ಭರ್ಜರಿ ಗೆಲುವು ಪಡೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಇಂಗ್ಲೆಂಡ್ ಇಟ್ಟುಕೊಂಡಿದೆ.

ನಾಗಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ‘ಫೇವರಿಟ್’ ಎನಿಸಿದೆ. ಪೀಟರ್ ಬೊರೆನ್ ನೇತೃತ್ವದ ಹಾಲೆಂಡ್ ಎದುರಾಳಿಗಳಿಗೆ ಎಷ್ಟರಮಟ್ಟಿಗೆ ಪೈಪೋಟಿ ನೀಡುತ್ತದೆ ಎಂಬುದನ್ನು ನೋಡಬೇಕು.

ಇಂಗ್ಲೆಂಡ್ ಮತ್ತು ಹಾಲೆಂಡ್ ತಂಡಗಳ ನಡುವಿನ ಫುಟ್‌ಬಾಲ್ ಪಂದ್ಯವೆಂದರೆ ಕ್ರೀಡಾಂಗಣದಲ್ಲಿ ಕಾವೇೀರಿದ ವಾತಾವರಣ ಇರುತ್ತದೆ. ಫುಟ್‌ಬಾಲ್‌ನಲ್ಲಿ ಉಭಯ ದೇಶಗಳ ತಂಡಗಳು ಸಮಬಲ ಹೊಂದಿವೆ. ಕ್ರಿಕೆಟ್‌ನಲ್ಲಿ ಅಂತಹ ಪೈಪೋಟಿ ಕಾಣಲು ಸಾಧ್ಯವಿಲ್ಲ. ಇಂಗ್ಲೆಂಡ್ ಹೊಂದಿರುವ ಅನುಭವದ ಮುಂದೆ ಹಾಲೆಂಡ್ ಕುಬ್ಜವಾಗಿ ಕಾಣುತ್ತದೆ.

ಆದರೆ ಹಾಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸಲು ಇಂಗ್ಲೆಂಡ್ ಸಿದ್ಧವಿಲ್ಲ. ಏಕೆಂದರೆ ಎರಡು ವರ್ಷಗಳ ಹಿಂದೆ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಈ ತಂಡ ಇಂಗ್ಲೆಂಡ್‌ಗೆ ಶಾಕ್ ನೀಡಿತ್ತು.

ಅಂದು ಆಡಿದ್ದ ಆರು ಆಟಗಾರರಾದ ಬಾಸ್ ಜುಡೆರೆಂಟ್, ಪೀಟರ್ ಬೊರೆನ್, ಪೀಟರ್ ಸೀಲಾರ್, ಟಾಮ್ ಡಿ ಗ್ರೂಥ್ ಮತ್ತು ರ್ಯಾನ್ ಟೆನ್ ಡಾಶೆಟ್ ಈ ಬಾರಿಯೂ ತಂಡದಲ್ಲಿದ್ದಾರೆ. ಆದ್ದರಿಂದ ಇಂಗ್ಲೆಂಡ್ ಸಣ್ಣ ಆತಂಕದೊಂದಿಗೆಯೇ ಮಂಗಳವಾರ ಕಣಕ್ಕಿಳಿಯಲಿದೆ.

ಎಲ್ಲರ ಗಮನ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕೆವಿನ್ ಪೀಟರ್‌ಸನ್ ಮೇಲೆ ಇದೆ. ಏಕೆಂದರೆ ಅವರು ಮಂಗಳವಾರ ಹೊಸ ಜವಾಬ್ದಾರಿಯನ್ನು ನಿಭಾಯಿಸಲಿದ್ದು, ಆರಂಭಿಕ ಆಟಗಾರನ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಾಕಿಸ್ತಾನದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕ್ರೀಸ್‌ಗಿಳಿದಿದ್ದ ಪೀಟರ್‌ಸನ್ 66 ರನ್ ಗಳಿಸಿದ್ದರು.
ಪಂದ್ಯದಲ್ಲಿ ಇಂಗ್ಲೆಂಡ್ 67 ರನ್‌ಗಳ ಜಯ ಸಾಧಿಸಿತ್ತು. ಈ ಗೆಲುವು ಸ್ಟ್ರಾಸ್ ಬಳಗಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದೆ.

ಯುವ ಬ್ಯಾಟ್ಸ್‌ಮನ್ ಎಯೊನ್ ಮಾರ್ಗನ್ ಅವರು ಗಾಯದ ಕಾರಣ ವಿಶ್ವಕಪ್‌ನಲ್ಲಿ ಆಡುತ್ತಿಲ್ಲ. ಇದರಿಂದ ಮಧ್ಯಮ ಕ್ರಮಾಂಕದಲ್ಲಿ ಇಯಾನ್ ಬೆಲ್, ರವಿ ಬೋಪಾರ ಮತ್ತು ಪಾಲ್ ಕಾಲಿಂಗ್‌ವುಡ್ ಮೇಲೆ ಇಂಗ್ಲೆಂಡ್ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಬೌಲಿಂಗ್‌ನಲ್ಲಿ ಸ್ಟುವರ್ಟ್ ಬ್ರಾಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಹಾಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡುವುದು ಖಚಿತ.

 ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯದ ವೇಳೆ ಇಲ್ಲಿ ಒಟ್ಟು 590 ರನ್ ಹರಿದಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.