ADVERTISEMENT

ಇಂಗ್ಲೆಂಡ್ ಅಥ್ಲೆಟಿಕ್ ತಂಡಕ್ಕೆ ಚೇಂಬರ್ಸ್!

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST
ಇಂಗ್ಲೆಂಡ್ ಅಥ್ಲೆಟಿಕ್ ತಂಡಕ್ಕೆ ಚೇಂಬರ್ಸ್!
ಇಂಗ್ಲೆಂಡ್ ಅಥ್ಲೆಟಿಕ್ ತಂಡಕ್ಕೆ ಚೇಂಬರ್ಸ್!   

ಲಂಡನ್ (ಎಎಫ್‌ಪಿ): ಉದ್ದೀಪನ ಮದ್ದು ತೆಗೆದುಕೊಂಡು ನುಣುಚಿಕೊಳ್ಳಲು ಯತ್ನಿಸಿದ ಆರೋಪ ಎದುರಿಸಿದ್ದ ವೇಗದ ಓಟಗಾರ ಡ್ವೈನ್ ಚೇಂಬರ್ಸ್‌ಗೆ ಇಂಗ್ಲೆಂಡ್ ಅಥ್ಲೆಟಿಕ್ಸ್ ತಂಡದಲ್ಲಿ ಮತ್ತೆ ಸ್ಥಾನ ನೀಡಿದ್ದು ಅಚ್ಚರಿಗೊಳ್ಳುವಂತೆ ಮಾಡಿದೆ.

ಲಂಡನ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆ ಮಾಡಿರುವ ಅಥ್ಲೀಟ್‌ಗಳ ಪಟ್ಟಿಯಲ್ಲಿ ಚೇಂಬರ್ಸ್ ಹೆಸರು ಕೂಡ ಇದೆ. ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ)ವು ಈ ಅಥ್ಲೀಟ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಿದ್ದರಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಇಂಗ್ಲೆಂಡ್ ಒಟ್ಟು 71 ಅಥ್ಲೀಟ್‌ಗಳಿರುವ ತಂಡವನ್ನು ಪ್ರಕಟಿಸಿದೆ. ಅದರಲ್ಲಿ 34 ವರ್ಷ ವಯಸ್ಸಿನ ಚೇಂಬರ್ಸ್ ಕೂಡ ಒಬ್ಬರು. ಆರೋಪ ಮುಕ್ತರಾಗಿ ಬಂದಿರುವ ಕಾರಣ ಈ ಓಟಗಾರನಿಗೆ ಅವಕಾಶ ನೀಡಿದ ಕ್ರಮವನ್ನು ಬ್ರಿಟಿಷ್ ಒಲಿಂಪಿಕ್ ಸಂಸ್ಥೆ (ಬಿಒಐ) ಪ್ರಧಾನ ಕಾರ್ಯನಿರ್ವಾಹಕ ಆ್ಯಂಡಿ ಹಂಟ್ ಸಮರ್ಥಿಸಿದ್ದಾರೆ.

ಸಿಡ್ನಿ (2000) ಒಲಿಂಪಿಕ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಮತ್ತೆ ಒಲಿಂಪಿಕ್ಸ್ ಕೂಟಗಳಲ್ಲಿ ಚೇಂಬರ್ಸ್ ಪಾಲ್ಗೊಂಡಿರಲಿಲ್ಲ. 2003ರಲ್ಲಿ `ಬಾಲ್ಕೊ~ ಉದ್ದೀಪನ ಮದ್ದು ಹಗರಣ ದೊಡ್ಡ ಸದ್ದು ಮಾಡಿದಾಗ ಸಿಕ್ಕಿಬಿದ್ದವರಲ್ಲಿ ಇಂಗ್ಲೆಂಡ್‌ನ ಈ ಅಥ್ಲೀಟ್ ಕೂಡ ಒಬ್ಬರಾಗಿದ್ದು. ಆಗ ಎರಡು ವರ್ಷಗಳ ಅವಧಿಗೆ ಇವರ ಮೇಲೆ ನಿಷೇಧ ಹೇರಲಾಗಿತ್ತು. ಆನಂತರ ಆಜೀವ ನಿಷೇಧ ಶಿಕ್ಷೆಗೂ ಒಳಗಾಗಿದ್ದರು. ಆದರೆ ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಪಂಚಾಯಿತಿಗೆ ಮೇಲ್ಮನವಿ ಸಲ್ಲಿಸಿದ ನಂತರ ನಿಷೇಧ ತೆರವುಗೊಂಡಿದೆ.

ಇಂಗ್ಲೆಂಡ್‌ನ ಮಾಧ್ಯಮಗಳು ಕೂಡ ಚೇಂಬರ್ಸ್ ಪರವಾಗಿ ನಿಂತಿವೆ. ಅವರು ಈ ವಯಸ್ಸಿನಲ್ಲಿ ಎಷ್ಟು ಉತ್ತಮ ಪ್ರದರ್ಶನ ನೀಡಬಲ್ಲರೆಂದು ನೋಡಲು ಕ್ರೀಡಾ ಪ್ರೇಮಿಗಳೂ ಆಸಕ್ತಿಯಿಂದ ಕಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.